ಬೆಂಗಳೂರು: ಮುಡಾ ಹಗರಣ (MUDA Scam, MUDA case) ಸಂಬಂಧಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ (CM Siddaramaiah) ವಿರುದ್ಧ ಪ್ರಾಸಿಕ್ಯೂಶನ್‌ಗೆ (Prosecution) ಅನುಮತಿ ನೀಡಿರುವ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ (Governor Thawar Chand gehlot) ಅವರ ನಡೆಯನ್ನು ವಿರೋಧಿಸಿ ಕಾಂಗ್ರೆಸ್ (Congress protest) ಇಂದು ಹಮ್ಮಿಕೊಂಡಿರುವ ರಾಜ್ಯವ್ಯಾಪಿ ಬೃಹತ್ ಪ್ರತಿಭಟನೆಗೆ ವೇಗ ದೊರೆತಿದೆ. ಮುಂಜಾನೆಯಿಂದ ಕಾಂಗ್ರೆಸ್ ಕಾರ್ಯಕರ್ತರು ಎಲ್ಲೆಡೆ ಜಮಾಯಿಸಿ ರಾಜ್ಯಪಾಲರಿಗೆ ಧಿಕ್ಕಾರ ಕೂಗಿದರು. ರಾಜಧಾನಿಯಲ್ಲಿ ರಾಜಭವನಕ್ಕೆ ಮುತ್ತಿಗೆ ಹಾಕಲು ಯತ್ನಿಸಿದರು. ಫ್ರೀಡಂ ಪಾರ್ಕ್‌ನಲ್ಲಿ ಕಾಂಗ್ರೆಸ್ ನಾಯಕರು ಭಾಗವಹಿಸಿ ಧರಣಿ ಪ್ರತಿಭಟನೆ ನಡೆಸಿದರು.
ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಪ್ರತಿಭಟನೆಯಲ್ಲಿ ಡಿಕೆ ಶಿವಕುಮಾರ್, ಸಚಿವ ಜಮೀರ್ ಅಹ್ಮದ್, ದಿನೇಶ್ ಗುಂಡೂರಾವ್, ಬಿಕೆ ಹರಿಪ್ರಸಾದ್, ಯುಬಿ ವೆಂಕಟೇಶ್, ಸಲೀಂ ಅಹ್ಮದ್ ಸೇರಿದಂತೆ ಹಲವು ಕಾಂಗ್ರೆಸ್ ಮುಖಂಡರು, ಕೆಪಿಸಿಸಿ ಪದಾಧಿಕಾರಿಗಳು ಭಾಗಿಯಾಗಿದ್ದಾರೆ. ಫ್ರೀಡಂ ಪಾರ್ಕ್‌ನಲ್ಲಿ ಪ್ರತಿಭಟನೆ ಹಿನ್ನೆಲೆಯಲ್ಲಿ ಬಿಗಿ ಪೊಲೀಸ್ ಬಂದೋಬಸ್ತ್ ಹಾಕಲಾಗಿದೆ. ಮೂರು ಕೆಎಸ್‌ಆರ್‌ಪಿ ತುಕಡಿ, 100 ಮಹಿಳಾ ಪೊಲೀಸ್, 10 ಪಿಎಸ್‌ಐ, 5 ಪಿಐಗಳನ್ನು ಭದ್ರತೆಗೆ ನಿಯೋಜಿಸಲಾಗಿದೆ.
ಬೆಳ್ಳಂಬೆಳಗ್ಗೆಯೇ ರಾಜ್ಯಾದ್ಯಂತ ಕಾಂಗ್ರೆಸ್ ಕಾರ್ಯಕರ್ತರು ರಸ್ತೆಗಿಳಿದಿದ್ದಾರೆ. ರಾಜ್ಯಪಾಲರ ವಿರುದ್ಧ ಬೀದಿಗಿಳಿದಿದ್ದು, ರಾಜಧಾನಿಯಲ್ಲಿ ರಾಜಭವನ ಮುತ್ತಿಗೆಗೆ ಕೈ ಕಾರ್ಯಕರ್ತರು ಯತ್ನಿಸಿದರು. ರಾಜ್ಯಪಾಲರ ವಿರುದ್ಧ ದಿಕ್ಕಾರ ಕೂಗಿ ಆಕ್ರೋಶ ವ್ಯಕ್ತಪಡಿಸಿದರು. ರಾಜಭವನಕ್ಕೆ ಮುತ್ತಿಗೆಗೆ ಯತ್ನಿಸಿದ ಕಾರ್ಯಕರ್ತರನ್ನು ಪೊಲೀಸರು ವಶಕ್ಕೆ ಪಡೆದರು. ʼಗವರ್ನರ್ ಗೋ ಬ್ಯಾಕ್ʼ ಎಂದು ಕೈ ಕಾರ್ಯಕರ್ತರು ಘೋಷಣೆ ಕೂಗಿದರು.
