Site icon Vistara News

PM Narendra Modi Poland visit: ಉಕ್ರೇನ್‌ನ ಹಾದಿಯಲ್ಲಿ ʼಯುದ್ಧʼದ ಕುರಿತು ನಿಲುವು ಪ್ರಕಟಿಸಿದ ಪ್ರಧಾನಿ ನರೇಂದ್ರ ಮೋದಿ

Unified Pension scheme

ವಾರ್ಸಾ: ಇದು ಯುದ್ಧದ ಯುಗವಲ್ಲ ಎಂದು ಪ್ರಧಾನಿ ನರೇಂದ್ರ ಮೋದಿ (PM Narendra Modi) ಅವರು ಪುನರುಚ್ಚರಿಸಿದ್ದಾರೆ. ಈ ಹಿಂದೆ ರಷ್ಯಾ ಅಧ್ಯಕ್ಷ ವ್ಲಾದಿಮಿರ್‌ ಪುಟಿನ್‌ (Vladimir Putin) ಅವರಿಗೆ ಹೇಳಿದ್ದ ಮಾತನ್ನು ಮೋದಿಯವರು ಮತ್ತೆ ಹೇಳಿದ್ದು, ಪೋಲೆಂಡ್‌ಗೆ ಭೇಟಿ ನೀಡಿರುವ ಅವರು (PM Narendra Modi Poland visit) ಈ ಮಾತನ್ನು ಹೇಳಿದ್ದಾರೆ.

ಉಕ್ರೇನ್‌ಗೆ ತಮ್ಮ ಬಹು ನಿರೀಕ್ಷಿತ ಭೇಟಿಗೆ ಎರಡು ದಿನಗಳ ಮೊದಲು, ಪೋಲೆಂಡ್‌ನಲ್ಲಿ ಭಾರತೀಯ ಸಮುದಾಯವನ್ನು ಉದ್ದೇಶಿಸಿ ಅವರು ಮಾತನಾಡಿದರು. ಅಲ್ಲಿ ಅವರು ರಷ್ಯಾದ ಆಕ್ರಮಣದ ಶಾಂತಿಯುತ ಪರಿಹಾರಕ್ಕಾಗಿ ಪ್ರಚಾರ ಮಾಡುವುದಾಗಿ ಶಪಥ ಮಾಡಿದ್ದಾರೆ.

“ಭಾರತವು ಈ ಪ್ರದೇಶದಲ್ಲಿ ಶಾಶ್ವತ ಶಾಂತಿಯನ್ನು ಪ್ರತಿಪಾದಿಸುತ್ತದೆ. ನಮ್ಮ ನಿಲುವು ತುಂಬಾ ಸ್ಪಷ್ಟವಾಗಿದೆ- ಇದು ಯುದ್ಧದ ಯುಗವಲ್ಲ. ಇದು ಮಾನವೀಯತೆಗೆ ಬೆದರಿಕೆ ಹಾಕುವ ಸವಾಲುಗಳ ವಿರುದ್ಧ ಒಗ್ಗೂಡುವ ಸಮಯ. ಭಾರತವು ರಾಜತಾಂತ್ರಿಕತೆ ಮತ್ತು ಸಂವಾದಗಳಲ್ಲಿ ನಂಬಿಕೆ ಹೊಂದಿದೆ” ಎಂದು ಪ್ರಧಾನಿ ಮೋದಿ ಹೇಳಿದರು.

73 ವರ್ಷ ವಯಸ್ಸಿನ ಪಿಎಂ ಮೋದಿ ಅವರು ಉಕ್ರೇನ್ ಪ್ರವಾಸ ಕೈಗೊಂಡ ಮೊದಲ ಭಾರತೀಯ ಪ್ರಧಾನಿ ಎನಿಸಿದ್ದಾರೆ. 45 ವರ್ಷಗಳಲ್ಲಿ ಪೋಲೆಂಡ್‌ಗೆ ಪ್ರಯಾಣಿಸುತ್ತಿರುವ ಮೊದಲ ಭಾರತೀಯ ಪ್ರಧಾನಿ ಕೂಡ ಹೌದು. ಪೋಲೆಂಡ್‌, ಉಕ್ರೇನ್‌ನ ನಿಕಟ ಮಿತ್ರ ಹಾಗೂ ಉಕ್ರೇನ್‌ಗೆ ತೆರಳುವ ವಿದೇಶಿ ನಾಯಕರಿಗೆ ಪೋಲೆಂಡ್‌ ಮುಖ್ಯ ಮಾರ್ಗವಾಗಿದೆ.

