Site icon Vistara News

CJI DY Chandrachud: 600 ವಕೀಲರಿಂದ ಮುಖ್ಯ ನ್ಯಾಯಮೂರ್ತಿಗೆ ಪತ್ರ; ನ್ಯಾಯಾಂಗದ ಸಮಗ್ರತೆಗೆ ಧಕ್ಕೆ ಬಗೆಗೆ ಕಳವಳ

supreme court CJI DY chandrachud

ಹೊಸದಿಲ್ಲಿ: ದೇಶದ 600ಕ್ಕೂ ಹೆಚ್ಚು ವಕೀಲರು ಭಾರತದ ಮುಖ್ಯ ನ್ಯಾಯಮೂರ್ತಿ (Chief Justice of India) ಡಿ.ವೈ ಚಂದ್ರಚೂಡ್ (CJI DY Chandrachud) ಅವರಿಗೆ ಪತ್ರ ಬರೆದಿದ್ದು, “ನ್ಯಾಯಾಂಗದ (Judiciary) ಸಮಗ್ರತೆಗೆ ಧಕ್ಕೆ ತರುತ್ತಿರುವ ಬೆಳವಣಿಗೆಗಳ” ಬಗ್ಗೆ ಕಳವಳ ವ್ಯಕ್ತಪಡಿಸಿದ್ದಾರೆ. “ಪಟ್ಟಭದ್ರ ಹಿತಾಸಕ್ತ ಗುಂಪು ನ್ಯಾಯಾಲಯದ (Supreme court) ತೀರ್ಪುಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿದೆ” ಎಂದು ದೂರಿದ್ದಾರೆ.

ಹಿರಿಯ ವಕೀಲ ಹರೀಶ್ ಸಾಳ್ವೆ (Harish Salve) ಮತ್ತು ಬಾರ್ ಕೌನ್ಸಿಲ್ ಆಫ್ ಇಂಡಿಯಾ ಅಧ್ಯಕ್ಷ ಮನನ್ ಕುಮಾರ್ ಮಿಶ್ರಾ ಸೇರಿದಂತೆ 600 ಮಂದಿ ವಕೀಲರು ಈ ಪತ್ರಕ್ಕೆ ಸಹಿ ಹಾಕಿದ್ದಾರೆ. “ಪಟ್ಟಭದ್ರ ಹಿತಾಸಕ್ತಿಯ ಗುಂಪುಗಳು ನ್ಯಾಯಾಂಗ ಪ್ರಕ್ರಿಯೆಗಳನ್ನು ನಾಜೂಕಾಗಿ ನಿರ್ವಹಿಸಲು, ನ್ಯಾಯಾಲಯದ ತೀರ್ಪುಗಳ ಮೇಲೆ ಪ್ರಭಾವ ಬೀರಲು ಯತ್ನಿಸುತ್ತಿರುವುದು; ಆಧಾರರಹಿತ ಆರೋಪಗಳು ಮತ್ತು ರಾಜಕೀಯ ಅಜೆಂಡಾಗಳನ್ನು ಮುಂದಿಟ್ಟು ನ್ಯಾಯಾಂಗದ ಖ್ಯಾತಿಯನ್ನು ಹಾಳುಮಾಡಲು ಪ್ರಯತ್ನಿಸುತ್ತಿರುವುದನ್ನು” ವಕೀಲರು ಖಂಡಿಸಿದ್ದಾರೆ.

“ಭ್ರಷ್ಟಾಚಾರದ ಆರೋಪ ಹೊತ್ತಿರುವ ರಾಜಕೀಯ ವ್ಯಕ್ತಿಗಳನ್ನು ಒಳಗೊಂಡ ಪ್ರಕರಣಗಳಲ್ಲಿ ಇದು ಸ್ಪಷ್ಟವಾಗಿ ಕಂಡುಬರುತ್ತಿದೆ. ಅಲ್ಲಿ ನ್ಯಾಯಾಲಯದ ನಿರ್ಧಾರಗಳನ್ನು ತಮಗೆ ಬೇಕಾದ ಹಾಗೆ ತಿರುಚುವ, ನ್ಯಾಯಾಂಗಕ್ಕೆ ಕಳಂಕ ಉಂಟುಮಾಡುವ ಪ್ರಯತ್ನಗಳು ಹೆಚ್ಚು ಸ್ಪಷ್ಟವಾಗಿ ಕಂಡುಬರುತ್ತಿವೆ” ಎಂದು ಪತ್ರದಲ್ಲಿದೆ.

