ಬೆಂಗಳೂರು: ಲೈಂಗಿಕ ದೌರ್ಜನ್ಯ ಪ್ರಕರಣ (physical abuse) ಎದುರಿಸುತ್ತಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP Prajwal Revanna case) ನಿನ್ನೆ ಇಡೀ ಕೋರ್ಟ್ ಹಾಗೂ ವೈದ್ಯಕೀಯ ಪರೀಕ್ಷೆಗಳ (medical test) ನಡುವೆ ಸಮಯ ಕಳೆದರು. ಈ ನಡುವೆ ಎಸ್‌ಐಟಿ (SIT) ಹಲವಾರು ಪ್ರಶ್ನೆಗಳ ಮೂಲಕ ಗ್ರಿಲ್ ಮಾಡಿದ್ದು, ಅದರಲ್ಲಿ ಮುಖ್ಯವಾದುದು ಅವರು ಅಶ್ಲೀಲ ವಿಡಿಯೋಗಳನ್ನು (obscene video) ಚಿತ್ರೀಕರಿಸಿಕೊಂಡ ಮೊಬೈಲ್ ಎಲ್ಲಿದೆ ಎಂಬುದಾಗಿತ್ತು.
ಈ ಸಂದರ್ಭದಲ್ಲಿ ಪ್ರಜ್ವಲ್ ರೇವಣ್ಣ ಅಚ್ಚರಿಯ ಹೇಳಿಕೆಯೊಂದನ್ನು ನೀಡಿದ್ದು, ತಮ್ಮ ಮೊಬೈಲ್ ಕಳೆದುಹೋಗಿದೆ ಎಂದಿದ್ದಾರೆ. ತಮ್ಮ ಮೊಬೈಲ್ ಒಂದು ವರ್ಷದ ಹಿಂದೆಯೇ ಕಳೆದುಹೋಗಿದ್ದು, ಆ ಕುರಿತು ಹೊಳೆನರಸೀಪುರ ಠಾಣೆಯಲ್ಲಿ ಮೊಬೈಲ್ ಕಳ್ಳತನದ ಬಗ್ಗೆ ದೂರು ನೀಡಿರುವುದಾಗಿಯೂ ಹೇಳಿದ್ದಾರೆ.
ಪ್ರಜ್ವಲ್ ಅವರ ವಿಚಾರಣೆ ಮಾಡಿ 161 ಹೇಳಿಕೆಯನ್ನು ಎಸ್‌ಐಟಿ ದಾಖಲಿಸಿದೆ. ಅದರಲ್ಲಿ ಮೊಬೈಲ್ ಕುರಿತು ದಾಖಲಿಸಿದೆ. ನೀವು ಹೇಳುತ್ತಿರುವ ಮೊಬೈಲ್ ನನ್ನ ಬಳಿ ಇಲ್ಲ. ಕಳೆದ ವರ್ಷವೇ ಫೋನ್ ಕಳೆದು ಹೋಗಿದ್ದು, ಆ ಬಗ್ಗೆ ಹೊಳೆನರಸೀಪುರ ಠಾಣೆಯಲ್ಲಿ ದೂರು ಕೂಡ ನೀಡಿದ್ದೇನೆ ಎಂದು ಪ್ರಜ್ವಲ್ ಹೇಳಿದ್ದಾರೆ. ಈ ಹೇಳಿಕೆ ಸತ್ಯಾಸತ್ಯತೆಯನ್ನು ಎಸ್‌ಐಟಿ ಪರಿಶೀಲಿಸಲಿದೆ.
