ಬೆಂಗಳೂರು: ರಾಜಧಾನಿಯ ಕೋರಮಂಗಲದ ಪಿಜಿಯಲ್ಲಿ ಕೊಲೆಯಾಗಿ (Murder in PG) ಹೋದ ಕೃತಿ ಕುಮಾರಿ ಮರ್ಡರ್ (Krithi Kumari Murder) ಪ್ರಕರಣದಲ್ಲಿ ಪಾತಕಿಯ ಬರ್ಬರತೆಯ ಬಗ್ಗೆ ಬೆಚ್ಚಿ ಬೀಳಿಸುವ ಇನ್ನಷ್ಟು ವಿವರಗಳು ಹೊರಬಿದ್ದಿವೆ. ಕೊಲೆಯಾಗಿ ಹೋದವಳು ಈತನ ಪ್ರೇಯಸಿಯ (lover) ಗೆಳತಿಯಾಗಿದ್ದು, ಈ ದುಷ್ಟನ ಕೈಯಿಂದ ಗೆಳತಿಯನ್ನು ಬಿಡಿಸುವ ಯತ್ನದಲ್ಲಿ ತಾನೇ ಮರ್ಡರ್ (Murder Case) ಆಗಿದ್ದಾಳೆ.
ಆರೋಪಿ ಅಭಿಷೇಕ್ ತಾನು ಪ್ರೀತಿಸಿದವಳನ್ನು ಗೃಹ ಬಂಧನದಲ್ಲಿಟ್ಟಿದ್ದ. ಆಕೆಯನ್ನು ಕಾಪಾಡಿದ ಆಕೆಯ ಗೆಳತಿಯೇ ಜೀವ ಕಳೆದುಕೊಂಡಿದ್ದಾಳೆ. ಅಭಿಷೇಕ್ ಯುವತಿಯೊಬ್ಬಳೊಂದಿಗೆ ಪ್ರೀತಿಯಲ್ಲಿದ್ದ. ತನ್ನ ಪ್ರೇಯಸಿಯನ್ನು ಬಲವಂತವಾಗಿ ಬಾಡಿಗೆ ರೂಮ್‌ನಲ್ಲಿ ಇರಿಸಿಕೊಂಡಿದ್ದ. ಕೊಲೆಗೂ ಮೂರು ದಿನದ ಹಿಂದೆ ಬಾಡಿಗೆ ರೂಮ್ ಮಾಡಿ, ಆಕೆಯನ್ನು ಕರೆದೊಯ್ದು ಬಲವಂತವಾಗಿ ರೂಮ್‌ನಲ್ಲಿಟ್ಟುಕೊಂಡಿದ್ದ.
ಆದರೆ ಪ್ರೇಯಸಿ ರೂಮ್‌ನಲ್ಲಿ ಇರಲಾಗದೆ ಒದ್ದಾಡಿದ್ದಳು. ರೂಮ್‌ಮೇಟ್ ಪಿಜಿಗೆ ಬರಲಿಲ್ಲ ಏಕೆಂದು ವಿಚಾರಿಸಿದಾಗ ಕೃತಿ ಕುಮಾರಿ, ಆರೋಪಿ ಆಕೆಯನ್ನು ಕೂಡಿ ಹಾಕಿದ್ದರ ಮಾಹಿತಿಯನ್ನು ಪಡೆದುಕೊಂಡಿದ್ದಳು. ನಂತರ ಸಮಯ ನೋಡಿ ಗೆಳತಿಯನ್ನು ರೂಮ್‌ನಿಂದ ಕರೆತರಲು ಪ್ಲ್ಯಾನ್ ಮಾಡಿದ್ದು, ತನ್ನ ಸ್ನೇಹಿತರೊಂದಿಗೆ ತೆರಳಿ ಗೆಳತಿಯನ್ನು ಪಿಜಿಗೆ ಕರೆತಂದಿದ್ದಳು. ಕೊಲೆ ನಡೆದ ಹಿಂದಿನ ದಿನ ಗೃಹಬಂಧನದಲ್ಲಿದ್ದ ಗೆಳತಿಯನ್ನು ಕೃತಿ ಪಾರುಮಾಡಿದ್ದಳು. ಈಕೆಯ ಈ ಮಾನವೀಯ ನಡತೆಯೇ ಆಕೆಯ ಜೀವ ತೆಗೆದಿದೆ.
ಈ ವಿಚಾರ ಗೊತ್ತಾಗಿದ್ದೇ ತಡ ಕೃತಿ ಮೇಲೆ ಆರೋಪಿ ಅಭಿಷೇಕ್ ತೀವ್ರವಾಗಿ ಕೋಪಗೊಂಡಿದ್ದ. ತನ್ನ ಪ್ರೇಯಸಿಯನ್ನು ಕರೆದುಕೊಂಡು ಹೋಗಿದ್ದಕ್ಕೆ ಕೋಪಗೊಂಡು ಮಂಗಳವಾರ ರಾತ್ರಿ 11.10ರ ಸುಮಾರಿಗೆ ಏಕಾಏಕಿ ಪಿಜಿಗೆ ಹೋಗಿದ್ದ. ಒಳ ಹೋದವನೇ ಸೀದಾ ಕೃತಿ ಕುಮಾರಿಗೆ ಚಾಕುವಿನಿಂದ ಯದ್ವಾತದ್ವಾ ಇರಿದು ಎಸ್ಕೇಪ್ ಆಗಿದ್ದಾನೆ.
