Site icon Vistara News

Prajwal Revanna Case: ಪ್ರಜ್ವಲ್‌ ರೇವಣ್ಣ ವಿಡಿಯೋ ಬಿಟ್ಟ ಕಾರ್ತಿಕ್‌ನನ್ನು ಮಲೇಷ್ಯಾಕ್ಕೆ ಕಳಿಸಿದವರು ಯಾರು?

prajawal revanna case driver karthik

ಹಾಸನ: ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ ಅವರಿಗೆ ಸಂಬಂಧಿಸಿದ (Prajwal Revanna Case) ಅಶ್ಲೀಲ ವೀಡಿಯೋ (Obscene video) ಹೊಂದಿದ ಪೆನ್ ಡ್ರೈವ್ ವೈರಲ್ (viral video) ಆಗಿರುವ ಪ್ರಕರಣದಲ್ಲಿ, ವಿಡಿಯೋ ಹೊರಬಿಟ್ಟಿರುವ ಮೂಲ ವ್ಯಕ್ತಿ ಡ್ರೈವರ್‌ ಕಾರ್ತಿಕ್‌ ಎಸ್‌ಐಟಿಯ (SIT) ದಾರಿ ತಪ್ಪಿಸಿ ಮಲೇಷ್ಯಾಕ್ಕೆ ತೆರಳಿದ್ದಾನೆ.

ಈ ನಡುವೆ ಎಸ್ಐಟಿ ತನಿಖೆ ಚುರುಕುಗೊಳಿಸಲಾಗಿದೆ ಎಂದು ಹೇಳಲಾಗಿದ್ದು, ದೂರುದಾರ ಸಂತ್ರಸ್ತ ಮಹಿಳೆಯರು ಹಾಗೂ ವೀಡಿಯೋಗಳಲ್ಲಿ ಇರುವ ಸಂತ್ರಸ್ತ ಮಹಿಳೆಯರ ವಿಚಾರಣೆ ಮುಂದುವರಿದಿದೆ. ಆದರೆ ದೂರುದಾರೆ ಹೊರತುಪಡಿಸಿ ಇತರ ಮಹಿಳೆಯರು, ತಮ್ಮನ್ನು ತನಿಖೆಗೆ ಬಲವಂತಪಡಿಸಿದರೆ ಆತ್ಮಹತ್ಯೆ ಮಾಡಿಕೊಳ್ಳುವುದಾಗಿ ಬೆದರಿಕೆ ಹಾಕಿದ್ದಾರೆ ಎಂದು ತಿಳಿದುಬಂದಿದೆ. ತಮ್ಮ ಗುರುತು ಪರಿಚಯ ಬಹಿರಂಗಪಡಿಸಿದರೆ ತಮ್ಮ ಕುಟುಂಬಕ್ಕೆ ಸಮಸ್ಯೆಯಾಗಲಿದ್ದು, ಹೀಗಾಗಿ ತನಿಖೆಗೆ ಬರುವುದಿಲ್ಲ ಎಂದಿದ್ದಾರೆ ಎನ್ನಲಾಗಿದೆ.

ಈ ನಡುವೆ ವೈರಲ್ ವೀಡಿಯೋದ ಮೂಲ ವ್ಯಕ್ತಿ, ಡ್ರೈವರ್ ಕಾರ್ತಿಕ್ ನಾಪತ್ತೆಯಾಗಿದ್ದಾನೆ. ಪ್ರಜ್ವಲ್ ರೇವಣ್ಣ ಸಂಸದ ಆಗುವ ಮೊದಲಿನಿಂದಲೂ ಸುಮಾರು 13 ವರ್ಷ ಈತ ಅವರ ಕಾರು ಚಾಲಕನಾಗಿದ್ದ. ಹೊಳೆನರಸೀಪುರ ತಾಲ್ಲೂಕಿನ ಕಡುವಿನಕೋಟೆ‌ ಗ್ರಾಮದ ಕಾರ್ತಿಕ್, ಎರಡು ದಿನಗಳ ಹಿಂದೆಯೇ ಎಸ್ಐಟಿ ಮುಂದೆ ಹಾಜರಾಗುವುದಾಗಿ ಹೇಳಿರುವ ವೀಡಿಯೋ ಬಿಡುಗಡೆ ಮಾಡಿದ್ದ. ಹೀಗಾಗಿ ಎಸ್‌ಐಟಿ ಕೂಡ ಆತನನ್ನು ಟ್ರೇಸ್‌ ಮಾಡಲು ಮುಂದಾಗಿರಲಿಲ್ಲ.

