ಬೆಂಗಳೂರು: ವಿದೇಶದಲ್ಲಿದ್ದುಕೊಂಡು ಲೈಂಗಿಕ ಹಗರಣ (Pen drive case) ವಿಚಾರಣೆಯಿಂದ ತಪ್ಪಿಸಿಕೊಳ್ಳುತ್ತಿರುವ ಹಾಸನ ಸಂಸದ (Hassan MP) ಪ್ರಜ್ವಲ್ ರೇವಣ್ಣ (Prajwal Revanna Case) ವಿರುದ್ಧ ರೆಡ್ ಕಾರ್ನರ್ ನೊಟೀಸ್ (Red Corner Notice) ಜಾರಿ ಮಾಡಲು ಎಸ್‌ಐಟಿ (SIT) ಸಿದ್ಧತೆ ನಡೆಸಿದೆ. ಇನ್ನೊಂದೆಡೆ ಭವಾನಿ ರೇವಣ್ಣ (Bhavani Revanna) ಅವರಿಗೂ ವಿಚಾರಣೆಗೆ ಎಸ್‌ಐಟಿ ಬುಲಾವ್ ಮಾಡಿದೆ.
ಈಗಾಗಲೇ ಪ್ರಜ್ವಲ್ ರೇವಣ್ಣ ವಿರುದ್ಧ ಲುಕ್‌ಔಟ್ ನೊಟೀಸ್ (Lookout notice) ಜಾರಿ ಮಾಡಲಾಗಿದೆ. ಆದರೆ ಇದು ದೇಶದೊಳಗೆ ಮಾತ್ರ ಅನ್ವಯವಾಗುತ್ತದೆ. ದೇಶದೊಳಗೆ ಯಾವುದೇ ಏರ್‌ಪೋರ್ಟ್, ಬಂದರು, ರೈಲ್ವೇ ನಿಲ್ದಾಣದಲ್ಲೂ ಇದರ ಮೂಲಕ ಪ್ರಜ್ವಲ್ ಅವರನ್ನು ಬಂಧಿಸಬಹುದು. ಆದರೆ ಇದು ಹೊರದೇಶಗಳಲ್ಲಿ ಅಧಿಕಾರ ವ್ಯಾಪ್ತಿಯನ್ನು ಹೊಂದಿರುವುದಿಲ್ಲವಾದ್ದರಿಂದ, ವಿದೇಶದಿಂದ ಕರೆತರಲು ಇದು ಸಾಕಾಗುವುದಿಲ್ಲ.
“ಒಂದು ವಾರ ಸಮಯ ಬೇಕು” ಎಂದು ಪ್ರಜ್ವಲ್ ರೇವಣ್ಣ ಮನವಿ ಮಾಡಿಕೊಂಡಿದ್ದರು. ಮೇ 15ರಂದು ಲುಫ್ತಾನ್ಸಾ ಏರ್‌ಲೈನ್ಸ್‌ನಲ್ಲಿ ಟಿಕೆಟ್ ಬುಕ್ ಮಾಡಿದ್ದರು. ಇದೆಲ್ಲವೂ ಎಸ್‌ಐಟಿಯ ದಾರಿ ತಪ್ಪಿಸುವ ತಂತ್ರ ಎಂದು ಭಾವಿಸಲಾಗಿದೆ. ಬಂದರೆ ಬಂಧನ ಆಗುವುದು ಖಚಿತವಾಗಿರುವುರಿಂದ, ಪ್ರಜ್ವಲ್ ರೇವಣ್ಣ ಸದ್ಯ ವಾಪಸು ಬರೋದು ಅನುಮಾನವೆನಿಸಿದೆ. ಪ್ರಜ್ವಲ್ ಬಳಿ ರಾಜತಾಂತ್ರಿಕ ಪಾಸ್‌ಪೋರ್ಟ್ ಇರುವುದರಿಂದ ಓಡಾಟಕ್ಕೆ ವೀಸಾ ಆಗತ್ಯ ಬೀಳುವುದಿಲ್ಲ. ಇದರ ಮೂಲಕ ದೇಶದಿಂದ ದೇಶಕ್ಕೆ ಓಡಾಡಿಕೊಂಡು ಇರಬಹುದು.
