Site icon Vistara News

MUDA Scam: ಸಿಎಂಗೆ ಕಳಿಸಿದ ರಾಜ್ಯಪಾಲರ ನೋಟೀಸ್‌ ತಿರಸ್ಕರಿಸಿದ ಕ್ಯಾಬಿನೆಟ್‌, ಕಾನೂನು ಹೋರಾಟಕ್ಕೆ ನಿರ್ಣಯ

muda scam cm siddaramaiah

ಬೆಂಗಳೂರು: ಮುಡಾ ಹಗರಣ (MUDA Scam) ಸಂಬಂಧಿಸಿ ವಿವರಣೆ ಕೇಳಿ ರಾಜ್ಯ ಸರ್ಕಾರದ ಪ್ರಧಾನ ಕಾರ್ಯದರ್ಶಿಗೆ ನೋಟೀಸ್‌ ಕಳಿಸಿದ ರಾಜ್ಯಪಾಲರ (Governor) ನಡೆಯನ್ನು ಖಂಡಿಸಿ ರಾಜ್ಯ ಸಚಿವ ಸಂಪುಟ (Cabinet) ನಿರ್ಣಯ ಪಾಸ್‌ ಮಾಡಿದೆ. ಈ ಬಗ್ಗೆ ವಿಸ್ತೃತವಾದ ಉತ್ತರವನ್ನು ಕ್ಯಾಬಿನೆಟ್‌ ತಯಾರು ಮಾಡುತ್ತಿದ್ದು, ಅದನ್ನು ರಾಜಭವನಕ್ಕೆ (Rajbhavan) ಕಳಿಸಲು ನಿರ್ಧರಿಸಿದೆ.

ರಾಜ್ಯಪಾಲರ ನಡೆಯ ವಿರುದ್ಧ ಸಂದೇಶ ರಾಜಭವನಕ್ಕೆ ಕಳುಹಿಸಲು ನಿರ್ಧರಿಸಲಾಗಿದ್ದು, ಬಳಿಕ ಕಾನೂನಾತ್ಮಕ ಹೋರಾಟಕ್ಕೆ ಸಿದ್ಧತೆ ನಡೆಸಲು ತೀರ್ಮಾನಿಸಲಾಗಿದೆ. ರಾಜ್ಯಪಾಲರ ನೊಟೀಸ್‌ಗೆ ಸಂಪುಟ ಸಭೆ ತೀವ್ರ ಅತೃಪ್ತಿ ವ್ಯಕ್ತಪಡಿಸಿದ್ದು, ನೋಟೀಸ್‌ನಲ್ಲಿ ಬಳಸಿದ ಪದ ಮತ್ತು ಒಕ್ಕಣಿಕೆಗೆ ಆಕ್ಷೇಪ ವ್ಯಕ್ತಪಡಿಸಿದೆ. ರಾಜ್ಯಪಾಲರ ಸ್ಥಾನ ರಾಜಕೀಯ ದುರುಪಯೋಗದ ಹಾದಿಯಲ್ಲಿರುವ ಬಗ್ಗೆ ಅನುಮಾನ ಮೂಡಿದೆ ಎಂದು ಆಕ್ಷೇಪಿಸಿದೆ. ನೋಟೀಸ್‌ ಅನ್ನು ಪದ ಮತ್ತು ಒಕ್ಕಣಿಕೆ ಸಹಿತ ವಾಪಸ್ ಪಡೆಯಬೇಕು. ಇಲ್ಲವೇ ಕಾನೂನು ಹೋರಾಟ ನಡೆಸಲು ಸಹ ಸಂಪುಟ ಸಭೆಯಲ್ಲಿ ನಿರ್ಣಯಿಸಲಾಗಿದೆ.