ತಾನೇ ಖುದ್ದು ಎಸ್ಐಟಿ ಮುಂದೆ ಹಾಜರಾಗುವ ಹೇಳಿಕೆ ನೀಡಿದ ಬಳಿಕ ಕಾರ್ತಿಕ್‌ ನಾಪತ್ತೆಯಾಗಿದ್ದಾನೆ. ವೀಡಿಯೋ ಇದ್ದ ಪೆನ್ ಡ್ರೈವ್ ವಕೀಲ ದೇವರಾಜೇ ಗೌಡಗೆ ಕೊಟ್ಟಿದ್ದು ನಾನೇ ಎಂದಿದ್ದ ಕಾರ್ತಿಕ್. ವೀಡಿಯೋಗಳ ಮೂಲ ವ್ಯಕ್ತಿ ನಾನೇ ಅಂದರೂ ಇನ್ನು ಆತನನ್ನು ವಿಚಾರಣೆಗೆ ಒಳಪಡಿಸಿಲ್ಲ. ವಿಚಾರಣೆಗೆ ಹಾಜರಾಗುವಂತೆ ಕಾರ್ತಿಕ್‌ಗೆ ನೊಟೀಸ್ ಅನ್ನೂ ಎಸ್ಐಟಿ ನೀಡಿರಲಿಲ್ಲ.

ಇದೀಗ ಕಾರ್ತಿಕ್ ಮಲೇಷ್ಯಾಗೆ ತೆರಳಿದ್ದಾನೆ; ಈತನ ನಾಪತ್ತೆ ಹಿಂದೆ ಪ್ರಭಾವಿಗಳ ಕೈವಾಡ ಇದೆ ಎಂದು ಮಾಜಿ ಸಿಎಂ ಕುಮಾರಸ್ವಾಮಿ ಆರೋಪಿಸಿದ್ದಾರೆ. ಅವರು ʼರಾಮನಗರ ಬ್ರದರ್ಸ್‌ʼ ಕಡೆ ಕೈತೋರಿಸಿದ್ದಾರೆ. ಎರಡನೇ ಹಂತದ ಚುನಾವಣೆ ಮುಗಿಯುವವರೆಗೂ ಪ್ರಕರಣದ ಬಿಸಿಯನ್ನು ಚಾಲ್ತಿಯಲ್ಲಿಡಲು ಪ್ರಯತ್ನಿಸಲಾಗುತ್ತಿದೆ ಎನ್ನಲಾಗುತ್ತಿದೆ. ಎಸ್ಐಟಿ ಮುಂದೆ ಹಾಜರಾಗುವುದಾಗಿ ಹೇಳಿಕೆ ನೀಡಿ ಎಸ್ಕೇಪ್ ಆಗಿರುವ ಬಗ್ಗೆ ಹಲವು ಅನುಮಾನ ಮೂಡಿದ್ದು, ಕಾರ್ತಿಕ್‌ ಇವರೆಲ್ಲರ ದಾರಿ ತಪ್ಪಿಸಿದನೇ ಅಥವಾ ಇದರ ಹಿಂದಿನ ಮಾಸ್ಟರ್‌ ಮೈಂಡ್‌ಗಳು ಬೇರೆ ಯಾರಾದರೂ ಇದ್ದಾರಾ ಎಂದು ಅನುಮಾನ ಮೂಡಿದೆ.

