ವಾಷಿಂಗ್ಟನ್: 2022ರಲ್ಲಿ ರಷ್ಯಾ- ಉಕ್ರೇನ್ ಸಂಘರ್ಷ (Russia Ukraine War) ಉಲ್ಬಣಗೊಂಡಿದ್ದಾಗ ಉಕ್ರೇನ್ ವಿರುದ್ಧ ಪರಮಾಣು ಬಾಂಬ್ (Nuclear bomb Assault) ದಾಳಿಗೆ ರಷ್ಯಾ ಯೋಜಿಸಿತ್ತು. ಇದನ್ನು ತಡೆಯುವಲ್ಲಿ ಭಾರತದ ಪ್ರಧಾನ ಮಂತ್ರಿ ನರೇಂದ್ರ ಮೋದಿ (PM Narendra Modi) ಪ್ರಧಾನ ಪಾತ್ರ ವಹಿಸಿದ್ದರು ಎಂದು ಖ್ಯಾತ ಅಂತಾರಾಷ್ಟ್ರೀಯ ಮಾಧ್ಯಮ ಸಂಸ್ಥೆ ಸಿಎನ್‌ಎನ್ (CNN) ವರದಿ ಮಾಡಿದೆ.
ಉಕ್ರೇನ್ ರಾಜಧಾನಿ ಕೀವ್ ವಿರುದ್ಧ ಮಾಸ್ಕೋದಿಂದ ಸಂಭಾವ್ಯ ಪರಮಾಣು ದಾಳಿ ತಡೆಯಲು ಅಮೆರಿಕ ʼಕಠಿಣ ತಯಾರಿʼ ಮಾಡಿಕೊಂಡಿತ್ತು. ಬಿಕ್ಕಟ್ಟನ್ನು ತಪ್ಪಿಸುವಲ್ಲಿ ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ಕೆಲ ದೇಶಗಳ ಮುಖಂಡರ ಪ್ರಭಾವ ಪ್ರಮುಖ ಪಾತ್ರ ವಹಿಸಿದೆ ಎಂದು ವರದಿ ಹೇಳಿದೆ.
ಹಿರೋಷಿಮಾ ಮತ್ತು ನಾಗಸಾಕಿ ಮೇಲಿನ ಯುಎಸ್ ಪರಮಾಣು ಬಾಂಬ್ ದಾಳಿಯ ಬಳಿಕದ ಭಯಾನಕ ದಾಳಿ ಇದಾಗುವ ಸಂಭವ ಇತ್ತು. ರಷ್ಯಾ ಯುದ್ಧಭೂಮಿಯಲ್ಲಿ ಪರಮಾಣು ಶಸ್ತ್ರಾಸ್ತ್ರವನ್ನು ಬಳಸಬಹುದೆಂದು ಬೈಡೆನ್ ಆಡಳಿತ ನಿರ್ದಿಷ್ಟವಾಗಿ ಕಾಳಜಿ ವಹಿಸಿತ್ತು. ಈ ಆತಂಕಗಳ ನಡುವೆ, ಅಂತಹ ದಾಳಿಯಿಂದ ರಷ್ಯಾವನ್ನು ಹಿಮ್ಮೆಟ್ಟಿಸಲು ಭಾರತ ಸೇರಿದಂತೆ ರಷ್ಯಾದ ಕೆಲ ಮಿತ್ರರಾಷ್ಟ್ರಗಳ ಸಹಾಯವನ್ನು ಪಡೆಯಲು ಯುಎಸ್ ಪ್ರಯತ್ನಿಸಿತು.
“ನಾವು ಮಾಡಿದ ಒಂದು ಕೆಲಸವೆಂದರೆ ರಷ್ಯಾಗೆ ನೇರವಾಗಿ ಸಂದೇಶ ನೀಡುವುದು ಮಾತ್ರವಲ್ಲದೆ, ಇತರ ದೇಶಗಳ ಕಡೆಗೂ ಹೆಚ್ಚು ಗಮನ ಹರಿಸಿದ್ದು. ಪ್ರಧಾನಿ ನರೇಂದ್ರ ಮೋದಿ ಮತ್ತು ಇತರ ನಾಯಕರ ಪ್ರಭಾವ ಮತ್ತು ಸಾರ್ವಜನಿಕ ಹೇಳಿಕೆಗಳು ಬಿಕ್ಕಟ್ಟನ್ನು ತಪ್ಪಿಸಲು ಸಹಾಯ ಮಾಡಿದವುʼʼ ಎಂದು ಯುಎಸ್ ಅಧಿಕಾರಿಗಳು ಹೇಳಿದ್ದಾರೆ.
