ಮಂಗಳೂರು: ʼತಮ್ಮನ್ನು ಮುಗಿಸಲು ಕೇರಳದಲ್ಲಿ ಶತ್ರು ಭೈರವಿ ಯಾಗ (Shatru Bhairavi Yaga) ನಡೆದಿದೆʼ ಎಂದು ಡಿಸಿಎಂ ಡಿಕೆ ಶಿವಕುಮಾರ್ (DCM DK Shivakumar) ನೀಡಿದ್ದ ಹೇಳಿಕೆ ಕೇರಳದಲ್ಲಿ (Kerala) ಸಂಚಲನ ಸೃಷ್ಟಿಸಿದ್ದು, ಈ ಬಗ್ಗೆ ಅಲ್ಲಿನ ಸರ್ಕಾರ ತನಿಖೆ ನಡೆಸಿದೆ. ಅಂಥ ಯಾವುದೇ ಯಾಗ ನಡೆದಿಲ್ಲ, ಪ್ರಾಣಿ ಬಲಿ (animal sacrifice) ನೀಡಲಾಗಿಲ್ಲ ಎಂದು ಸ್ಪಷ್ಟನೆ ನೀಡಿದೆ.
ಕೇರಳ ರಾಜ್ಯ ಗುಪ್ತಚರ ಹಾಗೂ ಪೊಲೀಸ್ ಇಲಾಖೆ (Kerala police) ಈ ಕುರಿತು ವಿಶೇಷ ತನಿಖಾ ತಂಡ (SIT) ರಚಿಸಿದ್ದು, ಅದರ ಮೂಲಕ ತನಿಖೆ ನಡೆಸಲಾಗಿದೆ. ಕೇರಳ ರಾಜ್ಯದ ಕಣ್ಣೂರು, ತಳಿಪರಂಬ ಭಾಗದಲ್ಲಿ ಓಡಾಡಿ ಕೇರಳ ಪೊಲೀಸರು ಮಾಹಿತಿ ಸಂಗ್ರಹಿಸಿದ್ದಾರೆ. ಪ್ರಾಣಿ ಬಲಿ ಕೊಟ್ಟು ಶತ್ರು ಭೈರವಿ ಯಾಗ ನಡೆದಿದೆಯಾ ಎಂದು ತನಿಖೆ ನಡೆಸಿ ಸಮಗ್ರ ಮಾಹಿತಿ ಸಂಗ್ರಹಿಸಿ ಕೇರಳ ಡಿಜಿಪಿಗೆ ವಿಶೇಷ ತನಿಖಾ ತಂಡ ವರದಿ ಸಲ್ಲಿಸಿದೆ.
ತಳಿಪರಂಬ, ರಾಜರಾಜೇಶ್ವರಂ ಹಾಗೂ ಕಣ್ಣೂರು ಸುತ್ತಮುತ್ತ ಪ್ರದೇಶದಲ್ಲಿ ತನಿಖೆ ನಡೆಸಿದ ಕೇರಳ ಟೀಂ, ಅಂಥ ಯಾವುದೇ ಪ್ರಾಣಿ ಬಲಿ ಯಾಗ ನಡೆದಿಲ್ಲ ಎಂದು ಕೇರಳ ಡಿಜಿಪಿಗೆ ವರದಿ ಸಲ್ಲಿಸಿದೆ. ಈ ನಡುವೆ ಕರ್ನಾಟಕ ಪೊಲೀಸ್ ವಿಶೇಷ ತಂಡದಿಂದಲೂ ಗುಪ್ತವಾಗಿ ಮಾಹಿತಿ ಸಂಗ್ರಹ ನಡೆದಿದೆ. ಆದರೆ ಯಾರ ತನಿಖೆಯಲ್ಲೂ ಯಾಗದ ಕುರಿತು ಸುಳಿವು ದೊರೆತಿಲ್ಲ.
ಕೇರಳ ಸಚಿವರಿಂದಲೂ ಸ್ಪಷ್ಟನೆ
ಕೇರಳದ ದೇವಸ್ವಂ ಬೋರ್ಡ್ ಸಚಿವ ರಾಧಾಕೃಷ್ಣನ್ ಅವರೂ ಡಿಕೆ ಶಿವಕುಮಾರ್ ಆರೋಪವನ್ನು ನಿರಾಕರಿಸಿದ್ದಾರೆ. ನಮ್ಮ ರಾಜ್ಯದ ಯಾವುದೇ ದೇವಸ್ಥಾನಗಳಲ್ಲೂ ಪ್ರಾಣಿ ಬಲಿ ನಡೆಯಲ್ಲ ಎಂದು ಅವರು ಸ್ಪಷ್ಟನೆ ನೀಡಿದ್ದಾರೆ.
ದೇವಳ ಆಡಳಿತ ಮಂಡಳಿ ನಿರಾಕರಣೆ
“ದೇವಸ್ವಂ ಬೋರ್ಡ್ ಅಧೀನದಲ್ಲಿರುವ ಯಾವುದೇ ದೇವಾಲಯಗಳಲ್ಲಿ ಪ್ರಾಣಿ ಬಲಿಯನ್ನು ಒಳಗೊಂಡ ಯಾವುದೇ ಪೂಜೆ ಅಥವಾ ನೈವೇದ್ಯಗಳು ನಡೆಯುವುದಿಲ್ಲ. ಕೇರಳದ ಮಲಬಾರ್ ದೇವಸ್ವಂ ಬೋರ್ಡ್ ಅಧೀನದಲ್ಲಿರುವ ರಾಜರಾಜೇಶ್ವರಂ ದೇವಸ್ಥಾನದ ಹೆಸರಿನ ಬಗ್ಗೆ ದೃಶ್ಯ ಮಾಧ್ಯಮಗಳಲ್ಲಿ ಹರಿದಾಡುತ್ತಿರುವ ಸುದ್ದಿ ಸಂಪೂರ್ಣ ಅಸತ್ಯ ಮತ್ತು ದುರದೃಷ್ಟಕರ” ಎಂದು ಅಧಿಕೃತ ಪತ್ರಿಕಾ ಹೇಳಿಕೆ ಮೂಲಕ ದೇವಸ್ಥಾನದ ಆಡಳಿತ ಮಂಡಳಿ ಸ್ಪಷ್ಟನೆ ನೀಡಿದೆ.
