Site icon Vistara News

ವಿಸ್ತಾರ ಸಂಪಾದಕೀಯ: ಅತಿ ಹೆಚ್ಚು ಭಯೋತ್ಪಾದನೆ ಸಾವು, ಪಾಪದ ಫಲ ಉಣ್ಣುತ್ತಿರುವ ಪಾಕ್

Pakistan has the highest death toll from terrorism, the fruits of sin

#image_title

2022ರಲ್ಲಿ ವಿಶ್ವಾದ್ಯಂತ ಭಯೋತ್ಪಾದನೆ (Pakistan Terrorism ) ಸಂಬಂಧಿತ ಸಾವುಗಳಲ್ಲಿ ಪಾಕಿಸ್ತಾನವು ಎರಡನೇ ಅತಿದೊಡ್ಡ ಹೆಚ್ಚಳವನ್ನು ದಾಖಲಿಸಿದೆ. 2021ರಲ್ಲಿ 292 ಇದ್ದ ಸಾವಿನ ಸಂಖ್ಯೆ ಕಳೆದ ವರ್ಷದ ಶೇ.120 ಏರಿಕೆ ದಾಖಲಿಸಿದ್ದು, ಒಟ್ಟು 643 ಸಾವು ವರದಿಯಾಗಿದೆ. ಇದು ವರ್ಷದಿಂದ ವರ್ಷಕ್ಕೆ ಅತಿದೊಡ್ಡ ಹೆಚ್ಚಳವನ್ನು ಕಾಣುತ್ತಿದೆ. ಅದರಲ್ಲೂ ಭಯೋತ್ಪಾದನೆಯಿಂದಾಗಿ ಸಾವನ್ನಪ್ಪುತ್ತಿರುವವರಲ್ಲಿ ಶೇ.55 ಮಂದಿ ಸೇನೆಯ ಸಿಬ್ಬಂದಿ. ಭಯೋತ್ಪಾದನೆ ಸಂಬಂಧಿಸಿ ಜನರು ಸಾವನ್ನಪ್ಪುತ್ತಿರುವ ಪಟ್ಟಿಯಲ್ಲಿ ಪಾಕಿಸ್ತಾನ ನಾಲ್ಕು ಸ್ಥಾನ ಮೇಲಕ್ಕೆ ಹೋಗಿದ್ದು ಸದ್ಯ ಆರನೇ ಸ್ಥಾನದಲ್ಲಿದೆ. ಇದೆಲ್ಲವೂ ಆಸ್ಟ್ರೇಲಿಯಾ ಮೂಲದ ಇನ್‌ಸ್ಟಿಟ್ಯೂಟ್ ಫಾರ್ ಎಕನಾಮಿಕ್ಸ್ ಅಂಡ್ ಪೀಸ್ ಬಿಡುಗಡೆ ಮಾಡಿರುವ ವಾರ್ಷಿಕ ಜಾಗತಿಕ ಭಯೋತ್ಪಾದನಾ ಸೂಚ್ಯಂಕ(ಜಿಟಿಐ) ವರದಿಯಲ್ಲಿದೆ.

ಪಾಕಿಸ್ತಾನವು ಭಯೋತ್ಪಾದನೆಯ ರಾಜಧಾನಿ ಎನ್ನುವುದು ಈ ಹಿಂದೆಯೇ ಸಾಬೀತಾದ ಸಂಗತಿ. ಭಯೋತ್ಪಾದನೆಯ ಬೀಜವನ್ನು ಬಿತ್ತಿ, ಬೆಳೆಸಿದ್ದೇ ಪಾಕ್. ಈಗ ಪಾಕ್ ಸ್ವತಃ ಇದರ ಫಲ ಉಣ್ಣುತ್ತಿದೆ. ಆ ದೇಶದ ಉಗ್ರವಾದಕ್ಕೆ ಮೂಲವಾಗಿದ್ದುದು ಕಾಶ್ಮೀರ. ಕಾಶ್ಮೀರ ಕಣಿವೆಯನ್ನು ತನ್ನದಾಗಿಸಿಕೊಳ್ಳಬೇಕು ಎಂಬ ಒಂದೇ ಒಂದು ದುಷ್ಟ ಹಠದಿಂದ ಅದು ಉಗ್ರರನ್ನು ಹುಟ್ಟುಹಾಕಿತು. ಧರ್ಮಗ್ರಂಥಗಳಲ್ಲಿ ಇಲ್ಲದ ವಿಚಾರಗಳನ್ನು ಇದೆಯೆಂದು ವ್ಯಾಖ್ಯಾನಿಸಿ ಮತಾಂಧರನ್ನು ಸೃಷ್ಟಿಸಿತು. ಕಾಶ್ಮೀರದಲ್ಲಿ ಪ್ರತ್ಯೇಕತಾವಾದಿಗಳನ್ನು ಸೃಷ್ಟಿಸಿ ಅವರಿಗೆ ಆಯುಧಗಳನ್ನೂ ಪೂರೈಸಿತು. ಪಂಜಾಬ್‌ನಲ್ಲೂ ಖಲಿಸ್ತಾನ್‌ವಾದಿಗಳಿಗೆ ತೆರೆಮರೆಯ ಬೆಂಬಲ ನೀಡಿತು. ಆದರೆ ಕಾಶ್ಮೀರ ಕೈತಪ್ಪಿತು. ಪೂರ್ವ ಪಾಕಿಸ್ತಾನದಲ್ಲಿ ಸಾಕಷ್ಟು ಭಯೋತ್ಪಾದನೆ ಸೃಷ್ಟಿಸಲು ಯತ್ನಿಸಿದರೂ ಅದೂ ಪಾರಾಗಿ ಪ್ರತ್ಯೇಕ ರಾಷ್ಟ್ರವಾಯಿತು. ಈಗ ಅದೇ ಪಾಕ್ ಸೇನಾಧಿಕಾರಿಗಳು ತಮ್ಮದೇ ನೆಲದ ಉಗ್ರರ ಉಪಟಳ ತಾಳಲಾರದೆ ತತ್ತರಿಸುತ್ತಿದ್ದಾರೆ.

