Site icon Vistara News

MP Pratap Simha : ಕೈ ಶಾಸಕ ತನ್ವೀರ್‌ ಸೇಠ್‌ಗೆ ಅಣ್ಣಾ ಎಂದ ಪ್ರತಾಪ್‌; ಹೌಹಾರಿದ ನೆಟ್ಟಿಗರು!

MP Pratap Simha Thanveer sait1

ಬೆಂಗಳೂರು: ಮೈಸೂರು-ಕೊಡಗು ಲೋಕಸಭಾ ಕ್ಷೇತ್ರದ (Mysore-kodagu Constituency) ಬಿಜೆಪಿ ಟಿಕೆಟ್‌ ಮಿಸ್‌ ಮಾಡಿಕೊಂಡ ಹಾಲಿ ಸಂಸದ ಪ್ರತಾಪ್‌ ಸಿಂಹ (MP Pratap Simha) ಅವರು ಈಗ ಹೊರಗೆ ಕಾಣಿಸಿಕೊಳ್ಳುವುದು ಕಡಿಮೆಯಾಗಿದೆಯಾದರೂ ಸಾಮಾಜಿಕ ಜಾಲತಾಣದಲ್ಲಿ ಸಕ್ರಿಯರಾಗಿದ್ದಾರೆ. ಟಿಕೆಟ್‌ ಸಿಗದ ನೋವು, ಯಾಕೆ ಕೈ ತಪ್ಪಿತು ಎಂಬುದೇ ಇನ್ನೂ ಅರ್ಥವಾಗದ ಸ್ಥಿತಿಯಲ್ಲಿರುವ ಅವರು ಒಂದಿಷ್ಟು ಮನೋಮಂಥನ ನಡೆಸುತ್ತಿರುವಂತೆಯೂ ಕಾಣುತ್ತಿದೆ. ಅದರ ಜತೆಗೆ ಟಿಕೆಟ್‌ ಕೈ ತಪ್ಪಿದ ಬೇಸರದಲ್ಲಿರುವ ತಮ್ಮ ಬಗ್ಗೆ ಅನುಕಂಪದಿಂದ ಮಾತನಾಡುತ್ತಿರುವವ ಬಗ್ಗೆ ಕೃತಜ್ಞತೆ ವ್ಯಕ್ತಪಡಿಸುತ್ತಿದ್ದಾರೆ. ಉಳಿದ ಅಮಿತ್‌ ಶಾ, ನರೇಂದ್ರ ಮೋದಿ ಅವರ ಕಾರ್ಯಕ್ರಮಗಳು, ಬಿಜೆಪಿಯ ಹೇಳಿಕೆಗಳನ್ನು ರಿಟ್ವೀಟ್‌ ಮಾಡುತ್ತಿದ್ದಾರೆ. ಅಂದ ಹಾಗೆ ಟಿಕೆಟ್‌ ಘೋಷಣೆಯಾಗಿ ಮೂರು ದಿನ ಕಳೆದರೂ ಅವರಿನ್ನೂ ಅಭ್ಯರ್ಥಿಯಾಗಿ ಘೋಷಣೆಯಾದ ಯದುವೀರ ಕೃಷ್ಣ ದತ್ತ ಚಾಮರಾಜ ಒಡೆಯರ್‌ (Yaduveer Odeyar) ಅವರನ್ನು ಭೇಟಿಯಾಗಿಲ್ಲ. ಭೇಟಿಗೆ ಅವಕಾಶ ಮಾಡಿಯೂ ಕೊಟ್ಟಿಲ್ಲ.

ಇಷ್ಟೆಲ್ಲದರ ನಡುವೆ ಹಿಂದೂ ಸಾಮ್ರಾಟ್‌ ಎಂದೇ ಕರೆಸಿಕೊಂಡ ಪ್ರತಾಪ್‌ ಸಿಂಹ ಅವರು ನರಸಿಂಹರಾಜ ಕ್ಷೇತ್ರದ ಕಾಂಗ್ರೆಸ್‌ ಶಾಸಕ ತನ್ವೀರ್‌ ಸೇಠ್‌ (MLA Tanveer Sait) ಅವರನ್ನು ತನ್ವೀರ್‌ ಅಣ್ಣಾ (Tanveer Anna) ಎಂದು ಕರೆದಿದ್ದು ಭಾರಿ‌ ಅಚ್ಚರಿಗೆ ಕಾರಣವಾಗಿದೆ. ನೆಟ್ಟಿಗರಲ್ಲಿ ಕೆಲವರು ಹೀಗೂ ಉಂಟೇ ಎಂದು ಹೌಹಾರಿದ್ದಾರೆ.

