Site icon Vistara News

Prajwal Revanna Case: ಪ್ರಜ್ವಲ್‌ ಮನೆಯಿಂದ ಹಾಸಿಗೆ, ಹೊದಿಕೆ ಕೊಂಡೊಯ್ದ ಎಸ್‌ಐಟಿ; ಏನ್‌ ಸಿಗ್ತು?

prajwal revanna case mattress

ಹಾಸನ: ಹಾಸನ ಸಂಸದ ಪ್ರಜ್ವಲ್‌ ರೇವಣ್ಣ (Hassan MP Prajwal Revanna Case) ಭಾಗಿಯಾಗಿರುವ ಅಶ್ಲೀಲ ವಿಡಿಯೋ (Obscene video) ಹಾಗೂ ಲೈಂಗಿಕ ದೌರ್ಜನ್ಯ (Physical abuse) ಪ್ರಕರಣಕ್ಕೆ ಸಂಬಂಧಿಸಿ, ಒಂದೆಡೆ ತಾನು ಮೇ 31ರಂದು ಭಾರತಕ್ಕೆ ಬರುವುದನ್ನು ಪ್ರಜ್ವಲ್‌ ಖಚಿತಪಡಿಸಿದ್ದರೆ, ಇನ್ನೊಂದೆಡೆ ಸಂಸದನ ಮನೆಯಲ್ಲಿ ವಿಶೇಷ ತನಿಖಾ ತಂಡ (SIT) ಸಮಗ್ರ ತಪಾಸಣೆ ನಡೆಸಿದೆ.

ಮಂಗಳವಾರ ಸತತ ಹತ್ತು ಗಂಟೆಗಳ ಕಾಲ ಎಸ್‌ಐಟಿ ಹಾಗೂ ಎಫ್‌ಎಸ್‌ಎಲ್ (FSL) ತಂಡಗಳು ಹಾಸನ ಸಂಸದನ ಮನೆಯಲ್ಲಿ ಸಂಪೂರ್ಣ ತಪಾಸಣೆ ನಡೆಸಿದವು. ಹಾಸನ ನಗರದ ಆರ್.ಸಿ. ರಸ್ತೆಯಲ್ಲಿರುವ ಸಂಸದರ ನಿವಾಸದಲ್ಲಿ ಪರಿಶೀಲನೆ ಮುಗಿಸಿ ಬೆಳಗ್ಗೆ 4 ಗಂಟೆಗೆ ಹೊರಬಿದ್ದವು. ಪ್ರಜ್ವಲ್‌ ರೇವಣ್ಣ ಮಲಗುತ್ತಿದ್ದ ಕೊಠಡಿಯಲ್ಲಿದ್ದ ಹಾಸಿಗೆ, ದಿಂಬು, ಹೊದಿಕೆ ಹಾಗೂ ಇತರೆ ವಸ್ತುಗಳನ್ನು ಎಸ್‌ಐಟಿ ಕೊಂಡೊಯ್ದಿದೆ.

ಹಾಸನ ಸಂಸದರು ತಮ್ಮ ಅಧಿಕೃತ ನಿವಾಸಕ್ಕೇ ಸಂರಸ್ತ ಮಹಿಳೆಯರನ್ನು ಕರೆಸಿಕೊಂಡು ಲೈಂಗಿಕವಾಗಿ ಬಳಸಿಕೊಂಡು ಅದನ್ನು ಸ್ವತಃ ವಿಡಿಯೋ ಚಿತ್ರೀಕರಣ ಮಾಡಿಕೊಂಡಿದ್ದರು ಎಂಬ ಆರೋಪ ವ್ಯಕ್ತವಾದ ಹಿನ್ನೆಲೆಯಲ್ಲಿ ಈ ಸಾಕ್ಷಿಗಳ ಸಂಗ್ರಹ ಮಹತ್ವ ಪಡೆದಿದೆ. ಈ ಹಾಸಿಗೆ ಹೊದಿಕೆಗಳ ಮೇಲಿರಬಹುದಾದ ಡಿಎನ್‌ಎ ಸಾಕ್ಷಿಗಳ ಸಂಗ್ರಹ ಹಾಗೂ ಪರಿಶೀಲನೆಗೆ ಎಫ್‌ಎಸ್‌ಎಲ್‌ ಮುಂದಾಗಲಿದೆ.

