ಮೈಸೂರು: ಪೊಲೀಸರು ಬಂಧನ ಮಾಡುವ ಸಾಧ್ಯತೆ ಹಿನ್ನೆಲೆಯಲ್ಲಿ ತರಕಾರಿ ಗೂಡ್ಸ್ ಆಟೋದಲ್ಲಿ ಬಚ್ಚಿಟ್ಟುಕೊಂಡು ಮೈಸೂರಿಗೆ ಆಗಮಿಸಿದ ವಿಪಕ್ಷ ನಾಯಕ ಆರ್. ಅಶೋಕ್ (R Ashok), ಬಿಜೆಪಿ ಪ್ರತಿಭಟನೆಯಲ್ಲಿ (BJP Protest) ಭಾಗವಹಿಸಿದ್ದಾರೆ. ಮುಡಾ ಹಗರಣ (MUDA Scam) ವಿರೋಧಿಸಿ ಬಿಜೆಪಿ (BJP) ಇಂದು ಮೈಸೂರಿನಲ್ಲಿ ಮೆಗಾ ಪ್ರತಿಭಟನೆ ಹಮ್ಮಿಕೊಂಡಿದೆ.
ಮೈಸೂರಿನಲ್ಲಿ ನಡೆದ ಪ್ರತಿಭಟನೆಗೆ ವಿಪಕ್ಷ ನಾಯಕ ಆರ್. ಅಶೋಕ್ ಹಾಗೂ ಶಾಸಕ ಅಶ್ವಥ್ ನಾರಾಯಣ್ ಗೂಡ್ಸ್ ಆಟೋದಲ್ಲಿ ಬಚ್ಚಿಟ್ಟುಕೊಂಡು ಆಗಮಿಸಿದರು. ಈ ನಡುವೆ, ಕಾರ್ಯಕರ್ತರ ಗುಂಪಿನೊಡನೆ ಮೈಸೂರಿಗೆ ಹೊರಟಿದ್ದ ಪಕ್ಷ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರನ್ನು ಬಿಡದಿ ಬಳಿಯೇ ಪೊಲೀಸರು ಬಂಧಿಸಿ ತಡೆದಿದ್ದಾರೆ.
ಬ್ರಹ್ಮಾಂಡ ಭ್ರಷ್ಟಾಚಾರಿ ಸಿದ್ದರಾಮಯ್ಯ: ಅಶೋಕ್
ಸಿಎಂ ಸಿದ್ದರಾಮಯ್ಯ ಈ ದೇಶ ಕಂಡ ಬ್ರಹ್ಮಾಂಡ ಭ್ರಷ್ಟಾಚಾರಿ ಎಂದು ಅಶೋಕ್ ಆರೋಪಿಸಿದರು. ಮೈಸೂರಿನಲ್ಲಿ ಸೈಟು ಬೇಕು ಅಂತ 80 ಸಾವಿರ ಜನ ಅರ್ಜಿ ಹಾಕಿದ್ದಾರೆ. ಸಿಎಂ ಸಿದ್ದರಾಮಯ್ಯ ಕುಟುಂಬ ಹಾಗೂ ಬೆಂಬಲಿಗರಿಗೆ ಮಾತ್ರ ಸೈಟ್ ಕೊಟ್ಟಿದ್ದಾರೆ. ಜನರಿಗೆ ಸೈಟು ಕೊಡಲು ಆಗಲ್ಲ. ಇವರಿಗೆಲ್ಲ ಹೇಗೆ ಸೈಟು ಕೊಡ್ತಾರೆ? ಮುಡಾದಲ್ಲಿ ಬೃಹತ್ ಹಗರಣವೇ ನಡೆದಿದೆ. ಸಿದ್ದರಾಮಯ್ಯ ರಾಜೀನಾಮೆ ನೀಡಡಬೇಕು ಎಂದು ಅಶೋಕ್ ಆಗ್ರಹಿಸಿದರು.