ಪ್ರಜ್ವಲ್‌ ರೇವಣ್ಣಗೆ 1 ವಾರ ಸಮಯ ಕೊಡಲು ಸಾಧ್ಯವಿಲ್ಲ: ಪರಮೇಶ್ವರ್‌

ವಿದೇಶದಲ್ಲಿರುವ ಪ್ರಜ್ವಲ್‌ ರೇವಣ್ಣ ಅವರು ತನಿಖೆಗೆ ಹಾಜರಾಗಬೇಕಿದ್ದು, ಹೆಚ್ಚಿನ ಸಮಯ ನೀಡಲು ಸಾಧ್ಯವಾಗುವುದಿಲ್ಲ ಎಂದು ಗೃಹ ಸಚಿವ ಪರಮೇಶ್ವರ್‌ ಹೇಳಿದ್ದಾರೆ. “ಪ್ರಕರಣವನ್ನು SITಗೆ ವಹಿಸಿರುವುದರಿಂದ ಹೆಚ್ಚು ಚರ್ಚೆ ಮಾಡಲು ಹೋಗಲ್ಲ. ಗೃಹ ಸಚಿವನಾಗಿ ನನ್ನ ಹೇಳಿಕೆಗಳು ಅಧಿಕೃತವಾಗ್ತವೆ. ಹೀಗಾಗಿ ಹೆಚ್ಚು ಮಾತಾಡಲ್ಲ. SITಯವರು ನೋಟಿಸ್ ನೀಡಿದ್ದಾರೆ. ರೇವಣ್ಣ ಅವ್ರು ಇವತ್ತು ತನಿಖೆಗೆ ಹೋಗುತ್ತೇನೆ ಅಂತ ಹೇಳಿಕೊಂಡಿದ್ದಾರೆ” ಎಂದಿದ್ದಾರೆ.

“ಪ್ರಜ್ವಲ್ ಒಂದು ವಾರ ಸಮಯವನ್ನು ವಕೀಲರ ಮೂಲಕ‌ ಕೇಳಿದ್ದಾರೆ. ಹಾಗೆ ಸಮಯ ತೆಗದುಕೊಳ್ಳಲು ಬರೋದಿಲ್ಲ. 41ಎ ಸೆಕ್ಷನ್‌ನಲ್ಲಿ ಸಮಯವನ್ನು ಕೊಡಲು ಬರುವುದಿಲ್ಲ. SIT ಅಧಿಕಾರಿಗಳು ಕಾನೂನು ಸಲಹೆಗಾರರ ಜೊತೆ ಲೀಗಲ್ ಒಪಿನಿಯನ್ ತಗೊಂಡು ಮುಂದುವರಿಯುತ್ತಾರೆ. ಸಿಎಂ ಕೂಡ ಪ್ರಧಾನಿಗೆ ಪತ್ರ ಬರೆದಿದ್ದಾರೆ. ಘಟನೆಯ ಬಗ್ಗೆ ವಿವರಿಸಿ, ಪ್ರಜ್ವಲ್ ಅವರ ಡಿಪ್ಲೊಮ್ಯಾಟಿಕ್ ಪಾಸ್‌ಪೋರ್ಟ್ ರದ್ದು ಮಾಡಿಸಿ, ಆದಷ್ಟು ಬೇಗ ಕರೆದುಕೊಂಡು ಬರಲು ಸಹಕರಿಸಬೇಕೆಂದು ಪತ್ರ ಬರೆದಿದ್ದಾರೆ” ಎಂದು ಪರಮೇಶ್ವರ್‌ ನುಡಿದರು.

ಇದನ್ನೂ ಓದಿ: Prajwal Revanna: ಜರ್ಮನಿಯಲ್ಲಿ ಪ್ರಜ್ವಲ್‌ ಅಜ್ಞಾತವಾಸ, ಮಲೇಷ್ಯಾದಲ್ಲಿ ಕಾರ್ತಿಕ್‌ ಹಾಲಿಡೇಸ್?

Exit mobile version