ಮೇ 31ಕ್ಕೆ ಪ್ರಜ್ವಲ್‌ ರೇವಣ್ಣ ಬರುವ ಹೇಳಿಕೆ ನೀಡಿದ ಬೆನ್ನಲ್ಲೆ ಮಹತ್ವದ ದಾಖಲೆ ಸಂಗ್ರಹಿಸಲು ಮುಂದಾದ ಎಸ್‌ಐಟಿ, ಪೂರಕ ಸಾಕ್ಷಿ ಕಲೆಹಾಕಲು ಮುಂದಾಗಿದೆ. ಹಾಸನದಲ್ಲಿರುವ ಸಂಸದರ ಮನೆಯಿಂದ ಸಾಕ್ಷ್ಯಗಳನ್ನು ಸಂಗ್ರಹಿಸಿ ಬೆಂಗಳೂರಿಗೆ ಕೊಂಡೊಯ್ದಿದೆ. ಇದಕ್ಕಾಗಿ ನಿನ್ನೆ ಇಡೀ ತಪಶೀಲು ನಡೆಸಿದ ತಂಡ, ಹಾಸನ ನಗರ ಠಾಣೆ ಪೊಲೀಸರ ಸಹಾಯ ಪಡೆಯಿತು.‌

ಹೊಳೆನರಸೀಪುರದಲ್ಲೂ ಶೋಧ

ಪ್ರಜ್ವಲ್ ರೇವಣ್ಣ ವಿಡಿಯೋ ಬಿಡುಗಡೆ ಬೆನ್ನಲ್ಲೆ ಹೊಳೆನರಸೀಪುರಕ್ಕೂ ಎಸ್ಐಟಿ ತಂಡ ಬಂದಿದೆ. ಹೊಳೆನರಸೀಪುರದ ಹೆಚ್.ಡಿ ರೇವಣ್ಣ ಮನೆಗೆ ಮತ್ತೆ ಬಂದ ಎಸ್ಐಟಿ ತಂಡ, ರೇವಣ್ಣ ಮನೆಯಲ್ಲಿ ಶೋಧ ನಡೆಸಿದೆ. ಗನ್ನಿಕಡ ತೋಟದ ಮನೆಯಲ್ಲೂ ಸ್ಥಳ ಮಹಜರ್ ನಡೆಸುತ್ತಿದೆ. ಒಟ್ಟು ಮೂರು ಕಡೆಗಳಲ್ಲಿ ಎಸ್ಐಟಿ ತಂಡಗಳಿಂದ ಏಕಕಾಲಕ್ಕೆ ಮಹಜರ್ ನಡೆದಿದೆ.‌

