Site icon Vistara News

ವಿಸ್ತಾರ ಸಂಪಾದಕೀಯ: ನಿರ್ಬಂಧ ಹೊರತಾಗಿಯೂ ರಷ್ಯಾದಿಂದ ಗರಿಷ್ಠ ಪ್ರಮಾಣದಲ್ಲಿ ತೈಲ! ಭಾರತದ ರಾಜತಾಂತ್ರಿಕ ಜಾಣ್ಮೆಯ ಫಲ

Crude Oil

#image_title

ಇತ್ತೀಚಿನ ದಶಕಗಳಲ್ಲಿ ಭಾರತವು ಅಭಿವೃದ್ಧಿಯಲ್ಲಿ ದಾಪುಗಾಲು ಹಾಕುತ್ತಿದೆ. ಹೆಚ್ಚುತ್ತಿರುವ ಜನರ ಆಶೋತ್ತರಗಳನ್ನು ಈಡೇರಿಸಲು ಭಾರತ ಸರ್ಕಾರವು ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಇಂಧನ ಬಳಕೆಯು ಹೆಚ್ಚಾಗುತ್ತಲೇ ಇದ್ದು, ಪೂರೈಸುವುದು ಸವಾಲಿನ ಕೆಲಸವೇ ಸರಿ. ಆದರೂ, ಭಾರತವು ತನ್ನ ಈ ಬೇಡಿಕೆಯನ್ನು ಒಪೆಕ್ ರಾಷ್ಟ್ರಗಳು ಸೇರಿ ರಷ್ಯಾದಿಂದ ಪೂರೈಸಿಕೊಳ್ಳುತ್ತಿದೆ. ಅದರಲ್ಲೂ ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ತರಿಸಿಕೊಳ್ಳುತ್ತಿದೆ. ಕಳೆದ ಮೇ ತಿಂಗಳಲ್ಲಿ ಭಾರತವು ಸೌದಿ ಅರೇಬಿಯಾ, ಇರಾಕ್‌, ಯುಎಇ ಮತ್ತು ಅಮೆರಿಕದಿಂದ ತರಿಸಿಕೊಳ್ಳುವುದಕ್ಕಿಂತಲೂ ಹೆಚ್ಚು ಕಚ್ಚಾ ತೈಲವನ್ನು ರಷ್ಯಾದಿಂದ ತರಿಸಿಕೊಂಡಿದೆ. ಮೇ ತಿಂಗಳಲ್ಲಿ ದಿನಕ್ಕೆ 19.6 ಲಕ್ಷ ಬ್ಯಾರಲ್‌ನಷ್ಟು ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಂಡಿತ್ತು. ಏಪ್ರಿಲ್‌ಗೆ ಹೋಲಿಸಿದರೆ ಇದು ಶೇ.15 ಹೆಚ್ಚು ಎಂದು ಎನರ್ಜಿ ಕಾರ್ಗೊ ಟ್ರ್ಯಾಕರ್‌ ವೊರ್ಟೆಕ್ಸಾ ತಿಳಿಸಿದೆ.

ಭಾರತದಲ್ಲಿ ದಿನಕ್ಕೆ 4.82 ದಶಲಕ್ಷ ಬ್ಯಾರೆಲ್‌ ಪೆಟ್ರೋಲ್ ಬೇಕಾಗುತ್ತದೆ. ಡಿಸೇಲ್ ಬೇಡಿಕೆ ಇನ್ನೂ ಹೆಚ್ಚಿದೆ. 2023-24ನೇ ಸಾಲಿಗೆ ಭಾರತಕ್ಕೆ ವರ್ಷಕ್ಕೆ 233.8 ದಶಲಕ್ಷ ಟನ್ ತೈಲ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ತೈಲ ಬೇಡಿಕೆಯನ್ನು ಈಡೇರಿಸುವುದು ಸಾಮಾನ್ಯದ ಮಾತಲ್ಲ. ಕಳೆದೊಂದು ದಶಕದಲ್ಲಿ ಇರಾಕ್‌, ಯುಎಇ ಮತ್ತು ಸೌದಿ ಅರೇಬಿಯಾ ಭಾರತಕ್ಕೆ ಅತಿ ಹೆಚ್ಚು ತೈಲವನ್ನು ಪೂರೈಸುತ್ತಿದ್ದ ದೇಶಗಳಾಗಿದ್ದವು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಭಾರತವು ರಷ್ಯಾದ ರೂಪದಲ್ಲಿ ಹೊಸ ಪೂರೈಕೆದಾರ ರಾಷ್ಟ್ರವನ್ನು ಹುಡುಕಿಕೊಂಡಿದೆ. ಈ ಎಲ್ಲ ರಾಷ್ಟ್ರಗಳಿಂದಲೂ ಪೂರೈಕೆಯಾಗುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ತೈಲವನ್ನು ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ.

