Site icon Vistara News

Prajwal Revanna Case: ಎಸ್‌ಐಟಿಗೆ ಸವಾಲೆಸೆದ ನವೀನ್‌ ಗೌಡ; ದೇವರಾಜೇಗೌಡ, ಪ್ರೀತಂಗೌಡ ಆಪ್ತರು ಎಸ್‌ಐಟಿ ಕಸ್ಟಡಿಗೆ?

prajwal revanna case

ಬೆಂಗಳೂರು: ಹಾಸನ ಜಿಲ್ಲೆಯಲ್ಲಿ ಪ್ರಜ್ವಲ್‌ ರೇವಣ್ಣ ಅವರ ಲೈಂಗಿಕ ದೌರ್ಜನ್ಯದ್ದು (Prajwal Revanna Case) ಎನ್ನಲಾದ ಅಶ್ಲೀಲ ದೃಶ್ಯವುಳ್ಳ ಪೆನ್‌ ಡ್ರೈವ್ ಹಂಚಿಕೆ (Pen drive case) ಮಾಡಿದ ಪ್ರಕರಣದಲ್ಲಿ, ಆರೋಪಿಯಾಗಿ ಇನ್ನೂ ಸೆರೆಸಿಗದ ನವೀನ್‌ಗೌಡ ಫೇಸ್‌ಬುಕ್‌ನಲ್ಲಿ ಪೋಸ್ಟ್‌ ಮಾಡಿದ್ದು, ಎಸ್‌ಐಟಿಗೆ (SIT) ಪರೋಕ್ಷವಾಗಿ ಸವಾಲು ಹಾಕಿದ್ದಾನೆ.

“ಪೆನ್ ಡ್ರೈವ್‌ನ ನಾನು ಅರಕಲಗೂಡು ಶಾಸಕ ಎ. ಮಂಜುಗೆ ಕೊಟ್ಟಿದ್ದೆ. ಎಚ್‌ಡಿ ಕುಮಾರಸ್ವಾಮಿ (HD Kumaraswamy) ಹೇಳಿದಂತೆ ಪೆನ್ ಡ್ರೈವ್ ಹಂಚಿಕೆ ಹಿಂದೆ ಮಹಾನಾಯಕನ ಕೈವಾಡ ಇದೆ. ಆ ಮಹಾನಾಯಕ ಅರಕಲಗೂಡು ಎಂಎಲ್ಎ ಮಂಜುನಾ?” ಎಂದು ನವೀನ್ ಗೌಡ ಪೋಸ್ಟ್ ಹಾಕಿದ್ದಾನೆ.

ಪೆನ್ ಡ್ರೈವ್ ಹಂಚಿಕೆ ಪ್ರಕರಣದಲ್ಲಿ ನವೀನ್ ಗೌಡ ಎ೧ ಆರೋಪಿಯಾಗಿದ್ದು, ಎಸ್‌ಐಟಿ ಈತನ ಹುಡುಕಾಟದಲ್ಲಿದೆ. ಎಸ್ಐಟಿ ತಲಾಶ್ ಮಾಡುತ್ತಿರುವಾಗಲೇ ಫೇಸ್‌ಬುಕ್ ಪೋಸ್ಟ್ ಹಾಕಿ ಈತ ಒಂದು ರೀತಿಯಲ್ಲಿ ಚಾಲೆಂಜ್ ಮಾಡಿದಂತಾಗಿದೆ. ಈಗಾಗಲೆ ಪೆನ್ ಡ್ರೈವ್ ಹಂಚಿಕೆ ಕೇಸಲ್ಲಿ ಇಬ್ಬರನ್ನು ಎಸ್ಐಟಿ ಆರೆಸ್ಟ್ ಮಾಡಿದ್ದು, ನವೀನ್ ಗೌಡ ತಲಾಶೆಯಲ್ಲಿದೆ.

ದೇವರಾಜೇಗೌಡ ಮೇಲೆ ಫೋಕಸ್

ಹೊಳೆನರಸೀಪುರ ಪೊಲೀಸರಿಂದ ಬಂಧನ ಆಗಿರುವ ವಕೀಲ ದೇವರಾಜೇಗೌಡರನ್ನು ತಮ್ಮ ಕಸ್ಟಡಿಗೆ ನೀಡಬೇಕು ಎಂದು ಎಸ್ಐಟಿ ಕೇಳುವ ಸಾಧ್ಯತೆ ಇದೆ. ಆರೆಸ್ಟ್‌ಗೂ ಮುನ್ನ ದೇವರಾಜೇಗೌಡಗೆ ಮತ್ತೊಂದು ನೊಟೀಸ್ ಅನ್ನು ಎಸ್ಐಟಿ ನೀಡಿದ್ದು, ಕೇಸ್ ಸಂಬಂಧ ಹೆಚ್ಚಿನ ವಿಚಾರಣೆಗೆ ಹಾಜರಾಗುವಂತೆ ಹೇಳಿತ್ತು.