ನಮಗೆ ಅಂಜಿ ನಮ್ಮ ಪ್ರತಿಭಟನೆ ಹತ್ತಿಕ್ಕಲು ಯತ್ನ ಮಾಡಿದ್ದಾರೆ. ನಾನು ಪೊಲೀಸರ ಕಣ್ಣು ತಪ್ಪಿಸಿ ತರಕಾರಿ ಟೆಂಪೋದಲ್ಲಿ ಬಂದೆ. ನಮ್ಮ ಉದ್ದೇಶ ಸಾರ್ವಜನಿಕರಿಗೆ ಆಗುತ್ತಿರುವ ಅನ್ಯಾಯ ಬಯಲಿಗೆ ಬರಬೇಕು ಅನ್ನುವುದು. ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ನೇರ ಪಾತ್ರ ಇದೆ. 50:50 ಬೋಗಸ್ ಮಾಡಿ ಅಕ್ರಮ ಮಾಡಿದ್ದಾರೆ. ಬದಲಿ ನಿವೇಶನ ಪಡೆದು ವಂಚನೆ ಮಾಡಿದ್ದಾರೆ. ಪ್ರಭಾವ ಬಳಸಿ ಸೈಟು ಪಡೆದಿದ್ದಾರೆ. ನಮ್ಮ ಹೋರಾಟ ಹತ್ತಿಕ್ಕುವ ಯತ್ನ ಮಾಡಿದ್ದಾರೆ. ನಮ್ಮ ಅಧ್ಯಕ್ಷರನ್ನು ಬೆಂಗಳೂರಿನಲ್ಲಿ ಬಂಧಿಸಿದ್ದಾರೆ ಎಂದು ಸಿಎಂ ಸಿದ್ದರಾಮಯ್ಯ ಸರ್ಕಾರದ ವಿರುದ್ಧ ಪ್ರತಿಪಕ್ಷ ನಾಯಕ ಆರ್.ಅಶೋಕ್ ಕಿಡಿ ಕಾರಿದರು.
ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ವಿಜಯೇಂದ್ರ ಬಂಧನ
ಬೆಂಗಳೂರು: ಮೈಸೂರು ಅಭಿವೃದ್ಧಿ ಪ್ರಾಧಿಕಾರದ ಜಮೀನು ಹಗರಣ (MUDA Scam) ಸಂಬಂಧಿಸಿ ಇಂದು ಮೈಸೂರಿನಲ್ಲಿ (Mysore) ಬೃಹತ್ ಪ್ರತಿಭಟನೆ (BJP Protest) ಹಮ್ಮಿಕೊಂಡಿರುವ ಬಿಜೆಪಿಯ ನಾಯಕರನ್ನು (BJP leaders) ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ (Bangalore Mysore highway) ಪೊಲೀಸರು ತಡೆದು ಬಂಧಿಸಿದ್ದಾರೆ.
ಮುಡಾ ಹಗರಣ ವಿರೋಧಿಸಿ ಪ್ರತಿಭಟನೆಗೆ ಮೈಸೂರಿಗೆ ಹೊರಟ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ, ಮುನಿರತ್ನ ಮುಂತಾದ ನಾಯಕರನ್ನು ಬೆಂಗಳೂರು- ಮೈಸೂರು ಹೆದ್ದಾರಿಯಲ್ಲಿ ಪೊಲೀಸರು ತಡೆದರು. ಈ ಸಂದರ್ಭದಲ್ಲಿ ಕಣಮಿಣಕಿ ಟೋಲ್ ಬಳಿ ರಸ್ತೆ ತಡೆದು ಬಿಜೆಪಿ ನಾಯಕರು ಪ್ರತಿಭಟಿಸಿದರು. ಆಗ ಪೊಲೀಸರು ಬಿಜೆಪಿ ನಾಯಕರನ್ನು ಬಂಧಿಸಿ ಬಿಡದಿ ಪೊಲೀಸ್ ಠಾಣೆಗೆ ಕರೆದೊಯ್ದರು. ಬಿಡದಿ ಪೊಲೀಸ್ ಠಾಣೆ ಮುಂದೆಯೂ ಬಿಜೆಪಿ ನಾಯಕರು ಪ್ರತಿಭಟನೆ ನಡೆಸಿದರು.
ಈ ನಡುವೆ, ಮೈಸೂರಿಗೆ ಪ್ರತಿಭಟನೆಗಾಗಿ ಬೆಂಗಳೂರು ಹಾಗೂ ರಾಮನಗರ ಮುಂತಾದ ಕಡೆಗಳಿಂದ ಬಿಜೆಪಿ ಕಾರ್ಯಕರ್ತ ಹೊರಟಿದ್ದಾರೆ. ಆದರೆ ಪೊಲೀಸರು ಅವರನ್ನು ಹೆದ್ದಾರಿಯಲ್ಲಿಯೇ ತಡೆದು ವಾಪಸ್ ಕಳಿಸಲು ಮುಂದಾಗಿದ್ದಾರೆ. ಇದರಿಂದ ರೊಚ್ಚಿಗೆದ್ದ ಕಾರ್ಯಕರ್ತರು ರಸ್ತೆಯಲ್ಲೇ ಕುಳಿತು ಪ್ರತಿಭಟಿಸುತ್ತಿದ್ದಾರೆ.
ಇದನ್ನೂ ಓದಿ: BY Vijayendra: 12ರಂದು ಮೈಸೂರಿನಲ್ಲಿ ಬಿಜೆಪಿಯಿಂದ ಬೃಹತ್ ಪ್ರತಿಭಟನೆ; ಸಿಎಂ ರಾಜೀನಾಮೆ, ಸಿಬಿಐ ತನಿಖೆಗೆ ವಿಜಯೇಂದ್ರ ಆಗ್ರಹ