ಪ್ರಮುಖ ಸುದ್ದಿ
ವಿಸ್ತಾರ ಸಂಪಾದಕೀಯ: ನಿರ್ಬಂಧ ಹೊರತಾಗಿಯೂ ರಷ್ಯಾದಿಂದ ಗರಿಷ್ಠ ಪ್ರಮಾಣದಲ್ಲಿ ತೈಲ! ಭಾರತದ ರಾಜತಾಂತ್ರಿಕ ಜಾಣ್ಮೆಯ ಫಲ
ಅಮೆರಿಕ, ಯುರೋಪ್ ಸೇರಿದಂತೆ ವಿಶ್ವದ ಬಹುತೇಕ ರಾಷ್ಟ್ರಗಳು ಆರ್ಥಿಕ, ವ್ಯಾಪಾರ ನಿರ್ಬಂಧಗಳನ್ನು ಹೇರಿವೆ. ಹಾಗಿದ್ದೂ, ಭಾರತವು ರಷ್ಯಾದಿಂದ ರಿಯಾಯಿತಿ ದರದಲ್ಲಿ ತೈಲ ಖರೀದಿಸುವ ಮೂಲಕ ತನ್ನ ಸಾಮರ್ಥ್ಯವನ್ನು ಜಗತ್ತಿನ ಮುಂದೆ ತೆರೆದಿಟ್ಟಿದೆ.
ಇತ್ತೀಚಿನ ದಶಕಗಳಲ್ಲಿ ಭಾರತವು ಅಭಿವೃದ್ಧಿಯಲ್ಲಿ ದಾಪುಗಾಲು ಹಾಕುತ್ತಿದೆ. ಹೆಚ್ಚುತ್ತಿರುವ ಜನರ ಆಶೋತ್ತರಗಳನ್ನು ಈಡೇರಿಸಲು ಭಾರತ ಸರ್ಕಾರವು ಎಲ್ಲ ಕ್ಷೇತ್ರಗಳಲ್ಲಿ ಅಭಿವೃದ್ಧಿ ಕಾರ್ಯಕ್ರಮಗಳನ್ನು ಅನುಷ್ಠಾನಗೊಳಿಸುತ್ತಿದೆ. ಪರಿಣಾಮವಾಗಿ ವರ್ಷದಿಂದ ವರ್ಷಕ್ಕೆ ಭಾರತದಲ್ಲಿ ಇಂಧನ ಬಳಕೆಯು ಹೆಚ್ಚಾಗುತ್ತಲೇ ಇದ್ದು, ಪೂರೈಸುವುದು ಸವಾಲಿನ ಕೆಲಸವೇ ಸರಿ. ಆದರೂ, ಭಾರತವು ತನ್ನ ಈ ಬೇಡಿಕೆಯನ್ನು ಒಪೆಕ್ ರಾಷ್ಟ್ರಗಳು ಸೇರಿ ರಷ್ಯಾದಿಂದ ಪೂರೈಸಿಕೊಳ್ಳುತ್ತಿದೆ. ಅದರಲ್ಲೂ ರಷ್ಯಾದಿಂದ ಹೆಚ್ಚಿನ ಪ್ರಮಾಣದಲ್ಲಿ ತೈಲವನ್ನು ತರಿಸಿಕೊಳ್ಳುತ್ತಿದೆ. ಕಳೆದ ಮೇ ತಿಂಗಳಲ್ಲಿ ಭಾರತವು ಸೌದಿ ಅರೇಬಿಯಾ, ಇರಾಕ್, ಯುಎಇ ಮತ್ತು ಅಮೆರಿಕದಿಂದ ತರಿಸಿಕೊಳ್ಳುವುದಕ್ಕಿಂತಲೂ ಹೆಚ್ಚು ಕಚ್ಚಾ ತೈಲವನ್ನು ರಷ್ಯಾದಿಂದ ತರಿಸಿಕೊಂಡಿದೆ. ಮೇ ತಿಂಗಳಲ್ಲಿ ದಿನಕ್ಕೆ 19.6 ಲಕ್ಷ ಬ್ಯಾರಲ್‌ನಷ್ಟು ಕಚ್ಚಾ ತೈಲವನ್ನು ರಷ್ಯಾದಿಂದ ಆಮದು ಮಾಡಿಕೊಂಡಿತ್ತು. ಏಪ್ರಿಲ್‌ಗೆ ಹೋಲಿಸಿದರೆ ಇದು ಶೇ.15 ಹೆಚ್ಚು ಎಂದು ಎನರ್ಜಿ ಕಾರ್ಗೊ ಟ್ರ್ಯಾಕರ್ ವೊರ್ಟೆಕ್ಸಾ ತಿಳಿಸಿದೆ.
ಭಾರತದಲ್ಲಿ ದಿನಕ್ಕೆ 4.82 ದಶಲಕ್ಷ ಬ್ಯಾರೆಲ್ ಪೆಟ್ರೋಲ್ ಬೇಕಾಗುತ್ತದೆ. ಡಿಸೇಲ್ ಬೇಡಿಕೆ ಇನ್ನೂ ಹೆಚ್ಚಿದೆ. 2023-24ನೇ ಸಾಲಿಗೆ ಭಾರತಕ್ಕೆ ವರ್ಷಕ್ಕೆ 233.8 ದಶಲಕ್ಷ ಟನ್ ತೈಲ ಬೇಕಾಗುತ್ತದೆ ಎಂದು ಅಂದಾಜಿಸಲಾಗಿದೆ. ಇಷ್ಟು ದೊಡ್ಡ ಪ್ರಮಾಣದ ತೈಲ ಬೇಡಿಕೆಯನ್ನು ಈಡೇರಿಸುವುದು ಸಾಮಾನ್ಯದ ಮಾತಲ್ಲ. ಕಳೆದೊಂದು ದಶಕದಲ್ಲಿ ಇರಾಕ್, ಯುಎಇ ಮತ್ತು ಸೌದಿ ಅರೇಬಿಯಾ ಭಾರತಕ್ಕೆ ಅತಿ ಹೆಚ್ಚು ತೈಲವನ್ನು ಪೂರೈಸುತ್ತಿದ್ದ ದೇಶಗಳಾಗಿದ್ದವು. ಆದರೆ, ಈಗ ಪರಿಸ್ಥಿತಿ ಬದಲಾಗಿದೆ. ಭಾರತವು ರಷ್ಯಾದ ರೂಪದಲ್ಲಿ ಹೊಸ ಪೂರೈಕೆದಾರ ರಾಷ್ಟ್ರವನ್ನು ಹುಡುಕಿಕೊಂಡಿದೆ. ಈ ಎಲ್ಲ ರಾಷ್ಟ್ರಗಳಿಂದಲೂ ಪೂರೈಕೆಯಾಗುವುದಕ್ಕಿಂತಲೂ ಹೆಚ್ಚಿನ ಪ್ರಮಾಣದ ತೈಲವನ್ನು ಭಾರತವು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ.
ಕಳೆದ ಮೇನಲ್ಲಿ ಇರಾಕ್ ದಿನಕ್ಕೆ 8.3 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಪೂರೈಸಿತ್ತು. ಸೌದಿ ಅರೇಬಿಯಾ 5.60 ಲಕ್ಷ ಬ್ಯಾರೆಲ್, ಯುಎಇ 2.03 ಲಕ್ಷ ಬ್ಯಾರೆಲ್, ಅಮೆರಿಕ 1.38 ಲಕ್ಷ ಬ್ಯಾರೆಲ್ ಕಚ್ಚಾ ತೈಲವನ್ನು ಪೂರೈಸಿತ್ತು. ಭಾರತ ಈಗ ತನ್ನ ಕಚ್ಚಾ ತೈಲ ಆಮದಿನಲ್ಲಿ ಸುಮಾರು ಶೇ.42 ಪಾಲನ್ನು ರಷ್ಯಾದಿಂದ ಆಮದು ಮಾಡಿಕೊಳ್ಳುತ್ತಿದೆ. ಇತ್ತೀಚಿನ ವರ್ಷಗಳಲ್ಲಿ ರಾಷ್ಟ್ರವಾರು ಆಮದು ಲೆಕ್ಕದಲ್ಲಿ ಇದು ಗರಿಷ್ಠ ಮೊತ್ತವಾಗಿದೆ. ಇದರ ಪರಿಣಾಮ ಕೊಲ್ಲಿ ರಾಷ್ಟ್ರಗಳಿಂದ ಆಮದು ಇಳಿಕೆಯಾಗಿದೆ. ಅಂದರೆ, ತೈಲ ಆಮದಿಗೆ ಸಂಬಂಧಿಸಿದಂತೆ ಭಾರತದ ಸಮೀಕರಣಗಳು ಬದಲಾಗಿರುವುದು ಸ್ಪಷ್ಟವಾಗುತ್ತದೆ.
ಕಳೆದ ವರ್ಷ ಉಕ್ರೇನ್-ರಷ್ಯಾ ಸಮರದ ಬಳಿಕ ಚಿತ್ರಣ ಬದಲಾಗಿದೆ. ಪಾಶ್ಚಿಮಾತ್ಯ ರಾಷ್ಟ್ರಗಳ ನಿರ್ಬಂಧದ ಪರಿಣಾಮ ರಷ್ಯಾ ಕೂಡ ಡಿಸ್ಕೌಂಟ್ ದರದಲ್ಲಿ ಭಾರತಕ್ಕೆ ಕಚ್ಚಾ ತೈಲವನ್ನು ಪೂರೈಸುತ್ತಿದೆ. ಯುದ್ಧದ ಪರಿಣಾಮ ಕಚ್ಚಾ ತೈಲ ದರ ಸ್ಫೋಟವಾಗಿತ್ತು. ಒಂದು ಹಂತದಲ್ಲಿ ಪ್ರತಿ ಬ್ಯಾರೆಲ್ ದರ 130 ಡಾಲರ್‌ಗೆ ಜಿಗಿದಿತ್ತು. ಆದರೆ, ಈಗ ಪರಿಸ್ಥಿತಿ ಸುಧಾರಿಸಿದ್ದು, ಅಂತಾರಾಷ್ಟ್ರೀಯ ಮಾರುಕಟ್ಟೆಯಲ್ಲಿ ಕಚ್ಚಾ ತೈಲ ದರ ಪ್ರತಿ ಬ್ಯಾರಲ್‌ಗೆ 75 ಡಾಲರ್ ಆಸುಪಾಸಿನಲ್ಲಿದೆ. ಮುಂಬರುವ ದಿನಗಳಲ್ಲಿ ರಷ್ಯಾ ತನ್ನ ಕಚ್ಚಾ ತೈಲೋತ್ಪಾದನೆಯನ್ನು ಕಡಿತಗೊಳಿಸಿದರೆ ಮಾತ್ರ ಭಾರತಕ್ಕೆ ವೆಚ್ಚ ಹೆಚ್ಚಲಿದೆ. ಆದರೆ ಸದ್ಯದ ಮಟ್ಟಿಗೆ ರಷ್ಯಾ ಡಿಸ್ಕೌಂಟ್ ದರದಲ್ಲಿ ಕಚ್ಚಾ ತೈಲ ಪೂರೈಸುವ ಸಾಧ್ಯತೆ ಹೆಚ್ಚು. ಏಕೆಂದರೆ ಉಕ್ರೇನ್ ಕುರಿತ ಸಂಘರ್ಷ ಇನ್ನೂ ತಾರ್ಕಿಕ ಅಂತ್ಯ ಕಂಡಿಲ್ಲ. ಯುರೋಪ್ ಹಾಗೂ ಪಾಶ್ಚಿಮಾತ್ಯ ದೇಶಗಳು ತೈಲ ಮಾರುಕಟ್ಟೆ ವಿಚಾರದಲ್ಲಿ ರಷ್ಯಾವನ್ನು ದೂರ ಇಡಲು ಬಯಸುತ್ತಿವೆ. ಹೀಗಾಗಿ ಇಬ್ಬರ ಜಗಳ ಮೂರನೆಯವರಿಗೆ ಲಾಭ ಎಂಬಂತೆ ಭಾರತಕ್ಕೆ ರಿಯಾಯಿತಿ ದರದಲ್ಲಿ ರಷ್ಯಾ ತೈಲ ಸಿಗುವಂತಾಗಿದೆ. ಕಡಿಮೆ ದರದಲ್ಲಿ ಕಚ್ಚಾ ತೈಲ ದೊರೆತರೂ ಅದರ ಲಾಭ ಸದ್ಯ ಗ್ರಾಹಕರಿಗೆ ಸಿಗುತ್ತಿಲ್ಲ. ಈ ಕುರಿತೂ ಸರ್ಕಾರವು ಯೋಚಿಸಬೇಕಾಗದ ಅಗತ್ಯವಿದೆ.
ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರೈಲು ದುರಂತದ ನಿಖರ ಕಾರಣ ಪತ್ತೆ ಮಾಡಿ; ಸುರಕ್ಷತೆ ಇನ್ನಷ್ಟು ಹೆಚ್ಚಾಗಲಿ
ಈಗ ಭಾರತವು ಜಾಗತಿಕ ವ್ಯವಹಾರಗಳಲ್ಲಿ ನಿರ್ಣಾಯಕ ಪಾತ್ರವನ್ನು ವಹಿಸುತ್ತಿದೆ. ತನ್ನ ಬೇಡಿಕೆಗಳನ್ನು, ಅಗತ್ಯಗಳನ್ನು ಯಾವುದೇ ರಾಷ್ಟ್ರದ ಮರ್ಜಿಗೂ ಒಳಗಾಗದೆ ಈಡೇರಿಸಿಕೊಳ್ಳುವ ಸ್ಥಾನದಲ್ಲಿದೆ ಎಂಬುದಕ್ಕೆ, ನಿರ್ಬಂಧಗಳ ಹೊರತಾಗಿಯೂ ರಷ್ಯಾದಿಂದ ತೈಲ ಖರೀದಿಸುತ್ತಿರುವುದೇ ಸಾಕ್ಷಿಯಾಗಿದೆ. ಯಾವುದೇ ಅಂತಾರಾಷ್ಟ್ರೀಯ ಒತ್ತಡಗಳಿಗೆ ಮಣಿಯದೇ ರಷ್ಯಾದಿಂದ ಕಚ್ಚಾ ತೈಲ ಖರೀದಿಸುವ ಮೂಲಕ ತನ್ನದೇ ಹಾದಿಯನ್ನು ಕಂಡುಕೊಳ್ಳುತ್ತಿರುವುದು, ಜಾಗತಿಕವಾಗಿ ಭಾರತದ ಶಕ್ತಿ ವೃದ್ಧಿಯಾಗುತ್ತದೆ ಎಂಬುದರ ದ್ಯೋತಕವಾಗಿದೆ. ಜತೆಗೆ, ವಿವಿಧ ರಾಷ್ಟ್ರಗಳ ಜತೆಗೆ ಸಾಧಿಸುತ್ತಿರುವ ರಾಜತಾಂತ್ರಿಕ ಸಂಬಂಧಗಳು ಭಾರತವನ್ನು ಮತ್ತೊಂದು ಎತ್ತರಕ್ಕೆ ಕೊಂಡೊಯ್ದಿವೆ ಎನ್ನುವುದು ಸ್ಪಷ್ಟ.
ದೇಶ
Money Guide: ಸಣ್ಣ ಉಳಿತಾಯದಿಂದ ದೊಡ್ಡ ಮೊತ್ತ! ಯಾವ ಸ್ಕೀಮ್‌ನಲ್ಲಿ ಬಡ್ಡಿ ಜಾಸ್ತಿ?
Money Guide: ಪಿಪಿಎಫ್, ಎಫ್‌ಡಿ, ಪೋಸ್ಟ್ ಆಫೀಸ್ ಠೇವಣಿಗಳ ನಡುವೆ ಹೆಚ್ಚು ಲಾಭ ತಂದು ಕೊಡುವ ಉಳಿತಾಯ ಯೋಜನೆಗಳಾವವು?
ಹಣ ಉಳಿತಾಯವೊಂದು ಕಲೆಗಾರಿಕೆ. ಈ ಕಲೆಯನ್ನು ಬಲ್ಲವರು ಹಣಕಾಸಿನ ಬಿಕ್ಕಟ್ಟು (Finance Crisis) ಎದುರಿಸುವುದು ಕಡಿಮೆ. ದುಡಿಮೆಯ ಜತೆಗೆ ಉಳಿತಾಯವನ್ನು ಮಾಡಿದರೆ(Saving with Income), ಮುಂದೊಂದು ದಿನ ಆ ಹಣ ನಮ್ಮ ನೆರವಿ ಬಂದೇ ಬರುತ್ತದೆ. ಇದಕ್ಕಾಗಿಯೇ ಬ್ಯಾಂಕುಗಳು(Banks), ಅಂಚೆ ಕಚೇರಿಗಳು (Post Office Savings) ಸೇರಿದಂತೆ ಅನೇಕ ಸಂಸ್ಥೆಗಳ ಸಣ್ಣ ಉಳಿತಾಯ ಯೋಜನೆಗಳನ್ನು ಹೊಂದಿರುತ್ತವೆ. ನಮಗೆ ಈ ಉಳಿತಾಯಗಳ ಬಗ್ಗೆ ಮಾಹಿತಿ ಇದ್ದರೆ, ಚಿಕ್ಕ ಮೊತ್ತವಾದರೂ ಸರಿ ಉಳಿತಾಯಕ್ಕೆ ಮುಂದಾಗಬೇಕು. ಹನಿ ಹನಿ ಗೂಡಿದರೆ ಹಳ್ಳ ಎನ್ನುವ ಹಾಗೆ, ಚಿಕ್ಕ ಮೊತ್ತವೇ ಮುಂದೊಂದು ದಿನ ದೊಡ್ಡ ಮೊತ್ತವಾಗಿ ಪರಿವರ್ತನೆಯಾಗುತ್ತದೆ. ಹಾಗಾಗಿ, ಸಣ್ಣ ಉಳಿತಾಯ ಯೋಜನೆಗಳು (Small Savings Schemes) ಪ್ರಮುಖ ಪಾತ್ರವನ್ನು ನಿರ್ವಹಣೆ ಮಾಡುತ್ತವೆ(Money Guide).
ಎಷ್ಟು ಬಡ್ಡಿ ದರ ಇದೆ?
ಸದ್ಯ ದೇಶದಲ್ಲಿ ಬಡ್ಡಿದರಗಳು ಅತ್ಯಧಿಕ ದರದಲ್ಲಿ ಚಾಲ್ತಿಯಲ್ಲಿರುವಾಗಲೂ, ಸ್ಥಿರ-ಆದಾಯ ಸಾಧನಗಳು ಆಕರ್ಷಕ ಹೂಡಿಕೆಯ ಮಾರ್ಗಗಳಾಗಿವೆ. ಇವುಗಳಲ್ಲಿ ಬ್ಯಾಂಕ್ ಸ್ಥಿರ ಠೇವಣಿಗಳು, ಪಿಪಿಎಫ್, ರಾಷ್ಟ್ರೀಯ ಉಳಿತಾಯ ಪ್ರಮಾಣಪತ್ರಗಳು, ಅಂಚೆ ಕಚೇರಿ ಠೇವಣಿಗಳು ಮತ್ತು ಹಿರಿಯ ನಾಗರಿಕರ ಉಳಿತಾಯ ಯೋಜನೆಗಳು ಸೇರಿವೆ. ಬಡ್ಡಿದರಗಳ ವಿಷಯಕ್ಕೆ ಬಂದಾಗ, ಹಿರಿಯ ನಾಗರಿಕರ ಉಳಿತಾಯ ಯೋಜನೆಯು ವಾರ್ಷಿಕವಾಗಿ ಶೇ.8.2, ಬ್ಯಾಂಕ್ ಎಫ್‌ಡಿಗಳು ಶೇ.7.75ರವರೆಗೆ ಬಡ್ಡಿಯನ್ನು ನೀಡುತ್ತವೆ. ಆದರೆ, ಅಂಚೆಕಚೇರಿ ಉಳಿತಾಯ ಠೇವಣಿಗಳು 7.5 ಶೇಕಡಾ ವಾರ್ಷಿಕ ಬಡ್ಡಿ ದರವನ್ನು ನೀಡುತ್ತಿವೆ. ಇನ್ನೂ ಪಿಎಫ್‌ಎಫ್‌ನಲ್ಲಿ ವಾರ್ಷಿಕ ಶೇ.7.1ರಷ್ಟು ಬಡ್ಡಿ ಇರುತ್ತದೆ ಎಂಬುದನ್ನು ಮರೆಯಬಾರದು.
ಎಚ್‌ಡಿಎಫ್‌ಸಿ, ಎಸ್‌ಬಿಐನಂಥ ಬೃಹತ್ ಬ್ಯಾಂಕುಗಳು ತಮ್ಮ ಎಫ್‌ಡಿಗಳ ಮೇಲೆ ಆಕರ್ಷಕ ಬಡ್ಡಿಯನ್ನು ಒದಗಿಸುತ್ತಿವೆ. ಠೇವಣಿಯ ಅವಧಿ ಮತ್ತು ಮೊತ್ತದ ಅನುಸಾರ ಎಚ್‌ಡಿಎಫ್‌ಸಿ ಬ್ಯಾಂಕ್ ಶೇ.7.75ವರೆಗೂ ಬಡ್ಡಿ ನೀಡುತ್ತದೆ. ಎಸ್‌ಬಿಐ ಕೂಡ ಎಫ್‌ಡಿಗಳ ಮೇಲೆ ಶೇ.7.50ವರೆಗೂ ಲಾಭ ನೀಡಲಿದೆ. ಪಂಜಾಬ್ ನ್ಯಾಷನಲ್ ಬ್ಯಾಂಕ್ ಕೂಡ ಹಿಂದೆ ಬಿದ್ದಿಲ್ಲ ಅದು ವಾರ್ಷಿಕ 7.75 ಪ್ರತಿಶತ ಬಡ್ಡಿಯನ್ನು ನೀಡುವುದಾಗಿ ಹೇಳಿದೆ.