ʼಷಡ್ಯಂತ್ರಕ್ಕೆ ಸವಾಲ್ʼ ಎಂಬ ಹೆಸರಿನಲ್ಲಿ ಇಂದು ರಾಜ್ಯಾದ್ಯಂತ ಕಾಂಗ್ರೆಸ್ ಪ್ರತಿಭಟನೆ ಆಯೋಜಿಸಿದ್ದು, ರಾಜ್ಯಪಾಲರ, ಬಿಜೆಪಿ- ಜೆಡಿಎಸ್ ವಿರುದ್ಧ ಬೃಹತ್ ಪ್ರತಿಭಟನೆಯನ್ನು ಜಿಲ್ಲಾ ಕೇಂದ್ರಗಳಲ್ಲಿ ಆಯೋಜನೆ ಮಾಡಿದೆ. ಕನಿಷ್ಠ ಅರ್ಧ ಕಿಲೋಮೀಟರ್ ಪಾದಯಾತ್ರೆ ಮೂಲಕ ಪ್ರೊಟೆಸ್ಟ್ ಮಾಡಲಿದೆ. ಪ್ರತಿಭಟನೆ ಬಳಿಕ ರಾಜ್ಯಪಾಲರ ವಿರುದ್ಧ ರಾಷ್ಟ್ರಪತಿಗಳಿಗೆ ಆಯಾ ಜಿಲ್ಲಾಧಿಕಾರಿಗಳ ಮೂಲಕ ಮನವಿ ಸಲ್ಲಿಸಲಿದೆ. ರಾಜ್ಯಪಾಲರು ಅಧಿಕಾರ ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಕಾಂಗ್ರೆಸ್ ಆಕ್ಷೇಪಿಸಿದೆ.
ತನಿಖೆಗೆ ಹೈಕೋರ್ಟ್‌ನಲ್ಲಿ ತಡೆಯಾಜ್ಞೆ ಕೋರಿದ ಸಿಎಂ, ಇಂದು ಮಧ್ಯಾಹ್ನ ವಿಚಾರಣೆ
ಬೆಂಗಳೂರು: ಮುಡಾ ಹಗರಣಕ್ಕೆ ಸಂಬಂಧಿಸಿ ತಮ್ಮ ವಿರುದ್ಧ ಪ್ರಾಸಿಕ್ಯೂಶನ್ ಆರಂಭಿಸಲು ಅನುಮತಿ ನೀಡಿರುವ ರಾಜ್ಯಪಾಲರ ಕ್ರಮವನ್ನು ಸಿಎಂ ಸಿದ್ದರಾಮಯ್ಯ ಪ್ರಶ್ನಿಸಿ ಹೈಕೋರ್ಟ್‌ನಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಪ್ರಾಸಿಕ್ಯೂಶನ್‌ಗೆ ಅವರು ತಡೆಯಾಜ್ಞೆ ಕೋರಿದ್ದು, ಅರ್ಜಿಯ ವಿಚಾರಣೆ ಮಧ್ಯಾಹ್ನ 2.30ಕ್ಕೆ ನಡೆಯಲಿದೆ.