“ಶ್ರೀ ರಾಜರಾಜೇಶ್ವರಿ ದೇವಸ್ಥಾನವು ಕೇರಳದ ಅತ್ಯಂತ ಹಳೆಯ ಮತ್ತು ಪ್ರಸಿದ್ಧ ದೇವಾಲಯಗಳಲ್ಲಿ ಒಂದಾಗಿದೆ. ಕಣ್ಣೂರು ತಳಿಪರಂಬ ಶ್ರೀ ರಾಜರಾಜೇಶ್ವರಂ ದೇವಸ್ಥಾನಕ್ಕೆ ಸಂಬಂಧಿಸಿದಂತೆ ಅಂತಹ ಯಾವುದೇ ಪೂಜೆ ಅಥವಾ ಶತ್ರು ಭೈರವಿ ಯಾಗವನ್ನು ನಡೆಸಲಾಗುವುದಿಲ್ಲ. ಮಲಬಾರ್ ದೇವಸ್ವಂ ಬೋರ್ಡ್ ಅಧೀನದಲ್ಲಿರುವ ಯಾವುದೇ ದೇವಾಲಯಗಳಲ್ಲಿ ಪ್ರಾಣಿ ಬಲಿಯನ್ನು ಒಳಗೊಂಡ ಯಾವುದೇ ಪೂಜೆ ಅಥವಾ ನೈವೇದ್ಯಗಳಿಲ್ಲ. ದೇವಾಲಯದ ಹಿತಾಸಕ್ತಿಗಳ ವಿರುದ್ಧದ ಪ್ರಚಾರಗಳನ್ನು ಸಂಪೂರ್ಣವಾಗಿ ತಿರಸ್ಕರಿಸಲಾಗಿದೆ” ಎಂದು ಪತ್ರಿಕಾ ಹೇಳಿಕೆ ಮೂಲಕ ತಳಿಪರಂಬ ಶ್ರೀ ರಾಜರಾಜೇಶ್ವರಂ ದೇವಸ್ಥಾನದ ಕಾರ್ಯನಿರ್ವಾಹಕ ಅಧಿಕಾರಿ ಹೇಳಿಕೆ ನೀಡಿದ್ದಾರೆ.
ಡಿಕೆಶಿ ಆರೋಪ ಏನಿತ್ತು?
ಕೇರಳ ರಾಜ್ಯದ ಕಣ್ಣೂರು ಜಿಲ್ಲೆಯ ತಳಿಪರಂಬ ಶ್ರೀ ರಾಜರಾಜೇಶ್ವರಂ ದೇವಸ್ಥಾನದಲ್ಲಿ ಸಿಎಂ ಹಾಗೂ ನನ್ನ ವಿರುದ್ಧ ಶತ್ರು ಭೈರವಿ ಯಾಗ ಮಾಡಲಾಗುತ್ತಿದೆ ಎಂದು ಡಿಸಿಎಂ ಡಿಕೆಶಿ ಮೊನ್ನೆ ಹೇಳಿದ್ದರು. “ಇದು ಶತ್ರು ಸಂಹಾರಕ್ಕಾಗಿ ಮಾಡುತ್ತಿರುವ ಶತ್ರು ಭೈರವಿ ಯಾಗವಾಗಿದ್ದು, ಇದನ್ನು ಮಾಡಿಸುತ್ತಿರುವವರು ಯಾರೆಂದು ಗೊತ್ತಿದೆ. ರಾಜಕೀಯ ವೈರಿಗಳು ಮಾಡಿಸುತ್ತಿದ್ದಾರೆ. ಯಾಗದಲ್ಲಿ ಮೇಕೆ, ಹಂದಿ, ಕುರಿ, ಹೀಗೆ ಪಂಚಬಲಿ ಕೊಟ್ಟಿದ್ದಾರೆ. ಅಘೋರಿಗಳು ಇದರಲ್ಲಿ ಪಾಲ್ಗೊಂಡಿದ್ದಾರೆ. ಕೇರಳದ ರಾಜರಾಜೇಶ್ವರಿ ದೇವಸ್ಥಾನದ ಆಸುಪಾಸು ಚೆಕ್ ಮಾಡಿ, ನಿಮಗೇ ಗೊತ್ತಾಗುತ್ತೆ. ಇದರಲ್ಲಿ ಭಾಗವಹಿಸಿದವರೇ ನನಗೆ ಮಾಹಿತಿ ನೀಡಿದ್ದಾರೆ” ಎಂದು ಡಿಕೆಶಿ ಆರೋಪಿಸಿದ್ದರು.
ಇದನ್ನೂ ಓದಿ: ಮಾರಣ ಶತ್ರು ಭೈರವಿ ಯಾಗ ಎದುರಿಸಲು ರಕ್ಷಣಾಕವಚ ಮಾಡಿಸಿದ ಡಿಕೆಶಿ! ಹೀಗಿರುತ್ತೆ ನೋಡಿ ಯಾಗ