ಬೆಂಗಳೂರು: ಇಂದು ಮಧ್ಯರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ (Kempegowda international Airport) ಅಶ್ಲೀಲ ವಿಡಿಯೋ (Obscene video) ಹಗರಣದ ಆರೋಪಿ, ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ಆಗಮಿಸುವ ಸಾಧ್ಯತೆ ಹಿನ್ನೆಲೆಯಲ್ಲಿ, ಅವರನ್ನು ʼಸ್ವಾಗತಿಸಲುʼ ಎಸ್‌ಐಟಿ (SIT) ಸಂಪೂರ್ಣ ಸಿದ್ಧತೆ ಮಾಡಿಕೊಂಡಿದೆ.
ಇಮಿಗ್ರೇಶನ್ ಡೆಸ್ಕ್‌ನಲ್ಲಿ (Immigration desk) ಸಿಐಎಸ್ಎಫ್ (CISF) ಹಾಗೂ ಎಸ್ಐಟಿ ತಂಡದ ತಲಾ ಓರ್ವ ಸಿಬ್ಬಂದಿಯನ್ನು ನಿಯೋಜನೆ ಮಾಡಲಾಗಿದೆ. ವಿಮಾನ ಆಗಮಿಸುವ ಮೂರು ಗಂಟೆ ಮುಂಚಿತವಾಗಿ ಇಮಿಗ್ರೇಶನ್ ಡೆಸ್ಕ್‌ಗೆ ಪ್ರಯಾಣಿಕರ ಪಟ್ಟಿ ಬರಲಿದೆ. Lufthansa ವಿಮಾನ ಕಂಪನಿಗೆ ಸೂಚನೆ ನೀಡಲಾಗಿದ್ದು, ಪ್ರಜ್ವಲ್ ರೇವಣ್ಣ ಮ್ಯೂನಿಚ್‌ನಲ್ಲಿ ಬೋರ್ಡಿಂಗ್ ಆಗುವ ಮಾಹಿತಿ ನೀಡಲು ಸೂಚನೆ ಕೊಡಲಾಗಿದೆ.
ಪ್ರಜ್ವಲ್ ರೇವಣ್ಣ ಬೋರ್ಡಿಂಗ್ ಖಚಿತ ನಂತರ ಎಸ್ಐಟಿಗೆ ಅಲರ್ಟ್ ಬರಲಿದೆ. ಇಮಿಗ್ರೇಶನ್ ತಂಡದೊಂದಿಗೆ ಎಸ್ಐಟಿ ಸಜ್ಜಾಗಲಿದೆ. ಟರ್ಮಿನಲ್ 2ಗೆ ಪ್ರಜ್ವಲ್ ಪ್ರಯಾಣಿಸುತ್ತಿರುವ ವಿಮಾನ ಬಂದ ಕೂಡಲೇ ವಿಮಾನದ ಬಳಿ ತೆರಳಲಿರುವ ಎಸ್ಐಟಿ ಹಾಗೂ ಸಿಐಎಸ್ಎಫ್ ಅಧಿಕಾರಿಗಳು, ಮೊದಲು ವಿಮಾನದಿಂದ ಪ್ರಜ್ವಲ್‌ನನ್ನು ಮಾತ್ರ ಡಿಬೋರ್ಡಿಂಗ್ ಮಾಡಿಸಲಿದ್ದಾರೆ.
ಪ್ರಜ್ವಲ್‌ಗೆ ಸಂಬಂಧಿಸಿದ ಲಗೇಜ್ ಹಾಗೂ ಬ್ಯಾಗ್ ನೇರವಾಗಿ ಇಮಿಗ್ರೇಶನ್ ಡೆಸ್ಕ್‌ಗೆ ತರಲು ಸೂಚಿಸಲಾಗುತ್ತದೆ. ಇಮಿಗ್ರೇಶನ್ ಡೆಸ್ಕ್ ಬಳಿ ಪ್ರಜ್ವಲ್ ಡಿಪ್ಲೋಮ್ಯಾಟಿಕ್ ಪಾಸ್‌ಪೋರ್ಟ್‌ಗೆ ಸ್ಟಾಂಪ್ ಹಾಕಿಸಿಕೊಂಡು, ಸ್ಟಾಂಪ್ ಆದ ಕೂಡಲೇ ನೇರವಾಗಿ ಎಸ್ಐಟಿ ವಶಕ್ಕೆ ಪಡೆಯಲಾಗುತ್ತದೆ. ಪಾಸ್‌ಪೋರ್ಟ್, ವೀಸಾ ಇತ್ಯಾದಿಗಳನ್ನು ಜಪ್ತಿ ಮಾಡಿಕೊಳ್ಳಲಾಗುತ್ತದೆ. ಪ್ರಜ್ವಲ್ ರೇವಣ್ಣ ಯಾವುದೇ ವಿಮಾನದಲ್ಲಿ ಬಂದರೂ ಇದೇ ಪ್ರಕ್ರಿಯೆ ನಡೆಯಲಿದೆ.
