ಹೊಸದಿಲ್ಲಿ: ಭಾರತವು ನಿನ್ನೆ ಬಹು ಸಿಡಿತಲೆಗಳನ್ನು ಒಯ್ಯಬಲ್ಲ ಅಗ್ನಿ-5 ಕ್ಷಿಪಣಿಯನ್ನು (Agni-V Missile) ಯಶಸ್ವಿಯಾಗಿ ಪರೀಕ್ಷಿಸಿದೆ. ಈ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ʻಮಿಷನ್ ದಿವ್ಯಾಸ್ತ್ರ’ (Mission Divyastra) ಎಂದು ಘೋಷಿಸಿದ್ದಾರೆ. ಈ ಯೋಜನೆಯ ನೇತೃತ್ವವನ್ನು ವಹಿಸಿದ ʼದಿವ್ಯ ಶಕ್ತಿʼ ಒಬ್ಬ ಮಹಿಳೆ. ಇವರ ಬಗ್ಗೆ ವಿವರ ಇಲ್ಲಿದೆ.
ಹೈದರಾಬಾದ್‌ನಲ್ಲಿರುವ ದೇಶದ ಕ್ಷಿಪಣಿ ಸಂಕೀರ್ಣದ ಮಹಿಳಾ ವಿಜ್ಞಾನಿ ಶೀನಾ ರಾಣಿ (Sheena Rani) ಅವರು ಈ ದಿವ್ಯಾಸ್ತ್ರದ ಹಿಂದಿರುವ ಶಕ್ತಿ. ಇವರು 1999ರಿಂದ ಅಗ್ನಿ ಕ್ಷಿಪಣಿ ವ್ಯವಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ. ಬಹು ಸ್ವತಂತ್ರವಾಗಿ ಟಾರ್ಗೆಟೆಬಲ್ ರೀ-ಎಂಟ್ರಿ ವೆಹಿಕಲ್ (ಎಂಐಆರ್‌ವಿ) ತಂತ್ರಜ್ಞಾನವನ್ನು ಹೊಂದಿರುವ ಅಗ್ನಿ-5 ಕ್ಷಿಪಣಿಯು ಭಾರತದ ರಕ್ಷಣಾ ಸಂಶೋಧನೆಯಲ್ಲಿ ಭಾರತದ ಇತ್ತೀಚಿನ ಹೀರೋ. ಶೀನಾ ರಾಣಿ ಅವರ ಇಪ್ಪತ್ತೈದನೇ ವರ್ಷದ ವೃತ್ತಿ ಬದುಕಿನ ಮುಕುಟ ಇದು.
“ನಾನು ಭಾರತವನ್ನು ರಕ್ಷಿಸಲು ಸಹಾಯ ಮಾಡುವ DRDO ಸಂಸ್ಥೆಯ ಹೆಮ್ಮೆಯ ಸದಸ್ಯಳಾಗಿದ್ದೇನೆ” ಎನ್ನುತ್ತಾರೆ ಶೀನಾ ರಾಣಿ. ಅವರು ಅಗ್ನಿ ಸರಣಿಯ ಕ್ಷಿಪಣಿಗಳ ಅಭಿವೃದ್ಧಿಯಲ್ಲಿ ಪ್ರಮುಖ ಪಾತ್ರ ವಹಿಸಿದ ಭಾರತದ ಪ್ರಸಿದ್ಧ ಕ್ಷಿಪಣಿ ತಂತ್ರಜ್ಞೆ ʻಅಗ್ನಿ ಪುತ್ರಿ’ ಟೆಸ್ಸಿ ಥಾಮಸ್ ಅವರ ಹೆಜ್ಜೆಗಳಲ್ಲಿ ನಡೆದಿದ್ದಾರೆ. ʼಶಕ್ತಿಯ ಶಕ್ತಿಕೇಂದ್ರ’ ಎಂದು ಕರೆಯಲ್ಪಡುವ ಹೈದರಾಬಾದ್‌ನಲ್ಲಿರುವ ಡಿಫೆನ್ಸ್ ರಿಸರ್ಚ್ ಡೆವಲಪ್‌ಮೆಂಟ್ ಆರ್ಗನೈಸೇಶನ್‌ನ (ಡಿಆರ್‌ಡಿಒ) ಅಡ್ವಾನ್ಸ್ಡ್ ಸಿಸ್ಟಮ್ಸ್ ಲ್ಯಾಬೊರೇಟರಿಯಲ್ಲಿ 57 ವರ್ಷ ಶೀನಾ ರಾಣಿ ವಿಜ್ಞಾನಿಯಾಗಿದ್ದಾರೆ.
