Site icon Vistara News

Mandya Election Result 2024 : ಮಂಡ್ಯದಲ್ಲಿ ಕುಮಾರ ಸ್ವಾಮಿಗೆ ಭರ್ಜರಿ ಗೆಲುವು

Mandya Election Result 2024

ಬೆಂಗಳೂರು: ಪ್ರತಿಷ್ಠೆಯ ಕಣವಾಗಿದ್ದ ಮಂಡ್ಯ ಲೋಕ ಸಭಾ ಕ್ಷೇತ್ರದಲ್ಲಿ ಜೆಡಿಎಸ್​ ಪಕ್ಷದ ವರಿಷ್ಠ ಎಚ್​ ಡಿ ಕುಮಾರಸ್ವಾಮಿ (8,51,881 ಮತಗಳು) ಗೆಲುವು ಸಾಧಿಸಿದ್ದಾರೆ. ಈ ಮೂಲಕ ತೀವ್ರ ಜಿದ್ದಾಜಿದ್ದಿಯಲ್ಲಿ ಅವರು ಕಾಂಗ್ರೆಸ್​ ಅಭ್ಯರ್ಥಿ ಸ್ಟಾರ್​ ಚಂದ್ರು (5,67.261 ಮತಗಳು) ವಿರುದ್ಧ 2,84,620 ಮತಗಳ ಅಂತರದಿಂದ ಗೆಲುವು ಸಾಧಿಸಿದ್ದಾರೆ. ಈ ಮೂಲಕ ಜೆಡಿಎಸ್​ ತನ್ನ ಕ್ಷೇತ್ರವನ್ನು ಮರುವಶಪಡಿಸಿಕೊಂಡಿದೆ. ಹಿಂದಿನ ಚುನಾವಣೆಯಲ್ಲಿ ಇದನ್ನು ಪಕ್ಷೇತರ ಅಭ್ಯರ್ಥಿ ಸುಮಲತಾ ಅವರು ನಾನಾ ರಾಜಕೀಯ ಚಟುವಟಿಕೆ ಬಳಿಕ ಗೆಲುವು ಕಂಡಿದ್ದರು.

ಎಚ್​. ಡಿ. ಕುಮಾರಸ್ವಾಮಿ (ಜೆಡಿಎಸ್​)- 8,51,881 ಮತಗಳು
ಸ್ಟಾರ್​ ಚಂದ್ರು (ಕಾಂಗ್ರೆಸ್​)- 5,67.261 ಮತಗಳು
ಗೆಲುವಿನ ಅಂತರ-2,84,620

2019ರ ಸಾರ್ವತ್ರಿಕ ಚುನಾವಣೆಯಲ್ಲಿ ಪಕ್ಷೇತರ ಅಭ್ಯರ್ಥಿ ಸುಮಲತಾ ಅಂಬರೀಶ್ ಅವರು 7,03,660 ಮತಗಳ ಭಾರೀ ಅಂತರದಿಂದ ಗೆಲುವು ಸಾಧಿಸಿದ್ದರು. ಅವರು ಕುಮಾರಸ್ವಾಮಿ ಅವರ ಪುತ್ರ ನಿಖಿಲ್ ಕುಮಾರಸ್ವಾಮಿ ವಿರುದ್ಧ ಗೆದ್ದಿದ್ದರು.

2018ರ ಉಪಚುನಾವಣೆಯಲ್ಲಿ ಜೆಡಿಎಸ್ ನ ಎಲ್.ಆರ್.ಶಿವರಾಮಗೌಡ 5,69,347 ಮತಗಳನ್ನು ಪಡೆದು ಗೆದ್ದಿದ್ದರು. ಬಿಜೆಪಿಯ ಡಿ.ಆರ್.ಸಿದ್ದರಾಮಯ್ಯ 2,44,404 ಹಾಗೂ ಪಕ್ಷೇತರ ಅಭ್ಯರ್ಥಿ ಎಂ.ಹೊನ್ನೇಗೌಡ 17,842 ಮತಗಳನ್ನು ಪಡೆದಿದ್ದರು. 2014ರ ಸಾರ್ವತ್ರಿಕ ಚುನಾವಣೆಯಲ್ಲಿ ಕಾಂಗ್ರೆಸ್ ನ ರಮ್ಯಾ 4,84,085 ಮತಗಳನ್ನು ಪಡೆದು ಜಯಗಳಿಸಿದ್ದರು.

