ವಿಜಯನಗರ: ವೈದ್ಯರ ನಿರ್ಲಕ್ಷ್ಯಕ್ಕೆ ಐದು ವರ್ಷದ ಮಗು ಮೃತಪಟ್ಟಿರುವುದಾಗಿ (Medical Negligence) ಆರೋಪ ಕೇಳಿ ಬಂದಿದೆ. ಕುಶಾಲ್( 05) ಮೃತಪಟ್ಟವರು. ವಿಜಯನಗರದ ಹೊಸಪೇಟೆಯ ಸರ್ಕಾರಿ ನೂರು ಹಾಸಿಗೆ ಆಸ್ಪತ್ರೆಯಲ್ಲಿ ಘಟನೆ ನಡೆದಿದೆ. ಹೊಸಪೇಟೆ ತಾಲೂಕಿನ ಕಮಲಾಪುರದ ಅಂಬೇಡ್ಕರ್ ನಗರದ ಶಾಂತಪ್ಪ, ಶಂಕ್ರಮ್ಮ ದಂಪತಿಯ ಮಗು ಕುಶಾಲ್ ಜ್ವರದಿಂದ ಬಳಲುತ್ತಿದ್ದ.
ಹೀಗಾಗಿ ಬೆಳಗ್ಗೆ 7 ಗಂಟೆಗೆ ಬಂದಾಗ ತುರ್ತು ಚಿಕಿತ್ಸಾ ವಾರ್ಡ್‌ನಲ್ಲಿ ವೈದ್ಯರು ಇರಲಿಲ್ಲ. ಜ್ವರ ಹೆಚ್ಚಿದೆ ಅಂತ ಖಾಸಗಿ ಆಸ್ಪತ್ರೆಗೆ ರೇಫರ್ ಮಾಡಿದ್ದರು. ಆ ಖಾಸಗಿ ಆಸ್ಪತ್ರೆಯಿಂದ ಮತ್ತೆ ಸರ್ಕಾರಿ ಆಸ್ಪತ್ರೆಗೆ ರವಾನೆ ಮಾಡಿದ್ದರು. 24 ರಂದು ಸರ್ಕಾರಿ ಆಸ್ಪತ್ರೆಗೆ ಬಂದು ಚಿಕಿತ್ಸೆ ಪಡೆದು ಹೋಗಿದ್ದರು. ಮಗು ಚೆನ್ನಾಗಿದೆ ಅಂತ ಹೇಳಿ ವೈದ್ಯರು ಕಳಿಸಿದ್ದರು. ಸೋಮವಾರ ಬೆಳಗ್ಗೆ ಆಸ್ಪತ್ರೆಗೆ ಬರಲು ಜ್ವರ ಹೆಚ್ಚಿತ್ತು, ಬಂದಾಗ ತುರ್ತು ಚಿಕಿತ್ಸೆಗೆ ವೈದ್ಯರಿರಲಿಲ್ಲಾ ಅಂತ ಪೊಷಕರು ಆರೋಪಿಸಿದ್ದಾರೆ. ಆಸ್ಪತ್ರೆ ಆವರಣದಲ್ಲಿ ಮೃತ ಮಗುವಿನ ತಾಯಿ ಗೋಳಾಟ ಜೋರಾಗಿತ್ತು. ಬಡಾವಣೆ ಪೊಲೀಸರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ.