ಯಾವವು ಸಣ್ಣ ಉಳಿತಾಯ ಯೋಜನೆಗಳು?
ಸಣ್ಣ ಉಳಿತಾಯ ಯೋಜನೆಗಳ ಬಡ್ಡಿ ಬಗ್ಗೆ ಮಾತನಾಡುವುದಾದರೆ, ಶೇ.4ರಿಂದ ಶೇ.8.2ವರೆಗೂ ಇದೆ. ಅಂಚೆ ಕಚೇರಿ ಸೇವಿಂಗ್ ಠೇವಣಿಗೆಳ ಮೇಲೆ ಗ್ರಾಹಕರಿಗೆ ಶೇ.4 ರಿಂದ ಹಾಗೂ ಹಿರಿಯ ನಾಗರಿಕರ ಸೇವಿಂಗ್ಸ್ ಸ್ಕೀಮ್ ಮೇಲೆ ಶೇ.8ರವರೆಗೂ ಬಡ್ಡಿ ದೊರೆಯುತ್ತದೆ.
ಸಣ್ಣ ಉಳಿತಾಯ ಯೋಜನೆಗಳೆಂದರೇನು?
ಸಣ್ಣ ಉಳಿತಾಯ ಯೋಜನೆಗಳು ಸಾರ್ವಜನಿಕರನ್ನು ನಿಯಮಿತವಾಗಿ ಉಳಿಸಲು ಪ್ರೋತ್ಸಾಹಿಸಲು ಸರ್ಕಾರದಿಂದ ನಿರ್ವಹಿಸಲಾಗುವ ಉಳಿತಾಯ ಸಾಧನಗಳಾಗಿವೆ. ಸಣ್ಣ ಉಳಿತಾಯ ಯೋಜನೆಗಳು ಮೂರು ವಿಭಾಗಗಳನ್ನು ಹೊಂದಿವೆ – ಉಳಿತಾಯ ಠೇವಣಿಗಳು, ಸಾಮಾಜಿಕ ಭದ್ರತಾ ಯೋಜನೆಗಳು ಮತ್ತು ಮಾಸಿಕ ಆದಾಯ ಯೋಜನೆಗಳು.
ಈ ಸಣ್ಣ ಉಳಿತಾಯ ಯೋಜನೆಗಳು 1ರಿಂದ 3 ವರ್ಷದವರೆಗಿನ ಠೇವಣಿಗಳು ಮತ್ತು 5 ವರ್ಷದವರೆಗಿನ ಮರುಕಳಿಸುವ ಠೇವಣಿಗಳನ್ನು ಒಳಗೊಂಡಿರುತ್ತವೆ. ಜತೆಗೆ, ನ್ಯಾಷನಲ್ ಸೇವಿಂಗ್ ಸರ್ಟಿಫಿಕೇಟ್, ಕಿಸಾನ್ ವಿಕಾಸ್ ಪತ್ರಗಳಂತ ಸರ್ಟಿಫಿಕೇಟ್‌ಗಳೂ ಇರತ್ತವೆ.
ಪಿಪಿಎಫ್, ಸುಕನ್ಯಾ ಸಮೃದ್ಧಿ ಖಾತೆ, ಹಿರಿಯ ನಾಕರಿಕ ಉಳಿತಾಯ ಯೋಜನೆ ಇತ್ಯಾದಿಗಳು ಸಾಮಾಜಿಗ ಭದ್ರತಾ ಯೋಜನೆಗಳ ಅಡಿಯಲ್ಲಿ ಬರುತ್ತವೆ. ಇನ್ನು, ಮಾಸಿಗ ಆದಾಯ ಯೋಜನೆಯಲ್ಲಿ ಮಾಸಿಕ ಆದಾಯ ಖಾತೆ ಸೇರ್ಪಡೆಯಾಗುತ್ತದೆ.
ಈ ಸುದ್ದಿಯನ್ನೂ ಓದಿ: Money Guide: ಇದು ಖುಷಿಯ ಸುದ್ದಿ… ಐದು ವರ್ಷದ ಆರ್‌ಡಿ ಖಾತೆ ಬಡ್ಡಿ ದರ ಶೇ.6.7ಕ್ಕೆ ಹೆಚ್ಚಳ!
ಯಾವ ಪ್ಲ್ಯಾನ್‌ನಲ್ಲಿ ಎಷ್ಟು ಬಡ್ಡಿ?
-1 ವರ್ಷದ ಅಂಚೆ ಕಚೇರಿ ಠೇವಣಿ; ಶೇ.6.9
-2 ವರ್ಷದ ಅಂಚೆ ಕಚೇರಿ ಠೇವಣಿ; ಶೇ.7.0
-3 ವರ್ಷದ ಅಂಚೆ ಕಚೇರಿ ಠೇವಣಿ; ಶೇ.7
-5 ವರ್ಷದ ಅಂಚೆ ಕಚೇರಿ ಠೇವಣಿ; ಶೇ.7.5
-5 ವರ್ಷದ ಆರ್‌ಡಿ ಖಾತೆ; ಶೇ.6.7
-ರಾಷ್ಟ್ರೀಯ ಸೇವಿಂಗ್ ಸರ್ಟಿಫಿಕೇಟ್; ಶೇ.6.5
-ಕಿಸಾನ್ ವಿಕಾಸ್ ಪತ್ರ; 7.5(115 ತಿಂಗಳಿಗೆ ಮೆಚ್ಯೂರ್ ಆಗುತ್ತದೆ)
-ಪಿಪಿಎಫ್;ಶೇ.7.1
-ಸುಕನ್ಯಾ ಸಮೃದ್ಧಿ ಖಾತೆ; ಶೇ.8
-ಹಿರಿಯ ನಾಗರಿಕರ ಸೇವಿಂಗ್; 8
-ಮಾಸಿಕ ಆದಾಯ ಖಾತೆ; ಶೇ.7.4
ಕರ್ನಾಟಕ
Caste Census Report : ಮೋದಿ ಅಸಮಾಧಾನದ ಮಧ್ಯೆ ರಾಜ್ಯದಲ್ಲಿ ಮಂಡನೆಯಾಗುತ್ತಾ ಜಾತಿಗಣತಿ ವರದಿ?
Caste Census Report : ಬಿಹಾರದಲ್ಲಿ ಜಾತಿಗಣತಿ ವರದಿ ಮಂಡನೆಯಾಗಿದೆ. ರಾಜ್ಯದಲ್ಲಿ ಸಿದ್ದರಾಮಯ್ಯ ಅವರು ಕಳೆದ ಬಾರಿ ಸಿಎಂ ಆದಾಗಲೇ ವರದಿ ಸಿದ್ಧವಾಗಿತ್ತು. ಆದರೆ, ಕಾರಣಾಂತರಗಳಿಂದ ಅದು ಮಂಡನೆಯಾಗಿರಲಿಲ್ಲ. ಈಗಲಾದರೂ ಮಂಡನೆಯಾಗಲಿದೆಯಾ? ಎಂಬ ಪ್ರಶ್ನೆ ಈಗ ಮೂಡಿದೆ.
ಬೆಂಗಳೂರು: ಕಾಂತರಾಜು ನೇತೃತ್ವದ ಸಮಿತಿಯಿಂದ (Committee headed by Kantharaju) 2018ರಲ್ಲಿ ಸಿದ್ಧವಾಗಿರುವ ಜಾತಿಗಣತಿ ವರದಿಯು (Caste Census Report) ರಾಜ್ಯದಲ್ಲಿ ಜಾರಿಯಾಗಲಿದೆಯೇ ಎಂಬ ಪ್ರಶ್ನೆ ಮೂಡಿದೆ. ಬಿಹಾರದಲ್ಲಿ ಈಗಾಗಲೇ ಜಾತಿಗಣತಿ ವರದಿಯನ್ನು ಅಂಗೀಕಾರ ಮಾಡಲಾಗಿದೆ. ಇದಕ್ಕೆ ವ್ಯಾಪಕ ಪರ-ವಿರೋಧ ಚರ್ಚೆಗಳು ಪ್ರಾರಂಭವಾಗಿವೆ. ಈ ನಡುವೆ ಪ್ರಧಾನಿ ನರೇಂದ್ರ ಮೋದಿ (PM Narendra Modi) ಸಹ ವರದಿ ಬಗ್ಗೆ ಆಕ್ಷೇಪಣೆಯನ್ನು ವ್ಯಕ್ತಪಡಿಸಿದ್ದಾರೆ. ಇನ್ನು ಹಿಂದುಳಿದ ವರ್ಗಗಳ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ (Backward Classes Commission Chairman Jayaprakash Hegde) ಅವರು, ನವೆಂಬರ್‌ನಲ್ಲಿ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡಲಾಗುವುದು ಎಂದು ಹೇಳಿದ್ದಾರೆ. ಈ ನಡುವೆ ಕಾಂಗ್ರೆಸ್ ಹಿರಿಯ ಮುಖಂಡರಿಂದಲೇ ವರದಿ ಅಂಗೀಕಾರಕ್ಕೆ ಒತ್ತಡಗಳು ಕೇಳಿಬಂದಿವೆ. ಆದರೆ, ಸಿಎಂ ಸಿದ್ದರಾಮಯ್ಯ (CM Siddaramaiah) ಇದರ ಬಗ್ಗೆ ಜಾಣ್ಮೆಯ ಉತ್ತರವನ್ನು ನೀಡಿದ್ದು, ಮೊದಲು ತಮ್ಮ ಬಳಿ ವರದಿ ಬರಲಿ ಎಂದು ಹೇಳಿದ್ದಾರೆ. ಹಾಗಾದರೆ, ಲೋಕಸಭೆ ಚುನಾವಣೆಗೆ ಮುನ್ನ ರಾಜ್ಯದಲ್ಲಿ ಮಂಡನೆಯಾಗಲಿದೆಯೇ? ಅಥವಾ ರಾಜ್ಯ ಸರ್ಕಾರ ಸಬೂಬು ಹೇಳುತ್ತಾ ಮುಂದೂಡಲಿದೆಯೇ ಎಂಬ ಕುತೂಹಲ ಮೂಡಿದೆ.
