Site icon Vistara News

Ram Devotees Insult: ರೈಲಿನಲ್ಲಿ ಶ್ರೀರಾಮಭಕ್ತರಿಗೆ ಅವಹೇಳನ; ಒಬ್ಬ ಆರೋಪಿ ವಶಕ್ಕೆ, ಇತರರ ಹುಡುಕಾಟ; ವಿಧಾನ ಪರಿಷತ್ತಿನಲ್ಲೂ ಗದ್ದಲ

hospet-communal-tension2

ವಿಜಯನಗರ: ಹೊಸಪೇಟೆಯ ರೈಲು ನಿಲ್ದಾಣದಲ್ಲಿ ಅಯೋಧ್ಯೆಧಾಮ (Ayodhya Dham) ರೈಲಿನಲ್ಲಿ ಪ್ರಯಾಣಿಸುತ್ತಿದ್ದ ಶ್ರೀರಾಮಭಕ್ತರನ್ನು (Sri Ram Devotees) ಅವಹೇಳನ (Ram Devotees Insult) ಮಾಡಿದ ಪ್ರಕರಣಕ್ಕೆ ಸಂಬಂಧಿಸಿ ಒಬ್ಬ ಆರೋಪಿಯನ್ನು ಬಂಧಿಸಲಾಗಿದ್ದು, ಇನ್ನೂ ಹಲವರು ಈ ಪ್ರಕರಣದಲ್ಲಿ ಭಾಗಿಯಾಗಿದ್ದಾರೆ ಎನ್ನಲಾಗಿದೆ. ಅವರಿಗಾಗಿ ಪೊಲೀಸರು ಹುಡುಕಾಟ ನಡೆಸಿದ್ದಾರೆ. ಈ ನಡುವೆ, ವಿಧಾನ ಪರಿಷತ್ತಿನಲ್ಲೂ (Vidhana Parishat) ಈ ವಿಚಾರ ಪ್ರಸ್ತಾಪವಾಗಿ ಗದ್ದಲ ಎದ್ದಿದೆ.

ಮೈಸೂರಿಗೆ ಬರುತ್ತಿದ್ದ ಅಯೋಧ್ಯೆಧಾಮ ರೈಲಿನಲ್ಲಿ ಶ್ರೀರಾಮಭಕ್ತರ ಮುಂದೆ ಆಕ್ಷೇಪಾರ್ಹ ಪದ ಬಳಸಿದ ಅನ್ಯಕೋಮಿನ ವ್ಯಕ್ತಿಯನ್ನು ಗದಗದ ಬಳಿ ರೈಲ್ವೇ ಪೊಲೀಸರು ಬಂಧಿಸಿದ್ದಾರೆ. ಆತನ ಜೊತೆ ಶಾಮೀಲಾದ ಇನ್ನುಳಿದವರಿಗಾಗಿ ಹುಡುಕಾಟ ನಡೆಸಿದ್ದಾರೆ. ಪ್ರಕರಣದ ಸಿಸಿಟಿವಿ ದೃಶ್ಯಾವಳಿಯನ್ನು ಪೊಲೀಸರು ಪರಿಶೀಲನೆ ಮಾಡುತ್ತಿದ್ದಾರೆ.

ವಿಧಾನ ಪರಿಷತ್ತಿನಲ್ಲಿ ಗದ್ದಲ

ಈ ನಡುವೆ ಇಂದು ಆರಂಭವಾದ ವಿಧಾನ ಪರಿಷತ್ ಕಲಾಪದಲ್ಲಿ, ಆಯೋಧ್ಯೆ ರಾಮಭಕ್ತರನ್ನು ಅವಹೇಳನ ಮಾಡಿದ ವಿಚಾರನನ್ನು ವಿಪಕ್ಷ ನಾಯಕ ಪೂಜಾರ ಪ್ರಸ್ತಾಪ ಮಾಡಿದರು. “ಅಯೋಧ್ಯೆಗೆ ಹೋಗಿ ಬರುತ್ತಿದ್ದ ರಾಮ ಭಕ್ತರಿಗೆ ದುಷ್ಕರ್ಮಿಗಳು ಧಮಕಿ ಹಾಕಿದ್ದಾರೆ. ಬೆಂಕಿ ಹಚ್ಚುತ್ತೇವೆ ಅನ್ನುತ್ತಾರೆ‌. ಅಂಥ ಆರೋಪಿಗಳನ್ನು ಪೊಲೀಸರು ಬಂಧಿಸಿ ಬಿಡುಗಡೆ ಮಾಡಿದ್ದಾರೆ. ಇದನ್ನು ನೋಡಿದರೆ ಗೋಧ್ರಾ ಹತ್ಯಾಕಾಂಡ ನೆನಪು ಆಗ್ತಿದೆʼʼ ಎಂದು ಪೂಜಾರ ಟೀಕಿಸಿದರು. “ಸರ್ಕಾರ ಈ ಬಗ್ಗೆ ಉತ್ತರ ಕೊಡಬೇಕುʼʼ ಎಂದು ಆಗ್ರಹಿಸಿದರು.

