ಇಸ್ಲಾಮಾಬಾದ್: ಉಗ್ರರ ಪೋಷಣೆ, ಹಣಕಾಸು ನೆರವು, ಅಸಮರ್ಥ ನಾಯಕತ್ವ, ಕೊರೊನಾ ಬಿಕ್ಕಟ್ಟು ಸೇರಿ ಹಲವು ಕಾರಣಗಳಿಂದ ಪಾಕಿಸ್ತಾನ (Pakistan) ದಿವಾಳಿಯಾಗಿದೆ. ಇದೇ ಕಾರಣಕ್ಕಾಗಿ ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆ (IMF) ಎದುರು ಹಣಕ್ಕಾಗಿ ಭಿಕ್ಷಾ ಪಾತ್ರೆ ಹಿಡಿದು ನಿಂತಿದೆ. ಸಾಲ ಪಡೆಯಲು ಹೆಣಗಾಡುತ್ತಿದೆ. ಹಣದುಬ್ಬರದ ಏರಿಕೆಯಿಂದಾಗಿ ಜನರ ಜೀವನವೂ ಸಂಕಷ್ಟಕ್ಕೆ ಸಿಲುಕಿದೆ. ಇದರ ಬೆನ್ನಲ್ಲೇ, ದೇಶದ ನಾಗರಿಕರ ವಿರುದ್ಧ ಪಾಕಿಸ್ತಾನವು ತೆರಿಗೆಯ ಅಸ್ತ್ರ ಪ್ರಯೋಗಿಸಲು ಮುಂದಾಗಿದ್ದು, ಆದಾಯ ತೆರಿಗೆ ರಿಟರ್ನ್ಸ್ (Tax Returns) ಸಲ್ಲಿಸದ 5 ಲಕ್ಷ ಜನರ ಸಿಮ್‌ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲು ತೀರ್ಮಾನಿಸಿದೆ.
ಪಾಕಿಸ್ತಾನದ ಖಜಾನೆಯಲ್ಲಿ ಹಣವಿಲ್ಲ. ಇದರಿಂದ ಸುಗಮವಾಗಿ ಆಡಳಿತ ನಡೆಸುವುದು ಬಿಡಿ ನೌಕರರಿಗೆ ಸಂಬಳ ಕೊಡಲೂ ಆಗುತ್ತಿಲ್ಲ. ಹಾಗಾಗಿ, ಜನರಿಂದ ತೆರಿಗೆ ಸಂಗ್ರಹಿಸಲು ಪಾಕಿಸ್ತಾನವು ಮುಂದಾಗಿದೆ. ಇದರ ಭಾಗವಾಗಿಯೇ, 2023ರಲ್ಲಿ ಐಟಿ ರಿಟರ್ನ್ಸ್ ಸಲ್ಲಿಸದ 5,06,671 ಜನರ ಸಿಮ್‌ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸಲು ಪಾಕಿಸ್ತಾನದ ಫೆಡರಲ್ ಬೋರ್ಡ್ ಆಫ್ ರೆವೆನ್ಯೂ (FBR) ನಿರ್ಧರಿಸಿದೆ. ಅವರು ಐಟಿ ರಿಟರ್ನ್ಸ್ ಸಲ್ಲಿಸಿದ ಬಳಿಕವೇ ಸಿಮ್‌ಕಾರ್ಡ್‌ಗಳನ್ನು ಸಕ್ರಿಯಗೊಳಿಸಲಾಗುವುದು ಎಂದು ಕೂಡ ತಿಳಿಸಿದೆ.
ಸಿಮ್ ಕಾರ್ಡ್‌ಗಳನ್ನು ನಿಷ್ಕ್ರಿಯಗೊಳಿಸುವ ಕುರಿತು ಪಾಕಿಸ್ತಾನದ ಟೆಲಿಕಮ್ಯುನಿಕೇಷನ್ ಅಥಾರಿಟಿಗೆ (PTA) ನಿರ್ದೇಶನ ನೀಡಲಾಗಿದೆ. ಸಿಮ್ ಕಾರ್ಡ್ ಬಂದ್ ಮಾಡಿರುವ ಕುರಿತು ಮೇ 15ರೊಳಗೆ ವರದಿ ನೀಡುವಂತೆಯೂ ಸೂಚಿಸಲಾಗಿದೆ ಎಂದು ಹೇಳಲಾಗುತ್ತಿದೆ. ಪಾಕಿಸ್ತಾನದಲ್ಲಿ ತೆರಿಗೆ ಪಾವತಿಸದ ಸುಮಾರು 24 ಲಕ್ಷ ತೆರಿಗೆದಾರರನ್ನು ಗುರುತಿಸಲಾಗಿದೆ ಎಂದು ತಿಳಿದುಬಂದಿದೆ. ಆರಂಭಿಕ ಹಂತದಲ್ಲಿ 5 ಲಕ್ಷ ತೆರಿಗೆದಾರರ ಸಿಮ್ ಕಾರ್ಡ್ ನಿಷ್ಕ್ರಿಯಗೊಳಿಸಲು ತೀರ್ಮಾನಿಸಲಾಗಿದೆ.