ಕಳೆದ ಮೇನಲ್ಲಿ ಇರಾಕ್‌ ದಿನಕ್ಕೆ 8.3 ಲಕ್ಷ ಬ್ಯಾರೆಲ್‌ ಕಚ್ಚಾ ತೈಲವನ್ನು ಪೂರೈಸಿತ್ತು. ಸೌದಿ ಅರೇಬಿಯಾ 5.60 ಲಕ್ಷ ಬ್ಯಾರೆಲ್‌, ಯುಎಇ 2.03 ಲಕ್ಷ ಬ್ಯಾರೆಲ್‌, ಅಮೆರಿಕ 1.38 ಲಕ್ಷ ಬ್ಯಾರೆಲ್‌ ಕಚ್ಚಾ ತೈಲವನ್ನು ಪೂರೈಸಿತ್ತು. ಭಾರತ ಈಗ ತನ್ನ ಕಚ್ಚಾ ತೈಲ ಆಮದಿನಲ್ಲಿ ಸುಮಾರು ಶೇ.42 ಪಾಲನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರವಾರು ಆಮದು ಲೆಕ್ಕದಲ್ಲಿ ಇದು ಗರಿಷ್ಠ ಮೊತ್ತವಾಗಿದೆ. ಇದರ ಪರಿಣಾಮ ಕೊಲ್ಲಿ ರಾಷ್ಟ್ರಗಳಿಂದ ಆಮದು ಇಳಿಕೆಯಾಗಿದೆ. ಅಂದರೆ, ತೈಲ ಆಮದಿಗೆ ಸಂಬಂಧಿಸಿದಂತೆ ಭಾರತದ ಸಮೀಕರಣಗಳು ಬದಲಾಗಿರುವುದು ಸ್ಪಷ್ಟವಾಗುತ್ತದೆ.

