ಮೈಸೂರು: ಇದು ನನಗೆ ಇದು ಬಯಸದೇ ಬಂದ ಭಾಗ್ಯ. ರಾಷ್ಟ್ರೀಯ ಸ್ವಯಂಸೇವಕ ಸಂಘ (Rashtriya Swayamsevak Sangh) ಮತ್ತು ಭಾರತೀಯ ಜನತಾ ಪಕ್ಷ (BJP) ನನ್ನನ್ನು ಗುರುತಿಸಿ ಅವಕಾಶ ನೀಡಿದೆ ಎಂದು ಮೇಘಾಲಯದ (Meghalaya) ನೂತನ ರಾಜ್ಯಪಾಲರಾಗಿ (Governor) ನೇಮಕವಾಗಿರುವ ಮೈಸೂರಿನ ಮಾಜಿ ಸಂಸದ (Mysore Ex MP) ಸಿಎಚ್ ವಿಜಯಶಂಕರ್ (CH Vijayashankar) ಹೇಳಿದ್ದಾರೆ.
ವಿಸ್ತಾರ ನ್ಯೂಸ್ ಜತೆ ಮಾತನಾಡಿದ ಸಿಎಚ್‌ವಿ, ರಾಜ್ಯಪಾಲರಾಗಿ ನೇಮಕವಾಗಿರುವ ಬಗ್ಗೆ ಪ್ರತಿಕ್ರಿಯೆ ನೀಡಿದರು. ನಾನು ಹುಣಸೂರು ಕ್ಷೇತ್ರದ ಶಾಸಕ, ಮೈಸೂರು ಲೋಕಸಭೆ ಕ್ಷೇತ್ರದ ಸಂಸದ ಆಗಿದ್ದವನು. 2014ರಲ್ಲಿ ಲೋಕಸಭೆ ಚುನಾವಣೆಗೆ ಪಕ್ಷದ ಟಿಕೆಟ್ ತಪ್ಪಿತು. ಹಾಸನಕ್ಕೆ ಹೋಗಿ ದೇವೇಗೌಡರ ಎದುರು ಸ್ಪರ್ಧಿಸಿ ಸೋತಿದ್ದೆ. ಅಲ್ಲಿಂದ ಸತತ ವನವಾಸ ಅನುಭವಿಸಿದ್ದೆ. ಈಗ ಅತ್ಯಂತ ದೊಡ್ಡ ಹುದ್ದೆ ದೊರಕಿದೆ ಎಂದು ಸಂಭ್ರಮ ವ್ಯಕ್ತಪಡಿಸಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಸ್ವತಃ ಕರೆ ಮಾಡಿ ಶುಭ ಕೋರಿದ್ದಾರೆ. ಕೆಲವೇ ನಿಮಿಷಗಳ ಹಿಂದೆ ಅಧಿಕೃತ ನೇಮಕಾತಿ ಪತ್ರವೂ ದೊರಕಿದೆ. ನಮ್ಮಲ್ಲಿ ಪ್ರಾಮಾಣಿಕತೆ ಇದ್ದರೆ ಯಾವುದೂ ಸವಾಲು ಅಲ್ಲ. ನಾನು ಮೇಘಾಲಯಕ್ಕೆ ರಾಜ್ಯಪಾಲ ಆಗಿರಬಹುದು. ಆದರೆ ಹುಣಸೂರು, ಮೈಸೂರು ಈ ನೆಲದ ಋಣ ನನ್ನ ಮೇಲೆ ಇದೆ ಎಂದು ಸಿ.ಎಚ್.ವಿಜಯಶಂಕರ್ ಹೇಳಿದ್ದಾರೆ.
