Site icon Vistara News

MLC By Election: ಕರ್ನಾಟಕದಲ್ಲಿ ವಿಧಾನ ಪರಿಷತ್‌ ಉಪ ಚುನಾವಣೆ ಜುಲೈ 12ರಂದು

MLC by Election

MLC by Election

ಬೆಂಗಳೂರು: ಜಗದೀಶ್ ಶೆಟ್ಟರ್ (jagadish shettar) ರಾಜೀನಾಮೆಯಿಂದ ತೆರವಾಗಿರುವ ಕರ್ನಾಟಕದ ಒಂದು ಸ್ಥಾನ ಸೇರಿದಂತೆ ನಾಲ್ಕು ರಾಜ್ಯಗಳ ವಿಧಾನ ಪರಿಷತ್‌ (Legislative council) ಸ್ಥಾನಗಳಿಗೆ ಜುಲೈ 12ರಂದು ಬೈ ಎಲೆಕ್ಷನ್‌ (By Election) ನಡೆಯಲಿದೆ ಎಂದು ಕೇಂದ್ರ ಚುನಾವಣಾ ಆಯೋಗ (Election commission) ಘೋಷಿಸಿದೆ.

ವಿಧಾನಸಭೆಯಿಂದ ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ನಡೆಯುವ ಚುನಾವಣೆಗೆ ವೇಳಾಪಟ್ಟಿ ಘೋಷಣೆ ಮಾಡಲಾಗಿದೆ. ಕರ್ನಾಟಕ, ಬಿಹಾರ, ಉತ್ತರ ಪ್ರದೇಶ ಮತ್ತು ಆಂಧ್ರ ಪ್ರದೇಶದ ತಲಾ ಒಂದೊಂದು ಸ್ಥಾನಗಳಿಗೆ ಜುಲೈ 12ರಂದು ಮತದಾನ ನಡೆಯಲಿದೆ. ಅಂದೇ ಸಂಜೆ 5 ಗಂಟೆಯಿಂದ ಮತ ಎಣಿಕೆ ನಡೆಯಲಿದೆ.

ಕರ್ನಾಟಕದಲ್ಲಿ ಜಗದೀಶ್ ಶೆಟ್ಟರ್ ರಾಜೀನಾಮೆಯಿಂದ ತೆರವಾದ ಸ್ಥಾನಕ್ಕೆ ಉಪ ಚುನಾವಣೆ ನಡೆಯಲಿದೆ. ಕಾಂಗ್ರೆಸ್ ಪಕ್ಷದಲ್ಲಿದ್ದ ಜಗದೀಶ್ ಶೆಟ್ಟರ್ ವಿಧಾನ ಪರಿಷತ್ ಸದಸ್ಯರಾಗಿದ್ದರು. ಅವರ ಅವಧಿ 14 ಜೂನ್ 2028ರ ತನಕ ಇತ್ತು. ಅವರು 25 ಜನವರಿ 2024ರಂದು ಕಾಂಗ್ರೆಸ್ ಪಕ್ಷವನ್ನು ತೊರೆದು ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿದ್ದರು. ಇವರಿಂದ ತೆರವಾದ ಒಂದು ಸ್ಥಾನ ಭರ್ತಿ ಮಾಡಲು ಚುನಾವಣಾ ಆಯೋಗ ಉಪ ಚುನಾವಣೆ ವೇಳಾಪಟ್ಟಿ ಘೋಷಣೆ ಮಾಡಿದೆ.

ಉಪ ಚುನಾವಣೆಗೆ 25 ಜೂನ್, ಮಂಗಳವಾರ ಚುನಾವಣಾ ಅಧಿಸೂಚನೆ ಪ್ರಕಟವಾಗಲಿದೆ. 2 ಜುಲೈ ನಾಮಪತ್ರಗಳನ್ನು ಸಲ್ಲಿಕೆ ಮಾಡಲು ಕೊನೆಯ ದಿನವಾಗಿದೆ. ಜುಲೈ 3ರಂದು ನಾಮಪತ್ರಗಳ ಪರಿಶೀಲನೆ ನಡೆಯಲಿದೆ. ನಾಮಪತ್ರ ವಾಪಸ್ ಪಡೆಯಲು ಜುಲೈ 5 ಕೊನೆಯ ದಿನ. ಜುಲೈ 12, ಶುಕ್ರವಾರ ಬೆಳಗ್ಗೆ 9ರಿಂದ ಸಂಜೆ 4 ಗಂಟೆಯ ತನಕ ಮತದಾನ ನಡೆಯಲಿದೆ. ಸಂಜೆ 5 ಗಂಟೆಯ ಬಳಿಕ ಮತ ಎಣಿಕೆ ಆರಂಭವಾಗಲಿದೆ. 16 ಜುಲೈ ಒಳಗೆ ಚುನಾವಣಾ ಪ್ರಕ್ರಿಯೆಗಳು ಪೂರ್ಣಗೊಳ್ಳಬೇಕಿದೆ.

ಕರ್ನಾಟಕ ವಿಧಾನಸಭೆಯ ಶಾಸಕರು ಈ ಚುನಾವಣೆಯಲ್ಲಿ ಮತದಾನ ಮಾಡಲಿದ್ದು, ವಿಧಾನಸೌಧದಲ್ಲಿ ಮತದಾನ ನಡೆಯಲಿದೆ. ವಿಧಾನ ಪರಿಷತ್ ಉಪ ಚುನಾವಣೆಗೆ ಆಡಳಿತ ಪಕ್ಷ ಕಾಂಗ್ರೆಸ್ ಈಗಾಗಲೇ ಬಸನಗೌಡ ಬಾದರ್ಲಿ ಅಭ್ಯರ್ಥಿ ಎಂದು ಘೋಷಣೆ ಮಾಡಿದೆ. ಬಿಜೆಪಿ-ಜೆಡಿಎಸ್ ಸೀಟು ಹಂಚಿಕೆ ಮಾಡಿಕೊಳ್ಳಲಿದ್ದು, ಯಾರು ಮೈತ್ರಿ ಅಭ್ಯರ್ಥಿ? ಎಂಬುದು ಕುತೂಹಲಕ್ಕೆ ಕಾರಣವಾಗಿದೆ.

