ಬೆಂಗಳೂರು: ಅಶ್ಲೀಲ ವಿಡಿಯೋ ವೈರಲ್ (pen drive case video viral) ಪ್ರಕರಣದಲ್ಲಿ ವಿಶೇಷ ತನಿಖಾ ತಂಡಕ್ಕೆ ಬೇಕಾಗಿರುವ ಹಾಸನ ಸಂಸದ ಪ್ರಜ್ವಲ್ ರೇವಣ್ಣ (Hassan MP Prajwal Revanna Case) ನಾಪತ್ತೆಯಾಗಿ ಒಂದು ತಿಂಗಳ ಬಳಿಕ ಹೊಸ ವಿಡಿಯೋ ಮೂಲಕ ಪ್ರತ್ಯಕ್ಷವಾಗಿದ್ದಾರೆ. ಆದರೆ ಅವರು ದೇಶದೊಳಗೇ ಇದ್ದುಕೊಂಡೇ ಎಸ್‌ಐಟಿಗೆ ಚಳ್ಳೆಹಣ್ಣು ತಿನ್ನಿಸಿದರೇ ಎಂಬ ಸಂಶಯವೂ ವ್ಯಕ್ತವಾಗಿದೆ.
ನಿನ್ನೆ ಹೊಸ ವಿಡಿಯೋ ಮಾಡಿ ಹರಿಬಿಟ್ಟಿರುವ ಪ್ರಜ್ವಲ್, ಶುಕ್ರವಾರ, ಮೇ 31ರಂದು ಎಸ್‌ಐಟಿ (SIT) ಮುಂದೆ ಹಾಜರಾಗುವುದಾಗಿ ತಿಳಿಸಿದ್ದಾರೆ. ಸದ್ಯ ವಿಡಿಯೋವನ್ನು ಎಸ್‌ಐಟಿ ಕೂಲಂಕಷವಾಗಿ ಪರಿಶೀಲನೆ ನಡೆಸುತ್ತಿದೆ. ವಿಡಿಯೋದ ಮೂಲ ಯಾವುದು, ಯಾವ ಐಪಿ ಅಡ್ರೆಸ್‌ನಿಂದ ಆಪ್‌ಲೋಡ್ ಆಗಿದೆ ಎಂಬುದರ ಪತ್ತೆಗೆ ಎಸ್‌ಐಟಿ ಮುಂದಾಗಿದೆ. ವಿಡಿಯೋ ಮೊದಲು ತಲುಪಿದ್ದು ಯಾರಿಗೆ, ಎಲ್ಲಿಂದ, ವಿಡಿಯೋ ಮಾಡಿರುವ ಮದರ್ ಡಿವೈಸ್ ಮಾಹಿತಿ ಪತ್ತೆಗೆ ಎಸ್‌ಐಟಿ ಯತ್ನಿಸುತ್ತಿದೆ. ಶುಕ್ರವಾರ ಪ್ರಜ್ವಲ್ ಎಸ್ಐಟಿ ಮುಂದೆ ಹಾಜರಾಗದಿದ್ದಲ್ಲಿ ಮದರ್ ಡಿವೈಸ್ ಲೋಕೆಷನ್ ಪತ್ತೆಗೆ ಯತ್ನಿಸುವ ಸಂಭವ ಇದೆ. ಸದ್ಯ ಪ್ರಜ್ವಲ್ ರೇವಣ್ಣ ಬರುವವರೆಗೂ ಕಾಯಲು ಇಷ್ಟವಿಲ್ಲದ ಎಸ್ಐಟಿ, ಅದಕ್ಕೂ ಮುನ್ನವೇ ಪತ್ತೆ ಮಾಡಿ ಬಂಧಿಸುವ ಚಿಂತನೆ ನಡೆಸಿದೆ.
ಯಾಕೆ ಮೇ 31 ?
ಮೇ 31ರಂದು ಪ್ರಜ್ವಲ್ ರೇವಣ್ಣ ಅವರ ಕಳೆದ ಬಾರಿಯ ಸಂಸದ ಸ್ಥಾನ ಅವಲಂಬಿಸಿ ನೀಡಲಾದ ರಾಜತಾಂತ್ರಿಕ ಪಾಸ್‌ಪೋರ್ಟ್‌ನ (Diplomatic passport) ಅವಧಿ ಅಂತ್ಯವಾಗಲಿದೆ. ಈ ಸಲ ಚುನಾಯಿತರಾದರೆ ಅವರು ಹೊಸದಾಗಿ ರಾಜತಾಂತ್ರಿಕ ಪಾಸ್‌ಪೋರ್ಟ್ ಮಾಡಿಸಿಕೊಳ್ಳಬೇಕಿದೆ. ಹೀಗಾಗಿ ಹಳೆಯ ಪಾಸ್‌ಪೋರ್ಟ್‌ನಲ್ಲಿ ಓಡಾಡಲು ಸಾಧ್ಯವಿಲ್ಲ. ಇದೇ ಕಾರಣಕ್ಕಾಗಿ ಪ್ರಜ್ವಲ್ ಮೇ 31ನ್ನು ಆಯ್ಕೆ ಮಾಡಿಕೊಂಡಿದ್ದಾರೆ ಎನ್ನಲಾಗುತ್ತಿದೆ.