ನಿನ್ನೆ ನೇಮಕ
ಕೇಂದ್ರ ಸರ್ಕಾರದ ಶಿಫಾರಸ್ಸಿನಂತೆ ವಿಜಯಶಂಕರ್ ಅವರನ್ನು ಮೇಘಾಲಯದ ರಾಜ್ಯಪಾಲರಾಗಿ ನೇಮಕ ಮಾಡಿ ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ನಿನ್ನೆ ತಡರಾತ್ರಿ ಆದೇಶ ಹೊರಡಿಸಿದ್ದಾರೆ. 6 ಮಂದಿ ನೂತನ ರಾಜ್ಯಪಾಲರ ನೇಮಕ ಮಾಡಲಾಗಿದೆ. ಪ್ರಧಾನಿ ನರೇಂದ್ರ ಮೋದಿ ಅವರ ನಿಕಟವರ್ತಿಯಾಗಿರುವ ಗುಜರಾತ್‌ನ ಮಾಜಿ ಮುಖ್ಯ ಕಾರ್ಯದರ್ಶಿ ಕೆ. ಕೈಲಾಸನಾಥನ್ ಅವರನ್ನು ಪುದುಚೇರಿಯ ಲೆಫ್ಟಿನೆಂಟ್ ಗವರ್ನರ್ ಆಗಿ ನೇಮಿಸಲಾಗಿದೆ. ಹರಿಭಾವು ಬಾಗಡೆ ಅವರನ್ನು ರಾಜಸ್ಥಾನದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ಸಂತೋಷ್ ಗಂಗ್ವಾರ್ ಅವರು ಜಾರ್ಖಂಡ್‌ಗೆ ಹಾಗೂ ಒ.ಪಿ ಮಾಥುರ್ ಅವರನ್ನು ಸಿಕ್ಕಿಂನ ರಾಜ್ಯಪಾಲರನ್ನಾಗಿ ನೇಮಿಸಲಾಗಿದೆ. ತ್ರಿಪುರಾ ಮಾಜಿ ಮುಖ್ಯಮಂತ್ರಿ ಜಿಷ್ಣು ದೇವ್ ವರ್ಮಾ ಅವರನ್ನು ತೆಲಂಗಾಣದ ರಾಜ್ಯಪಾಲರನ್ನಾಗಿ ನೇಮಿಸಲಾಗಿದ್ದು, ರಮೆನ್ ದೇಕಾ ಅವರು ಛತ್ತೀಸಗಢಕ್ಕೆ ರಾಜ್ಯಪಾಲರಾಗಿ ನೇಮಕಗೊಂಡಿದ್ದಾರೆ.
ವಿಜಯಶಂಕರ್ ರಾಜಕೀಯ ಏಳುಬೀಳು
ಹಾವೇರಿ ಜಿಲ್ಲೆಯ ರಾಣೆಬೆನ್ನೂರು ತಾಲ್ಲೂಕಿನ ಮಾಕನೂರಿನಲ್ಲಿ 1956ರ ಅಕ್ಟೋಬರ್ 21ರಂದು ಜನಿಸಿದ ವಿಜಯಶಂಕರ್, ಬದುಕು ಕಟ್ಟಿಕೊಂಡದ್ದು ಮೈಸೂರಿನಲ್ಲಿ. ಅವರ ಶಿಕ್ಷಣ ಆಗಿದ್ದು ಬ್ಯಾಡಗಿಯಲ್ಲಿ. ಬಿಎಸ್ಸಿ ಪದವೀಧರರರಾದ ವಿಜಯಶಂಕರ್, ಹುಣಸೂರಿನಲ್ಲಿದ್ದ ತಮ್ಮ ಸಹೋದರಿಯ ಮನೆಗೆ ಬಂದವರು ಇಲ್ಲಿ ಆ ಕುಟುಂಬದವರು ನಡೆಸುತ್ತಿದ್ದ ಸಿಮೆಂಟ್ ವ್ಯಾಪಾರದಲ್ಲಿ ತೊಡಗಿಸಿಕೊಂಡರು. ವೃತ್ತಿಯಲ್ಲಿ ಗುರುತಿಸಿಕೊಂಡ ವಿಜಯಶಂಕರ್ ನಂತರ ರಾಜಕೀಯ ಸೇರಿದರು.
90ರ ದಶಕದ ಆರಂಭದಲ್ಲಿ ಕಾಂಗ್ರೆಸ್‌ನೊಂದಿಗೆ ಗುರುತಿಸಿಕೊಂಡ ಅವರು ನಂತರ ಬಿಜೆಪಿಯನ್ನು ಸೇರಿಕೊಂಡರು. 1991ರಲ್ಲಿ ನಡೆದ ಹುಣಸೂರು ಕ್ಷೇತ್ರದ ವಿಧಾನಸಭೆ ಉಪ ಚುನಾವಣೆಯಲ್ಲಿ ಬಿಜೆಪಿಯಿಂದ ಸ್ಪರ್ಧಿಸಿ ಚಿಕ್ಕಮಾದು ವಿರುದ್ಧ ಸೋತರು. 1994ರಲ್ಲಿ ನಡೆದ ವಿಧಾನಸಭೆ ಚುನಾವಣೆಯಲ್ಲಿ ಹುಣಸೂರು ಕ್ಷೇತ್ರದಿಂದ ಬಿಜೆಪಿಯಿಂದ ಗೆದ್ದು ಶಾಸಕರಾದರು. 1998ರ ಲೋಕಸಭೆ ಚುನಾವಣೆಯಲ್ಲಿ ಬಿಜೆಪಿ ಅಭ್ಯರ್ಥಿಯಾದ ಅವರು, ಲೋಕಸಭೆ ಸದಸ್ಯರಾಗಿ ಚುನಾಯಿತರಾದರು. ಮರು ವರ್ಷ ನಡೆದ ಲೋಕಸಭೆ ಚುನಾವಣೆಯಲ್ಲಿ ರಾಜವಂಶಸ್ಥ ಶ್ರೀಕಂಠದತ್ತ ನರಸಿಂಹರಾಜ ಒಡೆಯರ್ ವಿರುದ್ಧ ಸೋತರು. 2004ರಲ್ಲಿ ಅವರನ್ನೇ ಮಣಿಸಿ ಎರಡನೇ ಬಾರಿಗೆ ಲೋಕಸಭೆ ಸದಸ್ಯರಾದರು. ಆಗ ಎನ್‌ಡಿಎ ಸರ್ಕಾರದಲ್ಲಿ ಮಂತ್ರಿಯಾಗುವ ಅವಕಾಶ ಸಿಕ್ಕಿತು.