ಅಗತ್ಯ ವಸ್ತುಗಳ ಬೆಲೆ ಗಗನಕ್ಕೆ
ಪಾಕಿಸ್ತಾನದಲ್ಲಿ ಹಣದುಬ್ಬರದ ಏರಿಕೆಯಿಂದಾಗಿ ಅಗತ್ಯ ವಸ್ತುಗಳ ಬೆಲೆಯು ಗಗಣಕ್ಕೇರಿದೆ. ಒಂದು ಲೀಟರ್ ಹಾಲಿಗೆ 212 ರೂ., ಕೆ.ಜಿ ಅಕ್ಕಿಗೆ 330 ರೂ., ಒಂದು ಕೆ.ಜಿ ಸೇಬಿಗೆ 300 ರೂ., ಒಂದು ಕೆ.ಜಿ ಟೊಮ್ಯಾಟೊಗೆ 125 ರೂ., ಒಂದು ಕೆ.ಜಿ ಈರುಳ್ಳಿ 125 ರೂ., ಒಂದು ಲೀಟರ್ ಪೆಟ್ರೋಲ್‌ಗೆ 290 ರೂ. ಇದೆ. ದಿನೇದಿನೆ ಅಗತ್ಯ ವಸ್ತುಗಳ ಬೆಲೆಯಲ್ಲಿ ಏರಿಕೆಯಾಗುತ್ತಲೇ ಇರುವುದು ಪಾಕಿಸ್ತಾನದ ನಾಗರಿಕರನ್ನು ಸಂಕಷ್ಟಕ್ಕೆ ಸಿಲುಕಿದೆ. ಕೊರೊನಾ ನಂತರದ ದುಸ್ಥಿತಿ ಹೀಗೆಯೇ ಮುಂದುವರಿದಿರುವುದು ಅವರನ್ನು ಆತಂಕಕ್ಕೆ ದೂಡಿದೆ.
ಪಾಕಿಸ್ತಾನವು ಅಂತಾರಾಷ್ಟ್ರೀಯ ಹಣಕಾಸು ಸಂಸ್ಥೆಯಿಂದ ಸಾಲ ಪಡೆಯಲು ಹೆಣಗಾಡುತ್ತಿದೆ. ಈಗಾಗಲೇ ಐಎಂಎಫ್ 1.10 ಶತಕೋಟಿ ಡಾಲರ್ ಸಾಲ ನೀಡಲು ಒಪ್ಪಿಗೆ ಸೂಚಿಸಿದೆ. ಆದರೆ, ಮುಂದಿನ ಮೂರು ವರ್ಷಗಳವರೆಗೆ 6 ಶತಕೋಟಿ ಡಾಲರ್ ಸಾಲ ನೀಡಿ ಎಂಬುದಾಗಿ ಪಾಕಿಸ್ತಾನ ಮನವಿ ಮಾಡುತ್ತಿದೆ. ಆದರೆ, ಪಾಕ್‌ನಲ್ಲಿ ದಿನೇದಿನೆ ಹಣದುಬ್ಬರದ ಏರಿಕೆಯಾಗುತ್ತಿರುವ ಕಾರಣ ಸಾಲ ನೀಡಲು ಐಎಂಎಫ್ ಹಿಂದೇಟು ಹಾಕುತ್ತಿದೆ ಎಂದು ಹೇಳಲಾಗುತ್ತಿದೆ.
ಇದನ್ನೂ ಓದಿ: Narendra Modi:”ಇಲ್ಲಿ ಕಾಂಗ್ರೆಸ್ ಸಾಯುತ್ತಿದೆ…ಅಲ್ಲಿ ಪಾಕಿಸ್ತಾನ ಅಳುತ್ತಾ ಪ್ರಾರ್ಥಿಸುತ್ತಿದೆ”-ಮೋದಿ ಅಟ್ಯಾಕ್