ವಿಚಾರಣೆಗೆ ಹಾಜರಾಗದೆ ಕರ್ನಾಟಕ ಬಿಟ್ಟು ಹೊರಟಿದ್ದ ದೇವರಾಜೇಗೌಡರನ್ನು ಲೈಂಗಿಕ ದೌರ್ಜನ್ಯ ಕೇಸಿನಲ್ಲಿ ಹೊಳೆನರಸೀಪುರ ಪೊಲೀಸರು ಆರೆಸ್ಟ್ ಮಾಡಿದ್ದರು. ನಂತರ ಜಿಲ್ಲಾ ನ್ಯಾಯಾಲಯ ಇವರನ್ನು ನ್ಯಾಯಾಂಗ ಬಂಧನಕ್ಕೆ ಒಪ್ಪಿಸಿದ್ದು, ಈಗ ಪ್ರಜ್ವಲ್ ಕೇಸ್ ಸಂಬಂಧ ತನಿಖೆಗೆ ಬಾಡಿ ವಾರೆಂಟ್ ಮೇಲೆ ಕಸ್ಟಡಿಗೆ ಕೇಳುವ ಸಾಧ್ಯತೆ ಇದೆ.

ಈಗಾಗಲೇ ದೇವರಾಜೇಗೌಡ ಪ್ರಕರಣ ತನಿಖೆ ನಡೆಸುತ್ತಿರುವ ಹೊಳೆನರಸೀಪುರ ಪೊಲೀಸರು ಕೂಡ ಆರೋಪಿಯ ಕಸ್ಟಡಿಗೆ ಮನವಿ ಮಾಡಲಿದ್ದಾರೆ. ತನಿಖೆ ವೇಳೆ ಒಂದು ಮೊಬೈಲ್, ದಾಖಲೆಗಳು ಸಿಕ್ಕಿರುವ ಹಿನ್ನೆಲೆಯಲ್ಲಿ ಪ್ರಕರಣ ಸಂಬಂಧ ಆರೋಪಿಯ ವಿಚಾರಣೆ ಅಗತ್ಯವಿದೆ. ಹೀಗಾಗಿ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ಕಸ್ಟಡಿಗೆ ಕೇಳಬಹುದು. ದೇವರಾಜೇಗೌಡ ಕೇಸ್ ಸಂಬಂಧ ಹೊಳೆನರಸೀಪುರ ಪೊಲೀಸರ ಸಂಪರ್ಕದಲ್ಲಿ ಎಸ್ಐಟಿ ಇದೆ.

ಪ್ರೀತಂಗೌಡ ಆಪ್ತರೂ ಕಸ್ಟಡಿಗೆ?

ಪ್ರಕರಣದಲ್ಲಿ ಬಿಜೆಪಿ ಮುಖಂಡ ಪ್ರೀತಂಗೌಡ ಗೌಡ ಆಪ್ತರ ಬಂಧನದ ಬಳಿಕ ಕುತೂಹಲ ಹೆಚ್ಚಿದ್ದು, ಇಂದು ತೆರೆದ ಕೋರ್ಟ್‌ನಲ್ಲಿ ಇಬ್ಬರು ಆರೋಪಿಗಳನ್ನು ಎಸ್ಐಟಿ ಕಸ್ಟಡಿಗೆ ಕೇಳಲು ತಯಾರಿ ನಡೆದಿದೆ. ಏಪ್ರಿಲ್ 21ರಂದೇ ಪ್ರೀತಂಗೌಡ ಆಪ್ತ ಶರತ್ ಆಲಿಯಾಸ್ ಕ್ವಾಲಿಟಿ ಬಾರ್ ಶರತ್ ವಿರುದ್ಧ ಜೆಡಿಎಸ್‌ ದೂರು ನೀಡಿತ್ತು. ಪ್ರಕರಣದ ಬೆನ್ನು ಹತ್ತಿದ್ದ ಎಸ್ಐಟಿಯಿಂದ ಆರಂಭಿಕವಾಗಿಯೇ ಪ್ರೀತಂಗೌಡ ಆಪ್ತರ ಆರೆಸ್ಟ್ ಆಗಿದೆ.

ನಿನ್ನೆ ಲಿಖಿತ್ ಗೌಡ ಹಾಗು ಚೇತನ್‌ರನ್ನು ನ್ಯಾಯಾಂಗ ಬಂಧನಕ್ಕೆ ನೀಡಲಾಗಿದೆ. ಪೊಲೀಸ್ ವಿಚಾರಣೆ ಬಳಿಕ ಮತ್ತಷ್ಟು ಜನರ ಬಂಧನ ಸಾಧ್ಯತೆ ಇದೆ. ವೀಡಿಯೋ ಹಾಗು ಪೆನ್ ಡ್ರೈವ್ ಹಂಚಿದ ಬಗ್ಗೆ ಎಸ್‌ಐಟಿ ಇಂಚಿಂಚೂ ಮಾಹಿತಿ ಕಲೆ ಹಾಕಿದ್ದು, ವೀಡಿಯೋ ವೈರಲ್ ದಾರಿಯನ್ನು ಎಳೆ ಎಳೆಯಾಗಿ ಭೇದಿಸಲು ಪ್ಲಾನ್ ಮಾಡಿದೆ. ವೀಡಿಯೋ ವೈರಲ್ ಕೇಸ್ ಭೇದಿಸಲೆಂದೇ ಪ್ರತ್ಯೇಕ ಟೀಂ ರಚನೆ ಮಾಡಲಾಗಿದೆ. ಹಾಸನದಲ್ಲೇ ಒಂದು ತಂಡ ಬೀಡು ಬಿಟ್ಟಿದ್ದು, ಹಾಸನದ ಎಎಸ್ಪಿ ತಮ್ಮಯ್ಯ ನೇತೃತ್ವದ ತಂಡದಿಂದ ವಿಚಾರಣೆ ಮುಂದುವರಿದಿದೆ.