ಟಿಕೆಟ್‌ ಬುಕ್‌ ಮಾಡಿದ ಪ್ರಜ್ವಲ್‌ ರೇವಣ್ಣ

ಸಂಸದ ಪ್ರಜ್ವಲ್ ರೇವಣ್ಣ ಜರ್ಮನಿಯಿಂದ ವಾಪಸ್​ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ್ದಾರೆ. ಲುಫ್ತಾನ್ಸಾ ಸಂಸ್ಥೆಯ ವಿಮಾನದಲ್ಲಿ ಏರ್​ ಟಿಕೆಟ್​ ಬುಕ್ ಮಾಡಿದ ವಿವರ ‘ವಿಸ್ತಾರನ್ಯೂಸ್​’ಗೆ ಲಭ್ಯವಾಗಿದೆ. ಪ್ರಕರಣದ ತನಿಖೆ ನಡೆಸುವ ಎಸ್​ಐಟಿ ಪ್ರಜ್ವಲ್ ರೇವಣ್ಣಗಾಗಿ ಕಾಯುತ್ತಿದ್ದು ಭಾರತಕ್ಕೆ ಬಂದ ತಕ್ಷಣ ವಶಕ್ಕೆ ಪಡೆದುಕೊಳ್ಳುವ ಸಾಧ್ಯತೆಗಳಿವೆ. ಪ್ರಜ್ವಲ್ ರೇವಣ್ಣ ಜರ್ಮನಿಯ ಮ್ಯೂನಿಚ್​ನಿಂದ ಬೆಂಗಳೂರಿನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ನೇರ ಟಿಕೆಟ್​ ಬುಕ್​ ಮಾಡಿಕೊಂಡಿದ್ದು ಅಲ್ಲಿಂದಲೇ ಅವರನ್ನು ಎಸ್​ಐಟಿ ಪೊಲೀಸರು ವಶಕ್ಕೆ ಪಡೆದುಕೊಂಡು ತನಿಖೆ ನಡೆಸಲಿದ್ದಾರೆ.

ಮೇ 31ಕ್ಕೆ ಬೆಂಗಳೂರಿಗೆ ತಲುಪುವ ಲುಫ್ತಾನ್ಸಾ ಸಂಸ್ಥೆಯ ವಿಮಾನದಲ್ಲಿ ಪ್ರಜ್ವಲ್ ಟಿಕೆಟ್ ಬುಕಿಂಗ್ ಮಾಡಿದ್ದಾರೆ. ವಿಮಾನದ ಬ್ಯುಸಿನೆಸ್​ ಕ್ಲಾಸ್​ ವರ್ಗದಲ್ಲಿ ಅವರು ತಮ್ಮ ಟಿಕೆಟ್ ಕಾಯ್ದಿರಿಸಿದ್ದಾರೆ. ಕಳೆದ ಒಂದು ತಿಂಗಳಿಂದ ಭಾರತ ಬಿಟ್ಟು ಪರಾರಿಯಾಗಿದ್ದ ಅವರು ವಾಪಸ್​ ಬರಲು ನಿರ್ಧರಿಸಿದ್ದಾರೆ. ಎಸ್​ಐಟಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ಆರಂಭಿಸುವುದಕ್ಕಿಂತ ಮೊದಲೇ ಅವರು ಭಾರತದಿಂದ ಹೊರಟ್ಟಿದ್ದರು. ಪ್ರಕರಣ ಕಾವು ಪಡೆದು ಪ್ರತಿಭಟನೆ ಹಾಗೂ ಧರಣಿಗಳು ನಡೆಯುವ ಸಂದರ್ಭದಲ್ಲಿ ದೇಶದಿಂದ ದೂರವಿದ್ದರು. ಎಸ್​ಐಟಿ ಪೊಲೀಸರು ಪ್ರಜ್ವಲ್​ ವಶಕ್ಕೆ ಪಡೆಯಲು ನಾನಾ ರಾಜತಾಂತ್ರಿಕ ಸಮಸ್ಯೆ ಎದುರಾದ ಕಾರಣ ಕಾಯಬೇಕಾಯಿತು. ಅಂತಿಮವಾಗಿ ಕೇಂದ್ರ ಸರ್ಕಾರ ಸೇರಿದಂತೆ ಎಲ್ಲರ ಒತ್ತಾಯ ಹಾಗೂ ತಮಗೆ ಹಾಜರಾಗಲು ನೀಡಿದ ನೋಟಿಸ್​ನ ಗಡುವು ಮುಗಿದ ಕಾರಣ ಜರ್ಮನಿಯಿಂದ ಬರಲಿದ್ದಾರೆ.

ಇದನ್ನೂ ಓದಿ: Prajwal Revanna Case : ಜರ್ಮನಿಯಿಂದ ಭಾರತಕ್ಕೆ ಬರಲು ವಿಮಾನ ಟಿಕೆಟ್ ಬುಕ್ ಮಾಡಿದ ಪ್ರಜ್ವಲ್ ರೇವಣ್ಣ

Exit mobile version