ವಿವರವಾದ ಉತ್ತರ ನೀಡುವ ಹಿನ್ನೆಲೆಯಲ್ಲಿ ಮುಡಾ ದಾಖಲೆಗಳನ್ನು ಸಚಿವ ಸಂಪುಟ ಸಭೆಗೆ ತರಿಸಿಕೊಳ್ಳಲಾಯಿತು. 25 ಸ್ಪೈರಲ್ ಬೈಂಡ್ ಬುಕ್‌ಗಳನ್ನು ಸಭೆಗೆ ಕರೆಸಿಕೊಂಡ ಸಚಿವರು, ಯಾರಿಗೆಲ್ಲಾ ಸೈಟುಗಳ ಹಂಚಿಕೆಯಾಗಿದೆ ಎಂಬ ಸಂಪೂರ್ಣ ವಿವರ ತರಿಸಿಕೊಂಡು ಚರ್ಚೆ ನಡೆಸಿದರು. ಮುಡಾ ನಡವಳಿಗಳ ಸಂಪೂರ್ಣ ವಿವರ ತರಿಸಿಕೊಂಡು ಚರ್ಚೆ ಮಾಡಲಾಯಿತು. ಸುದೀರ್ಘ ವಿವರಣೆ ಸಹಿತ ನಿರ್ಣಯ ಕೈಗೊಳ್ಳಲಿದ್ದು, ಈ ಬಗ್ಗೆ ಕಾನೂನು ಇಲಾಖೆಯಿಂದ ಟಿಪ್ಪಣಿ ತರಿಸಿಕೊಳ್ಳಲಾಗಿದೆ.

ಇಂದಿನ ಕ್ಯಾಬಿನೆಟ್‌ ಸಭೆಯಲ್ಲಿ ಸಿಎಂ ಸಿದ್ದರಾಮಯ್ಯ (CM Siddaramaiah) ಭಾಗವಹಿಸಲಿಲ್ಲ. ಡಿಸಿಎಂ ಡಿಕೆ ಶಿವಕುಮಾರ್‌ (DCM DK Shivakumar) ಅವರ ನೇತೃತ್ವದಲ್ಲಿ ಸಭೆ ನಡೆಯಿತು. ಸಭೆ ಮುಖ್ಯಮಂತ್ರಿಗಳಿಗೆ ಸಂಪೂರ್ಣ ಬೆಂಬಲ ವ್ಯಕ್ತಪಡಿಸಿತು. ಸಿಎಂ ವಿರುದ್ಧ ಕೇಳಿ ಬಂದಿರುವ ಆರೋಪವಾದ್ದರಿಂದ, ಅವರೇ ಸಭೆಯಲ್ಲಿ ಭಾಗಿಯಾದರೆ ಕಾನೂನಾತ್ಮಕವಾಗಿ ಪ್ರಕರಣ ನಿಲ್ಲುವುದಿಲ್ಲ ಎಂಬ ಅಭಿಪ್ರಾಯ ವ್ಯಕ್ತವಾದುದರಿಂದ, ಕಾನೂನು ತಜ್ಞರ ಅಭಿಪ್ರಾಯದ ಹಿನ್ನೆಲೆಯಲ್ಲಿ ಸಿಎಂ ಕ್ಯಾಬಿನೆಟ್‌ನಿಂದ ದೂರ ಉಳಿದರು. ಕ್ಯಾಬಿನೆಟ್‌ ಸಭೆಗೂ ಮುನ್ನ ಸಿಎಂ ತಮ್ಮ ಸಂಪುಟ ಸದಸ್ಯರ ಜೊತೆಗೆ ಬ್ರೇಕ್‌ಫಾಸ್ಟ್‌ ಮೀಟಿಂಗ್‌ ನಡೆಸಿ ಮುಂದಿನ ನಡೆಯ ರೂಪುರೇಷೆ ನಿರ್ಧರಿಸಿದರು.

ಕ್ಯಾಬಿನೆಟ್‌ ನಿರ್ಣಯ ರಾಜಭವನ ಮುಟ್ಟಿದ ತಕ್ಷಣ ರಾಜ್ಯಪಾಲರು ಮುಂದಿನ ನಡೆ ಕೈಗೊಳ್ಳಬಹುದು ಎಂದು ತರ್ಕಿಸಲಾಗಿದೆ. ಸರ್ಕಾರದ ನಡೆಗೆ ಅಸಮಾಧಾನ ವ್ಯಕ್ತಪಡಿಸುವ ಸಾಧ್ಯತೆಯೇ ಹೆಚ್ಚಾಗಿದೆ. ಈಗಾಗಲೇ ಪ್ರಾಸಿಕ್ಯೂಷನ್‌ಗೆ ಅನುಮತಿ ಕೇಳಿರುವ ಸಾಮಾಜಿಕ ಹೋರಾಟಗಾರ ಟಿ.ಜೆ ಅಬ್ರಹಾಂಗೆ ಕೇಸು ದಾಖಲಿಸಲು ಅವರು ಅನುಮತಿ ಕೊಡುವುದು ಖಚಿತ.