14 ದಿನ ನ್ಯಾಯಾಂಗ ಬಂಧನ

ಹಾಸನ ಪೆನ್‌ಡ್ರೈವ್‌ ಪ್ರಕರಣದಲ್ಲಿ (Prajwal Revanna Case) ಪ್ರಜ್ವಲ್‌ ರೇವಣ್ಣ ಅಶ್ಲೀಲ ವಿಡಿಯೊ ಹರಿಬಿಟ್ಟ ಆರೋಪದಲ್ಲಿ ಬಂಧನವಾಗಿರುವ ಆರೋಪಿಗಳಾದ ಚೇತನ್ ಹಾಗೂ ಲಿಖಿತ್‌ಗೆ 14 ದಿನ ನ್ಯಾಯಾಂಗ ಬಂಧನ ವಿಧಿಸಿ ನಗರದ ಜೆಎಂಎಫ್‌ಸಿ ನ್ಯಾಯಾಲಯ ಆದೇಶ ಹೊರಡಿಸಿದೆ. ಇಬ್ಬರು ಆರೋಪಿಗಳಿಗೆ ಮೇ 25 ರವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.

ಪ್ರಜ್ವಲ್ ರೇವಣ್ಣ ಅವರದ್ದು ಎನ್ನಲಾಗಿರುವ ಅಶ್ಲೀಲ​ ವಿಡಿಯೊಗಳನ್ನು ವೈರಲ್ ಮಾಡಲಾಗುತ್ತಿದೆ ಎಂದು ಏಪ್ರಿಲ್ 23ರಂದು ಹಾಸನ ಸೈಬರ್ ಕ್ರೈಂ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿತ್ತು. ಬಳಿಕ ಪ್ರಕರಣ ಎಸ್ಐಟಿಗೆ ವರ್ಗಾವಣೆಯಾಗಿತ್ತು. ಸದ್ಯ ಅಶ್ಲೀಲ ವಿಡಿಯೊ ಹರಿಬಿಟ್ಟವರನ್ನು ವಶಕ್ಕೆ ಪಡೆಯುತ್ತಿರುವ ಎಸ್‌ಐಟಿ ಅಧಿಕಾರಿಗಳ ತಂಡ, ಆರೋಪಿಗಳಾದ ಚೇತನ್​ ಹಾಗೂ ಲಿಖಿತ್​ನನ್ನು ಬಂಧಿಸಿದ್ದು, ನವೀನ್ ಗೌಡ ಮತ್ತು ಪುಟ್ಟರಾಜುಗಾಗಿ ಹುಡುಕಾಟ ನಡೆಸುತ್ತಿದ್ದಾರೆ.

ಆರೋಪಿಗಳಾದ ಲಿಖಿತ್​ ಗೌಡ ಮತ್ತು ಚೇತನ್, ಬಿಜೆಪಿ ಮಾಜಿ ಶಾಸಕ ಪ್ರೀತಂಗೌಡ ಅವರ ಆಪ್ತರಾಗಿದ್ದಾರೆ. ಮೊದಲಿಗೆ ಪೆನ್‌ಡ್ರೈವ್ ವೈರಲ್ ಸಂಬಂಧ ದಾಖಲಾಗಿದ್ದ ಕೇಸ್‌ನಲ್ಲಿ ಈ ಇಬ್ಬರ ಹೆಸರು ಇರಲಿಲ್ಲ. ನಂತರ ಈ ಇಬ್ಬರ ಮೇಲೆ ವಿಡಿಯೊ ಹಂಚಿಕೆ ಆರೋಪದಲ್ಲಿ ಎಫ್‌ಐಆರ್‌ ದಾಖಲು ಮಾಡಲಾಗಿತ್ತು. ಹೀಗಾಗಿ ಈ ಪ್ರಕರಣವು ದಿನಕ್ಕೊಂದು ತಿರುವನ್ನು ಪಡೆದುಕೊಳ್ಳುತ್ತಿದೆ.

ಇದನ್ನೂ ಓದಿ: Prajwal Revanna Case: ಅಶ್ಲೀಲ ವಿಡಿಯೊ ಕೇಸ್; ಚೇತನ್, ಲಿಖಿತ್‌ಗೆ 14 ದಿನ ನ್ಯಾಯಾಂಗ ಬಂಧನ‌

Exit mobile version