ಇದನ್ನೂ ಓದಿ :MP Pratap Simha : ಯದುವೀರ್‌ ಆ್ಯಕ್ಟಿವ್‌ ಆಗುತ್ತಿದ್ದಂತೆಯೇ ಸಿಂಹ ಸೈಲೆಂಟ್‌?; ಭೇಟಿಗೂ ಮಿಸ್‌!

MP Pratap Simha ತನ್ವೀರ್‌ ಸೇಠ್‌ ಅವರನ್ನು ಅಣ್ಣಾ ಎಂದು ಕರೆದಿದ್ದು ಯಾಕೆ?

ಪ್ರತಾಪ್‌ ಸಿಂಹ ಅವರು ಹಿಂದುತ್ವದ ಪ್ರಬಲ ಪ್ರತಿಪಾದಕರಾಗಿದ್ದು, ಹನುಮ ಜಯಂತಿ ಮತ್ತಿತರ ಹೋರಾಟಗಳಲ್ಲಿ ಮುಂಚೂಣಿಯಲ್ಲಿದ್ದರು. ಮೈಸೂರಿನಲ್ಲಿ ಹೊಸದಾಗಿ ಕಟ್ಟಿದ ಬಸ್‌ ಸ್ಟಾಪ್‌ಗಳು ಗುಂಬಜ್‌ನಂತೆ ಕಾಣುತ್ತಿವೆ ಎಂದು ಪ್ರತಿಭಟನೆಯ ಹುಯಿಲೆಬ್ಬಿಸಿದವರು. ಅಂಥವರು ಈಗ ತನ್ವೀರ್‌ ಸೇಠ್‌ಗೆ ತಮ್ಮ ಹೇಗಾದರು ಅಂತ ನೋಡುವುದಾದರೆ..

ಪ್ರತಾಪ್‌ ಸಿಂಹ ಅವರಿಗೆ ಮೈಸೂರು -ಕೊಡಗು ಕ್ಷೇತ್ರದ ಟಿಕೆಟ್‌ ಕೈ ತಪ್ಪಿ ಅದು ರಾಜವಂಶಸ್ಥ ಯದುವೀರ್‌ ಕೃಷ್ಣದತ್ತ ಚಾಮರಾಜ ಒಡೆಯರ್‌ ಅವರ ಪಾಲಾಗಿತ್ತು. ಈ ವೇಳೆ ಶಾಸಕ ತನ್ವೀರ್‌ ಸೇಠ್‌ ಅವರು ಪತ್ರಿಕೆಯೊಂದಕ್ಕೆ ಪ್ರತಿಕ್ರಿಯೆ ನೀಡಿದ್ದರು.

ʻʻರಾಜಕಾರಣದಲ್ಲಿ ಏನೆಲ್ಲ ಆಗುತ್ತದೆ ಎಂಬುದಕ್ಕೆ ಪ್ರತಾಪ್‌ ಸಿಂಹಗೆ ಬಿಜೆಪಿ ಟಿಕೆಟ್‌ ಕೈ ತಪ್ಪಿರುವುದೇ ಉದಾಹರಣೆ. ಪ್ರತಾಪ್‌ ಸಿಂಹ ನನ್ನ ಆತ್ಮೀಯ ಸ್ನೇಹಿತ. ಅವರಿಗೆ ಈ ಬಾರಿಯೂ ಬಿಜೆಪಿ ಟಿಕೆಟ್‌ ಸಿಗುತ್ತದೆ ಎಂದು ನಾನು ನಿರೀಕ್ಷೆ ಮಾಡಿದ್ದೆ. ಆದರೆ, ಪ್ರತಾಪ್‌ ಸಿಂಹಗೆ ಟಿಕೆಟ್‌ ಕೈ ತಪ್ಪಿರುವುದು ಅನಿರೀಕ್ಷಿತ. ರಾಜಕಾರಣದಲ್ಲಿ ಏನೆಲ್ಲಾ ಆಗಬಹುದು ಎಂಬುದಕ್ಕೆ ಉದಾಹರಣೆ ನನ್ನ ಕಣ್ಣ ಮುಂದೆ ಇದೆ. ಈಗ ಪ್ರತಾಪ್‌ ಸಿಂಹಗೆ ಟಿಕೆಟ್‌ ಸಿಕ್ಕಿಲ್ಲ. ಆದರೆ ಅವರಿಗೆ ಒಳ್ಳೆಯದಾಗಲಿ ಎಂದು ಆಶಿಸುತ್ತೇನೆ – ಎಂದು ತನ್ವೀರ್‌ ಸೇಠ್‌ ಹೇಳಿದ್ದರು.