2018ರಲ್ಲಿ ಕಾಂತರಾಜು ನೇತೃತ್ವದ ಸಮಿತಿಯು ಜಾತಿ ಗಣತಿ ವರದಿಯನ್ನು ಸಿದ್ಧಪಡಿಸಿತ್ತು. 2019ರಲ್ಲಿ ಕಾಂಗ್ರೆಸ್ – ಜೆಡಿಎಸ್ ಮೈತ್ರಿ (Congress JDS alliance) ಸರ್ಕಾರದಲ್ಲಿ ಮುಖ್ಯಮಂತ್ರಿಯಾಗಿದ್ದ ಎಚ್.ಡಿ. ಕುಮಾರಸ್ವಾಮಿ (HD Kumaraswamy) ಅವರು ಈ ವರದಿಯನ್ನು ಅಂಗೀಕರಿಸಲು ಒಪ್ಪಿರಲಿಲ್ಲ. ಅಂದು ಹಿಂದುಳಿದ ವರ್ಗಗಳ ಸಚಿವರಾಗಿದ್ದ ಪುಟ್ಟರಂಗಶೆಟ್ಟಿ ಅವರಿಗೆ ಕರೆ ಮಾಡಿದ್ದ ಕುಮಾರಸ್ವಾಮಿ, ಆ ವಿಷಯವನ್ನು ಕ್ಯಾಬಿನೆಟ್‌ಗೆ ಚರ್ಚೆಗೆ ತರದಂತೆ ಸೂಚಿಸಿದ್ದರು. ಹಾಗಾಗಿ ಆ ವರದಿ ಹಾಗೆಯೇ ಉಳಿಯಿತು. ನಂತರ ಬಂದ ಮುಖ್ಯಮಂತ್ರಿಗಳ್ಯಾರೂ ಸಹ ಈ ಜಾತಿಗಣತಿ ವರದಿಯನ್ನು ಪಡೆಯಲು ಮುಂದೆ ಬರಲಿಲ್ಲ. ಆದರೆ, ಈಗ ಬಿಹಾರದಲ್ಲಿ ಜಾತಿ ಗಣತಿ ವರದಿಯನ್ನು ಅಂಗೀಕಾರ ಮಾಡಿದ್ದರಿಂದ ರಾಜ್ಯದಲ್ಲಿ ಈ ಬಗ್ಗೆ ಕೂಗು ಹೆಚ್ಚಾಗಿದೆ. ಅದಕ್ಕಿಂತ ಮೊದಲೇ ಸಿಎಂ ಸಿದ್ದರಾಮಯ್ಯ ಅವರು ತಮ್ಮ ಅಧಿಕಾರ ಅವಧಿ ಮುಗಿಯುವುದರೊಳಗೆ ಜಾತಿ ಗಣತಿ ವರದಿಯನ್ನು ಬಿಡುಗಡೆ ಮಾಡಿಯೇ ಹೋಗುವುದಾಗಿ ಹೇಳಿದ್ದರು. ಈ ಮಧ್ಯೆ ವರದಿ ಮಂಡನೆಗೆ ಮೊದಲೇ ಸೋರಿಕೆ ಆಗಿದ್ದರಿಂದ ಮೇಲ್ವರ್ಗದ ಪ್ರಬಲ ಸಮುದಾಯವರು ಸೇರಿದಂತೆ ಹಲವರಿಂದ ಜಾತಿ ಮಂಡನೆಗೆ ವಿರೋಧ ವ್ಯಕ್ತವಾಗಿದೆ. ಅಲ್ಲದೆ, ಈ ವರದಿ ಈಗ ಮಂಡನೆಯಾದರೆ ಲೋಕಸಭಾ ಚುನಾವಣೆ ಮೇಲೆ ಸಾಕಷ್ಟು ಪ್ರಭಾವ ಬೀರಲಿದೆ ಎಂದು ಹೇಳಲಾಗುತ್ತಿದ್ದು, ಅದಕ್ಕಾಗಿಯೇ ಸರ್ಕಾರ ಹಿಂದೇಟು ಹಾಕುತ್ತಿದೆ ಎಂಬ ಚರ್ಚೆಗಳೂ ಹುಟ್ಟಿಕೊಂಡಿವೆ.
ಇದನ್ನೂ ಓದಿ: Old Pension Scheme : ಸರ್ಕಾರಿ ನೌಕರರಿಗೆ Good News; ಶೀಘ್ರವೇ ಹಳೆ ಪಿಂಚಣಿ ವ್ಯವಸ್ಥೆ ಜಾರಿ ಎಂದ ಮಧು ಬಂಗಾರಪ್ಪ
ವರದಿ ಅಂಗೀಕಾರಕ್ಕೆ ಹಿಂದೇಟು ಏಕೆ?
ಹಿಂದುಳಿದ ವರ್ಗಗಳ ಆಯೋಗದ ವರದಿಯನ್ನು ಅಂಗೀಕರಿಸಲು ಹಿಂದೇಟು ಏಕೆ? ವಿಪಕ್ಷಗಳ ಅಸಮಾಧಾನ ಯಾಕೆ? ಎಂಬುದನ್ನು ನೋಡುವುದಾದರೆ ವರದಿಯಲ್ಲಿನ ಅಂಕಿ-ಅಂಶಗಳು ಮೂಲ ಕಾರಣವಾಗಿದೆ. ವರದಿ ಸಲ್ಲಿಕೆಗೆ ಮೊದಲೇ ಅಂಕಿ-ಅಂಶಗಳ ಸೋರಿಕೆ ಆಗಿವೆ. ಸಿದ್ದರಾಮಯ್ಯ ಅವರು ಈ ಹಿಂದೆ ಸಿಎಂ ಆಗಿದ್ದಾಗ ಸಮಿತಿ ರಚಿಸಿ ಜಾತಿ ಗಣತಿ ವರದಿಯನ್ನು ಸಿದ್ಧಪಡಿಸಲು ಆದೇಶಿಸಲಾಗಿತ್ತು.
2013ರಲ್ಲಿ ಅಹಿಂದ ಸರ್ಕಾರ ಎಂದೇ ಬಿಂಬಿತವಾಗಿತ್ತು. ಅಲ್ಲದೆ, ಕಾಂಗ್ರೆಸ್‌ಗೆ ಅನುಕೂಲ ಆಗುವ ರೀತಿ ರಿಪೋರ್ಟ್ ತಯಾರಾಗಿದೆ ಎನ್ನುವ ಆರೋಪವೂ ಕೇಳಿಬಂದಿತ್ತು. ಪ್ರಬಲ ಸಮುದಾಯದ ನಾಯಕರಿಂದ ಈ ಬಗ್ಗೆ ಆಕ್ಷೇಪ ಕೇಳಿಬಂದಿತ್ತು. ವರದಿ ಸಿದ್ಧವಾಗುತ್ತಿರುವ ಹೊತ್ತಿನಲ್ಲಿಯೇ ಅಂಕಿ – ಅಂಶಗಳ ಸೋರಿಕೆ ಆಗಿರುವುದೇ ರಾಜಕೀಯ ಪಕ್ಷಗಳಲ್ಲಿ ಆತಂಕಕ್ಕೆ ಕಾರಣವಾಗಿತ್ತು.
ವರದಿ ಏನು ಹೇಳುತ್ತದೆ?
ಮುಸ್ಲಿಂ ಸಮುದಾಯವೇ ರಾಜ್ಯದಲ್ಲಿ ಅತಿ ಹೆಚ್ಚು ಸಂಖ್ಯೆಯಲ್ಲಿ ಇದ್ದಾರೆ. ಎರಡನೇ ಸ್ಥಾನದಲ್ಲಿ ದಲಿತರು, ಮೂರನೇ ಸ್ಥಾನದಲ್ಲಿ ಲಿಂಗಾಯತರು, ನಾಲ್ಕನೇ ಸ್ಥಾನದಲ್ಲಿ ಕುರುಬರು ಹಾಗೂ ಐದನೇ ಸ್ಥಾನದಲ್ಲಿ ಒಕ್ಕಲಿಗರು ಇದ್ದಾರೆಂದು ಮಾಹಿತಿ ಹೇಳುತ್ತದೆ. ಇದರಲ್ಲಿ ಮೀಸಲಾತಿ ಪಡೆಯುತ್ತಿರುವ ಕೆಲ ಸಮುದಾಯಗಳು ಆರ್ಥಿಕವಾಗಿ ಪ್ರಬಲವಾಗಿದ್ದಾರೆಂಬುದನ್ನೂ ವರದಿಯಲ್ಲಿ ಉಲ್ಲೇಖಿಸಲಾಗಿದೆ. ಒಂದು ವೇಳೆ ಈ ರಿಪೋರ್ಟ್ ಅಂಗೀಕಾರವಾದರೆ ಮುಂದೆ ಸ್ಥಳೀಯ ಸಂಸ್ಥೆಗಳಲ್ಲಿ ಇದೇ ರಿಪೋರ್ಟ್ ಆಧರಿಸಿ ಮೀಸಲಾತಿ ವಿಂಗಡಣೆ ಮಾಡಲಾಗುತ್ತದೆ. ಇದರಿಂದ ಕೆಲ ಸಮುದಾಯಗಳಿಗೆ ಅನ್ಯಾಯವಾಗುತ್ತದೆ ಎಂಬುದು ಕೆಲವರ ವಾದವಾಗಿದೆ. ಹೀಗಾಗಿಯೇ ಇದೊಂದು ಅವೈಜ್ಞಾನಿಕ ವರದಿ ಎಂದು ವಿಪಕ್ಷಗಳ ನಾಯಕರು ಹೇಳುತ್ತಿದ್ದಾರೆ. ಜತೆಗೆ ಪ್ರಬಲ ಸಮುದಾಯಗಳ ಸ್ವಾಮೀಜಿಗಳಿಂದಲೂ ಈ ರಿಪೋರ್ಟ್‌ಗೆ ವಿರೋಧ ವ್ಯಕ್ತವಾಗಿದೆ.
