ಬೆಂಗಳೂರು: ಹಾಸನ ಪೆನ್‌ಡ್ರೈವ್ ಪ್ರಕರಣದಲ್ಲಿ ಸ್ಫೋಟಕ ಆಡಿಯೊ ಹೊರಬಿದ್ದಿದೆ. ಇತ್ತೀಚೆಗೆ ಈ ಹಗರಣದಲ್ಲಿ ಡಿಸಿಎಂ ಡಿಕೆಶಿ ಕೈವಾಡ ಎಂದು ಆರೋಪಿಸಿದ್ದ ವಕೀಲ ದೇವರಾಜೇಗೌಡ, ಇದೀಗ ಮತ್ತೊಂದು ಆಡಿಯೊ ಬಾಂಬ್ ಹಾಕಿದ್ದಾರೆ. ದೇವರಾಜೇಗೌಡ-ಶಿವರಾಮೇಗೌಡ ನಡುವಿನ ಮಾತುಕತೆಯ 36 ಸೆಕೆಂಡ್ಸ್ ಆಡಿಯೊ ವೈರಲ್ ಆಗಿದೆ. ಇದರ ಬೆನ್ನಲ್ಲೇ ವಕೀಲ ದೇವರಾಜೇಗೌಡ ಅವರನ್ನು ಹಿರಿಯೂರು ಪೊಲೀಸರು ವಶಕ್ಕೆ ಪಡೆದಿದ್ದಾರೆ.
ಹಿರಿಯೂರಿನಲ್ಲಿ ವಕೀಲ ದೇವರಾಜೇಗೌಡ ಅವರನ್ನು ಪೊಲೀಸರು ವಶಕ್ಕೆ ಪಡೆದಿದ್ದು, ಎಸ್‌ಐಟಿಗೆ ಒಪ್ಪಿಸಲು ತಯಾರಿ ನಡೆಸಿದ್ದಾರೆ. ಹೊಳೆನರಸೀಪುರ ಪೊಲೀಸರು ನೀಡಿದ ಮಾಹಿತಿ ಮೇರೆಗೆ ಬೆಂಗಳೂರಿನಿಂದ ಬಳ್ಳಾರಿಗೆ ಹೋಗುತ್ತಿದ್ದಾಗ ಅವರನ್ನು ವಶಕ್ಕೆ ಪಡೆಯಲಾಗಿದೆ. ಮಹಿಳೆ ಮೇಲೆ ಲೈಂಗಿಕ ದೌರ್ಜನ್ಯ ಆರೋಪದಲ್ಲಿ ಹೊಳೆನರಸೀಪುರ ಠಾಣೆಯಲ್ಲಿ ದೇವರಾಜೇಗೌಡ ವಿರುದ್ಧ ಏ.1ರಂದು ಕೇಸ್ ದಾಖಲಾಗಿತ್ತು.
ಆಡಿಯೊ ವೈರಲ್
ಪೊಲೀಸರು ವಶಕ್ಕೆ ಪಡೆಯುವ ಮುನ್ನ ವಿಡಿಯೊದಲ್ಲಿ ಮಾತನಾಡಿರುವ ವಕೀಲ ದೇವರಾಜೇಗೌಡ, ನಾನು ಎಲ್ಲೂ ಕಾಣೆ ಆಗಿಲ್ಲಾ. ಮೂರು ದಿನ ರಜೆ ಇರುವುದರಿಂದ ದೇವಾಲಯಕ್ಕೆ ಹೊಗುತ್ತಿದ್ದೇನೆ. ಕಾಣೆ ಆಗುವ ಪರಿಸ್ಥಿತಿ ನನಗೆ ಬಂದಿಲ್ಲ. ಕುಟುಂಬ ಸಮೇತ ದೇವಸ್ಥಾನಕ್ಕೆ ತೆರಳಿದ್ದೇನೆ. ಆಗಾಗಿ ಯಾರೂ ಆತಂಕ ಪಡುವ ಅಗತ್ಯವಿಲ್ಲ ಎಂದು ಹೇಳಿದ್ದಾರೆ.
ಇನ್ನು ಇದೇ ವೇಳೆ ಹಾಸನ ಅಶ್ಲೀಲ ವಿಡಿಯೋ ಪ್ರಕರಣದ ಸಂಬಂಧ ಅಜ್ಞಾತ ಸ್ಥಳದಿಂದ ದೇವರಾಜೇಗೌಡ ಮೂರು ಆಡಿಯೊ ಕ್ಲಿಪ್ ಬಿಡುಗಡೆ ಮಾಡಿದ್ದಾರೆ. ಮಾಜಿ ಸಂಸದ ಶಿವರಾಮೇಗೌಡ ಜತೆ ಮಾತನಾಡಿರುವ ಎನ್ನಲಾದ ಎರಡು ಆಡಿಯೊ ತುಣುಕು ವೈರಲ್ ಆಗಿದೆ.
ಹನಿಟ್ರ್ಯಾಪ್ ಸಂಬಂಧ ಮಹಿಳೆ ಗಂಡನ ಜತೆ ಮಾತನಾಡಿದ ಒಂದು ಆಡಿಯೊ ಇದೆ. ಇನ್ನು ಡಿಕೆಶಿ ವಿಚಾರ ಶಿವರಾಮೇಗೌಡ ಜತೆ ದೇವರಾಜೇಗೌಡ ಮಾತನಾಡುತ್ತಿರುವ ಆಡಿಯೊ ಕೂಡ ಇದ್ದು, ಎಸ್‌ಐಟಿ ವಿಚಾರಣೆಯಲ್ಲಿ ಡಿಕೆಶಿ ಹೆಸರೇಳದಂತೆ ಶಿವರಾಮೇಗೌಡ ಸೂಚಿಸಿದ್ದಾರೆ.
ಇದನ್ನೂ ಓದಿ | Prajwal Revanna case: ಪ್ರಜ್ವಲ್ ಮೇಲೆ ಮತ್ತೊಂದು ಅತ್ಯಾಚಾರ ಕೇಸ್; ಕಠಿಣ ಸೆಕ್ಷನ್ ಜಡಿದ SIT! ಯಾವುದಕ್ಕೆ ಎಷ್ಟು ವರ್ಷ ಜೈಲು?
ದೇವರಾಜೇಗೌಡ-ಶಿವರಾಮೇಗೌಡ ನಡುವಿನ ಮಾತುಕತೆಯ 36 ಸೆಕೆಂಡ್ಸ್ ಆಡಿಯೊ ವೈರಲ್ ಆಗಿದ್ದು, ಇದರಲ್ಲಿ ನಮಗೆ ಏನಾದರೂ ಎಸ್‌ಐಟಿ ನೋಟಿಸ್ ಕೊಡುತ್ತಾರಾ ಎಂದು ವಕೀಲ ಕೇಳಿದ್ದಾರೆ. ಆಗ ಈ ಹಿಂದಿನಿಂದ ರೇವಣ್ಣ ಫ್ಯಾಮಿಲಿ ವಿರುದ್ಧ ಹೋರಾಡುತ್ತಿದ್ದೀನಿ, ಕೋರ್ಟ್‌ನಲ್ಲೂ ಹೋರಾಟ ಮಾಡುತ್ತಿದ್ದೀನಿ ಅಂತ ಹೇಳು ಎಂದು ದೇವರಾಜೇಗೌಡಗೆ ಶಿವರಾಮೇಗೌಡ ಕಿವಿಮಾತು ಹೇಳಿರುವುದು ಆಡಿಯೊದಲ್ಲಿ ಇದೆ.