ಇಂದು ದಿಲ್ಲಿಯಲ್ಲಿ ರಾಜ್ಯಪಾಲರುಗಳ ಕಾನ್ಫರೆನ್ಸ್‌ನಲ್ಲಿ ಥಾವರ್ ಚಂದ್ ಗೆಲ್ಹೋಟ್ ಭಾಗವಹಿಸಿದ್ದಾರೆ. ಸೋಮವಾರ ಬೆಂಗಳೂರಿಗೆ ವಾಪಸು ಆಗಲಿರುವ ರಾಜ್ಯಪಾಲರು, ಬಂದ ಬಳಿಕ ಬಹುತೇಕ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡುವ ಸಾಧ್ಯತೆ ಇದೆ.

ಈ ಹಿಂದೆ ಬಿಜೆಪಿ ನಾಯಕರ ವಿರುದ್ಧ ದೂರು ದಾಖಲು ಆಗಿವೆ. ಆ ದೂರುಗಳ ಬಗ್ಗೆ ರಾಜ್ಯಪಾಲರು ಯಾವುದೇ ಕ್ರಮ ಕೈಗೊಂಡಿಲ್ಲ. ಮುಡಾ ಪ್ರಕರಣದಲ್ಲಿ ದೂರು ದಾಖಲು ಆಗಿರುವ ದಿನವೇ ಮುಖ್ಯ ಕಾರ್ಯದರ್ಶಿಗೆ ನೋಟೀಸ್ ನೀಡಲಾಗಿದೆ. ಯಾಕಿಷ್ಟು ಆತುರದ ನೋಟೀಸ್? ಇದು ರಾಜಕೀಯ ಪ್ರೇರಿತ ಎಂದು ಸಚಿವ ಸಂಪುಟ ಹೇಳಿದೆ.

ನೋಟೀಸ್‌ ತಿರಸ್ಕರಿಸಿದ್ದೇವೆ: ಸಂತೋಷ್‌ ಲಾಡ್‌

ಸಚಿವ ಸಂತೋಷ್ ಲಾಡ್ ಈ ಬಗ್ಗೆ ಹೇಳಿಕೆ ನೀಡಿದ್ದು, ʼರಾಜ್ಯಪಾಲರ ಶೋಕಾಸ್ ನೋಟೀಸ್ ತಿರಸ್ಕರಿಸಿ ನಿರ್ಣಯ ಮಾಡಿದ್ದೇವೆʼ ಎಂದಿದ್ದಾರೆ. ಈ ಹಿಂದಿನ ಪ್ರಕರಣಗಳ ಬಗ್ಗೆ ಚರ್ಚೆ ಮಾಡಿದ್ದೇವೆ. ರಾಜ್ಯಪಾಲರು ಯಾವಾಗ ಪ್ರಾಸಿಕ್ಯೂಷನ್‌ಗೆ ಅನುಮತಿ ಕೊಡಬಹುದು ಅನ್ನೋ ಬಗ್ಗೆ ಸಹ ಚರ್ಚೆ ಆಗಿದೆ. ಮುಡಾ ಕೇಸ್‌ನಲ್ಲಿ ಮೂರು ವಿಚಾರಗಳ ಬಗ್ಗೆ ಚರ್ಚೆ ಆಗಿದೆ. ಮುಡಾ ನಿವೇಶನ ಹಂಚಿಕೆ ಆಗಿದ್ದು ಯಾವಾಗ, ಎಷ್ಟು ನಿವೇಶನ ಪಡೆದಿದ್ದಾರೆ, ಅಧಿಕಾರ ದುರುಪಯೋಗ ಆಗಿದೆಯಾ, ಸಿದ್ದರಾಮಯ್ಯ ಅವರ ಪಾತ್ರದ ಬಗ್ಗೆ ಚರ್ಚೆ ಆಗಿದೆ. ರಾಜ್ಯಪಾಲರು ದೆಹಲಿಯಲ್ಲಿ ಕೇಂದ್ರ ನಾಯಕರನ್ನು ಭೇಟಿ ಮಾಡಿ ಬಂದಿರುವ ಮಾಹಿತಿ ನಮಗೆ ಇದೆ ಎಂದು ಲಾಡ್‌ ಹೇಳಿದ್ದಾರೆ.

ಇದನ್ನೂ ಓದಿ: CM Siddaramaiah: ಮುಡಾ ಹಗರಣ ವಿಚಾರದಲ್ಲಿ ರಾಜ್ಯಪಾಲರಿಂದ ಸಿಎಂ ಸಿದ್ದರಾಮಯ್ಯ ಸರ್ಕಾರಕ್ಕೆ‌ ನೋಟೀಸ್

Exit mobile version