Site icon Vistara News

Bangalore Mysore Expressway: ಬೆಂಗಳೂರು- ಮೈಸೂರು ಹೈವೇಯಲ್ಲಿ ಓವರ್‌ಸ್ಪೀಡ್‌ ಹೋದರೆ ಬೀಳಲಿದೆ ಪೊಲೀಸ್‌ ಕೇಸ್!‌

bangalore mysore highway

ಬೆಂಗಳೂರು: ಇನ್ನು ಮುಂದೆ ಬೆಂಗಳೂರು- ಮೈಸೂರು ಎಕ್ಸ್‌ಪ್ರೆಸ್‌ವೇಯಲ್ಲಿ (Bangalore Mysore Expressway) ಓವರ್‌ಸ್ಪೀಡ್‌ನಲ್ಲಿ (Overspeed) ಚಲಾಯಿಸುವವರು ಹುಷಾರಾಗಿರಬೇಕು. ರ್ಯಾಶ್‌ ಡ್ರೈವಿಂಗ್‌ (Rash Driving) ಮಾಡುವವರು ಕಂಬಿ ಎಣಿಸುವ ದಿನಗಳು ಬಂದಿವೆ. ಹೈವೇಯಲ್ಲಿ ಹಿಡಿಯೋರಿಲ್ಲ ಎಂದು ಓವರ್‌ಸ್ಪೀಡ್ ಹೋದರೆ ನಿಮ್ಮ ಮೇಲೆ ಎಫ್‌ಐಆರ್‌ (FIR) ದಾಖಲಾಗಲಿದೆ.

ಬೆಂಗಳೂರು-ಮೈಸೂರು ಹೈವೇಯಲ್ಲಿ ಟ್ರಾಫಿಕ್‌ ಪೊಲೀಸರು ಹಲವು ಕ್ರಮಗಳನ್ನು ಕೈಗೊಂಡಿದ್ದರೂ ರ್ಯಾಶ್ ಡ್ರೈವಿಂಗ್ ನಿಲ್ಲುತ್ತಿಲ್ಲ. 130 ಕಿಮೀಗೂ ಅಧಿಕ ಸ್ಪೀಡ್‌ನಲ್ಲಿ ವಾಹನಗಳು ಸಂಚರಿಸುತ್ತಿವೆ. ಇಂಟರ್‌ಸೆಪ್ಟರ್‌ಗಳು ಇದ್ದರೂ ಹಲವರು ಕ್ಯಾರೇ ಮಾಡುತ್ತಿಲ್ಲ. ಹೀಗಾಗಿ ಅಪಘಾತಗಳಾಗುತ್ತಿವೆ. ಅತಿ ವೇಗದ ಚಾಲನೆಯಿಂದಲೇ 90%ರಷ್ಟು ಅಪಘಾತಗಳು ಸಂಭವಿಸುತ್ತಿವೆ. ಹೀಗಾಗಿ ಅತಿ ವೇಗದಲ್ಲಿ ಚಾಹನ ಚಲಾಯಿಸುವವರ ವಿರುದ್ಧ ಕೇಸ್ ದಾಖಲು ಮಾಡಲು ಪೊಲೀಸರು ಮುಂದಾಗಿದ್ದಾರೆ.

ನಿನ್ನೆ ಮೈಸೂರು ಬೆಂಗಳೂರು ಹೈವೇ ಸಿಸಿಟಿವಿಗಳನ್ನು ಸಂಚಾರಿ ಮತ್ತು ರಸ್ತೆ ಸುರಕ್ಷತೆ ಎಡಿಜಿಪಿ ಅಲೋಕ್ ಕುಮಾರ್ ಪರಿಶೀಲನೆ ಮಾಡಿದ್ದರು. ಪರಿಶೀಲನೆ ವೇಳೆ ಒಂದೇ ದಿನ‌ 150ಕ್ಕೂ ಹೆಚ್ಚು ಅತಿ ವೇಗದ ಚಾಲನೆ ಕೇಸ್‌ಗಳು ಪತ್ತೆಯಾಗಿವೆ. ಇದರಿಂದ ಓವರ್‌ಸ್ಪೀಡ್‌ಗೆ ಬ್ರೇಕ್ ಹಾಕಲು ಎಡಿಜಿಪಿ ಅಲೋಕ್ ಕುಮಾರ್ ಹೊಸ ಅಸ್ತ್ರ ಕೈಗೆತ್ತಿಕೊಂಡಿದ್ದು, ಆಗಸ್ಟ್‌ 1ರಿಂದ ಅದನ್ನು ಚಲಾಯಿಸಲಿದ್ದಾರೆ.