ಪ್ರಧಾನಿ ಮೋದಿಯಿಂದಲೂ ಅಸಮಾಧಾನ
ಬಿಹಾರ ರಾಜ್ಯದಲ್ಲಿ ಆಗಿರುವ ಜಾತಿ ಗಣತಿ ಬಗ್ಗೆ ಪ್ರಧಾನಿ ನರೇಂದ್ರ ಮೋದಿ ಅಸಮಾಧಾನವನ್ನು ಹೊರಹಾಕಿದ್ದಾರೆ. ಜಾತಿ ಗಣತಿಯಿಂದ ಅಲ್ಪಸಂಖ್ಯಾತರ ಹಕ್ಕು ಕಡಿಮೆ ಮಾಡಲು ಬಯಸುತ್ತಿದೆಯೇ? ನಿನ್ನೆಯಿಂದ ಕಾಂಗ್ರೆಸ್ ನಾಯಕರು ಜಿತ್ನಿ ಆಬಾದಿ ಉತ್ನಾ ಹಕ್ ಎಂದು ಹೇಳುತ್ತಿದ್ದಾರೆ. ಮಾಜಿ ಪ್ರಧಾನಿ ಮನಮೋಹನ್ ಸಿಂಗ್ ಅವರು ಏನು ಯೋಚಿಸುತ್ತಿರಬಹುದು? ಅವರು ಅಲ್ಪಸಂಖ್ಯಾತರು ಮೊದಲಿಗರು ಎಂದು ಹೇಳುತ್ತಿದ್ದರು. ದೇಶದ ಸಂಪನ್ಮೂಲಗಳ ಮೇಲೆ ಅವರಿಗೆ ಹಕ್ಕು ಎನ್ನುತ್ತಿದ್ದರು. ಆದರೆ, ಈಗ ಕಾಂಗ್ರೆಸ್ ಬೇರೆಯದ್ದೆ ಹೇಳುತ್ತಿದೆ. ದೇಶದ ಸಂಪನ್ಮೂಲಗಳಲ್ಲಿ ಯಾರಿಗೆ ಮೊದಲ ಹಕ್ಕು ಎಂದು ಸಮುದಾಯದ ಜನಸಂಖ್ಯೆ ನಿರ್ಧರಿಸುತ್ತದೆ ಎನ್ನುತ್ತಿದ್ದಾರೆ. ಹಾಗಾದರೆ ಕಾಂಗ್ರೆಸ್‌ನವರು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಡಿಮೆ ಮಾಡಲು ಬಯಸುತ್ತಾರೆಯೇ? ಅಲ್ಪಸಂಖ್ಯಾತರನ್ನು ತೊಲಗಿಸಲು ಅವರು ಬಯಸುತ್ತಾರಾ? ಅತಿ ಹೆಚ್ಚು ಜನಸಂಖ್ಯೆ ಹೊಂದಿರುವ ಹಿಂದುಗಳು ಮುಂದೆ ಬಂದು ಅವರ ಎಲ್ಲ ಹಕ್ಕುಗಳನ್ನು ತೆಗೆದುಕೊಳ್ಳಬೇಕೇ? ಇದನ್ನೆಲ್ಲ ಕೇಳಿಕೊಂಡು ಹಿರಿಯ ಕಾಂಗ್ರೆಸ್ ನಾಯಕರು ಸುಮ್ಮನೆ ಕುಳಿತಿದ್ದಾರೆ. ಇದನ್ನೆಲ್ಲಾ ನೋಡಿ ಮಾತನಾಡುವ ಧೈರ್ಯವೂ ಅವರಿಗಿಲ್ಲ ಎಂದು ಪ್ರಧಾನಿ ಮೋದಿ ವಾಗ್ದಾಳಿ ನಡೆಸಿದ್ದರು.
ಜಾತಿಗಣತಿ ವರದಿ ಬಿಡುಗಡೆ ಆಗಲಿ: ಬಸವರಾಜ ರಾಯರೆಡ್ಡಿ
ಜಾತಿಗಣತಿ ವರದಿ ಬಿಡುಗಡೆ ವಿಚಾರಕ್ಕೆ ಸಂಬಂಧಿಸಿದಂತೆ ಶಾಸಕ ಬಸವರಾಜ ರಾಯರೆಡ್ಡಿ ವಿಸ್ತಾರ ನ್ಯೂಸ್ ಜತೆಗೆ ಮಾತನಾಡಿದ್ದು, ಈ ಹಿಂದೆ ಸಿದ್ದರಾಮಯ್ಯ ಅವರು ಇದ್ದ ಕಾಲದಲ್ಲಿ ಜಾತಿಗಣತಿ ಮಾಡಲು ಕಾಂತರಾಜ್ ನೇತೃತ್ವದಲ್ಲಿ ಆಯೋಗವನ್ನು ನೇಮಕ ಮಾಡಲಾಗಿತ್ತು. ಅವರು ಕೂಡ ರಿಪೋರ್ಟ್ ಸಲ್ಲಿಕೆ ಮಾಡಿದ್ದರು. ಆದರೆ, ಸೆಕ್ರೆಟರಿ ಸಹಿ ಮಾಡಿರಲಿಲ್ಲ ಎಂಬ ಕಾರಣಕ್ಕೆ ಅದು ಸ್ವೀಕಾರ ಆಗಿಲ್ಲ. ಅಷ್ಟರಲ್ಲಿ ಆ ಸರ್ಕಾರದ ಅವಧೊ ಕೂಡ ಮುಗಿದು ಹೋಯ್ತು ಮುಂದೆ ಬಂದ ಸರ್ಕಾರ ಕೂಡ ವರದಿ ಬಿಡುಗಡೆ ಮಾಡಲಿಲ್ಲ. ಈಗ ಜಾತಿಗಣತಿ ವರದಿಯನ್ನು ಸಿಎಂ ಸಿದ್ದರಾಮಯ್ಯ ಅವರು ಬಿಡುಗಡೆ ಮಾಡಬೇಕೆಂದು ಒತ್ತಾಯ ಮಾಡುತ್ತೇನೆ. ಶೋಷಣೆಗೆ ಒಳಗಾಗಿರುವ ಜನರು ಎಲ್ಲ ವರ್ಗದಲ್ಲೂ ಇದ್ದಾರೆ. ಅಂಥವರಿಗೆ ಸಹಾಯ ಆಗಬೇಕು. ಈ ಹಿನ್ನೆಲೆಯಲ್ಲಿ ವರದಿ ಬಿಡುಗಡೆ ಮಾಡಬೇಕು ಎಂದು ಹೇಳಿದ್ದಾರೆ.
ಜಾಣ್ಮೆಯ ಉತ್ತರ ಕೊಟ್ಟ ಸಿಎಂ ಸಿದ್ದರಾಮಯ್ಯ
ಜಾತಿಗಣತಿ ವರದಿ ಬಗ್ಗೆ ಬೆಳಗಾವಿಯಲ್ಲಿ ಪ್ರತಿಕ್ರಿಯೆ ನೀಡಿದ ಸಿಎಂ ಸಿದ್ದರಾಮಯ್ಯ, ನಮಗೆ ಮೊದಲು ವರದಿಯನ್ನು ಕೊಡಬೇಕಲ್ವಾ? ಶಾಶ್ವತ ಹಿಂದುಳಿದ ಆಯೋಗವು ಈ ಹಿಂದೆ ಎಚ್.ಡಿ. ಕುಮಾರಸ್ವಾಮಿ ಅವರು ಸಿಎಂ ಇದ್ದಾಗ ವರದಿಯನ್ನು ತಯಾರು ಮಾಡಿದ್ದರು. ಆದರೆ, ಅವರು ವರದಿಯನ್ನು ಸ್ವೀಕಾರ ಮಾಡಿರಲಿಲ್ಲ. ಈಗ ಅಧ್ಯಕ್ಷರ ಬದಲಾವಣೆ ಆಗಿದೆ. ಈಗ ಅಧ್ಯಕ್ಷರ ಬದಲಾವಣೆ ಆಗಿದೆ. ಇದರಲ್ಲಿ ಒಂದು ಡಿಫೆಕ್ಟ್ ಇದೆ. ಆಗ ಸೆಕ್ರೆಟರಿ ಸಹಿ ಮಾಡಲಿಲ್ಲ. ಈಗಿದ್ದ ಸೆಕ್ರೆಟರಿ ಬಳಿ ಸಹಿ ಮಾಡಿಸಿ ಕೊಡಬೇಕು. ಈಗ ಇರುವ ಅಧ್ಯಕ್ಷರು ಅದನ್ನು ತಂದು ಕೊಡಬೇಕು. ಅವರು ಬಿಜೆಪಿ ನೇಮಕ ಮಾಡಿರುವ ಅಧ್ಯಕ್ಷರು, ಈಸ್ ದಿಸ್ ಪಾಸಿಬಲ್? ಎಂದು ಪ್ರಶ್ನೆ ಮಾಡಿದ್ದಾರೆ.
ನವೆಂಬರ್‌ನಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ವರದಿ
ಬಿಹಾರದಲ್ಲಿ ಜಾತಿ ಗಣತಿ ವರದಿ ಬಿಡುಗಡೆಯಾದ ಬೆನ್ನಲ್ಲೇ ರಾಜ್ಯದಲ್ಲಿ ಮತ್ತೊಂದು ಗಣತಿಯ ವರದಿ ಮಂಡನೆಗೆ ಹಿಂದುಳಿದ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಸಿದ್ಧತೆ ಮಾಡಿಕೊಂಡಿದ್ದಾರೆ. ರಾಜ್ಯದಲ್ಲಿ 2015ರಲ್ಲಿ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಯನ್ನು ನಡೆಸಲಾಗಿತ್ತು. ಹಿಂದುಳಿದ ವರ್ಗಗಳ ಆಯೋಗದಿಂದ ಈ ಸಮೀಕ್ಷೆಯನ್ನು ನಡೆಸಲಾಗಿತ್ತು. ಈಗ ಈ ವರದಿಯನ್ನು ನವೆಂಬರ್‌ನಲ್ಲಿ ಸಲ್ಲಿಸಲು ಅವರು ಮುಂದಾಗಿದ್ದಾರೆ.
ಇದನ್ನೂ ಓದಿ: Kuruba Conference: ಬೆಳಗಾವಿಯಲ್ಲಿ ಬೃಹತ್ ಕುರುಬ ಸಮಾವೇಶದ ಮೂಲಕ ಸಿದ್ದರಾಮಯ್ಯ ಮತ್ತೊಮ್ಮೆ ಶಕ್ತಿ ಪ್ರದರ್ಶನ
ವಿಸ್ತಾರ ನ್ಯೂಸ್‌ಗೆ ಆಯೋಗದ ಅಧ್ಯಕ್ಷ ಜಯಪ್ರಕಾಶ್ ಹೆಗ್ಡೆ ಪ್ರತಿಕ್ರಿಯೆ ನೀಡಿದ್ದು, ನವೆಂಬರ್‌ನಲ್ಲೇ ಸರ್ಕಾರಕ್ಕೆ ವರದಿ ಸಲ್ಲಿಕೆ ಮಾಡುತ್ತೇವೆ. ಈ ಹಿಂದೆ ಸಲ್ಲಿಕೆ ಮಾಡಿದ್ದಾಗ ಕೆಲವೊಂದಿಷ್ಟು ಬದಲಾವಣೆ ಮಾಡಬೇಕಿತ್ತು. ಹಿಂದಿನ ಸರ್ಕಾರದಲ್ಲಿ ಸಮಸ್ಯೆ ಇತ್ತು. ಈಗ ಅಂತಹ ಸಮಸ್ಯೆ ಕಂಡು ಬರುತ್ತಿಲ್ಲ. ಇದೇ ತಿಂಗಳಲ್ಲಿ ಸಮೀಕ್ಷೆ ವರದಿ ಸಲ್ಲಿಕೆ ಮಾಡುತ್ತೇವೆ. ವರದಿ ಸಲ್ಲಿಕೆಗೆ ಸರ್ಕಾರದಿಂದ ಅನುಮತಿ ಪಡೆಯುವ ಅವಶ್ಯಕತೆ ಇಲ್ಲ. ಇದು ಆಯೋಗದ ಜವಾಬ್ದಾರಿಯಾಗಿದೆ. ಹೀಗಾಗಿ ಸಲ್ಲಿಕೆ ಮಾಡುತ್ತೇವೆ ಎಂದು ಜಯಪ್ರಕಾಶ್ ಹೆಗ್ಡೆ ಹೇಳಿದ್ದಾರೆ.