ಹೀಗಾಗಿ ಪ್ರಜ್ವಲ್ ರೇವಣ್ಣ ಬಂಧನಕ್ಕೆ ರೆಡ್ ಕಾರ್ನರ್ ನೊಟೀಸ್ ಹೊರಡಿಸಲು ಮನವಿ ಮಾಡುವ ಸಾಧ್ಯತೆ ಇದೆ. ಸಿಐಡಿ ಮುಖಾಂತರ ಸಿಬಿಐಗೆ ಮನವಿ ಮಾಡಿ, ರೆಡ್ ಕಾರ್ನರ್ ನೊಟೀಸ್ ಹೊರಡಿಸಲು ಮನವಿ ಮಾಡಬೇಕು. ಸಿಬಿಐ ಸಂಸ್ಥೆಯು ಇಂಟರ್‌ಪೋಲ್ ಅನ್ನು ಸಂಪರ್ಕಿಸಿ ರೆಡ್ ಕಾರ್ನರ್ ನೊಟೀಸ್‌ಗೆ ಬೇಡಿಕೆ ಸಲ್ಲಿಸಬೇಕು. ರೆಡ್ ಕಾರ್ನರ್ ನೊಟೀಸ್ ಜಾರಿಯಾದರೆ, ಯಾವ ದೇಶದಲ್ಲಿದ್ದರೂ ಆ ದೇಶದ ಪೊಲೀಸರು ಆರೋಪಿಯನ್ನು ಬಂಧಿಸಿ ಸಂಬಂಧಪಟ್ಟ ದೇಶಕ್ಕೆ ಮಾಹಿತಿ ನೀಡುತ್ತಾರೆ. ನಂತರ ಇಲ್ಲಿನ ಪೊಲೀಸರು ಹೋಗಿ ಆತನನ್ನು ಕರೆತರುತ್ತಾರೆ.
ಭವಾನಿಗೂ ಬುಲಾವ್
ಅಪ್ಪ ಮಗನ ಬಳಿಕ ಭವಾನಿ ರೇವಣ್ಣಗೂ ಎಸ್ಐಟಿ ನೊಟೀಸ್ ಕಳಿಸಿದೆ. ಕೆಆರ್ ನಗರ ಠಾಣೆಯಲ್ಲಿ ದಾಖಲಾದ ಕಿಡ್ನಾಪ್ ಪ್ರಕರಣ ಸಂಬಂಧ ಭವಾನಿ ರೇವಣ್ಣಗೆ ಎಸ್ಐಟಿ ನೊಟೀಸ್ ಕಳಿಸಿದ್ದು, ಇಂದು ವಿಚಾರಣೆಗೆ ಹಾಜರಾಗಲು ಸೂಚಿಸಿದೆ. ಕಿಡ್ನಾಪ್ ಪ್ರಕರಣದಲ್ಲಿ ಭವಾನಿ ರೇವಣ್ಣ ಸಂಬಂಧಿ ಸತೀಶ್ ಬಾಬು ಎಂಬಾತನ ಬಂಧನ ಆಗಿದೆ.
ಪ್ರಮುಖ ಆರೋಪಿ ಎಚ್.ಡಿ. ರೇವಣ್ಣ (HD Revanna) ವಿರುದ್ಧವೂ ಈಗ ಎಸ್‌ಐಟಿ ಲುಕ್‌ಔಟ್ ನೋಟಿಸ್ ಜಾರಿ ಮಾಡಿದೆ. ದೇಶ ಬಿಟ್ಟು ಹೋಗುವ ಸಾಧ್ಯತೆ ಇರುವ ಹಿನ್ನೆಲೆಯಲ್ಲಿ ಲುಕ್‌ಔಟ್ ನೋಟಿಸ್ (Lookout Notice) ಜಾರಿ ಮಾಡಲಾಗಿದೆ ಎನ್ನಲಾಗಿದೆ.