ಮಿತಿ ಮೀರಿದ ವೇಗದಿಂದ ಚಾಲನೆ ಮಾಡುವವರ ವಿರುದ್ಧ ಎಫ್ಐಆರ್ ದಾಖಲಿಸಲಾಗುತ್ತದೆ. ಸ್ಪೀಡ್‌ನಲ್ಲಿ 130 ಕಿಮೀ ದಾಟಿದರೆ ಎಫ್ಐಆರ್ ದಾಖಲಾಗಲಿದೆ. ನಂತರ ಚಾಲಕರ ಮೇಲೆ ಕಾನೂನು ಕ್ರಮ ಕೈಗೊಳ್ಳಲಾಗುತ್ತದೆ. ವಾಹನ ಚಾಲನೆ ಪರವಾನಗಿಯೂ ರದ್ದಾಗಬಹುದು. ಹೀಗೆಂದು ಎಕ್ಸ್ ಖಾತೆ ಮೂಲಕ ಅಲೋಕ್ ಕುಮಾರ್ ಮಾಹಿತಿ ಹಂಚಿಕೊಂಡಿದ್ದಾರೆ.

ಹೆದ್ದಾರಿಯಲ್ಲಿ ಸ್ಮಾರ್ಟ್‌ ಟ್ರಾಫಿಕ್‌ ಮ್ಯಾನೇಜ್‌ಮೆಂಟ್

ವಾಹನ ಸಂಚಾರ ನಿಯಮ ಉಲ್ಲಂಘನೆ ಹಾಗೂ ರಸ್ತೆ ಅಪಘಾತಗಳ ತಡೆಗಾಗಿ ಸಂಚಾರ ಪೊಲೀಸ್‌ ವಿಭಾಗ, ಅತ್ಯಾಧುನಿಕ ತಂತ್ರಜ್ಞಾನ ಬಳಸಿಕೊಳ್ಳುತ್ತಿದೆ. ಇದರ ಭಾಗವಾಗಿ ಜುಲೈ 1ರಿಂದ ಬೆಂಗಳೂರು-ಮೈಸೂರು ಎಕ್ಸ್‌ಪ್ರೆಸ್‌ ವೇನಲ್ಲಿ (Bangalore–Mysore Expressway) ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್‌ (ITMS) ಅಳವಡಿಸಲಾಗಿದೆ.

ಈ ಮಾರ್ಗದಲ್ಲಿ ಸಂಚಾರ ನಿಯಮ ಉಲ್ಲಂಘನೆ ದಂಡವನ್ನು ನೇರವಾಗಿ ಫಾಸ್ಟ್ಯಾಗ್‌ ಖಾತೆಯಿಂದಲೇ ಕಡಿತಗೊಳಿಸಲು ಪೊಲೀಸರು ಮುಂದಾಗಿದ್ದಾರೆ. ಕ್ಯಾಮೆರಾಗಳು, ಸ್ಪೀಡ್‌ ಗನ್‌ಗಳು ಸಂಚಾರ ನಿಯಮ ಉಲ್ಲಂಘಿಸುವವರ ವಿರುದ್ಧ ತ್ವರಿತ ಕ್ರಮ ಕೈಗೊಳ್ಳಲು ನೆರವಾಗಲಿವೆ. ಜುಲೈ 1ರಿಂದ ಮೈಸೂರು-ಬೆಂಗಳೂರು ಹೆದ್ದಾರಿಯು ಸಂಪೂರ್ಣವಾಗಿ ಕ್ರಿಯಾತ್ಮಕ ಐಟಿಎಂಎಸ್ ಕಾರಿಡಾರ್ (ITMS Corridor) ಆಗಲಿದೆ ಎಂದು ಕರ್ನಾಟಕ ಸಂಚಾರ ಮತ್ತು ರಸ್ತೆ ಸುರಕ್ಷತೆಯ ಎಡಿಜಿಪಿ ಅಲೋಕ್ ಕುಮಾರ್ ಇತ್ತೀಚೆಗೆ ತಿಳಿಸಿದ್ದರು.