ಪಾಕಿಸ್ತಾನದ ಭಯೋತ್ಪಾದನೆಯ ರಫ್ತು ನೀತಿ ದಾರುಣ ವೈಫಲ್ಯ ಕಂಡಿರುವುದಕ್ಕೆ ಹಲವು ಉದಾಹರಣೆಗಳನ್ನು ನೀಡಬಹುದು. ತನ್ನದೇ ನೆಲವಾದ ಬಲೂಚಿಸ್ತಾನದಲ್ಲಿ ಪಾಕ್‌ನ ಉಗ್ರವಾದದ ನೀತಿ ಅದಕ್ಕೇ ತಿರುಗಿ ಬಿತ್ತು. ಅಲ್ಲಿಯೇ ಪ್ರತ್ಯೇಕತಾವಾದಿಗಳು ಹುಟ್ಟಿಕೊಂಡು ಪಾಕ್‌ನ ವಿರುದ್ಧವೇ ಸಾರಿರುವ ಸಮರ ಈಗ ಉಲ್ಬಣಾವಸ್ಥೆಯಲ್ಲಿದೆ. ಅಲ್ಲಿನ ಭಯೋತ್ಪಾದನೆ ಸಂಬಂಧಿತ ಸಾವುಗಳಿಗೆ ಅತಿ ದೊಡ್ಡ ಕಾರಣವಾಗಿರುವುದು ಬಲೂಚಿಸ್ತಾನ್ ಲಿಬರೇಶನ್ ಆರ್ಮಿ(ಬಿಎಲ್‌ಎ). ಕಳೆದ ವರ್ಷ ಅಲ್ಲಿ ಭಯೋತ್ಪಾದನೆಗೆ ಸಂಬಂಧಿಸಿ ಆದ ಸಾವುಗಳಲ್ಲಿ ಶೇ. 36 ಪಾಲು ಈ ಉಗ್ರ ಸಂಘಟನೆಯದ್ದಿದೆ. ಮತ್ತೊಂದೆಡೆ ಆಫ್ಘನ್ ಮೂಲದ ತಾಲಿಬಾನ್‌ಗಳು ಸರಣಿ ದಾಳಿ ನಡೆಸುತ್ತಿದ್ದಾರೆ. ತಾಲಿಬಾನಿಗಳಿಗೆ ದೊಡ್ಡ ಬೆಂಬಲ ನೀಡಿದ್ದೇ ಪಾಕ್.‌ ಈಗ ಅದು ಭಸ್ಮಾಸುರನಾಗಿದೆ. ಇಂದು ಸಿರಿಯಾ ಮುಂತಾದೆಡೆಗೆ, ಯುರೋಪ್‌ನ ಹಲವೆಡೆಗೆ ವ್ಯಾಪಿಸಿರುವ ಭಯೋತ್ಪಾದನೆಯ ಕಾಳ್ಗಿಚ್ಚಿನ ಹಿಂದೆ ಪಾಕ್‌ನ ದೊಡ್ಡ ಪಾಲಿದೆ.