ಕಂಪ್ಯೂಟರ್ ಸೈನ್ಸ್‌ನಲ್ಲಿ ಪರಿಣತಿ. ಎಲೆಕ್ಟ್ರಾನಿಕ್ಸ್ ಮತ್ತು ಸಂವಹನ ಎಂಜಿನಿಯರ್ ಶೀನಾ ರಾಣಿ ತಿರುವನಂತಪುರಂನ ಕಾಲೇಜ್ ಆಫ್ ಎಂಜಿನಿಯರಿಂಗ್‌ನಲ್ಲಿ ಅಧ್ಯಯನ ಮಾಡಿದವರು. ಎಂಟು ವರ್ಷಗಳ ಕಾಲ ಭಾರತದ ಅಗ್ರಗಣ್ಯ ನಾಗರಿಕ ರಾಕೆಟ್ ಪ್ರಯೋಗಾಲಯವಾದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ (VSSC) ಕೆಲಸ ಮಾಡಿದರು. 1998ರ ಪೋಖ್ರಾಣ್ ಪರಮಾಣು ಪರೀಕ್ಷೆಯ ನಂತರ ಅವರು ಲ್ಯಾಟರಲ್ ಎಂಟ್ರಿಯಾಗಿ DRDOಗೆ ತೆರಳಿದರು. 1999ರಿಂದ ರಾಣಿ ಸಂಪೂರ್ಣ ಅಗ್ನಿ ಸರಣಿಯ ಕ್ಷಿಪಣಿಗಳ ಉಡಾವಣಾ ನಿಯಂತ್ರಣ ವ್ಯವಸ್ಥೆಗಳಲ್ಲಿ ಕೆಲಸ ಮಾಡುತ್ತಿದ್ದಾರೆ.
ಭಾರತದ ʻಮಿಸೈಲ್ ಮ್ಯಾನ್’, ಮಾಜಿ ರಾಷ್ಟ್ರಪತಿ ಮತ್ತು DRDOನ ಮಾಜಿ ಮುಖ್ಯಸ್ಥ ಡಾ ಎಪಿಜೆ ಅಬ್ದುಲ್ ಕಲಾಂ ಅವರಿಂದ ಸ್ಫೂರ್ತಿ ಮತ್ತು ಪ್ರೇರಣೆ ಪಡೆದಿದ್ದಾರೆ. ಕುತೂಹಲಕರ ಸಂಗತಿ ಎಂದರೆ, ಶೀನಾ ಅವರ ವೃತ್ತಿಯ ಹೆಜ್ಜೆಗಳು ಕೂಡ ಡಾ. ಕಲಾಂ ಅವರಂತೆಯೇ ಇವೆ. ಅವರು ಕೂಡ ಇಸ್ರೋದ ವಿಕ್ರಮ್ ಸಾರಾಭಾಯ್ ಬಾಹ್ಯಾಕಾಶ ಕೇಂದ್ರದಲ್ಲಿ ತಮ್ಮ ವೃತ್ತಿಜೀವನ ಪ್ರಾರಂಭಿಸಿದರು, ನಂತರ ಇಂಟಿಗ್ರೇಟೆಡ್ ಗೈಡೆಡ್ ಕ್ಷಿಪಣಿ ಅಭಿವೃದ್ಧಿ ಕಾರ್ಯಕ್ರಮ ಮುನ್ನಡೆಸಲು DRDOಗೆ ತೆರಳಿದ್ದರು.
ಇವರ ವೃತ್ತಿಜೀವನವನ್ನು ರೂಪಿಸಲು ಸಹಾಯ ಮಾಡಿದ ಇನ್ನೊಬ್ಬ ವ್ಯಕ್ತಿ ಕ್ಷಿಪಣಿ ತಂತ್ರಜ್ಞ ಡಾ. ಅವಿನಾಶ್ ಚಂದರ್. ಇವರು ಕೆಲವು ಕಷ್ಟಕರ ವರ್ಷಗಳಲ್ಲಿ DRDO ಅನ್ನು ಮುನ್ನಡೆಸಿದವರು. “ಶೀನಾ ರಾಣಿ ಅವರು ಯಾವಾಗಲೂ ನಗುತ್ತಿರುವವ, ಹೊಸತನವನ್ನು ಕಂಡುಕೊಳ್ಳಲು ಸಿದ್ಧರಿರುವ, ಅಗ್ನಿ ಕ್ಷಿಪಣಿ ಕಾರ್ಯಕ್ರಮಕ್ಕೆ ಸಮರ್ಪಿಸಿಕೊಂಡ ವ್ಯಕ್ತಿ. ನಿನ್ನೆಯ ಸಾಧನೆ ಅವರ ಮುಕುಟ” ಎಂದು ರಾಣಿಯವರನ್ನು ಚಂದರ್ ಬಣ್ಣಿಸಿದ್ದಾರೆ.