ಶೆಟ್ಟರ್‌ ರಾಜಕೀಯ ಸರ್ಕಸ್

2023ರ ವಿಧಾನಸಭೆ ಚುನಾವಣೆಯಲ್ಲಿ ಹುಬ್ಬಳ್ಳಿ-ಧಾರವಾಡ ಕೇಂದ್ರದ ಬಿಜೆಪಿ ಟಿಕೆಟ್ ಕೈತಪ್ಪಿದ ಹಿನ್ನಲೆಯಲ್ಲಿ ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಅಸಮಾಧಾನಗೊಂಡು ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದರು. ಕಾಂಗ್ರೆಸ್ ಅಭ್ಯರ್ಥಿಯಾಗಿ ಕಣಕ್ಕಿಳಿದು 60,775 ಮತಗಳನ್ನು ಪಡೆದು ಚುನಾವಣೆಯಲ್ಲಿ ಬಿಜೆಪಿಯ ಮಹೇಶ್ ಟೆಂಗಿನಕಾಯಿ ವಿರುದ್ಧ ಸೋಲು ಕಂಡರು. ವಿಧಾನಸಭೆ ಚುನಾವಣೆಯಲ್ಲಿ ಸೋತರೂ ಕಾಂಗ್ರೆಸ್ ಪಕ್ಷ ಜಗದೀಶ್ ಶೆಟ್ಟರ್‌ ಅವರನ್ನು ವಿಧಾನ ಪರಿಷತ್ ಸದಸ್ಯರನ್ನಾಗಿ ಮಾಡಿತು. ಆದರೆ ಅವರು 2024ರ ಲೋಕಸಭೆ ಚುನಾವಣೆಯ ಸಮಯದಲ್ಲಿ ವಿಧಾನ ಪರಿಷತ್ ಸದಸ್ಯತ್ವಕ್ಕೆ ರಾಜೀನಾಮೆ ನೀಡಿ ಮತ್ತೆ ಬಿಜೆಪಿಗೆ ಮರಳಿದರು. 2024ರ ಲೋಕಸಭೆ ಚುನಾವಣೆಯಲ್ಲಿ ಜಗದೀಶ್ ಶೆಟ್ಟರ್ ಬೆಳಗಾವಿಯಿಂದ ಬಿಜೆಪಿ ಅಭ್ಯರ್ಥಿಯಾಗಿ ನಿಂತು 7,62,029 ಮತಗಳನ್ನು ಪಡೆದು, ಕಾಂಗ್ರೆಸ್ ಅಭ್ಯರ್ಥಿ ಮೃಣಾಲ್ ಹೆಬ್ಬಾಳ್ಕರ್ ಅವರನ್ನು 1,78,437 ಮತಗಳ ಅಂತರದಿಂದ ಸೋಲಿಸಿ ಸಂಸತ್ ಸದಸ್ಯರಾಗಿ ಆಯ್ಕೆಯಾಗಿದ್ದಾರೆ.

ಕರ್ನಾಟಕದಲ್ಲಿ ಲೋಕಸಭೆ ಚುನಾವಣೆ 2024 ಮುಗಿದ ಬಳಿಕ ಒಟ್ಟು 17 ವಿಧಾನ ಪರಿಷತ್ ಸ್ಥಾನಗಳ ಚುನಾವಣೆ ನಡೆಯಿತು. ಆಡಳಿತ ಪಕ್ಷವಾದ ಕಾಂಗ್ರೆಸ್ 10 ಸ್ಥಾನಗಳಲ್ಲಿ, ಪ್ರತಿಪಕ್ಷ ಬಿಜೆಪಿ 4 ಮತ್ತು ಜೆಡಿಎಸ್‌ 3 ಸ್ಥಾನಗಳಲ್ಲಿ ಜಯ ಗಳಿಸಿವೆ. ವಿಧಾನ ಪರಿಷತ್‌ನ 3 ಶಿಕ್ಷಕ, 3 ಪದವೀಧರ ಕ್ಷೇತ್ರಕ್ಕೆ ಜೂನ್‌ 3ರಂದು ನಡೆದು, ಫಲಿತಾಂಶ ಜೂನ್ 6ರಂದು ಪ್ರಕಟವಾಗಿದೆ. ವಿಧಾನಸಭೆಯಿಂದ 11 ವಿಧಾನ ಪರಿಷತ್ ಸದಸ್ಯರನ್ನು ಆಯ್ಕೆ ಮಾಡಲು ಘೋಷಣೆಯಾಗಿದ್ದ ಚುನಾವಣೆಯಲ್ಲಿ 11 ಅಭ್ಯರ್ಥಿಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆ.

ಇದನ್ನೂ ಓದಿ: Mallikarjun Kharge: ಶೀಘ್ರವೇ ಮೋದಿ ಸರ್ಕಾರ ಪತನ; ಭವಿಷ್ಯ ನುಡಿದ ಮಲ್ಲಿಕಾರ್ಜುನ ಖರ್ಗೆ

Exit mobile version