ಇದನ್ನೂ ಓದಿ : ವಿಸ್ತಾರ ಸಂಪಾದಕೀಯ: ರಸ್ತೆ ಅಗೆಯುವ ಅಧಿಕಾರಿಗಳಿಗೆ ವಿವೇಚನೆ ಇರಲಿ

ಭಾರತವನ್ನು ದ್ವೇಷಿಸುತ್ತ ಪಾಕ್‌ ಹುಟ್ಟುಹಾಕಿದ ಮತಾಂಧ ಭಯೋತ್ಪಾದನೆ ಇಂದು ಅದನ್ನೇ ತಿನ್ನುತ್ತಿದೆ. ʼಮನೆಯೊಳಗಣ ಕಿಚ್ಚು ಮನೆಯ ಸುಟ್ಟಲ್ಲದೆ ನೆರೆಮನೆಯ ಸುಡದುʼ ಎಂದು ಬಸವಣ್ಣನವರು ಹೇಳಿದ್ದು ಇಂಥವರನ್ನು ನೋಡಿಯೇ ಆಗಿದೆ. ಇದಕ್ಕೆ ಪಾಕ್‌ನ ಬರ್ಬರ ಆರ್ಥಿಕ ದುಃಸ್ಥಿತಿಯೂ ಸೇರಿಕೊಂಡು ಹಸಿವು, ಬಡತನ, ನಿರುದ್ಯೋಗ, ಭಯೋತ್ಪಾದನೆಗಳ ಗೂಡಾಗಿಬಿಟ್ಟಿದೆ ಆ ದೇಶ. ಇನ್ನೊಂದೆಡೆ ಭಾರತ, ಪಾಕ್ ಪ್ರೇರಿತ ಉಗ್ರ ವ್ಯೂಹಗಳನ್ನು ಭೇದಿಸುತ್ತ ಶಾಂತಿಯಲ್ಲಿ ನೆಲೆ ಕಂಡುಕೊಂಡಿದೆ. ಇನ್ನಾದರೂ ಪಾಕ್ ಆಡಳಿತಗಾರರಿಗೆ, ಸೇನಾಧಿಕಾರಿಗಳಿಗೆ ಬುದ್ಧಿ ಬರಲಿ. ಇದರಿಂದ ಪಾಕಿಸ್ತಾನ ಹಾಗೂ ಭಾರತದಲ್ಲಿದ್ದೂ ಪಾಕಿಸ್ತಾನವನ್ನು ಮಾದರಿ ಎಂದು ಭಾವಿಸುವವರು ಕಲಿಯಬೇಕಾದ ಪಾಠವೆಂದರೆ, ಭಯೋತ್ಪಾದನೆಯೆಂಬುದು ಬೂಮರ್ಯಾಂಗ್‌ ಇದ್ದಂತೆ. ಅದು ಪ್ರಯೋಗಿಸಿದವರತ್ತಲೇ ತಿರುಗಿಬರುತ್ತದೆ.

ಉಗ್ರವಾದದ ಹಾದಿ ಹಿಡಿಯಲು ಮೂಲ ಕಾರಣವಾಗುವುದು ಮತಾಂಧತೆ ಹಾಗೂ ಶಿಕ್ಷಣದ ಕೊರತೆ. ಭಾರತದಲ್ಲೂ ಇಸ್ಲಾಮಿಕ್‌ ಪ್ರಭುತ್ವ ಬರಬೇಕೆಂದು ಹಾರೈಸುವವರಲ್ಲಿ ಇವು ಹೇರಳವಾಗಿದೆ. ಪಾಕಿಸ್ತಾನದ ದುಃಸ್ಥಿತಿಯಿಂದ ಅವರು ಪಾಠ ಕಲಿಯಬೇಕಿದೆ. ಪಾಕ್‌ನ ಸ್ಥಿತಿ ಭಾರತಕ್ಕೆ ಎಚ್ಚರಿಕೆಯ ಗಂಟೆ ಕೂಡ. ನೆರೆಮನೆಗೆ ಬಿದ್ದ ಬೆಂಕಿ ನಮ್ಮ ಮನೆಗೂ ವ್ಯಾಪಿಸದಂತೆ ಎಚ್ಚರಿಕೆ ವಹಿಸಬೇಕಾದ ಅಗತ್ಯವಿದೆ. ಅಲ್ಲಿನ ಅಸ್ಥಿರತೆ ಭಾರತದ ಭದ್ರತೆಗೆ ತೊಂದರೆಯುಂಟುಮಾಡದಂತೆ ಎಚ್ಚರಿಕೆಯನ್ನು ತೆಗೆದುಕೊಳ್ಳಬೇಕಿದೆ.

Exit mobile version