ತನ್ವೀರ್‌ ಸೇಠ್‌ ಅವರ ಈ ಪ್ರತಿಕ್ರಿಯೆಯನ್ನು ಸಂಸದ ಪ್ರತಾಪ್‌ ಸಿಂಹ ಅವರು ಟ್ವೀಟ್‌ ಮಾಡಿ `THANKS Thaveer Anna’)’ ಎಂದು ಬರೆದಿದ್ದರು. ಅನ್ಯ ಪಕ್ಷದ ಒಬ್ಬ ನಾಯಕನಾಗಿದ್ದರೂ ನನ್ನ ಬಗ್ಗೆ ಅನುಕಂಪ ಹೊಂದಿದ್ದಾರಲ್ಲಾ ಎಂಬ ಕೃತಜ್ಞತಾ ಭಾವ ಅವರಲ್ಲಿತ್ತು.

MP Pratap Simha ಇದಕ್ಕೆ ನೆಟ್ಟಿಗರು ಏನಂದರು?

ಪ್ರತಾಪ್‌ ಸಿಂಹ ಅವರ ಈ ಟ್ವೀಟ್‌ಗೆ ಹೆಚ್ಚಿನವರು ತಾಳ್ಮೆ ಕಳೆದುಕೊಳ್ಳಬೇಡಿ, ಇನ್ನೂ ಭವಿಷ್ಯವಿದೆ ಎಂದು ಬುದ್ಧಿಮಾತು ಹೇಳಿದ್ದಾರೆ. ಅದರ ಜತೆಗೆ ಕೆಲವರು ಪ್ರತಾಪ್‌ ಸಿಂಹ ಕಾಲೆಳೆದಿದ್ದಾರೆ.

ಪ್ರತಾಪ್ ಸಿಂಹ ರವರೆ, ನಿಮಗೆ MP ಟಿಕೆಟ್ ಸಿಕ್ಕಲ್ಲ ಅಂತಾ ನಿರಾಶರಾಗಬೇಡಿ. ನೀಮಗೆ ಇನ್ನೂ ಮುಂದೆ ಭವಿಷ್ಯವಿದೆ ರಾಜ್ಯಕ್ಕೆ ನಿಮ್ಮಂತಹ ಯುವಕರು ಬೇಕು. ಯಾವುದಕ್ಕೂ ತಾಳ್ಮೆ ಬೇಕು. ಈ ತರಹ X ನಲ್ಲಿ ಅನುಕಂಪ ಬರುತ್ತದೆ. ಅನ್ನೋದು ತೆಗೆದು ಹಾಕಿ. ಇನ್ನು ಮಂದೆ ಪಕ್ಷ ನಿಮಗೆ ಒಳ್ಳೆಯ ಜವಾಬ್ದಾರಿ ಕೊಡುತ್ತಾರೆ. ತಾಳ್ಮೆ ಇರಲಿ ಎಂದು ಒಬ್ಬರು ಕಮೆಂಟ್‌ ಮಾಡಿದ್ದಾರೆ.

ಇನ್ನೊಬ್ಬರು ʻʻThanks ಹೇಳುದ್ರ? ಅದು ತನ್ವಿರ್ ಗೆ? ಅದು ಸಾಬ್ರು ಗೆ? ಹೆಂಗೆ ಗುರು ನೀವು?? ಮುಸ್ಲಿಂ ನಾ ಅಣ್ಣ ಅಂತ ಹೇಳ್ತಾ ಇದ್ದೀರಾ?? ನಿಜಾ ನಾ?ʼʼ ಎಂದು ಕೇಳಿದ್ದಾರೆ.