ನೀವು ತೋರಿಸಿರುವ ವಿಡಿಯೋಗಳಲ್ಲಿ ಇರುವುದು ನಾನಲ್ಲ. ಅವರೆಲ್ಲ ನನಗೆ ಪರಿಚಯ ಅಷ್ಟೇ. ನಾನು ಯಾರನ್ನೂ ಅತ್ಯಾಚಾರ ಮಾಡಿಲ್ಲ. ಅತ್ಯಾಚಾರ ಆರೋಪಗಳಿಗೂ ನನಗೂ ಯಾವ ಸಂಬಂಧವೂ ಇಲ್ಲ. ವಿಡಿಯೋಗಳ ಬಗ್ಗೆ ನಂಗಷ್ಟು ಗೊತ್ತಿಲ್ಲ ಎಂದು ಪ್ರಜ್ವಲ್ ಹೇಳಿದ್ದಾರೆ. ವೈರಲ್ ಆಗಿರುವ ವಿಡಿಯೋಗಳನ್ನು ತೋರಿಸಿ ಪ್ರಶ್ನಿಸಿದಾಗ ಈ ಉತ್ತರ ದೊರೆತಿದೆ. ತನ್ನ ಮೇಲಿರುವ ಎಲ್ಲ ಆರೋಪಗಳನ್ನು ಪ್ರಜ್ವಲ್ ತಳ್ಳಿ ಹಾಕಿದ್ದಾರೆ.
ಅಶ್ಲೀಲ ವಿಡಿಯೋಗಳನ್ನು ಚಿತ್ರೀಕರಿಸಿಕೊಂಡಿರುವ ಮೊಬೈಲ್ ಪ್ರಜ್ವಲ್ ವಿರುದ್ಧದ ಪ್ರಕರಣದಲ್ಲಿ ಪ್ರಬಲವಾದ ಸಾಕ್ಷ್ಯವಾಗಿದೆ. ಈ ಮೊಬೈಲ್ ಸಿಕ್ಕಿದರೆ, ಒಂದು ವೇಳೆ ವಿಡಿಯೋಗಳನ್ನು ಅಳಿಸಿದ್ದರೂ ಅದರಿಂದ ರಿಟ್ರೀವ್ ಮಾಡಬಹುದು. ಆದರೆ ಮೊಬೈಲ್ ಸಂಪೂರ್ಣ ನಾಶವಾಗಿದ್ದರೆ, ಯಾವುದೇ ಮೂಲ ರೆಕಾರ್ಡ್‌ಗಳು ಸಿಗಲಾರದು. ಅದರಿಂದ ಫಾರ್‌ವರ್ಡ್ ಆಗಿರುವ ವಿಡಿಯೋಗಳು ಸೆಕೆಂಡರಿ ಸಾಕ್ಷ್ಯಗಳೆನಿಸಿಕೊಳ್ಳುತ್ತವೆ. ಹೀಗಾಗಿ ಮೊಬೈಲ್ ಪಡೆಯಲು ಎಸ್‌ಐಟಿ ಪ್ರಯತ್ನ ನಡೆಸಬೇಕಿದೆ.
6 ದಿನಗಳ ಕಾಲ ಪೊಲೀಸ್ ಕಸ್ಟಡಿಗೆ ಪ್ರಜ್ವಲ್
ಹಾಸನ ಸಂಸದ ಪ್ರಜ್ವಲ್ ರೇವಣ್ಣ (Prajwal Revanna back in India ) ಅವರನ್ನು 6 ದಿನಗಳ ಕಾಲ ಎಸ್ಐಟಿ ಪೊಲೀಸರ ಕಸ್ಟಡಿಗೆ ನೀಡಲಾಗಿದೆ. ಎಸಿಎಮ್ಎಮ್ ನ್ಯಾಯಾಲಯದ ನ್ಯಾಯಧೀಶ ಎನ್. ಶಿವಕುಮಾರ್ ಈ ಆದೇಶ ಹೊರಡಿಸಿದ್ದಾರೆ. ಗುರುವಾರ ರಾತ್ರಿ ಬೆಂಗಳೂರು ಅಂತಾರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದ್ದ ಎಸ್ಐಟಿ ಪೊಲೀಸರು ಶುಕ್ರವಾರ ನ್ಯಾಯಾಲಯದ ಮುಂದೆ ಹಾಜರುಪಡಿಸಿದ್ದರು. ಗಂಭೀರ ಆರೋಪಗಳನ್ನು ಹೊತ್ತಿರುವ ಅವರ ತನಿಖೆಗಾಗಿ ಎಸ್ಐಟಿ ತನ್ನ ಕಸ್ಟಡಿಗೆ ನೀಡುವಂತೆ ನ್ಯಾಯಾಲಯಕ್ಕೆ ಮನವಿ ಮಾಡಿತ್ತು. ಅದನ್ನು ನ್ಯಾಯಾಧೀಶರು ಪುರಸ್ಕರಿಸಿದ್ದಾರೆ.