ಐಟಿಎಂಎಸ್ ಅಥವಾ ಇಂಟೆಲಿಜೆಂಟ್ ಟ್ರಾಫಿಕ್ ಮ್ಯಾನೇಜ್‌ಮೆಂಟ್ ಸಿಸ್ಟಮ್ ಅನ್ನು ಡಿಸೆಂಬರ್ 2022ರಲ್ಲಿ ಬೆಂಗಳೂರಿನಲ್ಲಿ ಚಾಲನೆಗೆ ತರಲಾಯಿತು. ಅದಕ್ಕಾಗಿ 250 ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ (ಎಎನ್‌ಪಿಆರ್) ಕ್ಯಾಮೆರಾಗಳು ಮತ್ತು 80 ರೆಡ್ ಲೈಟ್ ಉಲ್ಲಂಘನೆ ಪತ್ತೆ (ಆರ್‌ಎರ್‌ವಿಡಿ) ಕ್ಯಾಮೆರಾಗಳನ್ನು ನಗರದ 50 ಜಂಕ್ಷನ್ ಗಳಲ್ಲಿ ಅಳವಡಿಸಲಾಗಿದೆ. ಈಗ ಐಟಿಎಂಎಸ್ ಅಡಿಯಲ್ಲಿ ಸ್ವಯಂಚಾಲಿತ ನಂಬರ್ ಪ್ಲೇಟ್ ರೆಕಗ್ನಿಷನ್ ಕ್ಯಾಮೆರಾಗಳನ್ನು ಮೈಸೂರಿನ ಪ್ರಮುಖ ರಸ್ತೆಗಳಲ್ಲಿ 8.5 ಕೋಟಿ ರೂ. ಅಂದರೆ ಮೈಸೂರು ನಗರಕ್ಕೆ ರೂಪಾಯಿ 4 ಕೋಟಿ ಮತ್ತು ಮೈಸೂರು ಜಿಲ್ಲೆಗೆ ರೂ.4.5 ಕೋಟಿ ಅಂದಾಜು ವೆಚ್ಚದಲ್ಲಿ ಅಳವಡಿಸಲಾಗಿದೆ. ಅಲ್ಲದೇ ಜುಲೈ 1ರಿಂದ ಟ್ರಾಫಿಕ್ ರೂಲ್ಸ್ ಬ್ರೇಕ್ ಮಾಡಿದ ವಾಹನ ಚಾಲಕರಿಗೆ ಚಲನ್ ನೀಡುವ ಪ್ರಕ್ರಿಯೆ ಆರಂಭವಾಗಲಿದೆ ಎಂದು ಮಾಹಿತಿ ನೀಡಿದ್ದರು.