ಆಗಸ್ಟ್ 23ರಂದು ಉಕ್ರೇನ್‌ ಅಧ್ಯಕ್ಷ ವೊಲೊಡಿಮಿರ್ ಝೆಲೆನ್ಸ್ಕಿ ಅವರ ಆಹ್ವಾನದ ಮೇರೆಗೆ ಉಕ್ರೇನ್‌ಗೆ ಭೇಟಿ ನೀಡುತ್ತಿರುವ ಪ್ರಧಾನಿ ಮೋದಿ, ನಡೆಯುತ್ತಿರುವ ಸಂಘರ್ಷದ ಶಾಂತಿಯುತ ಪರಿಹಾರದ ಕುರಿತು ಉಕ್ರೇನ್ ನಾಯಕರೊಂದಿಗೆ ತಮ್ಮ ದೃಷ್ಟಿಕೋನಗಳನ್ನು ಹಂಚಿಕೊಳ್ಳುವುದಾಗಿ ಹೇಳಿದ್ದಾರೆ. ಇತ್ತೀಚೆಗೆ ಮಾಸ್ಕೋಗೆ ಕೂಡ ಮೋದಿ ಭೇಟಿ ನೀಡಿದ್ದರು. ಇದಾಗಿ ಆರು ವಾರಗಳ ನಂತರ, ರಷ್ಯದ ವೈರಿಯಾದ ಉಕ್ರೇನ್‌ಗೆ ಭೇಟಿ ಕೊಡುತ್ತಿದ್ದಾರೆ.

ಸೆಪ್ಟೆಂಬರ್ 2022ರಲ್ಲಿ, SCO ಶೃಂಗಸಭೆಯ ಸಂದರ್ಭದಲ್ಲಿ ರಷ್ಯಾದ ಅಧ್ಯಕ್ಷ ವ್ಲಾಡಿಮಿರ್ ಪುಟಿನ್ ಅವರೊಂದಿಗೆ ಮಾತನಾಡುವಾಗ ಪ್ರಧಾನಿ ಮೊದಲ ಬಾರಿಗೆ “ಇದು ಯುದ್ಧದ ಯುಗವಲ್ಲ” ಎಂದಿದ್ದರು. ಸೆಪ್ಟೆಂಬರ್ 16ರಂದು ಸಮರ್‌ಕಂಡ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ಸಂದರ್ಭದಲ್ಲಿ “ಇಂದಿನ ಯುಗವು ಯುದ್ಧಕ್ಕೆ ಹೇಳಿಸಿದ್ದಲ್ಲ” ಎಂದು ಮೋದಿ ಹೇಳಿದ್ದರು. ಆಹಾರ, ಇಂಧನ ಭದ್ರತೆ ಮತ್ತು ರಸಗೊಬ್ಬರಗಳ ಸಮಸ್ಯೆಗಳನ್ನು ಪರಿಹರಿಸಲು ಮಾರ್ಗಗಳನ್ನು ಕಂಡುಕೊಳ್ಳುವ ಅಗತ್ಯವನ್ನು ಒತ್ತಿ ಹೇಳಿದರು.

ಪೋಲೆಂಡ್‌ಗೆ ತೆರಳುವ ಮುನ್ನ ಪ್ರಧಾನಿ ಮೋದಿ, “ಸ್ನೇಹಿತ ಮತ್ತು ಪಾಲುದಾರನಾಗಿ, ಈ ಪ್ರದೇಶದಲ್ಲಿ ಶಾಂತಿ ಮತ್ತು ಸ್ಥಿರತೆಯ ಶೀಘ್ರ ಮರಳುವಿಕೆಯನ್ನು ನಾವು ಹಾರೈಸುತ್ತೇವೆ” ಎಂದು ಹೇಳಿದರು. ಎರಡು ದಿನಗಳ ಭೇಟಿಗಾಗಿ ಪೋಲೆಂಡ್‌ಗೆ ಆಗಮಿಸಿದ ಪ್ರಧಾನಿ ಮೋದಿ, ಭಾರತ ಮತ್ತು ಪೋಲೆಂಡ್ ನಡುವಿನ ಸಂಬಂಧದ ಇತಿಹಾಸವನ್ನು ಸ್ಮರಿಸುವ ಎರಡು ಸ್ಥಳಗಳಾದ ವಾರ್ಸಾದಲ್ಲಿನ ನವನಗರ ಸ್ಮಾರಕ ಮತ್ತು ಕೊಲ್ಹಾಪುರ್ ಸ್ಮಾರಕ ಜಾಮ್ ಸಾಹೇಬ್‌ಗೆ ಪುಷ್ಪಾರ್ಚನೆ ಮಾಡಿದರು.

ಇದನ್ನೂ ಓದಿ: PM Narendra Modi: ಅಧಿಕಾರದಿಂದ ಕೆಳಗಿಳಿಯುತ್ತಾರಾ ಪ್ರಧಾನಿ ಮೋದಿ? ಸಂಚಲನ ಮೂಡಿಸಿದ ಸುಬ್ರಮಣಿಯನ್‌ ಸ್ವಾಮಿ ಟ್ವೀಟ್‌

Exit mobile version