ಫ್ಲೈಟ್ ಟಿಕೆಟ್ ಬುಕ್ ಮಾಡಿರುವ ಆಧಾರದಂತೆ ಇಂದು ಮಧ್ಯರಾತ್ರಿ ಪ್ರಜ್ವಲ್ ರೇವಣ್ಣ ಬೆಂಗಳೂರಿಗೆ ಆಗಮಿಸಲಿದ್ದಾರೆ. ಮಧ್ಯರಾತ್ರಿ 12.35ಕ್ಕೆ ಟರ್ಮಿನಲ್ 2ಗೆ ಆಗಮಿಸಲಿರುವ ಪ್ರಜ್ವಲ್ ಅನ್ನು ʼಸ್ವಾಗತಿಸಲುʼ ಟರ್ಮಿನಲ್ 2ನಲ್ಲಿ ಎಸ್ಐಟಿ ತಂಡ ಬೀಡು ಬಿಟ್ಟಿದೆ. ಮಧ್ಯಾಹ್ನ 3 ಗಂಟೆಗೆ ಪ್ರಜ್ವಲ್ ವಿಮಾನ ಹತ್ತಿದ್ದಾರೆಯೇ ಇಲ್ಲವೇ ಎಂಬುದು ಖಚಿತವಾಗಲಿದೆ.
ಪ್ರಜ್ವಲ್ ವಿಡಿಯೋ ಮಾಡಿ ಕಳಿಸಿರುವುದು ಎಲ್ಲಿಂದ ಎಂಬುದನ್ನು ನಿನ್ನೆಯೇ ಎಸ್‌ಐಟಿ ಪತ್ತೆ ಹಚ್ಚಿದೆ. ಯುರೋಪ್‌ನ ಹಂಗೇರಿನಿಂದ ಈ ವಿಡಿಯೋ ಬಿಡುಗಡೆಯಾಗಿದೆ. ಅಲ್ಲಿಂದ ಮ್ಯೂನಿಚ್‌ಗೆ ಬಂದು ಪ್ರಜ್ವಲ್ ವಿಮಾನ ಹಿಡಿಯಬೇಕಿದೆ. ಹಂಗೇರಿ, ಬುಡಾಪೆಸ್ಟ್, ಜರ್ಮನಿ ಎಂದು ಕಳೆದ ಒಂದು ತಿಂಗಳಿನಿಂದ ಪ್ರಜ್ವಲ್ ಓಡಾಡುತ್ತಿದ್ದಾರೆ. ಅವರು ಇಲ್ಲೆಲ್ಲಾ ತಮ್ಮ ಗೆಳೆಯರ ಆಶ್ರಯ ಪಡೆದಿದ್ದರೇ, ಎಲ್ಲಿ ತಂಗಿದ್ದರು ಎಂಬ ಮಾಹಿತಿ ದೊರೆಯಬೇಕಿದೆ.
ನಿಜಕ್ಕೂ ವಾಪಸಾಗ್ತಾರಾ ಪ್ರಜ್ವಲ್?
ಪ್ರಜ್ವಲ್ ರೇವಣ್ಣ ಕುಟುಂಬ ಸಲ್ಲಿಸಿದ ಜಾಮೀನು ಅರ್ಜಿಗಳೆಲ್ಲವೂ ಕೂಡ ನ್ಯಾಯಾಲಯದಲ್ಲಿ ಇತ್ಯರ್ಥವಾಗದೆ ಮುಂದೂಡಿಕೆ ಆಗುತ್ತಲೇ ಇವೆ. ಹೀಗಾಗಿ ಪ್ರತಿ ದಿನ ರೇವಣ್ಣ ಕುಟುಂಬ ಟೆನ್ಷನ್‌ನಲ್ಲಿರಬೇಕಾಗಿದೆ. ನಿನ್ನೆ ನಡೆದ ಭವಾನಿ ರೇವಣ್ಣ ಅವರ ಸುದೀರ್ಘ ವಿಚಾರಣೆ ಬಳಿಕವೂ ವಿಚಾರಣೆಯನ್ನು ಮುಂದೂಡಲಾಗಿದೆ. ಈ ಬೆಳವಣಿಗಯಿಂದ ಪ್ರಜ್ವಲ್ ವಾಪಾಸಾಗ್ತಾರಾ ಎಂಬುದೇ ಅನುಮಾನಕ್ಕೀಡು ಮಾಡಿದೆ.
