ಬೆಂಗಳೂರು: ಇಂದು ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna) ಅವರ ಕುಟುಂಬದ ಮೂವರಿಗೂ ಅಗ್ನಿಪರೀಕ್ಷೆ ಕಾದಿದೆ. ಅಶ್ಲೀಲ ವಿಡಿಯೋ (obscene video) ಹಾಗೂ ಲೈಂಗಿಕ ದೌರ್ಜನ್ಯ (physical abuse) ಪ್ರಕರಣದಲ್ಲಿ ನಿನ್ನೆ ರಾತ್ರಿ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ (kempegowda international airport) ಆರೆಸ್ಟ್ ಆಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP Prajwal revanna Case) ಅವರಿಗೆ ಜಾಮೀನೋ, ಜೈಲೋ ಎಂಬುದು ಇಂದು ನಿರ್ಧಾರವಾಗಲಿದೆ. ಜೊತೆಗೆ ಭವಾನಿ ರೇವಣ್ಣ (Bhavani Revanna) ಅವರ ಜಾಮೀನು ಅರ್ಜಿಯೂ ಇಂದೇ ವಿಚಾರಣೆಗೆ ಬರಲಿದೆ. ಎಚ್‌ಡಿ ರೇವಣ್ಣ (HD revanna) ಅವರು ತಮ್ಮ ಮೇಲಿನ ಎಫ್‌ಐಆರ್ ರದ್ದತಿಗೆ ಕೋರಿ ಸಲ್ಲಿಸಿರುವ ಅರ್ಜಿಯ ವಿಚಾರಣೆಯೂ ಇಂದು ನಡೆಯಲಿದೆ.
ಲೈಂಗಿಕ ದೌರ್ಜನ್ಯ ಮತ್ತು ಅತ್ಯಾಚಾರ ಪ್ರಕರಣದಲ್ಲಿ ಆರೋಪಿಯಾಗಿರುವ ಪ್ರಜ್ವಲ್ ರೇವಣ್ಣ ಅವರ ಪರ ವಕೀಲರು ಜನಪ್ರತಿನಿಧಿಗಳ ಕೋರ್ಟ್‌ಗೆ ಜಾಮೀನಿಗಾಗಿ ಅರ್ಜಿ ಸಲ್ಲಿಸಿದ್ದಾರೆ. ಮೇ 29ರಂದೇ ನಿರೀಕ್ಷಣಾ ಜಾಮೀನಿಗೆ ವಕೀಲ ಅರುಣ್ ಮೂಲಕ ಅರ್ಜಿ ಸಲ್ಲಿಸಲಾಗಿತ್ತು. ಆದರೆ ಪ್ರಜ್ವಲ್ ರೇವಣ್ಣ ಬಂಧನವಾಗಿರುವ ಹಿನ್ನೆಲೆಯಲ್ಲಿ ಇನ್ನು ನಿರೀಕ್ಷಣಾ ಜಾಮೀನು ಅರ್ಜಿ ವಿಚಾರಣೆ ಅವಶ್ಯಕತೆ ಇಲ್ಲ. ಹಾಗಾಗಿ ಇಂದು ಪ್ರಜ್ವಲ್ ರೇವಣ್ಣ ಪರ ವಕೀಲರು ಜಾಮೀನು ಅರ್ಜಿಯನ್ನು ಜನಪ್ರತಿನಿಧಿಗಳ ಕೋರ್ಟ್ ಮುಂದೆ ಸಲ್ಲಿಸಲಿದ್ದಾರೆ.
ಎಸ್‌ಐಟಿ ಕೂಡ ಇಂದು ಅಗತ್ಯ ಮೆಡಿಕಲ್ ಟೆಸ್ಟ್‌ಗಳ ಬಳಿಕ ಪ್ರಜ್ವಲ್ ಅವರನ್ನು ಕೋರ್ಟ್ ಮುಂದೆ ಹಾಜರುಪಡಿಸಬೇಕಿದೆ. ನ್ಯಾಯಾಲಯಕ್ಕೆ ಹಾಜರುಪಡಿಸಿ ಕನಿಷ್ಠ 14 ದಿನಗಳ ಕಸ್ಟಡಿಗೆ ಎಸ್ಐಟಿ ಅಧಿಕಾರಿಗಳು ಮನವಿ ಮಾಡಲಿದ್ದಾರೆ ಎಂದು ಗೊತ್ತಾಗಿದೆ. ಯಾಕೆಂದರೆ ಅಷ್ಟೊಂದು ಅಗಾಧ ಪ್ರಮಾಣದ ತನಿಖೆ ನಡೆಯಬೇಕಿದೆ. ಪ್ರಕರಣದ ಗಂಭೀರತೆ ಹೆಚ್ಚು ಇರುವುದರಿಂದ ಎಸ್ಐಟಿ ಅಧಿಕಾರಿಗಳ ವಶಕ್ಕೆ ಪ್ರಜ್ವಲ್ ಅವರನ್ನು ನೀಡುವ ಸಾಧ್ಯತೆಯೇ ಅಧಿಕವಾಗಿದೆ.