ಕಳೆದ ವರ್ಷ ಉಕ್ರೇನ್-ರಷ್ಯಾ ಸಮರದ ಬಳಿಕ ಚಿತ್ರಣ ಬದಲಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧದ ಪರಿಣಾಮ ರಷ್ಯಾ ಕೂಡ ಡಿಸ್ಕೌಂಟ್‌ ದರದಲ್ಲಿ ಭಾರತಕ್ಕೆ ಕಚ್ಚಾ ತೈಲವನ್ನು ಪೂರೈಸುತ್ತಿದೆ. ಯುದ್ಧದ ಪರಿಣಾಮ ಕಚ್ಚಾ ತೈಲ ದರ ಸ್ಫೋಟವಾಗಿತ್ತು. ಒಂದು ಹಂತದಲ್ಲಿ ಪ್ರತಿ ಬ್ಯಾರೆಲ್‌ ದರ 130 ಡಾಲರ್‌ಗೆ ಜಿಗಿದಿತ್ತು. ಆದರೆ, ಈಗ ಪರಿಸ್ಥಿತಿ ಸುಧಾರಿಸಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರಲ್‌ಗೆ 75 ಡಾಲರ್‌ ಆಸುಪಾಸಿನಲ್ಲಿದೆ. ಮುಂಬರುವ ದಿನಗಳಲ್ಲಿ ರಷ್ಯಾ ತನ್ನ ಕಚ್ಚಾ ತೈಲೋತ್ಪಾದನೆಯನ್ನು ಕಡಿತಗೊಳಿಸಿದರೆ ಮಾತ್ರ ಭಾರತಕ್ಕೆ ವೆಚ್ಚ ಹೆಚ್ಚಲಿದೆ. ಆದರೆ ಸದ್ಯದ ಮಟ್ಟಿಗೆ ರಷ್ಯಾ ಡಿಸ್ಕೌಂಟ್‌ ದರದಲ್ಲಿ ಕಚ್ಚಾ ತೈಲ ಪೂರೈಸುವ ಸಾಧ್ಯತೆ ಹೆಚ್ಚು. ಏಕೆಂದರೆ ಉಕ್ರೇನ್‌ ಕುರಿತ ಸಂಘರ್ಷ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಯುರೋಪ್‌ ಹಾಗೂ ಪಾಶ್ಚಿಮಾತ್ಯ ದೇಶಗಳು ತೈಲ ಮಾರುಕಟ್ಟೆ ವಿಚಾರದಲ್ಲಿ ರಷ್ಯಾವನ್ನು ದೂರ ಇಡಲು ಬಯಸುತ್ತಿವೆ. ಹೀಗಾಗಿ ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತೆ ಭಾರತಕ್ಕೆ ರಿಯಾಯಿತಿ ದರದಲ್ಲಿ ರಷ್ಯಾ ತೈಲ ಸಿಗುವಂತಾಗಿದೆ. ಕಡಿಮೆ ದರದಲ್ಲಿ ಕಚ್ಚಾ ತೈಲ ದೊರೆತರೂ ಅದರ ಲಾಭ ಸದ್ಯ ಗ್ರಾಹಕರಿಗೆ ಸಿಗುತ್ತಿಲ್ಲ. ಈ ಕುರಿತೂ ಸರ್ಕಾರವು ಯೋಚಿಸಬೇಕಾಗದ ಅಗತ್ಯವಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರೈಲು ದುರಂತದ ನಿಖರ ಕಾರಣ ಪತ್ತೆ ಮಾಡಿ; ಸುರಕ್ಷತೆ ಇನ್ನಷ್ಟು ಹೆಚ್ಚಾಗಲಿ

ಈಗ ಭಾರತವು ಜಾಗತಿಕ ವ್ಯವಹಾರಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ತನ್ನ ಬೇಡಿಕೆಗಳನ್ನು, ಅಗತ್ಯಗಳನ್ನು ಯಾವುದೇ ರಾಷ್ಟ್ರದ ಮರ್ಜಿಗೂ ಒಳಗಾಗದೆ ಈಡೇರಿಸಿಕೊಳ್ಳುವ ಸ್ಥಾನದಲ್ಲಿದೆ ಎಂಬುದಕ್ಕೆ, ನಿರ್ಬಂಧಗಳ ಹೊರತಾಗಿಯೂ ರಷ್ಯಾದಿಂದ ತೈಲ ಖರೀದಿಸುತ್ತಿರುವುದೇ ಸಾಕ್ಷಿಯಾಗಿದೆ. ಯಾವುದೇ ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿಯದೇ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಮೂಲಕ ತನ್ನದೇ ಹಾದಿಯನ್ನು ಕಂಡುಕೊಳ್ಳುತ್ತಿರುವುದು, ಜಾಗತಿಕವಾಗಿ ಭಾರತದ ಶಕ್ತಿ ವೃದ್ಧಿಯಾಗುತ್ತದೆ ಎಂಬುದರ ದ್ಯೋತಕವಾಗಿದೆ. ಜತೆಗೆ, ವಿವಿಧ ರಾಷ್ಟ್ರಗಳ ಜತೆಗೆ ಸಾಧಿಸುತ್ತಿರುವ ರಾಜತಾಂತ್ರಿಕ ಸಂಬಂಧಗಳು ಭಾರತವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿವೆ ಎನ್ನುವುದು ಸ್ಪಷ್ಟ.

Exit mobile version