Site icon Vistara News

Prajwal Revanna Case: ಪ್ರಜ್ವಲ್‌ ರೇವಣ್ಣ ಮೇಲೆ ಮತ್ತೊಂದು ಎಫ್‌ಐಆರ್‌; ಪ್ರೀತಂ ಗೌಡ ಮೇಲೂ ದೂರು

prajwal revanna case preetham gowda

ಬೆಂಗಳೂರು: ಲೈಂಗಿಕ ದೌರ್ಜನ್ಯ (Physical Abuse) ಪ್ರಕರಣದಲ್ಲಿ ಪರಪ್ಪನ ಅಗ್ರಹಾರ ಜೈಲುಪಾಲಾಗಿರುವ ಪ್ರಜ್ವಲ್‌ ರೇವಣ್ಣ (Prajwal Revanna Case) ಅವರ ಮೇಲೆ ಇನ್ನೊಂದು ದೂರು (FIR) ದಾಖಲಾಗಿದೆ. ಇದೇ ವೇಳೆ, ಈ ಪ್ರಕರಣದ ವಿಚಾರಣೆಗಾಗಿ ಅವರನ್ನು ನಾಲ್ಕು ದಿನ ಪೊಲೀಸ್‌ ಕಸ್ಟಡಿಗೆ (Police Custody) ಕೊಡಲಾಗಿದೆ. ಈ ದೂರಿನಲ್ಲಿ ಮಾಜಿ ಶಾಸಕ ಪ್ರೀತಂ ಗೌಡ (preetham gowda) ಅವರನ್ನೂ ಹೆಸರಿಸಲಾಗಿದ್ದು, ಬಿಜೆಪಿ ನಾಯಕನ ಮೇಲೂ ಈಗ ವಿಚಾರಣೆಯ ತೂಗುಗತ್ತಿ ತೂಗಲಿದೆ.

ಇಂದು ಬೆಳಗ್ಗೆ ಮತ್ತೆ ಪ್ರಜ್ವಲ್ ರೇವಣ್ಣನನ್ನು ನಾಲ್ಕು ದಿನಗಳ ಕಾಲ ಎಸ್‌ಐಟಿ ಅಧಿಕಾರಿಗಳ ಕಸ್ಟಡಿಗೆ ನೀಡಿ 42ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶರು ಆದೇಶ ನೀಡಿದರು. ಬೆಂಗಳೂರು ಸೈಬರ್ ಕ್ರೈಂ (Cyber crime) ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದ್ದು, ಲೈಂಗಿಕ ದೌರ್ಜನ್ಯ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಾಗಿದೆ. ಈ ಹಿನ್ನೆಲೆಯಲ್ಲಿ ಪ್ರಜ್ವಲ್ ಅನ್ನು ಬಾಡಿ ವಾರಂಟ್ ಮೇಲೆ ಎಸ್ಐಟಿ ವಶಕ್ಕೆ ಕೇಳಿತು. ವಿಡಿಯೋ ಕಾನ್ಫರೆನ್ಸ್ ಮೂಲಕ ಪ್ರಜ್ವಲ್ ರೇವಣ್ಣನನ್ನು ಹಾಜರುಪಡಿಸಲಾಯಿತು.

ಪ್ರಜ್ವಲ್ ರೇವಣ್ಣ, ಕಿರಣ, ಶರತ್, ಪ್ರೀತಂ ಗೌಡ ಮೇಲೆ‌ ಎಫ್ಐಆರ್ ದಾಖಲಾಗಿದೆ. ವಿಡಿಯೋ ಕಾನ್ಫರೆನ್ಸ್ ಮೂಲಕ ನಡೆದ ವಿಚಾರಣೆಯಲ್ಲಿ ಪ್ರಜ್ವಲ್ ರೇವಣ್ಣಗೆ ನಾಲ್ಕನೇ ಎಫ್ಐಆರ್ ಬಗ್ಗೆ ಜಡ್ಜ್ ಮಾಹಿತಿ ನೀಡಿದರು. ʼನಿಮ್ಮ ಮೇಲೆ ಮತ್ತೊಂದು ಎಫ್ಐಆರ್ ಆಗಿದೆ. ನಿಮ್ಮ ವಕೀಲರು ಇಲ್ಲೇ ಇದ್ದಾರೆʼ ಎಂದು ಜಡ್ಜ್ ಹೇಳಿದರು. ಮತ್ತೊಂದು ಎಫ್ಐಆರ್ ಬಗ್ಗೆ ಸುದ್ದಿ ತಿಳಿದು ಪ್ರಜ್ವಲ್ ಆತಂಕಕ್ಕೊಳಗಾದರು.

