Site icon Vistara News

Prajwal Revanna Case: ʼಮತ್ತೆ ಮತ್ತೆ ಅದನ್ನು ತೋರಿಸೋಕೆ ಮುಜುಗರ….ʼ ಜಡ್ಜ್‌ ಮುಂದೆ ಅಲವತ್ತುಕೊಂಡ ಪ್ರಜ್ವಲ್!‌

prajwal revanna case test

ಬೆಂಗಳೂರು: “ನಾನು ಈಗಾಗಲೇ ಎರಡು ಕೇಸ್‌ಗಳಲ್ಲಿ ಪುರುಷತ್ವ ಪರೀಕ್ಷೆ (Medical Test) ಒಪ್ಪಿ ಮಾಡಿಸಿಕೊಂಡಿದ್ದೇನೆ. ಮತ್ತೆ ಮತ್ತೆ ಅದೇ ಪರೀಕ್ಷೆ ಮಾಡಿಸಿಕೊಳ್ಳಲು ಮುಜುಗರವಾಗುತ್ತದೆ. ನನಗೆ ಮುಜುಗರ ಹುಟ್ಟಿಸಲೆಂದೇ ಇದನ್ನು ಮಾಡುತ್ತಿರುವಂತೆ ಕಾಣುತ್ತಿದೆ” ಎಂದು ಲೈಂಗಿಕ ದೌರ್ಜನ್ಯ (Physical abuse) ಪ್ರಕರಣದ ಆರೋಪಿ, ಮಾಜಿ ಸಂಸದ ಪ್ರಜ್ವಲ್‌ ರೇವಣ್ಣ (Prajwal Revanna Case) ನ್ಯಾಯಾಧೀಶರ ಮುಂದೆ ಅಲವತ್ತುಕೊಂಡ ಘಟನೆ ನಡೆದಿದೆ.

“ನಾನು ಎರಡು ಕೇಸ್‌ನಲ್ಲಿ ಮೆಡಿಕಲ್ ಟೆಸ್ಟ್ ಒಪ್ಪಿ ಮಾಡಿಸಿಕೊಂಡಿದ್ದೇನೆ. ಮತ್ತೆ ಅದೇ ಟೆಸ್ಟ್ ಮಾಡಿಸಲು ಕೇಳ್ತಾರೆ. ಪದೇ ಪದೆ ಖಾಸಗಿ ಅಂಗ ತೋರಿಸಲು ತುಂಬಾ ಮುಜುಗರ ಆಗುತ್ತಿದೆ. ಈಗಾಗಲೇ ಎರಡು ಕೇಸ್‌ಗಳಲ್ಲಿ ಸೇಮ್ ಪರೀಕ್ಷೆ ಆಗಿದೆ. ಈ ಮುಜುಗರದಿಂದ ಪಾರು ಮಾಡಿ” ಎಂದು ಪ್ರಜ್ವಲ್‌ ನ್ಯಾಯಾಧೀಶರ ಮುಂದೆ ವಿನಂತಿಸಿಕೊಂಡರು. ಅಗತ್ಯ ವೈದ್ಯಕೀಯ ಪರೀಕ್ಷೆಗಳನ್ನು ಮಾತ್ರ ಮಾಡಿಸುವಂತೆ ನ್ಯಾಯಾಧೀಶರು ಪೊಲೀಸ್‌ ಅಧಿಕಾರಿಗಳಿಗೆ ಸೂಚಿಸಿದರು.

ಪ್ರಜ್ವಲ್‌ ರೇವಣ್ಣ ಅವರ ಮೇಲೆ ಮೂರು ಪ್ರಕರಣಗಳಿದ್ದು, ಎರಡು ಪ್ರಕರಣಗಳಿಗೆ ಸಂಬಂಧಿಸಿದಂತೆ ಎಸ್‌ಐಟಿ ತನಿಖೆ ಪೂರ್ಣಗೊಂಡಿದ್ದು, ಪುರುಷತ್ವ ಪರೀಕ್ಷೆ ಮಾಡಲಾಗಿದೆ. ಮೂರನೆ ಬಾರಿಗೆ ಎಸ್‌ಐಟಿ ಪ್ರಜ್ವಲ್‌ ಅವರನ್ನು ಕಸ್ಟಡಿಗೆ ಪಡೆದುಕೊಂಡಿದೆ. ಮತ್ತೆ ಮೆಡಿಕಲ್‌ ಪರೀಕ್ಷೆಗೆ ಮುಂದಾಗಿದ್ದು, ಈ ಸಂದರ್ಭದಲ್ಲಿ ಪ್ರಜ್ವಲ್‌ ಆಕ್ಷೇಪಿಸಿದರು.

