Site icon Vistara News

Actor Darshan: ಕೊಲೆ ಕೇಸ್‌ನಲ್ಲಿ ಚಾಲೆಂಜಿಂಗ್‌ ಸ್ಟಾರ್ ದರ್ಶನ್‌ ಬಂಧನ; ಏನಿದು ಪ್ರಕರಣ?

Actor Darshan

Murder Case: Challenging Star Darshan Arrested In Mysore

ಮೈಸೂರು: ವ್ಯಕ್ತಿಯೊಬ್ಬರ ಕೊಲೆ ಪ್ರಕರಣದಲ್ಲಿ ಸ್ಯಾಂಡಲ್‌ವುಟ್‌ ನಟ, ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ (Actor Darshan) ಅವರನ್ನು ಪೊಲೀಸರು ಬಂಧಿಸಿದ್ದಾರೆ. ಮೈಸೂರಿನಲ್ಲಿರುವ (Mysore) ದರ್ಶನ್‌ ಅವರ ತೋಟದ ಮನೆಯಲ್ಲಿ ಬೆಂಗಳೂರಿನ ಪೊಲೀಸರು ದರ್ಶನ್‌ ಅವರನ್ನು ಬಂಧಿಸಿದ್ದಾರೆ. ನಟನನ್ನು ಬಂಧಿಸಿರುವ (Actor Darshan Arrested) ಪೊಲೀಸರು ಬೆಂಗಳೂರಿಗೆ ಕರೆದುಕೊಂಡು ಬರುತ್ತಿದ್ದಾರೆ ಎಂದು ತಿಳಿದುಬಂದಿದೆ. ಪ್ರಕರಣಕ್ಕೆ ಸಂಬಂಧಿಸಿದಂತೆ ದರ್ಶನ್‌ ಜತೆಗೆ 10 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ತಿಳಿದುಬಂದಿದೆ.

ನಟಿ ಪವಿತ್ರಾ ಗೌಡ ಅವರಿಗೆ ಅಶ್ಲೀಲವಾಗಿ ಮೆಸೇಜ್‌ ಮಾಡಿದ ಹಿನ್ನೆಲೆಯಲ್ಲಿ ರೇಣುಕಾಸ್ವಾಮಿ ಎಂಬುವರ ಮೇಲೆ ಎರಡು ತಿಂಗಳ ಹಿಂದೆ ದರ್ಶನ್‌ ಸೇರಿ ಹಲವರು ಹಲ್ಲೆ ನಡೆಸಿದ್ದು, ಇದಾದ ಬಳಿಕ ರೇಣುಕಾಸ್ವಾಮಿ ಮೃತಪಟ್ಟಿದ್ದರು. ನಟ ದರ್ಶನ್‌ ಸೇರಿ ಹಲವರು ರೇಣುಕಾಸ್ವಾಮಿ ಅವರ ಮರ್ಮಾಂಗಕ್ಕೆ ಹೊಡೆದು, ಒದ್ದು ಹಲ್ಲೆ ನಡೆಸಿದ್ದರು. ಕೊಲೆ ಮಾಡಿದ ಆರೋಪಿಗಳ ಜತೆ ದರ್ಶನ್‌ ನಿರಂತರವಾಗಿ ಸಂಪರ್ಕದಲ್ಲಿದ್ದರು ಎಂಬ ಆರೋಪ ಕೇಳಿಬಂದಿತ್ತು. ಈ ಪ್ರಕರಣದಲ್ಲಿ ಈಗ ಪೊಲೀಸರು ದರ್ಶನ್‌ ಅವರನ್ನು ಬಂಧಿಸಿದ್ದಾರೆ. ಪ್ರಕರಣಕ್ಕೆ ಸಂಬಂಧಿಸಿದಂತೆ ಪಶ್ಚಿಮ ವಿಭಾಗದ ಡಿಸಿಪಿ ಗಿರೀಶ್‌ ಮಾಹಿತಿ ನೀಡಿದ್ದು, “ಕೊಲೆ ಪ್ರಕರಣದ ಹಿನ್ನೆಲೆಯಲ್ಲಿ ವಿಚಾರಣೆಗಾಗಿ ದರ್ಶನ್‌ ಅವರನ್ನು ಕರೆತರಲಾಗಿದೆ” ಎಂದು ತಿಳಿಸಿದ್ದಾರೆ.