ಈ ನಡುವೆ ಪ್ರಜ್ವಲ್ ರೇವಣ್ಣ ವಿರುದ್ಧದ ಎಸ್ಐಟಿ ತನಿಖೆ ಮಹತ್ವದ ಹಂತ ತಲುಪಿದೆ. ಅತ್ಯಾಚಾರ ಆರೋಪ ಪ್ರಕರಣದಲ್ಲಿ ಸಂತ್ರಸ್ತೆಯ ಹೇಳಿಕೆ ದಾಖಲಿಸಲಾಗಿದೆ. ಪ್ರಜ್ವಲ್ ರೇವಣ್ಣ ಬಂದ ಬಳಿಕ ತನಿಖೆ ಮಾಡಬೇಕಿದೆ. ಅಶ್ಲೀಲ ವಿಡಿಯೋಗಳನ್ನು ಮಾಡಲಾದ ಡಿವೈಜ್ ಅನ್ನು ಪತ್ತೆಹಚ್ಚಬೇಕಿದೆ. ಅಶ್ಲೀಲ ವಿಡಿಯೋಗಳ ಕುರಿತು ಫಾರೆನ್ಸಿಕ್ ರಿಪೋರ್ಟ್‌ಗಾಗಿ ಎಸ್ಐಟಿ ಕಾಯುತ್ತಿದೆ. FSL ರಿಪೋರ್ಟ್ ಎಸ್ಐಟಿ ಕೈ ಸೇರಿದ ಕೂಡಲೇ ಚಾರ್ಜ್‌ಶೀಟ್‌ಗೆ ಸಿದ್ಧತೆ ಮಾಡಿಕೊಳ್ಳಲಾಗುತ್ತದೆ. ಪ್ರಜ್ವಲ್ ರೇವಣ್ಣ ಹೇಳಿಕೆ ದಾಖಲಿಸಿ ಕೋರ್ಟಿಗೆ ಚಾರ್ಜ್ ಶೀಟ್ ಸಲ್ಲಿಸಬೇಕಿದೆ.
ಜೂನ್ ಮೊದಲ ವಾರದಲ್ಲಿ ಪ್ರಜ್ವಲ್ ಬಂದಿದ್ದೇ ಆದಲ್ಲಿ ತನಿಖೆ ನಡೆಸಿ ಸ್ಟೇಟ್ಮೆಂಟ್ ದಾಖಲಿಸಲಿದ್ದಾರೆ. ಒಂದು ವೇಳೆ ಪ್ರಜ್ವಲ್ ಜೂನ್‌ನಲ್ಲಿ ವಾಪಸ್ ಬರದೇ ಇದ್ದಲ್ಲಿ, ಆರೋಪಿ ತಲೆ ಮರೆಸಿಕೊಂಡಿದ್ದಾನೆ ಎಂದು ನ್ಯಾಯಾಲಯಕ್ಕೆ ಅಬ್‌ಸ್ಕಾಂಡ್ ಚಾರ್ಜ್‌ಶೀಟ್ ಸಲ್ಲಿಸಬೇಕಿದೆ.
ಗೃಹ ಸಚಿವರು ಏನೆಂದರು?
ಪ್ರಜ್ವಲ್ ವಿಡಿಯೋ ರಿಲೀಸ್ ವಿಚಾರದಲ್ಲಿ ಬೆಂಗಳೂರಿನಲ್ಲಿ ಗೃಹ ಸಚಿವ ಡಾ.ಜಿ ಪರಮೇಶ್ವರ್ (home minister G Parameshwara) ಹೇಳಿಕೆ ನೀಡಿದ್ದಾರೆ. “ಮೇ 31ರಂದು ಪ್ರಜ್ವಲ್ ಸಂಸದ ಸ್ಥಾನ ಅಂತ್ಯವಾಗಲಿದೆ. ಆಗ ಅವರ ರಾಜತಾಂತ್ರಿಕ ಪಾಸ್‌ಪೋರ್ಟ್ ಸೀಜ್ ಆಗುತ್ತದೆ. ಇದೆಲ್ಲವನ್ನು ತಿಳಿದುಕೊಂಡು ಬರಲು ಯೋಚನೆ ಮಾಡಿದ್ದಾರೆ ಅನ್ಸುತ್ತೆ” ಎಂದಿದ್ದಾರೆ.