ನೀವು ಮತಕ್ಕಾಗಿ ಧರ್ಮ, ಕೋಮುವಾದ ಬಳಸಿಕೊಂಡವರು

ಒಬ್ಬ ಮುಸ್ಲಿಂ ನಿಮ್ಮ ಬಗ್ಗೆ ಕನಿಕರ ವ್ಯಕ್ತ ಪಡಿಸುತ್ತಿದ್ದಾರೆ, ಆದರೆ ನೀವಾದರೋ ಮತಗಳಾಗಿ ಧರ್ಮ ಮತ್ತು ಕೋಮುವಾದವನ್ನು ಬಳಸಿಕೊಂಡವರು. ಮೇಲೆ ಹೋದವನು ಕೆಳಗೆ ಇಳಿಯಲೇ ಬೇಕು. ಬದಲಾವಣೆ ಜಗದ ನಿಯಮ… ಧರ್ಮ ಒಂದು ದಿನ ತನ್ನ ಇರುವಿಕೆಯನ್ನು ತೋರಿಸುತ್ತದೆ. ಕಾಯಬೇಕು ಅಷ್ಟೇ.. ನಿಮ್ಮ ಸಮಯ ಬರುತ್ತಾ ಇದೆ.. ಎಂದು ಲಾರೆನ್ಸ್‌ ಮಿರಾಂಡ ಹೇಳಿದ್ದಾರೆ.

ಅಧಿಕ ಪ್ರಸಂಗಿ ಎಂದು ಹೆಸರಿಟ್ಟುಕೊಂಡಿರುವ ಇನ್ನೊಬ್ಬರು, ಹಾಗಾದರೆ, ನೀವಿಬ್ಬರೂ ಆತ್ಮೀಯ ಸ್ನೇಹಿತರಾಗಿದ್ದುಕೊಂಡೇ ಮೈಸೂರು-ಕೊಡಗು ಜನರಿಗೆ ಹಿಂದೂ- ಮುಸ್ಲಿಂ, ಟಿಪ್ಪು ಹನುಮ ಜಯಂತಿ ಮಹಿಷಾಸುರ ಅಂತ ಕೋಮು ವಿಷ ಹರಡ್ತಾ ಇದ್ರೀ? ಛೇ.. ನರೇಂದ್ರ ಮೋದಿ ಅವರಿಗೆ ಧನ್ಯವಾದಗಳು ನಿಮಗೆ ಟಿಕೆಟ್ ಕೊಡದೇ ಇದ್ದಿದ್ದಕ್ಕೆ. ಎಂದು ಕಾಲೆಳೆದಿದ್ದಾರೆ.

ಸೋತೆನೆಂದೆನಬೇಡ.. ಮತ್ತೆ ತೋರ್ಪುದು ನಾಳೆ.. ಪ್ರತಾಪ್‌ ಸಿಂಹಗೆ ಮಂಕುತಿಮ್ಮನ ನೆನಪು

ಇದೇ ವೇಳೆ ಟಿಕೆಟ್‌ ಕೈ ತಪ್ಪಿರುವುದರಿಂದ ಮಂಕಾಗಿರುವ ಪ್ರತಾಪ್‌ ಸಿಂಹ ಅವರು ಮಂಕು ತಿಮ್ಮನನ್ನು ನೆನಪಿಸಿಕೊಂಡಿದ್ದಾರೆ. ಡಿವಿಜಿ ಅವರ ಕಗ್ಗವೊಂದನ್ನು ಭಾವಾರ್ಥ ಸಹಿತ ಟ್ವೀಟ್‌ ಮಾಡಿರುವ ಅವರು ʻಸತ್ತೆನೆಂದೆನಬೇಡ, ಸೋತೆನೆಂದೆನಬೇಡʼ ಎಂದು ತನಗೆ ತಾನೇ ಸಾಂತ್ವನ ಹೇಳಿಕೊಂಡಿದ್ದಾರೆ.