ಅಲ್ಲದೇ ಕ್ಯಾಮೆರಾಗಳನ್ನು ಮೈಸೂರು ಜಿಲ್ಲೆಯ ಹುಣಸೂರು, ಎಚ್ ಡಿ ಕೋಟೆ, ನಂಜನಗೂಡು ಮತ್ತು ಟಿ ನರಸೀಪುರದಂತಹ ಹಲವಾರು ಪ್ರದೇಶಗಳಲ್ಲಿ ಅಳವಡಿಸಲಾಗುವುದು. ಹಾಗಾಗಿ ರೂಲ್ಸ್ ಬ್ರೇಕ್ ಮಾಡಿದ ವಾಹನ ಚಾಲಕರಿಗೆ ಸರಿಯಾದ ಸಮಯಕ್ಕೆ ಎಸ್ ಎಂಎಸ್ ಕಳುಹಿಸಲಾಗುವುದು ಎಂದು ಅವರು ಹೇಳಿದ್ದರು.
ಹೆಚ್ಚುವರಿಯಾಗಿ ಈ ವರ್ಷ ಬೆಂಗಳೂರಿನಿಂದ ಹತ್ತಿರದ ತಾಲೂಕುಗಳು ಮತ್ತು ಜಿಲ್ಲೆಗಳಿಗೆ ಸಂಪರ್ಕಿಸುವ ನಾಲ್ಕು ಪ್ರಮುಖ ಹೆದ್ದಾರಿಗಳಲ್ಲಿ (ತುಮಕೂರು ರಸ್ತೆ, ಕನಕಪುರ ರಸ್ತೆ, ಹೊಸೂರು ರಸ್ತೆ ಮತ್ತು ಹೊಸಕೋಟೆ) ಐಟಿಎಂಎಸ್ ಕ್ಯಾಮೆರಾಗಳನ್ನು ಅಳವಡಿಸಲು ಎಡಿಜಿಪಿ ಪ್ರಸ್ತಾಪಿದ್ದಾರೆ ಎಂಬುದಾಗಿ ತಿಳಿದುಬಂದಿದೆ.

ಐಟಿಎಂಎಸ್ ಕ್ಯಾಮೆರಾಗಳ ಜೊತೆಗೆ ಅವರು ಈ ರಸ್ತೆಗಳಲ್ಲಿ ವೇರಿಯಬಲ್ ಮೆಸೇಜಿಂಗ್ ಚಿಹ್ನೆಗಳನ್ನು ಸೇರಿಸಲು ಯೋಜಿಸುತ್ತಿದ್ದಾರೆ ಎನ್ನಲಾಗಿದೆ. ಈ ಸೈನ್ ಬೋರ್ಡ್ ಗಳು ಸರಿಯಾದ ಸಮಯಕ್ಕೆ ಟ್ರಾಫಿಕ್ ಪರಿಸ್ಥಿತಿಯ ಕುರಿತು ಡಿಜಿಟಲ್ ಸಂದೇಶವನ್ನು ಪ್ರದರ್ಶಿಸುತ್ತದೆ. ಈ ಪ್ರಸ್ತಾವನೆಯನ್ನು ರಾಜ್ಯ ರಸ್ತೆ ಸಾರಿಗೆ ಪ್ರಾಧಿಕಾರವು ಅನುಮೋದಿಸಿದ್ದು, ಜುಲೈನಲ್ಲಿ ಟೆಂಡರ್ ಶುರುವಾಗಲಿದೆ. ಗದಗ ಪಟ್ಟಣದಲ್ಲಿಯೂ ಐಟಿಎಂಎಸ್ ಯೋಜನೆಯನ್ನು ಕೈಗೆತ್ತಿಕೊಳ್ಳಲಾಗಿದೆ. ಈ ಬಗ್ಗೆ ಜೂನ್ 1ರಂದು ರಾಜ್ಯ ಪೊಲೀಸ್ ನ ಸಂಚಾರ ಮತ್ತು ರಸ್ತೆ ಸುರಕ್ಷತಾ ವಿಭಾಗವು ಪ್ರಾದೇಶಿಕ ಎನ್ ಹೆಚ್ಎಐ ಅಧಿಕಾರಿಯೊಂದಿಗೆ ಸಭೆ ನಡೆಸಿತ್ತು. ಹಾಗೇ ಎಡಿಜಿಪಿ ಅವರು ಈ ಬಗ್ಗೆ ರಸ್ತೆ ಸಾರಿಗೆ ಮತ್ತು ಹೆದ್ದಾರಿ ಸಚಿವಾಲಯಕ್ಕೆ ಪತ್ರ ಬರೆಯುವ ಚಿಂತನೆ ಕೂಡ ನಡೆಸುತ್ತಿದ್ದಾರೆ ಎನ್ನಲಾಗಿದೆ.

ಇದನ್ನೂ ಓದಿ: Robbery Case: ಬೆಂಗಳೂರು- ಮೈಸೂರು ದಶಪಥದಲ್ಲಿ ಲಾಂಗ್‌ ತೋರಿಸಿ ಸುಲಿಗೆ

Exit mobile version