ಭವಾನಿಗೂ ಕಷ್ಟ
ಅತ್ತ ಭವಾನಿ ರೇವಣ್ಣ ಅವರಿಗೂ ಇಂದು ಜಾಮೀನು ಟೆನ್ಷನ್ ಇದೆ. ಕೆ.ಆರ್.ನಗರ ತಾಲೂಕಿನ ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ಬಂಧನ ಭೀತಿಯಲ್ಲಿರುವ ಭವಾನಿ ರೇವಣ್ಣ, ಜಾಮೀನಿಗೆ ಅರ್ಜಿ ಸಲ್ಲಿಸಿದ್ದು, ಜನಪ್ರತಿನಿಧಿಗಳ ಕೋರ್ಟ್ ಜಡ್ಜ್ ಇಂದು ಬೇಲ್ ಅರ್ಜಿ ತೀರ್ಪು ಪ್ರಕಟಿಸಲಿದ್ದಾರೆ. ಸಂತ್ರಸ್ತೆಯ ಅಪಹರಣದ ಆರೋಪದಲ್ಲಿ SIT ಪರ ವಕೀಲ ಹಾಗೂ ಭವಾನಿ ಪರ ವಕೀಲರ ವಾದವನ್ನು ಆಲಿಸಿದ್ದ ಕೋರ್ಟ್ ಇಂದಿಗೆ ತೀರ್ಪು ಕಾಯ್ದಿರಿಸಿತ್ತು. ಇಂದು ನ್ಯಾಯಾಧೀಶ ಸಂತೋಷ್ ಗಜಾನನ ಭಟ್ ಅವರಿಂದ ತೀರ್ಪು ಹೊರಬೀಳಲಿದೆ.
ರೇವಣ್ಣ ಎಫ್‌ಐಆರ್ ರದ್ದು ಅರ್ಜಿ
ಎಫ್ಐಆರ್ ರದ್ದು ಕೋರಿ ರೇವಣ್ಣ ಸಲ್ಲಿಸಿರುವ ಅರ್ಜಿ ಸಹ ಇಂದು ವಿಚಾರಣೆ ನಡೆಯಲಿದೆ. ಸಂತ್ರಸ್ತ ಮಹಿಳೆ ಅಪಹರಣ ಪ್ರಕರಣದಲ್ಲಿ ತಮ್ಮ ಮೇಲಿರುವ ದೂರನ್ನು ಕೈಬಿಡಲು ರೇವಣ್ಣ ಕೋರಿದ್ದಾರೆ. ಅಪಹರಣ ಪ್ರಕರಣದಲ್ಲೂ, ಹೊಳೆನರಸೀಪುರ (Holenarasipura) ಠಾಣೆಯಲ್ಲಿ ದಾಖಲಾಗಿದ್ದ ಲೈಂಗಿಕ ದೌರ್ಜನ್ಯ (physical abuse) ಪ್ರಕರಣದಲ್ಲೂ ಮಾಜಿ ಸಚಿವ ಎಚ್‌ಡಿ ರೇವಣ್ಣ (HD Revanna case) ಅವರಿಗೆ ಜಾಮೀನು (Bail) ಮಂಜೂರಾಗಿದೆ. ಆದರೆ ಜನಪ್ರತಿನಿಧಿಗಳ ಕೋರ್ಟ್ ನೀಡಿರುವ ಜಾಮೀನು ಪ್ರಶ್ನಿಸಿ ಎಸ್ಐಟಿ ಹೈಕೋರ್ಟ್ ಮೆಟ್ಟಿಲೇರಿದ್ದು, ಈ ಆದೇಶವನ್ನು ಪ್ರಶ್ನೆ ಮಾಡಲಿದೆ.
ಎಚ್‌ಡಿಕೆ ಎಲ್ಲಿದ್ದಾರೆ?
ಅತ್ತ ಪ್ರಜ್ವಲ್ ರಾಜ್ಯಕ್ಕೆ ಎಂಟ್ರಿ ಆಗುತ್ತಾರೆ ಅನ್ನುವ ಸುದ್ದಿ ಬಂದ ತಕ್ಷಣ ಎಚ್‌ಡಿ ಕುಮಾರಸ್ವಾಮಿ ಹಾಗೂ ಕುಟುಂಬ ಬೆಂಗಳೂರು ಬಿಟ್ಟು ಹೊರ ಹೋಗಿದ್ದು, ಜಂಗಲ್ ರೆಸಾರ್ಟ್‌ನಲ್ಲಿ ವಿಶ್ರಾಂತಿ ಪಡೆಯುತ್ತಿದೆ. ಮಾಜಿ ಪ್ರಧಾನಿ ಎಚ್‌ಡಿ ದೇವೇಗೌಡರು ಪ್ರತಿಯೊಂದು ಕಾನೂನು ಹೋರಾಟದ ವಿವರಗಳನ್ನು ಪಡೆದುಕೊಳ್ಳುತ್ತಿದ್ದು, ರಾಜಕೀಯವಾಗಿಯೂ ಈ ಪ್ರಕರಣದಲ್ಲಿ ಮುಂದಿನ ನಡೆ ಹೇಗೆ ಎಂಬ ಬಗ್ಗೆ ಪಕ್ಷದ ಮುಖಂಡರು ಹಾಗೂ ಆಪ್ತರ ಜೊತೆ ಚರ್ಚಿಸುತ್ತಿದ್ದಾರೆ.
