Site icon Vistara News

New Ambassador: ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿ ವಿನಯ್ ಕುಮಾರ್ ನೇಮಕ; ಏನಿವರ ಹಿನ್ನೆಲೆ ?

vinay kumar

vinay kumar

ನವದೆಹಲಿ: 1992ರ ಬ್ಯಾಚ್‌ನ ಐಎಫ್ಎಸ್ (Indian Foreign Service) ಅಧಿಕಾರಿ ವಿನಯ್ ಕುಮಾರ್ (Vinay Kumar) ಅವರನ್ನು ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿ (India’s Ambassador to Russia) ನೇಮಿಸಲಾಗಿದೆ ಎಂದು ವಿದೇಶಾಂಗ ಸಚಿವಾಲಯ (MEA) ತಿಳಿಸಿದೆ. ಪ್ರಸ್ತುತ ಅವರು ಮ್ಯಾನ್ಮಾರ್‌ನಲ್ಲಿ ಭಾರತದ ರಾಯಭಾರಿಯಾಗಿ ಸೇವೆ ಸಲ್ಲಿಸುತ್ತಿದ್ದಾರೆ (New Ambassador).

ಸಚಿವಾಲಯದ ಪ್ರಕಾರ, ವಿನಯ್ ಕುಮಾರ್ ಶೀಘ್ರದಲ್ಲೇ ಹೊಸ ಜವಾಬ್ದಾರಿ ಸ್ವೀಕರಿಸಲಿದ್ದಾರೆ. ರಷ್ಯಾದ ಅಧ್ಯಕ್ಷೀಯ ಚುನಾವಣೆಯಲ್ಲಿ ವ್ಲಾಡಿಮಿರ್ ಪುಟಿನ್ ಭರ್ಜರಿ ಗೆಲುವು ಸಾಧಿಸಿದ ನಂತರ ಈ ತೀರ್ಮಾನ ಕೈಗೊಳ್ಳಲಾಗಿದೆ. ವಿನಯ್ ಕುಮಾರ್ ಅವರು ವಿದೇಶಾಂಗ ಸಚಿವಾಲಯದಲ್ಲಿ ಹೆಚ್ಚುವರಿ ಕಾರ್ಯದರ್ಶಿಯಾಗಿಯೂ ಸೇವೆ ಸಲ್ಲಿಸಿದ್ದಾರೆ. ಕಳೆದ ತಿಂಗಳು ರಷ್ಯಾದಲ್ಲಿ ಭಾರತದ ರಾಯಭಾರಿಯಾಗಿದ್ದ ಪವನ್ ಕಪೂರ್ ಅವರನ್ನು ವಿದೇಶಾಂಗ ಸಚಿವಾಲಯದ ಹೊಸ ಕಾರ್ಯದರ್ಶಿ (ಪಶ್ಚಿಮ) ಆಗಿ ನೇಮಕ ಮಾಡಲಾಗಿತ್ತು. ಇದೀಗ ಅವರ ಸ್ಥಾನಕ್ಕೆ ವಿನಯ್ ಕುಮಾರ್ ನೇಮಕವಾಗಲಿದ್ದಾರೆ. ರಷ್ಯಾ ಭಾರತದ ಸ್ಥಿರ ಪಾಲುದಾರನಾಗಿ ಉಳಿದಿರುವುದರಿಂದ ಈ ಕ್ರಮ ಕೈಗೊಳ್ಳಲಾಗಿದೆ ಎಂದು ಮೂಲಗಳು ತಿಳಿಸಿವೆ. ಭಾರತ ಮತ್ತು ರಷ್ಯಾ ನಡುವಿನ ಸಂಬಂಧವು ಭಾರತದ ವಿದೇಶಾಂಗ ನೀತಿಗೆ ಬಹಳ ಹಿಂದಿನಿಂದಲೂ ನಿರ್ಣಾಯಕವಾಗಿದೆ.

ವಿನಯ್ ಕುಮಾರ್ ಹಿನ್ನೆಲೆ

ವಿನಯ್ ಕುಮಾರ್ ಖರಗ್ಪುರದ ಇಂಡಿಯನ್ ಇನ್‌ಸ್ಟಿಟ್ಯೂಟ್‌ ಆಫ್ ಟೆಕ್ನಾಲಜಿಯ (IIT Kharagpur) ಹಳೆಯ ವಿದ್ಯಾರ್ಥಿ. ಅಲ್ಲಿಂದ ಅವರು 1991ರಲ್ಲಿ ಉತ್ತೀರ್ಣರಾಗಿ 1992ರಲ್ಲಿ ಭಾರತೀಯ ವಿದೇಶಾಂಗ ಸೇವೆಗಳಿಗೆ (IFS) ಸೇರಿದ್ದರು. ವಿನಯ್ ಕುಮಾರ್ ಅವರು 2018-20ರ ವರೆಗೆ ಅಫ್ಘಾನಿಸ್ತಾನದಲ್ಲಿ ಭಾರತದ ರಾಯಭಾರಿಯಾಗಿದ್ದರು ಮತ್ತು 2011 ಮತ್ತು 2012ರಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿ (UNSC)ಯಲ್ಲಿ ಭಾರತದ ರಾಜಕೀಯ ಸಂಯೋಜಕರಾಗಿದ್ದರು. ವಿನಯ್ ಕುಮಾರ್ ಅವರು ಇಂಡಿಯನ್‌ ಮಿಷನ್‌ನ ಭಾಗವಾಗಿ ತಾಷ್ಕೆಂಟ್, ಬಿಷ್ಕೆಕ್, ಒಟ್ಟಾವಾ, ವಾರ್ಸಾ ಟೆಹ್ರಾನ್‌ಗಳಲ್ಲಿ ಸೇವೆ ಸಲ್ಲಿಸಿದ್ದಾರೆ.

ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರು ಭಾರತಕ್ಕೆ ಭೇಟಿ ನೀಡಿದ್ದ ವೇಳೆ 2000ದ ಅಕ್ಟೋಬರ್‌ನಲ್ಲಿ ʼಭಾರತ-ರಷ್ಯಾ ಕಾರ್ಯತಂತ್ರದ ಸಹಭಾಗಿತ್ವದ ಘೋಷಣೆʼಗೆ ಸಹಿ ಹಾಕಲಾಗಿತ್ತು. ಅಂದಿನಿಂದ ಭಾರತ-ರಷ್ಯಾ ಸಂಬಂಧಗಳು ರಾಜಕೀಯ, ಭದ್ರತೆ, ವ್ಯಾಪಾರ ಮತ್ತು ಆರ್ಥಿಕತೆ, ರಕ್ಷಣೆ, ವಿಜ್ಞಾನ ಮತ್ತು ತಂತ್ರಜ್ಞಾನ, ಸಂಸ್ಕೃತಿ ಸೇರಿದಂತೆ ಬಹುತೇಕ ಎಲ್ಲ ಕ್ಷೇತ್ರಗಳಲ್ಲಿ ಪರಿಣಾಮಕಾರಿಯಾಗಿ ಏರ್ಪಟ್ಟಿದೆ ಎಂದು ಎಂಇಎ ತಿಳಿಸಿದೆ. ಕಾರ್ಯತಂತ್ರದ ಸಹಭಾಗಿತ್ವದ ಅಡಿಯಲ್ಲಿ ನಿಯಮಿತ ಸಂವಹನ ಮತ್ತು ಸಹಕಾರ ಚಟುವಟಿಕೆಗಳ ಅನುಸರಣೆಯನ್ನು ಖಚಿತಪಡಿಸಿಕೊಳ್ಳಲು ಎರಡೂ ದೇಶಗಳು ಕಾರ್ಯನಿರ್ವಹಿಸುತ್ತವೆ ಎಂದು ಮೂಲಗಳು ತಿಳಿಸಿವೆ.

ಇದನ್ನೂ ಓದಿ: Russian Presidential election : ಕೇರಳದಲ್ಲಿ ನಡೆಯಿತು ರಷ್ಯಾ ಅಧ್ಯಕ್ಷರ ಆಯ್ಕೆಗೆ ಮತದಾನ!

ಬಿಜೆಪಿ ಸೇರಿದ ಅಮೆರಿಕದ ಮಾಜಿ ರಾಯಭಾರಿ

ಅಮೆರಿಕದ ವಿದೇಶಾಂಗ ವ್ಯವಹಾರಗಳ ಬಗ್ಗೆ ಅಪಾರ ಮಾಹಿತಿ ಹೊಂದಿರುವ ಅನುಭವಿ ಭಾರತೀಯ ರಾಜತಾಂತ್ರಿಕರಲ್ಲಿ ಒಬ್ಬರಾದ ಅಮೆರಿಕದ ಮಾಜಿ ರಾಯಭಾರಿ ತರಣ್​​ಜಿತ್ ಸಿಂಗ್ ಸಂಧು ಮಂಗಳವಾರ ರಾಷ್ಟ್ರ ರಾಜಧಾನಿ ದೆಹಲಿಯಲ್ಲಿ ಬಿಜೆಪಿ ಸೇರ್ಪಡೆಗೊಂಡಿದ್ದಾರೆ. ದೀನ್ ದಯಾಳ್ ಉಪಾಧ್ಯಾಯ ಮಾರ್ಗದಲ್ಲಿರುವ ಪಕ್ಷದ ಪ್ರಧಾನ ಕಚೇರಿಯಲ್ಲಿ ಪಕ್ಷದ ಪ್ರಧಾನ ಕಾರ್ಯದರ್ಶಿಗಳಾದ ವಿನೋದ್ ತಾವ್ಡೆ ಮತ್ತು ತರುಣ್ ಚುಗ್ ಅವರ ಸಮ್ಮುಖದಲ್ಲಿ ಮಾಜಿ ರಾಯಭಾರಿ ಕೇಸರಿ ಪಕ್ಷಕ್ಕೆ ಸೇರ್ಪಡೆಗೊಂಡರು.

ಈ ಸಂಗತಿಯ ಕುರಿತು ನಿಮ್ಮ ಅನಿಸಿಕೆ ಏನು? ಕಾಮೆಂಟ್ ಮೂಲಕ ತಿಳಿಸಿ

Exit mobile version