ಹತ್ಯೆಗೀಡಾದ ಯುವಕ.

ಮೆಡಿಕಲ್‌ ಶಾಪ್‌ನಲ್ಲಿ ಕೆಲಸ ಮಾಡುತ್ತಿದ್ದ ಚಿತ್ರದುರ್ಗ ಮೂಲದ ರೇಣುಕಾಸ್ವಾಮಿ ಅವರು ನಟಿ ಪವಿತ್ರಾ ಗೌಡ ಅವರಿಗೆ ಮೆಸೇಜ್‌ ಮಾಡಿದ್ದರು. ಇದರಿಂದ ಕುಪಿತಗೊಂಡಿದ್ದ ದರ್ಶನ್‌ ಅವರು ಹಲವರೊಂದಿಗೆ ತೆರಳಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ್ದರು ಎಂದು ತಿಳಿದುಬಂದಿತ್ತು. ಕೊಲೆ ಕುರಿತು ಬೆಂಗಳೂರಿನ ಕಾಮಾಕ್ಷಿಪಾಳ್ಯ ಪೊಲೀಸ್‌ ಠಾಣೆಯಲ್ಲಿ ದೂರು ದಾಖಲಾಗಿತ್ತು. ಎರಡು ತಿಂಗಳ ಹಿಂದೆ ಹತ್ಯೆ ಮಾಡಲಾಗಿತ್ತು.

ಕೊಲೆ ಕೇಸ್‌ನಲ್ಲಿ ದಾಖಲಾಗಿದ್ದ ಎಫ್‌ಐಆರ್

ಬೆಂಗಳೂರಿನ ಸುಮ್ಮನಹಳ್ಳಿಯ ರಾಜಕಾಲುವೆ ಬಳಿ ಅಪರಿಚಿತ ಶವ ಪತ್ತೆಯಾಗಿತ್ತು. ವ್ಯಕ್ತಿಯನ್ನು ಹತ್ಯೆ ಮಾಡಿ ರಾಜಕಾಲುವೆ ಬಳಿ ಬಿಸಾಡಲಾಗಿತ್ತು. ಶವವನ್ನು ನೋಡಿದ ಸಾರ್ವಜನಿಕರು ಪೊಲೀಸರಿಗೆ ಮಾಹಿತಿ ನೀಡಿದ್ದರು. ಪೊಲೀಸರು ಶವ ರೇಣುಕಾಸ್ವಾಮಿ ಅವರದ್ದೇ ಎಂದು ಗುರುತಿಸಿದ್ದರು. ಇದಾದ ಬಳಿಕ ತನಿಖೆ ಕೈಗೊಂಡಿದ್ದರು. ತನಿಖೆ ನಡೆಸಿದ ಪೊಲೀಸರು ದರ್ಶನ್‌ ಅವರನ್ನು ವಶಪಡಿಸಿಕೊಂಡಿದ್ದಾರೆ. ಪ್ರಕರಣದಲ್ಲಿ ದರ್ಶನ್‌ ಅವರ ಬೌನ್ಸರ್‌ಗಳನ್ನು ಕೂಡ ಬಂಧಿಸುವ ಸಾಧ್ಯತೆ ಇದೆ ಎಂದು ತಿಳಿದುಬಂದಿದೆ.

ಇದನ್ನೂ ಓದಿ: Actor Darshan: ಅರ್ಜುನನ ಸಮಾಧಿ ನಿರ್ಮಾಣ: ಅರಣ್ಯಾಧಿಕಾರಿಗಳ ವಿರುದ್ಧ ದರ್ಶನ್ ಅಭಿಮಾನಿಗಳಿಂದ ಆಕ್ರೋಶ!

Exit mobile version