ಪ್ರಜ್ವಲ್ ಪುರುಷತ್ವ ಪರೀಕ್ಷೆ
ಆರೆಸ್ಟ್ ಆಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ ಅವರನ್ನು ಇಂದು ಮೊದಲು ವೈದ್ಯಕೀಯ ಪರೀಕ್ಷೆಗೆ ಒಳಪಡಿಸಲು ಎಸ್‌ಐಟಿ ಮುಂದಾಗಿದೆ. ಆರೋಪಿ ತನಿಖೆಗೆ ಸಹಕರಿಸಲು ದೈಹಿಕ- ಮಾನಸಿಕವಾಗಿ ಸಿದ್ಧನಾಗಿದ್ದಾನೆಯೇ ಎಂಬುದನ್ನು ಈ ಪರೀಕ್ಷೆಗಳ ಮೂಲಕ ತಿಳಿದುಕೊಳ್ಳಲಾಗುತ್ತದೆ.
ಪ್ರಕರಣದ ತನಿಖೆ ಹಾಗೂ ವಿಚಾರಣೆಗೆ ಎಲ್ಲಾ ರೀತಿಯ ಸಿದ್ಧತೆಯನ್ನು ಎಸ್‌ಐಟಿ ನಡೆಸಿದೆ. ಒಂದು ವೇಳೆ, ವಿಡಿಯೋದಲ್ಲಿ ಇರುವಂಥ ಕಾಮಕಾಂಡ ತಾನೇನೂ ಮಾಡಿಲ್ಲ ಎಂದು ಪ್ರಜ್ವಲ್ ಅಫಿಡವಿಟ್ ಸಲ್ಲಿಸಿದರೆ, ಪ್ರಜ್ವಲ್ ರೇವಣ್ಣಗೆ ಪುರುಷತ್ವ ಪರೀಕ್ಷೆ ನಡೆಸುವ ಸಾಧ್ಯತೆ ಇದೆ. ತಾನು ಅತ್ಯಾಚಾರ ಮಾಡಿಲ್ಲ ಎಂದು ಕೋರ್ಟ್‌ಗೆ ಅಫಿಡವಿಟ್ ಸಲ್ಲಿಸುವ ಸಾಧ್ಯತೆಯೂ ಇರುವುದರಿಂದ, ಮುಂದಿನ ಹಂತದಲ್ಲಿ ಪ್ರಜ್ವಲ್ ರೇವಣ್ಣರ ಪುರುಷತ್ವ ಪರೀಕ್ಷೆಯನ್ನು ಎಸ್‌ಐಟಿ ಮಾಡಿಸಲಿದೆ.
ನಂತರ ಹಾಸನ ಸಂಸದರ ನಿವಾಸದಲ್ಲಿ ಸಂಗ್ರಹಿಸಲಾದ ಹಾಸಿಗೆ- ಹೊದಿಕೆ ಇತ್ಯಾದಿಗಳಲ್ಲಿ ಕಂಡುಬಂದಿರುವ ಡಿಎನ್‌ಎಗೂ, ಪ್ರಜ್ವಲ್ ಡಿಎನ್‌ಎಗೂ ಮ್ಯಾಚ್ ಮಾಡಲಾಗುತ್ತದೆ. ಒಟ್ಟು ಮೂರು ಹಂತದಲ್ಲಿ ಪ್ರಜ್ವಲ್ ರೇವಣ್ಣ ವೈದ್ಯಕೀಯ ಪರೀಕ್ಷೆ ನಡೆಯಲಿದೆ. ಈ ಹಿಂದೆಯೂ ಅನೇಕರಿಗೆ ಅತ್ಯಾಚಾರ ಪ್ರಕರಣದಲ್ಲಿ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು. ಸ್ವಾಮಿ ನಿತ್ಯಾನಂದ, ಮುರುಘಾ ಶ್ರೀ, ಅಸಾರಾಂ ಬಾಪು ಸೇರಿದಂತೆ ಹಲವರಿಗೆ ಪುರುಷತ್ವ ಪರೀಕ್ಷೆ ನಡೆಸಲಾಗಿತ್ತು.
ಇದನ್ನೂ ಓದಿ: Prajwal Revanna Case: ವಿದೇಶದಲ್ಲಿಯೇ ಮೊಬೈಲ್ ನಾಶ ಮಾಡಿದರಾ ಪ್ರಜ್ವಲ್?