ಬೆಂಗಳೂರಿನ 42ನೇ ಎಸಿಎಮ್ಸಿ ನ್ಯಾಯಾಲಯ ಈ ಆದೇಶ ಹೊರಡಿಸಿದ್ದು ಪ್ರಜ್ವಲ್ ಅವರಿಗೆ ಯಾವುದೇ ಕಿರಕುಗಳ ನೀಡಬಾರದು ಎಂದು ಎಸ್ಐಟಿ ಅಧಿಕಾರಿಗಳಿಗೆ ಸೂಚನೆ ನೀಡಿದ್ದಾರೆ. ಇದೇ ವೇಳೆ ವೈದ್ಯಕೀಯ ಪರೀಕ್ಷೆ ಸೇರಿದಂತೆ ತನಿಖೆಗೆ ಎಲ್ಲ ರೀತಿಯಲ್ಲೂ ಸಹಕಾರ ನೀಡುವಂತೆ ಪ್ರಜ್ವಲ್ ರೇವಣ್ಣ ಅವರಿಗೂ ಸೂಚನೆ ನೀಡಿದ್ದಾರೆ. ಎಸ್ಐಟಿ ಅಧಿಕಾರಿಗಳು ಶುಕ್ರವಾರ ಸೇರಿದಂತೆ ಒಟ್ಟು 15 ದಿನಗಳ ಕಾಲ ತಮ್ಮ ಕಸ್ಟಡಿಗೆ ನೀಡುವಂತೆ ಕೋರಿದ್ದರು. ಆದರೆ, ಪ್ರಜ್ವಲ್ ಪರ ವಕೀಲರು 1 ದಿನ ಸಾಕು ಎಂದು ವಾದಿಸಿದ್ದರು. ಆದರೆ, ನ್ಯಾಯಾಧೀಶರು 6 ದಿನಗಳನ್ನು ಮಾನ್ಯ ಮಾಡಿದ್ದಾರೆ.
ಗುರುವಾರ ರಾತ್ರಿ ಪ್ರಜ್ವಲ್ ರೇವಣ್ಣ ಅವರನ್ನು ಬಂಧಿಸಿದ್ದ ಪೊಲೀಸರು ಬೆಳಗ್ಗೆ ತನಕ ಎಸ್ಐಟಿ ಕಚೇರಿಯಲ್ಲೇ ವಿಶ್ರಾಂತಿ ಪಡೆಯಲು ಅನುಕೂಲ ಮಾಡಿಕೊಟ್ಟಿದ್ದರು. ಬೆಳಗ್ಗೆ ಅವರ ವೈದ್ಯಕೀಯ ಪರೀಕ್ಷೆ ನಡೆಸಿ ಬಳಿಕ ಅವರಿಂದ ಅಗತ್ಯ ದಾಖಲೆಗಳಿಗೆ ಸಹಿ ಮಾಡಿಕೊಂಡರು. ಆ ಬಳಿಕ ಅವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದರು.
ಇದನ್ನೂ ಓದಿ: Prajwal Revanna Case: ಭವಾನಿ ರೇವಣ್ಣ ಕಾರು ಚಾಲಕನನ್ನು ವಶಕ್ಕೆ ಪಡೆದ ಎಸ್‌ಐಟಿ