ಟ್ವೀಟ್ ಮಾಡಿರುವ ಬಿ.ಕೆ. ಹರಿಪ್ರಸಾದ್
ಕಾಂತರಾಜ್ ವರದಿ ಜಾರಿ ಮಾಡಲು ಸರ್ಕಾರಕ್ಕೆ ಒತ್ತಾಯ ಮಾಡಿರುವ ಬಿ.ಕೆ. ಹರಿಪ್ರಸಾದ್, ಹಿಂದುಳಿದ ವರ್ಗಗಳ ಜಾತಿ ವರದಿಯನ್ನು ಬಹಿರಂಗಪಡಿಸುವ ದಿಟ್ಟತನ ತೋರಬೇಕು ಎಂದು ಟ್ವೀಟ್ ಮಾಡಿ ಒತ್ತಡ ಹೇರಿದ್ದಾರೆ.
ಹರಿಪ್ರಸಾದ್ ಟ್ವೀಟ್‌ನಲ್ಲೇನಿದೆ?
“ಜಾತಿ ಗಣತಿ ಬಹಿರಂಗ ಪಡಿಸುವ ಕುರಿತು ಹಾಗೂ ಹಿಂದುಳಿದ ವರ್ಗಗಳಿಗೆ ಆಗಿರುವ ಅನ್ಯಾಯದ ವಿರುದ್ಧ ನಮ್ಮ ನಾಯಕರಾದ ರಾಹುಲ್ ಗಾಂಧಿ ಅವರು ಧ್ವನಿ ಎತ್ತಿದ್ದಾರೆ.
ಬಿಹಾರ ಸರ್ಕಾರದಂತೆ ಕರ್ನಾಟಕ ಸರ್ಕಾರವೂ ಕೂಡ ರಾಜ್ಯದಲ್ಲಿ ಈಗಾಗಲೇ ಸಿದ್ಧವಾಗಿರುವ ಹಿಂದುಳಿದ ವರ್ಗಗಳ ಜಾತಿ ವರದಿಯನ್ನು ಬಹಿರಂಗಪಡಿಸುವ ದಿಟ್ಟತನ ತೋರಬೇಕಿದೆ.
“ಇಂಡಿಯಾ” ಮೈತ್ರಿಕೂಟದ ಆಡಳಿತವಿರುವ ಬಿಹಾರ ರಾಜ್ಯದಲ್ಲಿ ಅಲ್ಲಿನ ಸರ್ಕಾರ ಜಾತಿಗಣತಿ ವರದಿಯನ್ನು ಬಿಡುಗಡೆ ಮಾಡಿ ಐತಿಹಾಸಿಕ ನಡೆ ತೋರಿದ್ದು, ಅಭಿನಂದನೀಯ.
ಹಿಂದುಳಿದ, ಶೋಷಿತವೂ ಸೇರಿದಂತೆ ಎಲ್ಲ ವರ್ಗಗಳ ಉನ್ನತಿ ಹಾಗೂ ಅಭಿವೃದ್ಧಿಗೆ ಜಾತಿಗಣತಿ ವರದಿ ಸಹಾಯ ಮಾಡುತ್ತದೆ ಎಂಬ ವೈಜ್ಞಾನಿಕ ಧೋರಣೆ ಕಾಂಗ್ರೆಸ್ ಪಕ್ಷದ್ದಾಗಿದೆ” ಎಂದು ಬಿ.ಕೆ. ಹರಿಪ್ರಸಾದ್ ಟ್ವೀಟ್ ಮೂಲಕ ಹೇಳಿದ್ದಾರೆ.
ಬಿಹಾರ ಸಿಎಂಗೆ ನನ್ನ ಧನ್ಯವಾದ
ಈ ಬಗ್ಗೆ ನವದೆಹಲಿಯಲ್ಲಿ ಮಾಧ್ಯಮಗಳಿಗೆ ಪ್ರತಿಕ್ರಿಯೆ ನೀಡಿದ ಪರಿಷತ್ ಸದಸ್ಯ ಬಿ.ಕೆ ಹರಿಪ್ರಸಾದ್, ಬಿಹಾರದಲ್ಲಿ ಜಾತಿ ಸಮೀಕ್ಷೆಯನ್ನು ಬಿಡುಗಡೆ ಮಾಡಲಾಗಿದೆ. ಅದಕ್ಕಾಗಿ ಅಲ್ಲಿನ ಸಿಎಂ ನಿತೀಶ್ ಕುಮಾರ್ ಮತ್ತು ಲಾಲೂ ಪ್ರಸಾದ್ ಯಾದವ್ ಅವರಿಗೆ ಧನ್ಯವಾದವನ್ನು ಸಲ್ಲಿಸುತ್ತೇನೆ ಎಂದು ಹೇಳಿದ್ದಾರೆ.
ಜಾತಿಗಣತಿ ಮೂಲಕ ಜನರಿಗೆ ಹಕ್ಕು ಸಿಗಲಿದೆ. ರಾಹುಲ್ ಗಾಂಧಿ ಅವರದ್ದು ಜಾತಿ ಗಣತಿ ಆಗಬೇಕು ಎನ್ನುವ ಆಶಯ ಇತ್ತು. ಕರ್ನಾಟಕದಲ್ಲೂ ಸಮೀಕ್ಷೆ ಮಾಡಿದೆ. ಅದನ್ನು ಬಹಿರಂಗ ಮಾಡಬೇಕು. ತಪ್ಪು – ಒಪ್ಪುಗಳು ಏನೇ ಇರಬಹುದು. ಅನುಷ್ಠಾನಕ್ಕೆ ತರಲು ಸಾಧ್ಯವಾಗುತ್ತದೆಯೋ? ಇಲ್ಲವೋ? ಎಂಬುದು ಗೊತ್ತಿಲ್ಲ. ಸಾರ್ವಜನಿಕರ ಹಣ ಖರ್ಚು ಮಾಡಿದೆ. ಅದನ್ನು ಬಹಿರಂಗ ಮಾಡಬೇಕು. ಚರ್ಚೆಗೆ ಅವಕಾಶ ನೀಡಬೇಕು.
ರಾಜ್ಯದಲ್ಲಿ ಯಾವಾಗ ಬಿಡುಗಡೆ ಮಾಡುತ್ತಾರೆಯೋ ಅದನ್ನು ಸರ್ಕಾರ ಕೇಳಬೇಕು. ಪಕ್ಷದ ಸದಸ್ಯನಾಗಿ ಬಿಡುಗಡೆ ಮಾಡಬೇಕು ಎನ್ನುವುದು ನನ್ನ ಆಶಯ. ಯಾವುದೇ ಜಾತಿ ಒತ್ತಡ ಹೇರಲಿ, ಮೊದಲು ಬಿಡುಗಡೆ ಮಾಡಬೇಕು. ಆಮೇಲೆ ಯಾರಿಗಾದರೂ ಅನ್ಯಾಯವಾದರೆ ಸರಿ ಮಾಡಬಹುದು. ಸಿದ್ದರಾಮಯ್ಯ ಅವರು ಕಾಂಗ್ರೆಸ್ ಪಕ್ಷದಿಂದ ಸಿಎಂ ಆಗಿದ್ದಾರೆ. ನಮ್ಮ ನಾಯಕ ರಾಹುಲ್ ಗಾಂಧಿ ಅವರೇ ಜಾತಿಗಣತಿ ಆಗಬೇಕು ಎಂದಿದ್ದಾರೆ. ಹೀಗಾಗಿ ನಾವು ಅವರ ಹೇಳಿಕೆಯನ್ನು ಬೆಂಬಲಿಸುತ್ತೇವೆ ಎಂದು ಹೇಳಿದ್ದಾರೆ.
ಇದನ್ನೂ ಓದಿ: Karnataka Politics : ಬಿಜೆಪಿಗೆ ಚಿಲುಮೆ ತಂದ ಸಂಕಟ! ರಾಜ್ಯ ಸರ್ಕಾರದಿಂದ ಮತ್ತೊಂದು ತನಿಖಾಸ್ತ್ರ
ಜಾತಿ ಗಣತಿಯನ್ನು ಬಿಡುಗಡೆ ಮಾಡಬೇಕು ಎಂಬ ನನ್ನ ಹೇಳಿಕೆಯಲ್ಲಿ ಸಿದ್ದರಾಮಯ್ಯ ಅವರನ್ನು ಪ್ರತ್ಯಕ್ಷ ಹಾಗೂ ಪರೋಕ್ಷ ಟಾರ್ಗೆಟ್ ಮಾಡುವುದು ಏನಿಲ್ಲ ಎಂದು ಬಿ.ಕೆ. ಹರಿಪ್ರಸಾದ್ ಹೇಳಿದ್ದಾರೆ.
ದೇಶ
Maharashtra News: ಮಹಾರಾಷ್ಟ್ರದ ಮತ್ತೊಂದು ಆಸ್ಪತ್ರೆಯಲ್ಲಿ 10 ರೋಗಿಗಳು ಮೃತ! ತನಿಖೆಗೆ ಮುಂದಾದ ಸರ್ಕಾರ
Maharashtra News: ನಾಂದೇಡ್ ಆಸ್ಪತ್ರೆಯಲ್ಲಿ ರೋಗಿಗಳ ಮರಣ ಮೃದಂಗ ಬಾರಿಸುತ್ತಿರುವ ಮಧ್ಯೆಯೇ ಸಂಭಾಜಿನಗರದ ಮತ್ತೊಂದು ಸರ್ಕಾರಿ ಆಸ್ಪತ್ರೆಯಲ್ಲಿ ರೋಗಿಗಳು ಸಾಯುತ್ತಿರುವ ಪ್ರಕರಣಗಳು ವರದಿಯಾಗಿವೆ.