ಹಿಂದಿನ ನ್ಯಾಯಾಂಗ ಬಂಧನ ಅವಧಿ ಮುಗಿದ ಹಿನ್ನೆಲೆಯಲ್ಲಿ ಅವರನ್ನು ಕೋರ್ಟ್‌ ಮುಂದೆ ಹಾಜರುಪಡಿಸಲಾಗಿದ್ದು, ಮತ್ತೆ 14 ದಿನ ನ್ಯಾಯಾಂಗ ಬಂಧನಕ್ಕೆ ನೀಡಿ 42ನೇ ಎಸಿಎಂಎಂ ಕೋರ್ಟ್ ನ್ಯಾಯಾಧೀಶ ಕೆ.ಎನ್ ಶಿವಕುಮಾರ್ ಆದೇಶ ನೀಡಿದ್ದಾರೆ. ಈ ನಡುವೆ, ಜಾಮೀನು ಕೋರಿ ಪ್ರಜ್ವಲ್ ರೇವಣ್ಣ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದಲ್ಲಿ ಅರ್ಜಿ ಸಲ್ಲಿಸಿದ್ದಾರೆ. ಅರ್ಜಿ ವಿಚಾರಣೆ ನಡೆಸಿದ ಕೋರ್ಟ್, ಆಕ್ಷೇಪಣೆ ಸಲ್ಲಿಸಲು ಎಸ್‌ಪಿಪಿಗೆ ನೋಟೀಸ್ ಜಾರಿ ಮಾಡಿ ವಿಚಾರಣೆ ಮುಂದೂಡಿದೆ.

ಇದೇ ಸಂದರ್ಭದಲ್ಲಿ, ಎಸ್‌ಐಟಿ (SIT) ಅಧಿಕಾರಿಗಳು ತನ್ನ ಆರೋಗ್ಯ ಸಮಸ್ಯೆಯನ್ನು ಕಡೆಗಣಿಸಿದ್ದಾರೆ ಎಂದು ಪ್ರಜ್ವಲ್‌ ದೂರಿದ್ದು ಕೂಡ ವರದಿಯಾಗಿದೆ. ಪ್ರಜ್ವಲ್ ರೇವಣ್ಣ ಕಸ್ಟಡಿ ಅಂತ್ಯ ಹಿನ್ನೆಲೆಯಲ್ಲಿ ಎಸ್‌ಐಟಿ ಕೋರ್ಟ್‌ಗೆ ಹಾಜರು ಪಡಿಸಿದಾಗ, “ಏನಾದ್ರೂ ಆರೋಗ್ಯ ಸಮಸ್ಯೆ ಇದೆಯಾ?ʼʼ ಎಂದು ನ್ಯಾಯಾಧೀಶರು ಪ್ರಶ್ನಿಸಿದರು. “ಹೌದು ಸರ್” ಎಂದು ಪ್ರಜ್ವಲ್ ನುಡಿದರು.

“ಎಸ್ಐಟಿ ಅಧಿಕಾರಿಗಳು ಸರಿಯಾಗಿ ನೋಡ್ಕೋತಿಲ್ಲ” ಎಂದು ಪ್ರಜ್ವಲ್ ಹೇಳಿದ್ದಲ್ಲದೆ, “ಎಂಆರ್‌ಐ ಸ್ಕ್ಯಾನ್ ಮಾಡಿಸಿದ್ದೇನೆ. ಟ್ಯಾಬ್ಲೆಟ್ ತೆಗೆದುಕೊಳ್ತಿದ್ದೇನೆ” ಎಂದು ಹೇಳಿದಾಗ, ʼಆರೋಗ್ಯ ತಪಾಸಣೆ ಯಾಕೆ ಮಾಡಿಸಿಲ್ಲ?ʼ ಎಂದು ಅಧಿಕಾರಿಗಳನ್ನು ಜಡ್ಜ್ ಪ್ರಶ್ನಿಸಿದರು. “ಅವರು ಈಗ ಹೇಳ್ತಾ ಇದ್ದಾರೆ, ನಮಗೆ ಹೇಳಿಲ್ಲ” ಎಂದು ಎಸ್ಐಟಿ ಅಧಿಕಾರಿಗಳು ಉತ್ತರಿಸಿದರು.