ಸದ್ಯ ಹೊರ ರಾಜ್ಯಕ್ಕೆ ಆರೋಪಿ ಅಭಿಷೇಕ್ ಪರಾರಿಯಾಗಿರುವ ಶಂಕೆ ಇದೆ. ಮೂಲತಃ ಮಧ್ಯಪ್ರದೇಶ ಮೂಲದವನು ಆಗಿರುವ ಆರೋಪಿ ಅಭಿಷೇಕ್, ಸದ್ಯ ಮೊಬೈಲ್ ಸ್ವಿಚ್ಡ್ ಆಫ್ ಮಾಡಿಕೊಂಡು ಪರಾರಿಯಾಗಿದ್ದಾನೆ. ಕೊಲೆಯಾದ ಕೃತಿ ಕುಮಾರಿ ಬಿಹಾರದಾಕೆ ಎಂದು ಗೊತ್ತಾಗಿದೆ. ಸದ್ಯ ಆರೋಪಿಯ ಸ್ನೇಹಿತೆಯ ಹೇಳಿಕೆಯನ್ನು ಪೊಲೀಸರು ದಾಖಲಿಸಿಕೊಂಡಿದ್ದಾರೆ. ಕೋರಮಂಗಲ ಪೊಲೀಸರು ಆರೋಪಿಯ ಬೆನ್ನು ಬಿದ್ದಿದ್ದು, ತನಿಖೆ ಮುಂದುವರಿದಿದೆ.
ಘಟನೆ ನಡೆದದ್ದು ಹೀಗೆ
ಜು.23ರಂದು ಕೋರಮಂಗಲದ ಪಿಜಿಯಲ್ಲಿ ಕೃತಿ ಕುಮಾರಿ ಕೊಲೆ ನಡೆದಿತ್ತು. ಆರೋಪಿ ಅಭಿಷೇಕ್ ಕೃತಿ ಕುಮಾರಿಯನ್ನು ಎರಡೇ ನಿಮಿಷದಲ್ಲಿ ಕೊಲೆಮಾಡಿ ಪರಾರಿಯಾಗಿದ್ದಾನೆ. ಕತ್ತು, ಎದೆ, ಹೊಟ್ಟೆ ಭಾಗ ಸೇರಿ ಹಲವು ಕಡೆ ಇರಿದಿದ್ದಾನೆ. ಕತ್ತನ್ನು ಕೋಳಿ ಕತ್ತಿನಂತೆ ಕೊಯಿದಿದ್ದಾನೆ. ಮೊದಲು ಪಿಜಿ ರೂಮಿನ ಬಾಗಿಲು ಬಡಿದ ಕೊಲೆಗಾರ, ಆಕೆ ಬಾಗಿಲು ತೆರೆದ ಕೂಡಲೇ ಒಳಹೋಗಿದ್ದಾನೆ. ನಂತರ ಕೆಲವು ಸೆಕೆಂಡ್‌ನಲ್ಲಿ ಆಕೆ ಆತನಿಂದ ಪಾರಾಗಲು ಹೊರಗೋಡಿ ಬಂದಿದ್ದು, ಆಕೆಯನ್ನು ಕಾರಿಡಾರ್‌ನಲ್ಲೇ ತಡೆದ ಪಾತಕಿ ಮನಬಂದಂತೆ ಇರಿದಿದ್ದಾನೆ.
ಪ್ರಾಣ ಉಳಿಸಿಕೊಳ್ಳಲು ಕೃತಿ ಕುಮಾರಿ ಒದ್ದಾಡಿದ್ದಾಳೆ. ರಕ್ತದ ಮಡುವಿನಲ್ಲಿದ್ದ ಕೃತಿ ಕುಮಾರಿ ಆರ್ತನಾದ ಮಾಡಿದರೂ ಪಿಜಿಯಲ್ಲಿದ್ದ ಮೂವರು ಯುವತಿಯರು ಮಾತ್ರ ಹತ್ತಿರ ಬಂದಿಲ್ಲ. ಮಾನವೀಯತೆಯನ್ನೇ ಮರೆತಂತೆ ವರ್ತಿಸಿದ ಇವರು ಕೃತಿ ಕುಮಾರಿಯ ಹತ್ತಿರ ಕೂಡ ಹೋಗಿಲ್ಲ. ಕೈಯಲ್ಲಿದ್ದ ಮೊಬೈಲ್ ಫೋನ್ ನೋಡ್ತಾ ಆಚೆ ಹೋಗಿದ್ದಾರೆ. ಈ ಎಲ್ಲಾ ದೃಶ್ಯಗಳು ಪಿಜಿಯಲ್ಲಿ ಅಳವಡಿಸಿದ್ದ ಸಿಸಿಟಿವಿಯಲ್ಲಿ ಸೆರೆಯಾಗಿದೆ.
ಇದನ್ನೂ ಓದಿ: Murder In PG: ಕೃತಿ ಕುಮಾರಿಗೆ ಮನಬಂದಂತೆ ಇರಿದ ಪಾತಕಿ, ನೋಡ್ತಾ ಇದ್ರೂ ಸಹಾಯಕ್ಕೆ ಬಾರದ ಯುವತಿಯರು