ಪ್ರಜ್ವಲ್ ರೇವಣ್ಣ ಬಾಡಿ ವಾರೆಂಟ್ ವಿಚಾರಣೆ ಆರಂಭವಾದಾಗ, ಆರೋಪಿಯನ್ನು ಹಾಸನಕ್ಕೆ ಕರೆದುಕೊಂಡು ಹೋಗಿ ತನಿಖೆ ಮಾಡಬೇಕು, ಸ್ಥಳ ಮಹಜರು ನಡೆಸಬೇಕು, ಹೀಗಾಗಿ ಪ್ರಜ್ವಲ್ ರೇವಣ್ಣ ಒಂದು ವಾರಗಳ ಕಾಲ ಪೊಲೀಸ್ ಕಸ್ಟಡಿಗೆ ಬೇಕು ಎಂದು ಎಸ್‌ಪಿಪಿ ಜಗದೀಶ್ ವಾದ ಮಂಡಿಸಿದರು. ಪ್ರಜ್ವಲ್ ಪರ ವಕೀಲ ಅರುಣ್ ವಾದ ಮಂಡಿಸಿದರು. ಕೊನೆಗೆ ಪ್ರಜ್ವಲ್‌ನನ್ನು 4 ದಿನ ಕಸ್ಟಡಿಗೆ ನೀಡಲಾಯಿತು.

ಪ್ತಜ್ವಲ್‌ ರೇವಣ್ಣ, ಮಾಜಿ ಶಾಸಕ ಪ್ರೀತಂ ಗೌಡ ಸೇರಿದಂತೆ ನಾಲ್ವರ ಮೇಲೆ ಸೈಬರ್ ಠಾಣೆಯಲ್ಲಿ ಹೊಸ ಎಫ್ಐಆರ್ ದಾಖಲಾಗಿದೆ. IPS ಕಾಯಿದೆಯ 354(A), 354(D), 354(B), 506 ಹಾಗೂ 66E IT ACTನಡಿ ಎಫ್ಐಆರ್ ದಾಖಲಾಗಿದೆ. 354(A) ಲೈಂಗಿಕ ಕಿರುಕುಳ, 354(D) ಮಹಿಳೆಯ ನಿರಾಸಕ್ತಿ ಹೊರತಾಗಿಯೂ ಪದೇ ಪದೆ ಎಲೆಕ್ಟ್ರಾನಿಕ್ ಸಂವಹನ ಮಾಡುವ ಅಪರಾಧ, 354(B) ಮಹಿಳೆ ಮೇಲೆ ಆಕ್ರಮಣ, ಕ್ರಿಮಿನಲ್ ಬಲವನ್ನು‌ ಬಳಸಿ ವಿವಸ್ತ್ರವಾಗಿರಲು ಒತ್ತಾಯಿಸುವುದು, 506 ಕ್ರಿಮಿನಲ್ ಬೆದರಿಕೆ, 66E IT ACT ಖಾಸಗಿತನ ಉಲ್ಲಂಘಿಸಿ ವ್ಯಕ್ತಿಯ ಚಿತ್ರೀಕರಣ ಮುಂತಾದ ಅಪರಾಧಗಳು ದಾಖಲಾಗಿವೆ.

ನನಗೆ ಗೊತ್ತಿಲ್ಲ ಎಂದ ಪ್ರೀತಂ ಗೌಡ

ಪ್ರಜ್ವಲ್ ವಿಡಿಯೋ ಹಂಚಿಕೆ ಆರೋಪ ವಿಚಾರದಲ್ಲಿ ತಮ್ಮ ವಿರುದ್ಧ ಎಫ್ಐಆರ್ ದಾಖಲಾದ ವಿಚಾರ ತಮಗೆ ಗೊತ್ತಿಲ್ಲ ಎಂದು ಮಾಜಿ ಶಾಸಕ ಪ್ರೀತಂ ಗೌಡ ಹೇಳಿದ್ದಾರೆ. ʼಪ್ರಕರಣ ದಾಖಲಾದ ಬಗ್ಗೆ ನನಗೆ ಗೊತ್ತಿಲ್ಲ. ಅದರ ಬಗ್ಗೆ ತಿಳ್ಕೊಂಡು ಬಂದು ಮತ್ತೆ ಮಾತಾಡ್ತೇನೆʼ ಎಂದು ಬಿಜೆಪಿ ಕಚೇರಿಯಲ್ಲಿದ್ದ ಪ್ರೀತಂ ಗೌಡ ತರಾತುರಿಯಲ್ಲಿ ಕಾರು ಹತ್ತಿ ನಿರ್ಗಮಿಸಿದರು.

ಇದನ್ನೂ ಓದಿ: Suraj Revanna Case: ಸೂರಜ್‌ ರೇವಣ್ಣಗೇ ʼಹಿಂದಿನಿಂದ ಇರಿದವರುʼ ಯಾರು?

Exit mobile version