ಈ ಕ್ಷೇತ್ರವು 2009 ಮತ್ತು 2019 ರ ನಡುವೆ ಎರಡು ಉಪಚುನಾವಣೆಗಳಿಗೆ ಸಾಕ್ಷಿಯಾಗಿದೆ. 2009 ರವರೆಗೆ ಸತತ ಮೂರು ಅವಧಿಗೆ ಕನ್ನಡ ಚಲನಚಿತ್ರ ತಾರೆ ಅಂಬರೀಶ್ ಇಲ್ಲಿ ಗೆದ್ದಿದ್ದರು. ಅವರ ಪತ್ನಿ ಸುಮಲತಾ 2019 ರಲ್ಲಿ ಸ್ಪರ್ಧಿಸಿ ಗೆದ್ದರು. 2013ರಲ್ಲಿ ಜೆಡಿಎಸ್ ನಿಂದ ಶಾಸಕರಾಗಿ ಆಯ್ಕೆಯಾಗಿದ್ದ ಚೆಲುವರಾಯಸ್ವಾಮಿ ಅವರು ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿದ್ದರು. ನಂತರ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಮತ್ತು ನಟಿ ರಮ್ಯಾ ಗೆಲುವು ಸಾಧಿಸಿದರು. 2018 ರ ಉಪಚುನಾವಣೆಯಲ್ಲಿ ಸಿ.ಎಸ್.ಪುಟ್ಟರಾಜು ರಾಜ್ಯ ವಿಧಾನಸಭೆಗೆ ಆಯ್ಕೆಯಾದ ನಂತರ ಮಂಡ್ಯ ಕ್ಷೇತ್ರವನ್ನು ಜೆಡಿಎಸ್ ಉಳಿಸಿಕೊಂಡಿತು.

ಹೇಗಿದೆ ಕ್ಷೇತ್ರ

ಮಂಡ್ಯ ಲೋಕಸಭಾ ಕ್ಷೇತ್ರವು (mandya lok sabha constituency) ಇಡೀ ಮಂಡ್ಯ ಜಿಲ್ಲೆ ಮತ್ತು ಮೈಸೂರು ಜಿಲ್ಲೆಯ ಒಂದು ಭಾಗವನ್ನು ಒಳಗೊಂಡಿದೆ. ಎಂಟು ವಿಧಾನಸಭಾ ಕ್ಷೇತ್ರಗಳನ್ನು ಹೊಂದಿರುವ ಮಂಡ್ಯ ಕ್ಷೇತ್ರವು ಆರಂಭಗೊಂಡ ಬಳಿಕದಿಂದ ಶ್ರೀಮಂತ ರಾಜಕೀಯ ಇತಿಹಾಸ ಹೊಂದಿದೆ. ಮಂಡ್ಯದಲ್ಲಿ 3 ಬಾರಿ ಜೆಡಿಎಸ್ , 2 ಬಾರಿ ಜತನಾ ದಳ ಹಾಗೂ ಒಂದು ಬಾರಿ ಜನತಾ ಪಕ್ಷ ಗೆಲುವು ಸಾಧಿಸಿದೆ. ಹಿಂದಿನ ಬಾರಿ ಪಕ್ಷೇತರ ಅಭ್ಯರ್ಥಿ ಸುಮಲತಾ ವಿಜಯ ಕಂಡಿದ್ದರು. ಮೂಲತಃ ಮೈಸೂರು ರಾಜ್ಯದ ಭಾಗವಾಗಿದ್ದ ಮಂಡ್ಯ 1977 ರ ನಂತರ ಕರ್ನಾಟಕಕ್ಕೆ ಸೇರಿತು.

ಮಂಡ್ಯ ಲೋಕಸಭಾ ಕ್ಷೇತ್ರದ ವ್ಯಾಪ್ತಿಯಲ್ಲಿ ಮಳವಳ್ಳಿ, ಮದ್ದೂರು, ಮೇಲುಕೋಟೆ, ಮಂಡ್ಯ, ಶ್ರೀರಂಗಪಟ್ಟಣ, ನಾಗಮಂಗಲ, ಕೃಷ್ಣರಾಜಪೇಟೆ ಮತ್ತು ಕೃಷ್ಣರಾಜನಗರ ವಿಧಾನಸಭಾ ಕ್ಷೇತ್ರಗಳಿವೆ. ಕಾಂಗ್ರೆಸ್ 5, ಜೆಡಿಎಸ್ ಮತ್ತು ಸರ್ವೋದಯ ಕರ್ನಾಟಕ ಪಕ್ಷ ತಲಾ 1 ಸ್ಥಾನಗಳನ್ನು ಹೊಂದಿವೆ.

2011ರ ಜನಗಣತಿ ಪ್ರಕಾರ ಮಂಡ್ಯದಲ್ಲಿ 1805769 ಜನಸಂಖ್ಯೆ ಇತ್ತು. ಸರಾಸರಿ ಸಾಕ್ಷರತಾ ಪ್ರಮಾಣವು 70.40% – ಮಹಿಳೆಯರಲ್ಲಿ 62.54% ಮತ್ತು ಪುರುಷರಲ್ಲಿ 78.27% ಆಗಿತ್ತು. ಗ್ರಾಮೀಣ ಮತದಾರರು ಇಎಲ್ ನ 83.4% ರಷ್ಟಿದ್ದಾರೆ.

Exit mobile version