ಪ್ರಜ್ವಲ್ ಬರುತ್ತಿದ್ದಂತೆ SIT ಅಧಿಕಾರಿಗಳು ಪ್ರಜ್ವಲ್‌ರನ್ನು ಬಂಧಿಸಲು ಸಿದ್ಧರಾಗಿದ್ದಾರೆ. ಅದಕ್ಕೂ ಮುನ್ನ ಹೈ ಅಲಟ್೯ ಆದ ಪ್ರಜ್ವಲ್ ರೇವಣ್ಣ, ಇದೇ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದಾರೆ. ಇದಕ್ಕೆ ಅವಕಾಶ ನೀಡದ ನ್ಯಾಯಾಲಯ, ಮೊದಲು ಅವರು ಬರಲಿ ಆಮೇಲೆ ನೋಡೋಣ, ಮೇ 31ಕ್ಕೆ ಅರ್ಜಿ ವಿಚಾರಣೆ ಮಾಡೋಣ ಅಂತ ಹೇಳಿ SIT ಅಧಿಕಾರಿಗಳಿಗೆ ಆಕ್ಷೇಪಣೆ ಸಲ್ಲಿಸಲು ಅವಕಾಶ ನೀಡಿದ್ದಾರೆ. ಸದ್ಯ 3 ಪ್ರಕರಣಗಳಲ್ಲೂ ನಿರೀಕ್ಷಣಾ ಜಾಮೀನಿಗೆ ಪ್ರಜ್ವಲ್ ಅರ್ಜಿ ಸಲ್ಲಿಸಿದ್ದಾರೆ. ಸಿಐಡಿ ಪೊಲೀಸ್ ಠಾಣೆ, ಸೈಬರ್ ಕ್ರೈಂ ಠಾಣೆ, ಹೊಳೆನರಸೀಪುರ ಠಾಣೆಗಳಲ್ಲಿ ಕೇಸ್ ದಾಖಲಾಗಿವೆ.
ಮೈಸೂರಿನ ಕೆ.ಆರ್. ನಗರ ಠಾಣೆಯ ಸಂತ್ರಸ್ತ ಮಹಿಳೆಯ ಕಿಡ್ನಾಪ್ ಕೇಸ್ ವಿಚಾರದಲ್ಲಿ ಭವಾನಿ ರೇವಣ್ಣಗೆ ಬಂಧನದ ಭೀತಿ ಶುರುವಾಗಿದೆ. ಇದೇ ವಿಚಾರಕ್ಕೆ ಜನ ಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ನಿರೀಕ್ಷಣಾ ಜಾಮೀನು ಅರ್ಜಿ ಸಲ್ಲಿಸಿದ್ದು, SIT ಕೂಡಾ ಆಕ್ಷೇಪಣಾ ಅರ್ಜಿ ಸಲ್ಲಿಸಿ ಯಾವುದೇ ಕಾರಣಕ್ಕೂ ಭವಾನಿ ರೇವಣ್ಣಗೆ ಜಾಮೀನು ಮಂಜೂರು ಮಾಡಬಾರದು ಎಂದು ಆಕ್ಷೇಪ ವ್ಯಕ್ತಪಡಿಸಿದೆ. ವಾದ ಪ್ರತಿವಾದ ಆಲಿಸಿದ ನ್ಯಾಯಾಧೀಶರು ಭವಾನಿ ರೇವಣ್ಣಗೆ ನಿರೀಕ್ಷಣಾ ಜಾಮೀನು ವಿಚಾರದ ಆದೇಶವನ್ನು ಮೇ 31ಕ್ಕೆ ಮುಂದೂಡಿದ್ದಾರೆ.
ತನಿಖೆಗೆ ಸಹಕರಿಸುವುದಾಗಿ ಪ್ರಜ್ವಲ್ ಹೇಳಿದ್ದಾರೆ. ಆದರೆ ನಿರೀಕ್ಷಣಾ ಜಾಮೀನು ಸಿಗದ ಹಿನ್ನೆಲೆಯಲ್ಲಿ, ಬಂಧನ ತಪ್ಪಿಸಿಕೊಳ್ಳಲು ಅಲ್ಲೇ ಉಳಿಯುವ ಚಿಂತನೆ ಮಾಡುವ ಸಾಧ್ಯತೆಯೂ ಇದೆ. ಕಳೆದ ಬಾರಿಯೂ SIT ವಿಚಾರಣೆಗೆ ಬರಲು ಪ್ರಜ್ವಲ್ ಒಂದು ವಾರ ಕಾಲಾವಕಾಶ ಕೇಳಿದ್ದರು. ಆದರೆ ಒಂದು ತಿಂಗಳ ನಂತರವೂ SIT ವಿಚಾರಣೆಗೆ ಬಂದಿಲ್ಲ.
ಇದನ್ನೂ ಓದಿ: Prajwal Revanna Case: ಪ್ರಜ್ವಲ್ ರೇವಣ್ಣ ಆಗಮನಕ್ಕೆ ಕೌಂಟ್‌ಡೌನ್, ವಿಮಾನ ಏರ್ತಾರಾ ಇಲ್ವಾ?