ಪ್ರಾಸಿಕ್ಯೂಶನ್‌ಗೆ ತಡೆ ಕೋರಿ ನ್ಯಾಯಮೂರ್ತಿ ಹೇಮಂತ್ ಚಂದನ್ ಗೌಡರ್ ಪೀಠದ ಮುಂದೆ ಸಿಎಂ ಪರ ವಕೀಲ ಶತಭೀಷ್ ಶಿವಣ್ಣ ಅವರಿಂದ ಅರ್ಜಿ ಸಲ್ಲಿಕೆಯಾಯಿತು. ತ್ವರಿತವಾಗಿ ಅರ್ಜಿ ವಿಚಾರಣೆ ನಡೆಸುವಂತೆ ವಕೀಲರು ಮನವಿ ಮಾಡಿಕೊಂಡರು. ನ್ಯಾಯಮೂರ್ತಿಗಳು ವಿಚಾರಣೆಯನ್ನು ಮಧ್ಯಾಹ್ನ 2.30ಕ್ಕೆ ಮುಂದೂಡಿದರು.
ರಾಜ್ಯಪಾಲರ ಅನುಮತಿ ರದ್ದುಪಡಿಸಲು ಕೋರಿ ಸಿದ್ದರಾಮಯ್ಯ ಅವರ ಹೈಕೋರ್ಟ್‌ಗೆ ರಿಟ್ ಅರ್ಜಿ ಸಲ್ಲಿಸಿದ್ದಾರೆ. ರಾಜ್ಯಪಾಲರ ವಿಶೇಷ ಕಾರ್ಯದರ್ಶಿ, ಮುಖ್ಯ ಕಾರ್ಯದರ್ಶಿ ಹಾಗೂ ಮೂವರು ದೂರುದಾರರನ್ನು ಪ್ರತಿವಾದಿಗಳನ್ನಾಗಿಸಿ ಅರ್ಜಿ ಸಲ್ಲಿಸಲಾಗಿದೆ. ರಾಜ್ಯಪಾಲರು ಅನುಮತಿ ನೀಡುವ ಮುನ್ನ ಕಾನೂನಿನ ಪ್ರಕ್ರಿಯೆ ಪಾಲಿಸಿಲ್ಲ. ಸಚಿವ ಸಂಪುಟದ ಶಿಫಾರಸಿಗೆ ವಿರುದ್ಧವಾಗಿ ನಡೆದುಕೊಂಡಿದ್ದಾರೆ. ಸಂವಿಧಾನದ 163ನೇ ವಿಧಿಯಂತೆ ಸಚಿವ ಸಂಪುಟದ ಶಿಫಾರಸು ಪಾಲಿಸಬೇಕು. ಅನುಮತಿಗೆ ಮುನ್ನ ದಾಖಲೆಗಳನ್ನು ಪರಿಶೀಲಿಸಿಲ್ಲ ಎಂದು ಸಿಎಂ ಸಿದ್ದರಾಮಯ್ಯ ಪರ ಹಿರಿಯ ವಕೀಲ ರವಿವರ್ಮ ಕುಮಾರ್ ವಾದಿಸಿದರು.
ತುರ್ತು ವಿಚಾರಣೆಯ ಅಗತ್ಯವಿದೆ. ಕೇವಿಯಟ್ ಸಲ್ಲಿಸಿದವರಿಗೆ ಮಾಹಿತಿ ನೀಡಲಾಗಿದೆ. ರಾಜ್ಯಪಾಲರ ಕಚೇರಿಗೂ ಅರ್ಜಿಯ ಪ್ರತಿ ಸಲ್ಲಿಸಲಾಗಿದೆ ಎಂದು ವಕೀಲರು ತಿಳಿಸಿದರು. ಮಧ್ಯಾಹ್ನ 2.30ಕ್ಕೆ ವಿಚಾರಣೆ ನಿಗದಿಪಡಿಸಲು ಹೈಕೋರ್ಟ್ ಒಪ್ಪಿಗೆ ನೀಡಿತು.
ಇದನ್ನೂ ಓದಿ: CM Siddaramaiah: ಆ.23ಕ್ಕೆ ಸಿಎಂ ಸಿದ್ದರಾಮಯ್ಯ ದೆಹಲಿಗೆ; ಕಾನೂನು ಹೋರಾಟಕ್ಕೆ ಹೈ ಕಮಾಂಡ್ ಬೆಂಬಲ ಕೋರಲು ಭೇಟಿ