“ಒಂದು ಆತಂಕಕಾರಿ ತಂತ್ರವೆಂದರೆ‌, ನ್ಯಾಯಾಲಯಗಳ ಈಗಿನ ಕಾರ್ಯವೈಖರಿಯನ್ನು ಉದ್ದೇಶಪೂರ್ವಕ ʼಕಲ್ಪಿತ ಸುವರ್ಣಯುಗ’ಕ್ಕೆ ಹೋಲಿಸುವುದು, ಸುಳ್ಳು ನಿರೂಪಣೆಯೊಂದಿಗೆ ನ್ಯಾಯಾಂಗದ ಕಾರ್ಯನಿರ್ವಹಣೆಯ ಕುರಿತು ಅಪಕಲ್ಪನೆ ಮೂಡಿಸುವುದು. ಇಂತಹ ಸುಳ್ಳು ನಿರೂಪಣೆಗಳು ನ್ಯಾಯಾಂಗದ ಫಲಿತಾಂಶಗಳ ಮೇಲೆ ದುಷ್ಪ್ರಭಾವ ಬೀರುವ ಮತ್ತು ನ್ಯಾಯಾಂಗದ ಮೇಲಿನ ಸಾರ್ವಜನಿಕ ನಂಬಿಕೆಯನ್ನು ಕುಗ್ಗಿಸುವ ಉದ್ದೇಶವನ್ನು ಹೊಂದಿವೆ” ಎಂದು ವಕೀಲರು ಆಪಾದಿಸಿದ್ದಾರೆ.

ಈ ಪತ್ರವು “ಬೆಂಚ್ ಫಿಕ್ಸಿಂಗ್‌” ಬಗ್ಗೆ ಕಳವಳ ವ್ಯಕ್ತಪಡಿಸಿದೆ. “ನ್ಯಾಯಾಂಗ ಪೀಠಗಳ ಸಂಯೋಜನೆಯ ಮೇಲೆ ಪ್ರಭಾವ ಬೀರಲು ಮತ್ತು ನ್ಯಾಯಾಧೀಶರ ಸಮಗ್ರತೆಯ ಮೇಲೆ ಹಾನಿಯೆಸಗಲು ಪ್ರಯತ್ನಗಳನ್ನು ಮಾಡಲಾಗಿದೆ. ಈ ಕ್ರಮಗಳು ನ್ಯಾಯಾಂಗಕ್ಕೆ ಅಗೌರವ ಮಾತ್ರವಲ್ಲದೆ ಕಾನೂನು ಮತ್ತು ನ್ಯಾಯದ ತತ್ವಗಳಿಗೆ ಹಾನಿಯುಂಟುಮಾಡುತ್ತವೆ” ಎಂದಿದೆ. “ಅವರು ನಮ್ಮ ನ್ಯಾಯಾಲಯಗಳನ್ನು ಕಾನೂನಿನ ಆಡಳಿತವಿಲ್ಲದ ದೇಶಗಳಿಗೆ ಹೋಲಿಸುವ ಮಟ್ಟಕ್ಕೆ ಇಳಿದಿದ್ದಾರೆ” ಎಂದು ಆರೋಪಿಸಿದೆ.

“ಅವು ಕೇವಲ ಟೀಕೆಗಳಲ್ಲ. ಅವು ನಮ್ಮ ನ್ಯಾಯಾಂಗದಲ್ಲಿ ಸಾರ್ವಜನಿಕರ ನಂಬಿಕೆಯನ್ನು ಹಾಳುಮಾಡುವ, ನಮ್ಮ ಕಾನೂನುಗಳ ನ್ಯಾಯೋಚಿತ ಅನ್ವಯಕ್ಕೆ ಬೆದರಿಕೆ ಉಂಟುಮಾಡುವ ನೇರ ದಾಳಿಗಳಾಗಿವೆ” ಎಂದಿರುವ ಪತ್ರ, ರಾಜಕಾರಣಿಗಳು ತಮ್ಮ ಹಿತಾಸಕ್ತಿಗಳಿಗೆ ಅನುಗುಣವಾಗಿ ಕಾನೂನು ವಿಷಯಗಳ ಮೇಲೆ ನಿಲುವುಗಳನ್ನು ಬದಲಾಯಿಸುವ, ಆ ಮೂಲಕ ಕಾನೂನು ವ್ಯವಸ್ಥೆಯ ವಿಶ್ವಾಸಾರ್ಹತೆಯನ್ನು ಹಾಳು ಮಾಡುವ ವಿದ್ಯಮಾನದ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದೆ.