ಸರ್ಕಾರ ಉತ್ತರ ‌ಕೊಡುವಂತೆ ಬಿಜೆಪಿ ಬಿಗಿಪಟ್ಟು ಹಿಡಿದಿದ್ದು, ಸದನದಲ್ಲಿ ಗದ್ದಲ ಗಲಾಟೆ ಉಂಟಾಯಿತು. ಪ್ರಶ್ನೋತ್ತರ ಅವಧಿ ಬಳಿಕ ಶೂನ್ಯ ವೇಳೆಯಲ್ಲಿ ಚರ್ಚೆಗೆ ಅವಕಾಶ ಕೊಡುವುದಾಗಿ ಸಭಾಪತಿ ತಿಳಿಸಿದರು. ಯಾವುದೇ ನೊಟೀಸ್ ನೀಡದೆ ಹೀಗೆ ವಿಷಯ ಪ್ರಸ್ತಾಪ ಮಾಡುವುದು ಸರಿಯಲ್ಲ ಎಂದು ಕಾಂಗ್ರೆಸ್ ಸದಸ್ಯರು ಪ್ರತಿಭಟಿಸಿದರು.

hospet communal tension

ಏನಿದು ರಾಮಭಕ್ತರ ಅವಹೇಳಣ ಪ್ರಕರಣ?

ಹೊಸಪೇಟೆ ರೈಲ್ವೇ ನಿಲ್ದಾಣದಲ್ಲಿ ನಿನ್ನೆ ರಾತ್ರಿ ಗಲಾಟೆ ನಡೆದಿತ್ತು. ಅಯೋಧ್ಯೆಯಿಂದ ಬರುತ್ತಿದ್ದ ರೈಲಿನಲ್ಲಿ ಅನ್ಯಕೋಮಿನ ವ್ಯಕ್ತಿಯೊಬ್ಬ ಆಕ್ಷೇಪಾರ್ಹ ಹೇಳಿಕೆ ನೀಡಿದ್ದರಿಂದ ಶ್ರೀರಾಮಭಕ್ತರು ಕೆರಳಿ ಪ್ರತಿಭಟನೆ ನಡೆಸಿದ್ದರು. ಅಯೋಧ್ಯೆಯಿಂದ ಮೈಸೂರಿನತ್ತ ಬರುತ್ತಿದ್ದ ಅಯೋಧ್ಯೆಧಾಮ ರೈಲಿನಲ್ಲಿ ಸಾವಿರಾರು ಶ್ರೀರಾಮ ಭಕ್ತರು ಅಯೋಧ್ಯೆಯತ್ತ ಪ್ರಯಾಣಿಸುತ್ತಿದ್ದು, ಅನ್ಯಕೋಮಿನ ವ್ಯಕ್ತಿಯೊಬ್ಬ ಆಕ್ಷೇಪಾರ್ಹ ಮಾತು ಆಡಿದ್ದಾನೆ. ಇದರಿಂದ ಕೆರಳಿದ ಶ್ರೀರಾಮಭಕ್ತರು ರೈಲು ನಿಲ್ಲಿಸಿ ಪ್ರತಿಭಟನೆ ನಡೆಸಿದರು.