ಶೀನಾ ಅವರ ಪತಿ ಪಿಎಸ್‌ಆರ್‌ಎಸ್ ಶಾಸ್ತ್ರಿ. ಅವರೂ ಡಿಆರ್‌ಡಿಒ ಜೊತೆ ಕ್ಷಿಪಣಿಗಳ ಬಗ್ಗೆ ಕೆಲಸ ಮಾಡಿದವರು. 2019ರಲ್ಲಿ ಇಸ್ರೋ ಉಡಾವಣೆ ಮಾಡಿದ ಕೌಟಿಲ್ಯ ಉಪಗ್ರಹದ ಉಸ್ತುವಾರಿ ವಹಿಸಿದ್ದರು.
ಮಲ್ಟಿಪಲ್ ಇಂಡಿಪೆಂಡೆಂಟ್ಲಿ ಟಾರ್ಗೆಟೆಬಲ್ ರೀ-ಎಂಟ್ರಿ ವೆಹಿಕಲ್ (ಎಂಐಆರ್‌ವಿ) ತಂತ್ರಜ್ಞಾನದೊಂದಿಗೆ ಸ್ಥಳೀಯವಾಗಿ ಅಭಿವೃದ್ಧಿಪಡಿಸಿದ ಅಗ್ನಿ-5 ಕ್ಷಿಪಣಿಯ ಮೊದಲ ಯಶಸ್ವಿ ಹಾರಾಟ ಪರೀಕ್ಷೆ ಒಡಿಶಾದ ಡಾ.ಎಪಿಜೆ ಅಬ್ದುಲ್ ಕಲಾಂ ದ್ವೀಪದಿಂದ ನಡೆಯಿತು. ಕಾರ್ಯಾಚರಣೆಯ ನಿರ್ವಹಣೆಯಲ್ಲಿ ಭಾಗವಹಿಸಿದ DRDO ವಿಜ್ಞಾನಿಗಳ ಪ್ರಯತ್ನವನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದರು.
ಕ್ಷಿಪಣಿಯು ಪ್ರಾದೇಶಿಕ ಭೌಗೋಳಿಕ ರಾಜಕೀಯದಲ್ಲಿ ಆಟವನ್ನು ಬದಲಾಯಿಸಲಿದೆ. ಇದೊಂದು ಅತ್ಯಾಧುನಿಕ, ಸಂಕೀರ್ಣವಾದ ಸ್ಥಳೀಯ ತಂತ್ರಜ್ಞಾನದಿಂದ ಮಾಡಲ್ಪಟ್ಟಿದೆ. ಇದು MIRV ತಂತ್ರಜ್ಞಾನವನ್ನು ಹೊಂದಿದ್ದು, ಒಂದೇ ಕ್ಷಿಪಣಿಯು ಅನೇಕ ಗುರಿಗಳನ್ನು ನಾಶ ಮಾಡುತ್ತದೆ ಮತ್ತು ಶತ್ರುಗಳ ಕ್ಷಿಪಣಿವಿರೋಧಿ ವ್ಯವಸ್ಥೆಯ ಸಾಮರ್ಥ್ಯಗಳನ್ನು ವಂಚಿಸುತ್ತದೆ. ಇದರೊಂದಿಗೆ ಭಾರತವು MIRV ತಂತ್ರಜ್ಞಾನವನ್ನು ಹೊಂದಿರುವ US, UK, ರಷ್ಯಾ, ಫ್ರಾನ್ಸ್ ಮತ್ತು ಚೀನಾದ ಗಣ್ಯ ರಾಷ್ಟ್ರಗಳ ಕ್ಲಬ್‌ಗೆ ಸೇರಿಕೊಂಡಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ದಿವ್ಯಾಸ್ತ್ರಗಳ ಸೇರ್ಪಡೆಯಿಂದ ಭಾರತ ಮತ್ತಷ್ಟು ಬಲಿಷ್ಠ