ನಂತರ 14 ದಿನಗಳ ಕಾಲ ನ್ಯಾಯಾಂಗ ವಶಕ್ಕೆ ನೀಡಿ ನ್ಯಾಯಾಧೀಶರು ಆದೇಶ ಹೊರಡಿಸಿದರು. ಪರಪ್ಪನ ಆಗ್ರಹಾರ ಕೇಂದ್ರ ಕಾರಾಗೃಹದತ್ತ ಅವರನ್ನು ಕರೆದೊಯ್ಯಲಾಗಿದೆ. ನ್ಯಾಯಾಂಗ ಬಂಧನಕ್ಕೆ ಹೋದರೂ ನಾಳೆ ಮತ್ತೆ ಬಾಡಿ ವಾರಂಟ್ ಮೇಲೆ ಅವರನ್ನು ಕಸ್ಟಡಿಗೆ ಪಡೆಯಲು ಎಸ್ಐಟಿ ಮುಂದಾಗಿದೆ. ಸಿಐಡಿ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಕೇಸ್‌ಗೆ ಸಂಬಂಧಿಸಿ ವಶಕ್ಕೆ ಪಡೆಯಲಿದೆ.

ಭವಾನಿ ರೇವಣ್ಣಗೆ ಸಿಗ್ತು ನಿರೀಕ್ಷಣಾ ಜಾಮೀನು

ಕೆಆರ್ ನಗರದಲ್ಲಿ ಲೈಂಗಿಕ ದೌರ್ಜನ್ಯ (Physical Abuse) ಸಂತ್ರಸ್ತೆಯನ್ನು ಕಿಡ್ನಾಪ್ (kidnap case) ಮಾಡಿದ ಪ್ರಕರಣದಲ್ಲಿ ಎಸ್‌ಐಟಿ (SIT) ವಿಚಾರಣೆ ಎದುರಿಸುತ್ತಿರುವ ಭವಾನಿ ರೇವಣ್ಣ (Bhavani Revanna) ಅವರಿಗೆ ಹೈಕೋರ್ಟ್‌ನಿಂದ ನಿರೀಕ್ಷಣಾ ಜಾಮೀನು (Anticipatory Bail) ದೊರೆತಿದೆ. ಕಳೆದ ವಾರ ಕಿಡ್ನಾಪ್‌ ಕೇಸ್‌ನಲ್ಲಿ ವಾದ ಪ್ರತಿವಾದ ಆಲಿಸಿದ ಹೈಕೋರ್ಟ್ ತೀರ್ಪು ಕಾಯ್ದಿರಿಸಿತ್ತು. ನ್ಯಾಯಮೂರ್ತಿ ಕೃಷ್ಣ ಎಸ್.ದೀಕ್ಷಿತ್ ಅವರ ಪೀಠದಿಂದ ಆದೇಶ ಪ್ರಕಟವಾಗಿದ್ದು, ಸಂತ್ರಸ್ತೆ ಕಿಡ್ನಾಪ್ ಪ್ರಕರಣದಲ್ಲಿ ಭವಾನಿಗೆ ಮಧ್ಯಂತರ ನಿರೀಕ್ಷಣಾ ಜಾಮೀನು ನೀಡಲಾಗಿತ್ತು. ಇಂದು ನಿರೀಕ್ಷಣಾ ಜಾಮೀನು ಅರ್ಜಿಯ ಅಂತಿಮ ಆದೇಶವನ್ನು ಪೀಠ ಪ್ರಕಟಿಸಿದೆ.

ಇದನ್ನೂ ಓದಿ: Prajwal Revanna Case: ಪರಾರಿಯಾಗಲು ಸಹಾಯ; ಪ್ರಜ್ವಲ್ ರೇವಣ್ಣ ಗರ್ಲ್ ಫ್ರೆಂಡ್‌ಗೆ ಎಸ್‌ಐಟಿ ನೊಟೀಸ್!

Exit mobile version