ಸತ್ತೆನೆಂದೆನಬೇಡ, ಸೋತೆನೆಂದೆನಬೇಡ, ಬತ್ತಿತೆನ್ನೊಳು ಸತ್ತ್ವದೂಟೆಯೆನಬೇಡ
ಮೃತ್ಯುವೆನ್ನುವುದೊಂದು ತೆರೆಯಿಳಿತ, ತೆರೆಯೇರು, ಮತ್ತೆ ತೋರ್ಪುದು ನಾಳೆ
ಸೋಲು ಗೆಲುವು ಸ್ವಾಭಾವಿಕವೇ, ಒಂದು ಸೋಲಾಗಬಹುದು
ಒಂದು ಸಲ ಗೆಲುವಾಗಬಹುದು, ಇಂದು ಬಿದ್ದ ಅಲೆ ನಾಳೆ ಏಳುತ್ತದೆ
ಇಂದು ಬಂದ ಸೋಲು ನಾಳೆ ಗೆಲುವಾಗುತ್ತದೆ

ಎಂದು‌ ಎಕ್ಸ್‌ನಲ್ಲಿ ಪೋಸ್ಟ್‌ ಮಾಡಿದ್ದಾರೆ ಪ್ರತಾಪ್‌ ಸಿಂಹ.

ಅದರ ಅರ್ಥವನ್ನೂ ಅಲ್ಲೇ ವಿವರಿಸಲಾಗಿದೆ: ಬ್ರಹ್ಮವಸ್ತುವು ಆನಂದಪಡುವುದಕ್ಕೋಸ್ಕರ ಪ್ರಕೃತಿಯ ಮೂಲಕವಾಗಿ ಆಟವನ್ನು ನಡೆಸುತ್ತಿದೆ. ತ್ರಿಗುಣಗಳ ವ್ಯತ್ಯಾಸದಿಂದ ಸೋಲು, ಗೆಲವು ಸ್ವಾಭಾವಿಕವೇ. ಈ ಲೀಲೆ ಸತತವಾಗಿ ಕೊನೆಯಿಲ್ಲದೆ ನಡೆಯುತ್ತಿರುವುದರಿಂದ ಇಲ್ಲಿ ಒಂದು ಸಲ ಸೋಲಾಗಬಹುದು, ಇನ್ನೊಂದು ಸಲ ಗೆಲುವಾಗಬಹುದು. ಆದದ್ದರಿಂದ ಈ ತತ್ತ್ವವನ್ನು ಮನದಟ್ಟು ಮಾಡಿಕೊಂಡು, ನನ್ನ ಜೀವನ ಕೆಟ್ಟಿತು, ನಾನು ಸಾಧಿಸಬೇಕಾದದ್ದನ್ನು ಸಾಧಿಸದೆಯೇ ಸಾಯುತ್ತಿದ್ದೇನೆ, ನಾನು ಸೋತೆ. ನನ್ನ ಒಳಸತ್ಯ ಬತ್ತಿಹೋಗಿದೆ, ನಾನು ಕೆಲಸಕ್ಕೆ ಬಾರದವನಾದೆ ಎಂದು-ನಿರಾಸೆಯ ಮನೋಭಾವವನ್ನು ತಳೆಯುವುದು ತಪ್ಪು ಎನ್ನುತ್ತಾರೆ ತಿಮ್ಮಗುರು.

ಮೃತ್ಯು ಎಂಬುದು ಒಂದು ಅಲೆಯಂತೆ, ಅಲೆ ಮೇಲೇಳುತ್ತದೆ ಮತ್ತೆ ಬೀಳುತ್ತದೆ, ಇನ್ನೊಂದು ಸಲ ಏಳುತ್ತದೆ. ಹೀಗೆ ನಮ್ಮ ಜೀವನ ಒಂದೇ ಜನ್ಮದಲ್ಲಿ ಮುಗಿದುಹೋಗುವುದಿಲ್ಲ. ಇಂದು ಬಿದ್ದ ಅಲೆ ನಾಳೆ ಏಳುತ್ತದೆ. ಇಂದು ಬಂದ ಸೋಲು ನಾಳೆ ಗೆಲುವಾಗುತ್ತದೆ ಎನ್ನುತ್ತದಂತೆ ಈ ಕಗ್ಗ.. ಅಚ್ಚರಿ ಎಂದರೆ ಹಿಂದೊಮ್ಮೆ ಸಿ.ಟಿ. ರವಿ ಕೂಡಾ ಹಿಂದೆ ಇದೇ ಸಾಲು ನೆನಪಿಸಿಕೊಂಡಿದ್ದರು.

Exit mobile version