ಮುಂಬೈ: ಕಳೆದ ಒಂದು ವಾರದಲ್ಲಿ ಮಹಾರಾಷ್ಟ್ರದ (Maharashtra) ಅನೇಕ ಸರ್ಕಾರಿ ಆಸ್ಪತ್ರೆಗಳಲ್ಲಿ (Government Hospital) ರೋಗಿಗಳ ಸಾವು ವರದಿಯಾಗುತ್ತಿರುವ ಬೆನ್ನಲ್ಲೇ ಸಂಭಾಜಿನಗರದ ಘಾಟಿ ಆಸ್ಪತ್ರೆಯಲ್ಲಿ (Ghati Hospital) 24 ಗಂಟೆಯಲ್ಲಿ 10ಕ್ಕಿಂತ ಹೆಚ್ಚು ರೋಗಿಗಳು ಮೃತಪಟ್ಟಿದ್ದಾರೆ. ಈ ಹಿಂದೆ ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ (Nanded Government hospital) 48 ಗಂಟೆಯಲ್ಲಿ ಶಿಶುಗಳು ಸೇರಿದಂತೆ 34 ರೋಗಿಗಳು ಮೃತಪಟ್ಟ ಬೆನ್ನಲ್ಲೇ ಎಚ್ಚೆತ್ತುಕೊಂಡಿರುವ ಮಹಾರಾಷ್ಟ್ರ ಸರ್ಕಾರವು, ತನಿಖೆಗೆ ಸಮಿತಿಯನ್ನು (Probe Committee) ರಚಿಸುವುದಾಗಿ ಘೋಷಣೆ ಮಾಡಿದೆ(Maharashtra News).
ನಾಂದೇಡ್ ಸರ್ಕಾರಿ ಆಸ್ಪತ್ರೆಯಲ್ಲಿ ಜರಗುತ್ತಿರುವ ಘಟನೆಗಳು ಭಯಾನಕವಾಗಿವೆ. ಅದೇ ರೀತಿ ಘಾಟಿ ಆಸ್ಪತ್ರೆಯಲ್ಲಿ ರೋಗಿಗಳು ಸಾಯುತ್ತಿದ್ದಾರೆ ಎಂಬ ಮಾಹಿತಿ ಈಗ ಬಹಿರಂಗವಾಗಿದೆ. ಇಬ್ಬರು ಮಕ್ಕಳು ಸೇರಿದಂತೆ 8 ರೋಗಿಗಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಅಲ್ಲದೇ, ನಾಂದೇಡ್ ಆಸ್ಪತ್ರೆಯಲ್ಲಿ ಮತ್ತೆ 7 ರೋಗಿಗಳು ಮೃತಪಟ್ಟಿದ್ದಾರೆಂಬ ವರ್ತಮಾನವಿದೆ. ಇದೆಲ್ಲವೂ ಭಯಾನಕವಾಗಿದೆ ಎಂದು ಶಿವಸೇನೆಯ ನಾಯಕ ಆದಿತ್ಯ ಠಾಕ್ರೆ ಅವರು ಟ್ವೀಟ್ ಮಾಡಿದ್ದಾರೆ.
ನಾಂದೇಡ್ ಆಸ್ಪತ್ರೆಯಲ್ಲಿ ರೋಗಿಗಳ ಸರಣಿ ಸಾವು
ಮಹಾರಾಷ್ಟ್ರದ (Maharashtra) ನಾಂದೇಡ್ ಜಿಲ್ಲೆಯ (Nanded District) ಸರ್ಕಾರಿ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 12 ಶಿಶು (Newborns) ಸೇರಿ 24 ರೋಗಿಗಳು ಮೃತಪಟ್ಟ ಘಟನೆಯು ಮಹಾರಾಷ್ಟ್ರದಲ್ಲಿ ಭಾರೀ ಆಕ್ರೋಶಕ್ಕೆಕಾರಣವಾಗಿತ್ತು. ಇದರ ಬೆನ್ನಲ್ಲೇ ಮತ್ತೆ 7 ರೋಗಿಗಳು ಮೃತಪಟ್ಟಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಅವಘಡಕ್ಕೆ ಸರ್ಕಾರಿ ಆಸ್ಪತ್ರೆ ಎದುರಿಸುತ್ತಿರುವ ಸಿಬ್ಬಂದಿ ಹಾಗೂ ಔಷಧಗಳ ಕೊರತೆಯ ಕಾರಣ ಎಂದು ನಾಂದೇಡ್ ಶಂಕರ್ ರಾವ್ ಚವಾಣ್ ಸರ್ಕಾರಿ ಆಸ್ಪತ್ರೆಯ ಡೀನ್ ಹೇಳಿದ್ದಾರೆ(Shankarrao Chavan Government Hospital Dean). ಮೃತಪಟ್ಟ 12 ವಯಸ್ಕರ ಪೈಕಿ ಹೆಚ್ಚಿನವರು ಹಾವು ಕಡಿತಕ್ಕೊಳಗಾದವರಿದ್ದಾರೆ ಎಂದು ಅವರು ತಿಳಿಸಿದ್ದರು.
ಈ ಸುದ್ದಿಯನ್ನೂ ಓದಿ: Maharashtra: ಔಷಧ ಕೊರತೆ, ಮಹಾರಾಷ್ಟ್ರದ ಆಸ್ಪತ್ರೆಯಲ್ಲಿ ಒಂದೇ ದಿನದಲ್ಲಿ 12 ಶಿಶುಗಳು ಸೇರಿ 24 ರೋಗಿಗಳ ಸಾವು!
ಕಳೆದ 24 ಗಂಟೆಗಳಲ್ಲಿ ಆರು ಗಂಡು ಮತ್ತು ಆರು ಹೆಣ್ಣು ಶಿಶುಗಳು ಸಾವನ್ನಪ್ಪಿವೆ. ಹನ್ನೆರಡು ವಯಸ್ಕರು ವಿವಿಧ ಕಾಯಿಲೆಗಳಿಂದ ಸಾವನ್ನಪ್ಪಿದ್ದಾರೆ, ಈ ಪೈಕಿ ಹೆಚ್ಚಿನವರು ಹಾವು ಕಡಿತದಿಂದ ಬಳಲುತ್ತಿದ್ದರು. ವಿವಿಧ ಸಿಬ್ಬಂದಿಯನ್ನು ವರ್ಗಾವಣೆ ಮಾಡಿದ್ದರಿಂದ ಆಸ್ಪತ್ರೆಯು ಸಮಸ್ಯೆಯನ್ನು ಎದುರಿಸುತ್ತಿದೆ ಎಂದು ಅವರು ಆಸ್ಪತ್ರೆಯ ಡೀನ್ ಹೇಳಿದ್ದರು.
ಈ ಆಸ್ಪತ್ರೆಯು ತೃತೀಯ ಹಂತದ ಆರೈಕೆ ಕೇಂದ್ರವಾಗಿದೆ. ಅಲ್ಲದೇ, 70ರಿಂದ 80 ಕಿ.ಮೀ ವ್ಯಾಪ್ತಿಯಲ್ಲಿನ ಏಕೈಕ ಸರ್ಕಾರಿ ಆಸ್ಪತ್ರೆಯಾಗಿದೆ. ಹಾಗಾಗಿ, ದೂರದ ಸ್ಥಳಗಳಿಂದ ರೋಗಿಗಳು ಈ ಆಸ್ಪತ್ರೆಗೆ ಆಗಮಿಸುತ್ತಾರೆ. ಹೀಗೆ, ರೋಗಿಗಳು ಸಂಖ್ಯೆ ಹೆಚ್ಚಳವಾದಾಗ ಅವರನ್ನು ಈ ಆಸ್ಪತ್ರೆಯಲ್ಲಿ ನಿರ್ವಹಣೆ ಮಾಡುವುದು ಕಷ್ಟ. ಆಗ ಸಮಸ್ಯೆಗಳು ಶುರುವಾಗುತ್ತವೆ ಎಂದು ಅವರು ತಿಳಿಸಿದ್ದಾರೆ. ಹಾಫ್ಕಿನ್ ಎಂಬ ಸಂಸ್ಥೆಯಿದ್ದು, ಇಲ್ಲಿಂದ ಔಷಧಿಗಳನ್ನು ಖರೀದಿಸಬೇಕು. ಆದರೆ ಈ ಸಂಸ್ಥೆಯಿಂದ ಔಷಧಗಳ ಖರೀದಿ ಸಾಧ್ಯವಾಗಿಲ್ಲ. ಆಗ ನಾವು ಸ್ಥಳೀಯವಾಗಿ ಔಷಧಗಳನ್ನು ಖರೀದಿಸಿ ರೋಗಿಗಳಿಗೆನೀಡಿದ್ದೇವೆ ಎಂದು ಡೀನ್ ಅವರು ತಿಳಿಸಿದ್ದರು.
ಕ್ರೀಡೆ
Asian Games : ಪಾಕಿಸ್ತಾನದ ಸ್ಪರ್ಧಿ ನದೀಮ್ ಔಟ್; ನೀರಜ್ಗೆ ಪದಕ ಬಹುತೇಕ ಖಾತರಿ
ಮೊಣಕಾಲಿನ ಗಾಯದಿಂದ ಬಳಲುತ್ತಿರುವ ಅರ್ಷದ್ ನದೀಮ್ ಏಷ್ಯನ್ ಗೇಮ್ಸ್ ನಿಂದ (Asian Games) ಹೊರಗುಳಿಯಲು ನಿರ್ಧರಿಸಿದ್ದಾರೆ. ನೀರಜ್ ಚೋಪ್ರಾ ಈಗ ಚಿನ್ನದ ಪದಕದ ಫೇವರಿಟ್ ಆಗಿದ್ದಾರೆ.
ಹ್ಯಾಂಗ್ಜೌ: ಪಾಕಿಸ್ತಾನದ ಜಾವೆಲಿನ್ ಎಸೆತಗಾರ ಅರ್ಷದ್ ನದೀಮ್ ಏಷ್ಯನ್ ಗೇಮ್ಸ್ (Asian Games) 2023 ರಿಂದ ಹಿಂದೆ ಸರಿದಿದ್ದಾರೆ. 26 ವರ್ಷದ ಅಥ್ಲೀಟ್ ಮೊಣಕಾಲು ಗಾಯದಿಂದ ಬಳಲುತ್ತಿದ್ದು, ಪ್ರಸ್ತುತ ನಡೆಯುತ್ತಿರುವ ಕಾಂಟಿನೆಂಟಲ್ ಈವೆಂಟ್ನಲ್ಲಿ ಕಾಣಿಸಿಕೊಳ್ಳಲು ಸಾಧ್ಯವಾಗುವುದಿಲ್ಲ. ಈ ಪಂದ್ಯಾವಳಿಯಲ್ಲಿ ಅವರು ಭಾರತದ ನೀರಜ್ ಚೋಪ್ರಾ ಅವರ ಅತಿದೊಡ್ಡ ಪ್ರತಿಸ್ಪರ್ಧಿಗಳಲ್ಲಿ ಒಬ್ಬರಾಗುತ್ತಾರೆ ಎಂದು ನಿರೀಕ್ಷಿಸಲಾಗಿತ್ತು. ಅವರ ನಿರ್ಗಮನದಿಂದಾಗಿ ಏಷ್ಯನ್ ಕ್ರೀಡಾಕೂಟದ ಪುರುಷರ ಜಾವೆಲಿನ್ ಥ್ರೋನಲ್ಲಿ ಬಹುನಿರೀಕ್ಷಿತ ಭಾರತ ಮತ್ತು ಪಾಕಿಸ್ತಾನ ಮುಖಾಮುಖಿ ಇರುವುದಿಲ್ಲ. ನೀರಜ್ ಚೋಪ್ರಾ ಮತ್ತು ಅರ್ಷದ್ ಕಳೆದ ಕೆಲವು ವರ್ಷಗಳಿಂದ ಜಾವೆಲಿನ್ ಥ್ರೋನಲ್ಲಿ ತೀವ್ರ ಪೈಪೋಟಿಯನ್ನು ಒಡ್ಡುತ್ತಿದ್ದಾರೆ. ಈ ಕಾರಣದಿಂದ ಭಾರತಕ್ಕೆ ಚಿನ್ನದ ಪದಕ ಬಹುತೇಕ ಖಚಿತಗೊಂಡಿದೆ.