“ಅಂತಾರಾಷ್ಟ್ರೀಯ ಸಮುದಾಯದಿಂದ ಈ ಬಗ್ಗೆ ಕಳವಳವನ್ನು ವ್ಯಕ್ತಪಡಿಸುವುದು, ವಿಶೇಷವಾಗಿ ಜಾಗತಿಕ ದಕ್ಷಿಣದ ಪ್ರಮುಖ ದೇಶಗಳ ಕಳವಳ ಸಹ ಇದರಲ್ಲಿ ರಷ್ಯದ ಮನವೊಲಿಸುವ ಅಂಶವಾಗಿತ್ತು. ಭಾರತವು ಇದರಲ್ಲಿ ಪ್ರಮುಖವಾಗಿತ್ತು. ಚೀನಾ ಸಹ ಮಹತ್ವದ್ದಾಗಿತ್ತು. ಇತರರೂ ಇದ್ದರು. ಇದು ರಷ್ಯಾದ ಚಿಂತನೆಯ ಮೇಲೆ ಪರಿಣಾಮ ಬೀರಿದೆ” ಎಂದು ಅಮೆರಿಕದ ಹಿರಿಯ ಆಡಳಿತ ಅಧಿಕಾರಿ ಹೇಳಿದ್ದಾರೆ.
ಭಾರತದ ನಿಲುವು
ರಷ್ಯಾ- ಉಕ್ರೇನ್ ಸಂಘರ್ಷಕ್ಕೆ ಸಂಬಂಧಿಸಿದಂತೆ, ಭಾರತ ಯಾವಾಗಲೂ ನಾಗರಿಕ ಹತ್ಯೆಗಳನ್ನು ಖಂಡಿಸಿದೆ ಮತ್ತು ಸಂಘರ್ಷಕ್ಕೆ ಶಾಂತಿಯುತ ಪರಿಹಾರಕ್ಕಾಗಿ ಕರೆ ನೀಡಿದೆ. ಕಳೆದ ವರ್ಷ ಉಜ್ಬೇಕಿಸ್ತಾನ್‌ನಲ್ಲಿ ನಡೆದ ಎಸ್‌ಸಿಒ ಶೃಂಗಸಭೆಯ ಬದಿಯಲ್ಲಿ ಭಾಗವಹಿಸಿದ ಪ್ರಧಾನಿ ಮೋದಿ, “ಇದು ಯುದ್ಧದ ಯುಗವಲ್ಲ” ಎಂದು ರಷ್ಯಾದ ಅಧ್ಯಕ್ಷ ಪುಟಿನ್ ಅವರಿಗೆ ಎದುರಾ ಎದುರೇ ಹೇಳಿದ್ದರು. ಭಾರತದ ಅಧ್ಯಕ್ಷತೆಯಲ್ಲಿ ದಿಲ್ಲಿಯಲ್ಲಿ ನಡೆದ G20 ಸಭೆಯಲ್ಲಿ ಕೂಡ ಯುದ್ಧವಿರೋಧಿ ಹೇಳಿಕೆಯನ್ನು ನೀಡಲಾಯಿತು.
2022ರ ಬೇಸಿಗೆಯ ಅವಧಿಯಲ್ಲಿ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯು ಈ ಬಗ್ಗೆ ಆತಂಕದಿಂದ ಸಭೆಗಳ ಸರಣಿಯನ್ನು ಕರೆದಿತ್ತು. ರಷ್ಯಾ ಪರಮಾಣು ದಾಳಿ ನಡೆಸಿದರೆ ನಾವು ಹೇಗೆ ಪ್ರತಿಕ್ರಿಯಿಸಬಹುದು ಎಂದು ಚರ್ಚಿಸಲಾಗಿತ್ತು. ಆಗ ಉಕ್ರೇನಿಯನ್ ಪಡೆಗಳು ದಕ್ಷಿಣದಲ್ಲಿ ರಷ್ಯಾದ ಆಕ್ರಮಿತ ಖೆರ್ಸನ್ ಮೇಲೆ ಮುನ್ನಡೆಯುತ್ತಿದ್ದವು. ಈ ಪಡೆಗಳು ಮುಂದುವರಿದರೆ ರಷ್ಯಾದ ಸೇನಾಘಟಕಗಳು ಸುತ್ತುವರಿಯಲ್ಪಡುವ ಅಪಾಯದಲ್ಲಿದ್ದವು. ಇದು ರಷ್ಯಾದ ಪರಮಾಣು ದಾಳಿಗೆ ಸಂಭಾವ್ಯ ಪ್ರಚೋದಕ ಆಗಬಹುದು ಎನ್ನಲಾಗಿತ್ತು.
ಇದನ್ನೂ ಓದಿ: Alexei Navalny: ರಷ್ಯಾ ಪ್ರತಿಪಕ್ಷದ ನಾಯಕ, ಪುಟಿನ್ ಕಡು ಟೀಕಾಕಾರ ಅಲೆಕ್ಸಿ ನವಲ್ನಿ ಜೈಲಿನಲ್ಲಿ ಸಾವು