ಕೆರೆಗೆ ಕಾಲು ಜಾರಿ ಬಿದ್ದು ಯುವತಿ ಸಾವು
ಕೆರೆಗೆ ಕಾಲು ಜಾರಿ ಬಿದ್ದು ಯುವತಿ ಮೃತಪಟ್ಟಿದ್ದಾಳೆ. ಹಂಸ (19) ಮೃತ ದುರ್ದೈವಿ. ತುಮಕೂರು ತಾಲೂಕಿನ ಮೈದಾಳ ಕೆರೆಯಲ್ಲಿ ಘಟನೆ ನಡೆದಿದೆ. ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಶಿವರಾಂಪುರ ಗ್ರಾಮದ ಸೋಮನಾಥ್ ಅವರ ಪುತ್ರಿ ಹಂಸ ನಿನ್ನೆ ರಜೆ ಹಿನ್ನೆಲೆಯಲ್ಲಿ ಮಂದಾರಗಿರಿ ಬೆಟ್ಟಕ್ಕೆ ಬಂದಿದ್ದಳು. ಅಲ್ಲೆ ಸಮೀಪದಲ್ಲಿದ್ದ ಮೈದಾಳ ಕೆರೆ ಕೋಡಿ ನೋಡಲು ತೆರಳಿದ್ದಳು ಈ ವೇಳೆ ಕೆರೆ ಕೋಡಿ ನೋಡುವ ವೇಳೆ ಕಾಲು ಜಾರಿ ಬಿದ್ದಿದ್ದಾಳೆ. ಸ್ಥಳಕ್ಕೆ ಕ್ಯಾತಸಂದ್ರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಅಧಿಕಾರಿಗಳು, ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಅಗ್ನಿಶಾಮಕ ದಳದ ಸಿಬ್ಬಂದಿಯಿಂದ ಯುವತಿ ಮೃತದೇಹ ಹುಡುಕಾಟಕ್ಕೆ ಕಾರ್ಯಾಚರಣೆ ನಡೆಸಿದ್ದಾರೆ. ಕ್ಯಾತಸಂದ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿಯಾಗಿ ಸವಾರ ಸಾವು
ಉತ್ತರ ಕನ್ನಡ ಜಿಲ್ಲೆಯ ಶಿರಸಿ ಕುಮಟಾ ರಾಷ್ಟ್ರೀಯ ಹೆದ್ದಾರಿ 766EEಯ ಹಾರೂಗಾರ ಬಳಿ ನಿಂತಿದ್ದ ಲಾರಿಗೆ ಬೈಕ್ ಡಿಕ್ಕಿ ಹೊಡೆದು ಸವಾರ ಸ್ಥಳದಲ್ಲೆ ಮೃತಪಟ್ಟಿದ್ದಾರೆ. ಮೃತ ಬೈಕ್ ಸವಾರ ಅಮ್ಮಿನಳ್ಳಿಯ ಅಡಳ್ಳಿ ಮೂಲದವರು ಎನ್ನಲಾಗಿದೆ. ಬೆಳಗಿನ ಜಾವ ಶಿರಸಿಯತ್ತ ತೆರಳುತ್ತಿದ್ದ ಬೈಕ್ ಸವಾರ, ರಸ್ತೆಯಂಚಿಗೆ ನಿಂತಿದ್ದ ಲಾರಿಗೆ ಹಿಂಬದಿಯಿಂದ ಡಿಕ್ಕಿ ಹೊಡೆದಿದೆ. ಸ್ಥಳಕ್ಕೆ ಆಂಬ್ಯುಲೆನ್ಸ್ ತಲುಪುವ ವೇಳೆಗಾಗಲೇ ಸವಾರ ಮೃತಪಟ್ಟಿದ್ದಾರೆ. ಶಿರಸಿ ಗ್ರಾಮೀಣ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.
ಡಿವೈಡರ್‌ಗೆ ಕೇರಳ ಬಸ್; ಚಾಲಕ ಸ್ಪಾಟ್ ಡೆತ್
ಚಾಲಕನ ನಿಯಂತ್ರಣ ತಪ್ಪಿ ಕೇರಳ ಬಸ್‌ವೊಂದು ರೋಡ್ ಡಿವೈಡರ್ ಡಿಕ್ಕಿ ಹೊಡೆದಿದೆ. ಬಸ್ ಚಾಲಕ ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಮಂಡ್ಯದ ಗೆಜ್ಜಲಗೆರೆ ಬಳಿಯ ಮೈ- ಬೆಂ ಹೆದ್ದಾರಿಯಲ್ಲಿ ಘಟನೆ ನಡೆದಿದೆ. ಕೇರಳ ಬಸ್ ಚಾಲಕ ಹಸೀಬ್ (48) ಸ್ಥಳದಲ್ಲೇ ಮೃತಪಟ್ಟವರು. ಚಾಲಕನ ಮೃತದೇಹ ಮಂಡ್ಯ ಮಿಮ್ಸ್ ಆಸ್ಪತ್ರೆಗೆ ರವಾನೆ ಮಾಡಲಾಗಿದೆ. ಮದ್ದೂರು ಟ್ರಾಫಿಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಪ್ರಕರಣ ದಾಖಲಾಗಿದೆ.