ವರದಿಗಳ ಪ್ರಕಾರ, ಅರ್ಷದ್ ನದೀಮ್ ಏಷ್ಯಾಡ್ಗಾಗಿ ತರಬೇತಿ ಪಡೆಯುತ್ತಿದ್ದರು ಹಾಗೂ ಈವೆಂಟ್ನಲ್ಲಿ ಭಾಗವಹಿಸಲು ಸಜ್ಜಾಗಿದ್ದರು. ಆದರೆ ಕೊನೆಯ ಕ್ಷಣದಲ್ಲಿ ಗಾಯಗೊಂಡ ಅವರನ್ನು ಎಂಆರ್ಐ ಸ್ಕ್ಯಾನ್ಗೆ ಒಳಪಡಿಸಿದಾಗ ಗಾಯವನ್ನು ಬಹಿರಂಗಪಡಿಸಿದೆ. ಹೀಗಾಗಿ ಅವರು ಪಂದ್ಯಾವಳಿಯಿಂದ ಹೊರಗುಳಿಯಲು ನಿರ್ಧರಿಸಿದ್ದಾರೆ.
ಪಾಕಿಸ್ತಾನದ ಚೆಫ್ ಡಿ ಮಿಷನ್ ಬಿಡುಗಡೆ ಮಾಡಿದ ಹೇಳಿಕೆಯಲ್ಲಿ, ಹ್ಯಾಂಗ್ಝೌನಲ್ಲಿ ನಡೆದ ಮೊದಲ ತರಬೇತಿಯ ನಂತರ ಅರ್ಷದ್ ಅವರ ಬಲ ಮೊಣಕಾಲಿನಲ್ಲಿ ನೋವು ಕಾಣಿಸಿಕೊಂಡಿದೆ ಎಂದು ಹೇಳಲಾಗಿದೆ. ನಂತರ ಕ್ರೀಡಾಪಟುವನ್ನು ಎಂಆರ್ಐ ಸ್ಕ್ಯಾನ್ಗೆ ಕರೆದೊಯ್ಯಲಾಯಿತು, ನಂತರ ಏಷ್ಯಾಡ್ನಿಂದ ಹೊರಗುಳಿಯುವ ನಿರ್ಧಾರ ತೆಗೆದುಕೊಳ್ಳಲಾಯಿತು ಎಂದು ತಿಳಿಸಲಾಗಿದೆ.
ಇತ್ತೀಚೆಗೆ ಅರ್ಷದ್ ವಿಶ್ವ ಚಾಂಪಿಯನ್ಷಿಪ್ನಲ್ಲಿ ಬೆಳ್ಳಿ ಪದಕ ಗೆದ್ದಿದ್ದರು. ಅವರು ಅಲ್ಲಿ 87.82 ಮೀಟರ್ ಎಸೆದಿದ್ದರು. ಈ ಕೂಟದಲ್ಲಿ 88.17 ಮೀಟರ್ ಎಸೆತದೊಂದಿಗೆ ತಮ್ಮ ಮೊದಲ ವಿಶ್ವ ಚಾಂಪಿಯನ್ಷಿಪ್ ಚಿನ್ನದ ಪದಕವನ್ನು ನೀರಜ್ ಚೋಪ್ರಾ ಗೆದಿದ್ದರು.
19th Asian Games Hangzhou 🙏🇮🇳 pic.twitter.com/TQAEun1mGj
— Neeraj Chopra (@Neeraj_chopra1) September 29, 2023
ವಿಶ್ವ ಚಾಂಪಿಯನ್ಷಿಪ್ನಲ್ಇ ಇಬ್ಬರೂ ಕ್ರೀಡಾಪಟುಗಳ ಪ್ರದರ್ಶನವು ಏಷ್ಯಾಡ್ನಲ್ಲಿ ದೊಡ್ಡ ಪೈಪೋಟಿ ಎದುರಾಗುವ ನಿರೀಕ್ಷೆಗಳನ್ನು ಹುಟ್ಟಿಸಿತ್ತು. ನೀರಜ್ಗೆ ಹೋಲಿಸಿದರೆ ಅರ್ಷದ್ ಉತ್ತಮ ವೈಯಕ್ತಿಕ ಸಾಮರ್ಥ್ಯವನ್ನು ಹೊಂದಿದ್ದಾರೆ. ಕಳೆದ ವರ್ಷ ಕಾಮನ್ವೆಲ್ತ್ ಕ್ರೀಡಾಕೂಟದಲ್ಲಿ 90.18 ಮೀಟರ್ ಎಸೆಯುವ ಮೂಲಕ ನೀರಜ್ ಚೋಪ್ರಾ ಅನುಪಸ್ಥಿತಿಯಲ್ಲಿ ತಮ್ಮ ದೇಶಕ್ಕೆ ಚಿನ್ನ ತಂದುಕೊಟ್ಟಿದ್ದರು.
ಏಷ್ಯನ್ ಗೇಮ್ಸ್ ಸುದ್ದಿಗಳಿಗಾಗಿ ಇಲ್ಲಿ ಕ್ಲಿಕ್ ಮಾಡಿ.
ಈ ಋತುವಿನಲ್ಲಿ ನೀರಜ್ ಚೋಪ್ರಾ 88.77 ಮೀಟರ್ ಎಸೆದು ಋತುವಿನ ಅತ್ಯುತ್ತಮ ಸಾಧನೆ ಮಾಡಿದ್ದಾರೆ. ಅರ್ಷದ್ 87.82 ಮೀ ದೂರ ಎಸೆದು ಅವರ ಹತ್ತಿರದ ಪ್ರತಿಸ್ಪರ್ಧಿಯಾಗಿದ್ದಾರೆ. ಅರ್ಷದ್ ಅನುಪಸ್ಥಿತಿಯು ಈಗ ನೀರಜ್ ಅವರನ್ನು ಚಿನ್ನದ ಪದಕಕ್ಕೆ ಅತ್ಯಂತ ನೆಚ್ಚಿನ ಸ್ಪರ್ಧಿಯನ್ನಾಗಿ ಮಾಡಿದೆ. ನೀರಜ್ ಹಾಲಿ ಏಷ್ಯನ್ ಗೇಮ್ಸ್ ಚಾಂಪಿಯನ್ ಆಗಿದ್ದಾರೆ. ಅವರು ಜಕಾರ್ತಾದಲ್ಲಿ ಚಿನ್ನ ಗೆದಿದ್ದರು. ಅರ್ಷದ್ ಅಲ್ಲಿ ಬೆಳ್ಳಿ ಪದಕ ಗೆದ್ದಿದ್ದರು.
-
ದೇಶ21 hours ago
Viral Video: ಫ್ರಿಡ್ಜ್ ಡೋರ್ ತೆಗೆಯಲು ಹೋದ 4 ವರ್ಷದ ಬಾಲಕಿಗೆ ಕರೆಂಟ್ ಶಾಕ್, ಸ್ಥಳದಲ್ಲೇ ಸಾವು
-
ಪ್ರಮುಖ ಸುದ್ದಿ16 hours ago
Dina Bhavishya : ಈ ರಾಶಿಯವರಿಗೆ ಮಾತೇ ಮುತ್ತು, ಮಾತೇ ಮೃತ್ಯು!
-
ಟಾಪ್ 10 ನ್ಯೂಸ್23 hours ago
VISTARA TOP 10 NEWS : ನಮಗೆ ರಕ್ಷಣೆ ಇಲ್ಲವೇ ಎಂದ ಹಿಂದೂಗಳು, ಸಿದ್ದರಾಮಯ್ಯ ವಿರುದ್ಧ ಮತ್ತೆ ಗುಡುಗಿದ ಶಾಮನೂರು ಇತರ ದಿನದ ಪ್ರಮುಖ ಸುದ್ದಿಗಳು
-
ದೇಶ22 hours ago
K Annamalai: ಲೇಡಿ ರಿಪೋರ್ಟರ್ ಜತೆ ಅಣ್ಣಾಮಲೈ ಕಿರಿಕ್! ಆಕೆ ಕೇಳಿದ ಪ್ರಶ್ನೆಗೆ ರೇಗಿದ ಬಿಜೆಪಿ ನಾಯಕ
-
ಕ್ರಿಕೆಟ್24 hours ago
ICC World Cup 2023 : ಭಾರತದ ಮಾಜಿ ಆಟಗಾರ ಅಫಘಾನಿಸ್ತಾನ ತಂಡದ ಮೆಂಟರ್
-
ದೇಶ11 hours ago
Raid On NewsClick: ನ್ಯೂಸ್ಕ್ಲಿಕ್ನ 30 ಪತ್ರಕರ್ತರ ಮನೆಗಳ ಮೇಲೆ ಪೊಲೀಸರ ದಾಳಿ, ಏನಿದು ಕೇಸ್?
-
ಕಿರುತೆರೆ6 hours ago
BBK Season 10 : ಅಕ್ಟೋಬರ್ 8 ರಿಂದ ಬಿಗ್ ಬಾಸ್ ಆಟ; ಚಾರ್ಲಿ ಎಂಟ್ರಿ ಕನ್ಫರ್ಮ್, ಉಳಿದವರು ಯಾರು ?
-
ಕ್ರೈಂ13 hours ago
4 ವರ್ಷದಿಂದ ಇಬ್ಬರು ಪುತ್ರಿಯರ ಮೇಲೆಯೇ ಅತ್ಯಾಚಾರ ಎಸಗಿದ ಪಾಪಿಯ ಬಂಧನ; ಇವನೆಂಥಾ ತಂದೆ?