ಮೈಸೂರಿನ ವಿಮಾನ ನಿಲ್ದಾಣ, ರೈಲ್ವೆ ನಿಲ್ದಾಣ ಸಹಿತ ಹಲವಾರು ಕೆಲಸಗಳನ್ನು ವಿಜಯಶಂಕರ್ ಮಾಡಿಸಿದ್ದಾರೆ. 2009ರಲ್ಲಿ ಕಾಂಗ್ರೆಸ್‌ನ ವಿಶ್ವನಾಥ್ ವಿರುದ್ಧ ವಿಜಯಶಂಕರ್ ಸೋಲು ಕಂಡರು. ಆನಂತರ ರಾಜ್ಯ ರಾಜಕಾರಣಕ್ಕೆ ಮರಳಿದ ಅವರು ಯಡಿಯೂರಪ್ಪ ಸರಕಾರದ ವೇಳೆ ಎಂಎಲ್ಸಿ ಆದರು. ಕೊಡಗು ಹಾಗೂ ಚಾಮರಾಜನಗರ ಉಸ್ತುವಾರಿ, ಅರಣ್ಯ, ಹಾಗೂ ಸಣ್ಣ ಕೈಗಾರಿಕೆ ಸಚಿವರೂ ಆದರು. 2014ರಲ್ಲಿ ವಿಜಯಶಂಕರ್ ಅವರನ್ನು ಮೈಸೂರಿನ ಬದಲು ಹಾಸನ ಲೋಕಸಭಾ ಕ್ಷೇತ್ರದ ಅಭ್ಯರ್ಥಿಯನ್ನಾಗಿ ಬಿಜೆಪಿ ನಿಯೋಜಿಸಿತು. ಅಲ್ಲಿ ದೇವೇಗೌಡರ ವಿರುದ್ಧ ವಿಜಯಶಂಕರ್ ಸೋತರು.
ಬಿಜೆಪಿಯಲ್ಲಿ ತಮಗೆ ಅನ್ಯಾಯವಾಗಿದೆ ಎಂದು ಕಾಂಗ್ರೆಸ್‌ಗೆ ವಿಜಯಶಂಕರ್ ಸೇರಿಕೊಂಡರು. 2019ರಲ್ಲಿ ಮೈಸೂರು ಕ್ಷೇತ್ರದಿಂದ ಮೈತ್ರಿ ಅಭ್ಯರ್ಥಿಯಾಗಿ ಸೋತರು. ಒಂದೇ ವರ್ಷಕ್ಕೆ ಬಿಜೆಪಿಗೆ ಮರಳಿದರು. ಕಳೆದ ವರ್ಷ ಪಿರಿಯಾಪಟ್ಟಣ ವಿಧಾನಸಭೆ ಕ್ಷೇತ್ರದಿಂದ ಸ್ಪರ್ಧಿಸಿ ಸೋಲುಂಡರು. ಈ ಬಾರಿ ಲೋಕಸಭೆ ಚುನಾವಣೆಗೂ ಆಕಾಂಕ್ಷಿಯಾಗಿದ್ದರೂ ಟಿಕೆಟ್ ಸಿಕ್ಕಿರಲಿಲ್ಲ.
ಇದನ್ನೂ ಓದಿ: CH Vijayashankar: ಮೇಘಾಲಯ ರಾಜ್ಯಪಾಲರಾಗಿ ಸಿ.ಎಚ್. ವಿಜಯಶಂಕರ್ ನೇಮಕ