ರೇವಣ್ಣಗೂ ಲುಕ್‌ಔಟ್ ನೋಟೀಸ್
ಪ್ರಕರಣದ ಪ್ರಮುಖ ಆರೋಪಿ, ಮಾಜಿ ಸಚಿವ ಎಚ್.ಡಿ. ರೇವಣ್ಣ (HD Revanna) ವಿರುದ್ಧವೂ ಲೈಂಗಿಕ ದೌರ್ಜನ್ಯ ಹಾಗೂ ಅಪಹರಣ ಪ್ರಕರಣ ದಾಖಲಾಗಿದೆ. ಕಳೆದ ಎರಡು ದಿನಗಳಿಂದ ಎಚ್.ಡಿ. ರೇವಣ್ಣ ಕಾಣಿಸಿಕೊಂಡಿಲ್ಲ. ಈ ಹಿನ್ನೆಲೆಯಲ್ಲಿ ಎಸ್‌ಐಟಿ ಅಧಿಕಾರಿಗಳು ಲುಕ್‌ಔಟ್ ನೋಟಿಸ್ ಅನ್ನು ಜಾರಿ ಮಾಡಿದ್ದಾರೆ.
ಕೆ. ಆರ್. ನಗರ ಪೊಲೀಸ್ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣದಡಿ ಲುಕ್ ಔಟ್ ನೋಟಿಸ್ ಅನ್ನು ಜಾರಿ ಮಾಡಲಾಗಿದೆ. ಈಗ ಎಚ್.ಡಿ. ರೇವಣ್ಣ ಸಹ ತಲೆಮರೆಸಿಕೊಂಡಿದ್ದಾರೆ ಎನ್ನಲಾಗಿದ್ದು, ದೇಶ ಬಿಟ್ಟು ಹೋಗುವ ಸಾಧ್ಯತೆ ಇದೆ. ಒಂದು ವೇಳೆ ಅವರು ದೇಶ ಬಿಟ್ಟು ಹೋದರೆ ರಾಜ್ಯ ಸರ್ಕಾರಕ್ಕೆ ತೀವ್ರ ಮುಖಭಂಗವಾಗಲಿದೆ. ಇದೊಂದು ಹೈಪ್ರೊಫೈಲ್ ಕೇಸ್ ಆಗಿದ್ದು, ಸೂಕ್ಷ್ಮವಾಗಿ ತನಿಖೆ ನಡೆಸಬೇಕಿದೆ. ಹೀಗಾಗಿ ಎಸ್‌ಐಟಿ ಅಧಿಕಾರಿಗಳು ಎಲ್ಲ ಆಯಾಮಗಳಲ್ಲಿಯೂ ತನಿಖೆ ಮಾಡುತ್ತಿದ್ದಾರೆ.
ಇದರ ಜತೆಗೆ ರೇವಣ್ಣ ಅವರಿಗೆ ಈಗಾಗಲೇ ವಿಚಾರಣೆಗೆ ಹಾಜರಾಗುವಂತೆ ಹಲವು ಬಾರಿ ನೋಟಿಸ್ ನೀಡುತ್ತಲೇ ಬರಲಾಗಿದೆ. ಇಷ್ಟಾದರೂ ಅವರು ಎಲ್ಲಿಯೂ ಕಾಣಿಸಿಕೊಂಡಿಲ್ಲ. ಹೀಗಾಗಿ ಮುಂಜಾಗ್ರತಾ ಕ್ರಮವಾಗಿ ಎಸ್‌ಐಟಿ ಲುಕ್‌ಔಟ್ ನೋಟಿಸ್ ಜಾರಿಗೊಳಿಸಿದೆ.
ಇದನ್ನೂ ಓದಿ: Prajwal Revanna Case: ಪ್ರಜ್ವಲ್ ವಿಡಿಯೊ ಪೆನ್‌ಡ್ರೈವ್ ಕಿಂಗ್‌ಪಿನ್ ಯಾರು? ಬೆನ್ನತ್ತಿ ಹೊರಟಿದೆ ಎಚ್‌ಡಿಕೆ ಟೀಂ!