“ರಾಜಕಾರಣಿಗಳು ಭ್ರಷ್ಟಾಚಾರದ ಆರೋಪ ಮಾಡಿ ನಂತರ ನ್ಯಾಯಾಲಯದಲ್ಲಿ ಅವರನ್ನು ಸಮರ್ಥಿಸಿಕೊಳ್ಳುವುದನ್ನು ವಿಲಕ್ಷಣ ವಿದ್ಯಮಾನ. ನ್ಯಾಯಾಲಯದ ತೀರ್ಮಾನ ಅವರಿಗೆ ಬೇಕಾದಂತೆ ಬರದಿದ್ದರೆ ಅವರು ನ್ಯಾಯಾಲಯದ ಒಳಗೆ ಮತ್ತು ಮಾಧ್ಯಮಗಳಲ್ಲಿ ನ್ಯಾಯಾಲಯಗಳನ್ನು ಟೀಕಿಸುತ್ತಾರೆ. ಈ ಎರಡು ಮುಖದ ನಡವಳಿಕೆಯು ನಮ್ಮ ಕಾನೂನು ವ್ಯವಸ್ಥೆಯ ಬಗ್ಗೆ ಸಾಮಾನ್ಯ ವ್ಯಕ್ತಿಯಲ್ಲಿರುವ ಗೌರವಕ್ಕೆ ಹಾನಿಯೆಸಗುತ್ತದೆ,” ಎಂದು ವಕೀಲರು ಆರೋಪಿಸಿದ್ದಾರೆ.

“ಕೆಲವರು ತಮ್ಮ ಪ್ರಕರಣಗಳಲ್ಲಿ ನ್ಯಾಯಾಧೀಶರು ಯಾರೆಂಬುದರ ಮೇಲೆ ಪ್ರಭಾವ ಬೀರಲು ಪ್ರಯತ್ನಿಸುತ್ತಿದ್ದಾರೆ. ನಿರ್ದಿಷ್ಟ ರೀತಿಯಲ್ಲಿ ತೀರ್ಪು ನೀಡಲು ನ್ಯಾಯಾಧೀಶರ ಮೇಲೆ ಒತ್ತಡ ಹೇರಲು, ಸಾಮಾಜಿಕ ಮಾಧ್ಯಮಗಳಲ್ಲಿ ಸುಳ್ಳುಗಳನ್ನು ಹರಡಲು ಪ್ರಯತ್ನಿಸುತ್ತಿದ್ದಾರೆ” ಎಂದು ಅವರು ಹೇಳಿದ್ದಾರೆ.

“ಅವರ ವಿಧಾನದ ಕಾರ್ಯನಿರ್ವಹಣೆಯ ಸಮಯವು ನಿಕಟ ಪರಿಶೀಲನೆಗೆ ಅರ್ಹವಾಗಿದೆ. ರಾಷ್ಟ್ರವು ಚುನಾವಣೆಗೆ ಹೋಗಲು ಸಿದ್ಧವಾಗಿರುವ ಸಂದರ್ಭದಲ್ಲಿ ಇದು ಕಾಣುತ್ತಿದೆ. 2018-2019ರಲ್ಲಿ ಕೂಡ ಇಂಥ ʼಹಿಟ್ ಅಂಡ್ ರನ್’ ವರ್ತನೆಗಳನ್ನು ನೆನಪಿಸಿಕೊಳ್ಳಬಹುದು. ಮೌನವಾಗಿರುವುದು ಅಥವಾ ಏನನ್ನೂ ಮಾಡದೆ ಇರುವುದು ಹಾನಿ ಮಾಡುವವರಿಗೆ ಹೆಚ್ಚಿನ ಶಕ್ತಿಯನ್ನು ನೀಡುತ್ತದೆ. ಇಂತಹ ಪ್ರಯತ್ನಗಳು ಕೆಲವು ವರ್ಷಗಳಿಂದ ಮತ್ತು ಪದೇ ಪದೆ ನಡೆಯುತ್ತಿರುವುದರಿಂದ ಮೌನವನ್ನು ಕಾಪಾಡಿಕೊಳ್ಳುವ ಸಮಯ ಇದಲ್ಲ,” ಎಂದಿರುವ ವಕೀಲರು, ಬಾಹ್ಯ ಒತ್ತಡಗಳಿಂದ ನ್ಯಾಯಾಂಗವನ್ನು ರಕ್ಷಿಸಲು ಮತ್ತು ಕಾನೂನು ಸುವ್ಯವಸ್ಥೆಯನ್ನು ಎತ್ತಿಹಿಡಿಯಲು ದೃಢವಾದ ಕ್ರಮಗಳನ್ನು ತೆಗೆದುಕೊಳ್ಳುವಂತೆ ಸುಪ್ರೀಂ ಕೋರ್ಟ್‌ಗೆ ಕರೆ ನೀಡಿದ್ದಾರೆ.

ಇದನ್ನೂ ಓದಿ: Fact Check: ಸುಳ್ಳು ಸುದ್ದಿ ತಡೆಯುವ ಕೇಂದ್ರ ಸರ್ಕಾರದ ಫ್ಯಾಕ್ಟ್‌ಚೆಕ್‌ ಘಟಕಕ್ಕೆ ಸುಪ್ರೀಂ ಕೋರ್ಟ್‌ ತಡೆ

Exit mobile version