ಹೊಸಪೇಟೆ ಪಟ್ಟಣದ ರೈಲು ನಿಲ್ದಾಣದಲ್ಲಿ ಈ ಘಟನೆ ನಡೆದಿದೆ. ರಾಮ ಭಕ್ತರ ವಿರುದ್ಧ ಆಕ್ಷೇಪಾರ್ಹ ಹೇಳಿಕೆ ನೀಡಿದ ಆರೋಪಿ, ಗಲಾಟೆ ಪ್ರಾರಂಭ ಆಗುತ್ತಿದ್ದಂತೆ ಸ್ಥಳದಿಂದ ಕಾಲು ಕಿತ್ತಿದ್ದಾನೆ. ಅಯೋಧ್ಯೆಧಾಮ ಟ್ರೈನ್ ಇಳಿದು ಪಕ್ಕಕ್ಕೆ ನಿಂತಿದ್ದ ಲಿಂಕ್ ಟ್ರೈನ್‌ಗೆ ಹತ್ತಿ ಹುಬ್ಬಳ್ಳಿಯತ್ತ ಪ್ರಯಾಣ ಬೆಳೆಸಿದ್ದ. ಲಿಂಕ್ ಟ್ರೈನ್ ಗದಗಕ್ಕೆ ಬರುತ್ತಿದ್ದಂತೆ ಆತನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಬಳ್ಳಾರಿ ರೈಲ್ವೇ ಪೊಲೀಸ್ ಠಾಣೆಯಲ್ಲಿ FIR ದಾಖಲು ಆಗಿದೆ.

ಪ್ರಚೋದನಕಾರಿ ಹೇಳಿಕೆ ನೀಡಿದ ವ್ಯಕ್ತಿಯನ್ನು ಬಂಧಿಸಬೇಕೆಂದು ಪಟ್ಟು ಹಿಡಿದು ಶ್ರೀರಾಮಭಕ್ತರು ಪ್ರತಿಭಟನೆ ಮಾಡಿದರು. ಇದರಿಂದಾಗಿ 8.15ಕ್ಕೆ ಹೊಸಪೇಟೆಗೆ ಬಂದಿದ್ದ ರೈಲು, 10 ಗಂಟೆಯವರೆಗೂ ಬಳ್ಳಾರಿಯಲ್ಲಿ ಬಾಕಿಯಾಯಿತು. ಎರಡು ತಾಸುಗಳ ಕಾಲ ಹೊಸಪೇಟೆ ರೈಲ್ವೇ ನಿಲ್ದಾಣದಲ್ಲಿ ಅಯೋಧ್ಯೆ ಧಾಮ ರೈಲನ್ನು ತಡೆಯಲಾಯಿತು.

ಘಟನೆ ನಡೆದ ಕ್ಷಣಾರ್ಧದಲ್ಲೇ ಹೊಸಪೇಟೆ ರೈಲು ನಿಲ್ದಾಣ ರಣರಂಗ ಆಗಿಬಿಟ್ಟಿತು. ಹಿಂದೂಪರ ಸಂಘಟನೆಗಳ ಕಾರ್ಯಕರ್ತರು, ಬಿಜೆಪಿ ಕಾರ್ಯಕರ್ತರು ಸ್ಥಳಕ್ಕೆ ದೌಡಾಯಿಸಿ, ಶ್ರೀರಾಮ ಭಕ್ತರ ಮನವೊಲಿಸಲು ಪ್ರಯತ್ನಪಟ್ಟರು. ವಿಜಯನಗರ ಎಸ್ಪಿ ಶ್ರೀಹರಿಬಾಬು, ಹೊಸಪೇಟೆಯ ಪೊಲೀಸರಿಂದಲೂ ಮನವೊಲಿಕೆಗೆ ಪ್ರಯತ್ನ ನಡೆಯಿತು. ಹಿಂದೂಪರ, ಬಿಜೆಪಿ ಕಾರ್ಯಕರ್ತರು ಮತ್ತು ಪೊಲೀಸರ ಪ್ರಯತ್ನದಿಂದ ಕೊನೆಗೂ ಎರಡು ಗಂಟೆಗಳ ಬಳಿಕ ರೈಲು ಮೈಸೂರು ಕಡೆಗೆ ಪ್ರಯಾಣ ಬೆಳೆಸಿತು. ಮುಂಜಾಗ್ರತಾ ಕ್ರಮವಾಗಿ ಟ್ರೈನ್‌ನೊಳಗೆ ರೈಲ್ವೇ ಪೊಲೀಸರು, ಸ್ಥಳೀಯ ಪೊಲೀಸರು ಬಳ್ಳಾರಿಯವರೆಗೆ ಸಂಚಾರ ಮಾಡಿದರು.

ಇದನ್ನೂ ಓದಿ: Communal tension: ಅಯೋಧ್ಯೆಧಾಮ ರೈಲಿನಲ್ಲಿ ಅನ್ಯಕೋಮಿನ ವ್ಯಕ್ತಿಯಿಂದ ಪ್ರಚೋದನೆ, ಶ್ರೀರಾಮಭಕ್ತರಿಂದ ಪ್ರತಿಭಟನೆ

Exit mobile version