“ದೇಶದೊಳಗೆ ಏನು ಪ್ರಯತ್ನ ಮಾಡಬೇಕು ನಾವು ಮಾಡಿದ್ದೇವೆ. ಕೇಂದ್ರ ಸರ್ಕಾರಕ್ಕೆ ಬರೆದಿದ್ದೇವೆ, ಕೇಂದ್ರ ಗೃಹ ಇಲಾಖೆಗೆ ವಾರೆಂಟ್ ಬಗ್ಗೆ ತಿಳಿಸಿದ್ದೇವೆ. ಬ್ಲೂ ಕಾರ್ನರ್ ನೋಟೀಸ್ (blue corner notice) ಇಶ್ಯೂ ಆಗಿದೆ. ಪ್ರಜ್ವಲ್ ಬರದೇ ಹೋದರೆ ಇಂಟರ್‌ಪೋಲ್‌ನವರು (Interpol) ಲೊಕೇಶನ್ ತಿಳಿದುಕೊಂಡು ನಮಗೆ ಮಾಹಿತಿ ನೀಡುವುದು ಎಂದಿತ್ತು. ಇಂತಹ ಸಂದರ್ಭದಲ್ಲಿ ನಾನು ಬರ್ತೇನೆ ಎಂದು ವಿಡಿಯೋ ಮೂಲಕ ತಿಳಿಸಿದ್ದಾರೆ. ಕಾನೂನಿನಿಂದ ತಪ್ಪಿಸಿಕೊಳ್ಳಲು ಯಾರಿಗೂ ಸಾಧ್ಯವಿಲ್ಲ” ಎಂದಿದ್ದಾರೆ.
ಈ ಸಲ ಸುಮ್ಮನಿರೋಲ್ಲ ಎಸ್‌ಐಟಿ
ಪ್ರಜ್ವಲ್ ರೇವಣ್ಣ ವಿಡಿಯೋ ಬಿಟ್ಟ ಬೆನ್ನಲ್ಲೇ ಎಸ್ಐಟಿ ಅಲರ್ಟ್ ಆಗಿದೆ. ವಿಡಿಯೋ ಬಿಟ್ಟಿದ್ದು ಎಲ್ಲಿಂದ, ಯಾವ ದೇಶದಿಂದ ಎಂಬುದರ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಆದರೆ ಕಳೆದ ಬಾರಿ ಕೂಡ ಪ್ರಜ್ವಲ್ ರೇವಣ್ಣ ಇದೇ ರೀತಿ ಕಾಲಾವಕಾಶ ಕೋರಿದ್ದರು. ಹೇಳಿದಂತೆ ವಿಚಾರಣೆಗೆ ಹಾಜರಾಗದೆ ದೂರ ಉಳಿದಿದ್ದರು. ಈ ಬಾರಿಯೂ ಹಾಗೆಯೇ ಮಾಡುವ ಸಾಧ್ಯತೆ ಕೂಡ ಇದೆ. ಹೀಗಾಗಿ ಈಗಲೇ ಪ್ರಜ್ವಲ್ ರೇವಣ್ಣ ಕಾಂಟ್ಯಾಕ್ಟ್‌ಗೆ ಎಸ್‌ಐಟಿ ಮುಂದಾಗಿದೆ.
ಕೇಂದ್ರ ತನಿಖಾ ಸಂಸ್ಥೆಗಳಿಗೂ ಈ ಬಗ್ಗೆ ಮಾಹಿತಿ ನೀಡಲಾಗಿದೆ. ಇಂಟರ್‌ಪೋಲ್‌ಗೂ ಎಸ್‌ಐಟಿ ಮಾಹಿತಿ ಕೋರಲಿದೆ. ಈಗಾಗಲೇ ಪ್ರಜ್ವಲ್ ವಿರುದ್ಧ ಲುಕ್‌ಔಟ್ ನೋಟೀಸ್ (lookout notice) ಹಾಗೂ ಬ್ಲೂ ಕಾರ್ನರ್ ನೋಟೀಸ್ ಜಾರಿ ಮಾಡಲಾಗಿದೆ. ಆತನ ವಿರುದ್ಧ ಆರೆಸ್ಟ್ ವಾರಂಟ್ ಕೂಡ ಇದೆ. ಹೀಗಾಗಿ ಎಸ್‌ಐಟಿ ಒಂದು ತಿಂಗಳಿಂದ ಏರ್‌ಪೋರ್ಟ್‌ನಲ್ಲೇ ಠಿಕಾಣಿ ಹೂಡಿದೆ. ಏರ್‌ಪೋರ್ಟ್‌ನಿಂದ ಹೊರಕ್ಕೆ ಕಾಲಿಡುವ ಮೊದಲೇ ಇಮಿಗ್ರೇಶನ್ ಅಧಿಕಾರಿಗಳು ಪ್ರಜ್ವಲ್ ರೇವಣ್ಣನನ್ನು ವಶಕ್ಕೆ ಪಡೆದು ಎಸ್‌ಐಟಿಗೆ ಒಪ್ಪಿಸಲಿದ್ದಾರೆ.
ಇದನ್ನೂ ಓದಿ: Prajwal Revanna Case: ಪ್ರಜ್ವಲ್ ಬಂದ್ರೆ ಎಸ್‌ಐಟಿ ಮುಂದೆ ನಾನೂ ಹಾಜರಾಗುವೆ: ಆರೋಪಿ ನವೀನ್ ಗೌಡ