ಬೆಂಗಳೂರು: ರಾಜಧಾನಿಯ ವೈಟ್‌ಫೀಲ್ಡ್‌ನಲ್ಲಿ ನಡೆದ (Blast in Bengaluru) ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ (Rameshwaram Cafe Blast) ಪ್ರಕರಣದ ಆರೋಪಿಗಳನ್ನು ನಿನ್ನೆ ಕೋಲ್ಕತ್ತಾದಲ್ಲಿ ಎನ್‌ಐಎ (NIA) ಬಂಧಿಸಿದ್ದು, ಇಂದು ಮುಂಜಾನೆ ಬೆಂಗಳೂರಿಗೆ ಕರೆತಂದಿದೆ. ಇಂದು ಬೆಳಗ್ಗೆ ನ್ಯಾಯಾಧೀಶರ ಮುಂದೆ ಹಾಜರುಪಡಿಸಿ ನ್ಯಾಯಾಂಗ ಬಂಧನಕ್ಕೆ (Judicial custody) ಪಡೆಯಲಿದೆ.
ಕೋಲ್ಕತ್ತಾದಲ್ಲಿ ಸೆರೆಯಾದ ಅಬ್ದುಲ್ ಮತೀನ್ ತಾಹಾ (Abdul Mateen Taha) ಹಾಗೂ ಮುಜಾವಿರ್ ಹುಸೇನ್ ಶಜೀಬ್‌ರನ್ನು (mussavir shazeeb hussain) ಬೆಂಗಳೂರಿಗೆ ಕರೆತಂದ ಇಂಡಿಗೋ ವಿಮಾನ ಕೋಲ್ಕತ್ತಾದ ಸುಭಾಷ್‌ಚಂದ್ರ ಬೋಸ್ ಏರ್‌ಪೋರ್ಟ್‌ನಿಂದ ಹೊರಟು, ಮಧ್ಯರಾತ್ರಿ 12:45ಕ್ಕೆ ಬೆಂಗಳೂರು ಅಂತರಾಷ್ಟ್ರೀಯ ವಿಮಾನ ನಿಲ್ದಾಣಕ್ಕೆ ತಲುಪಿದೆ. ಆರೋಪಿಗಳನ್ನು ಕರೆತರುವ ಹಿನ್ನೆಲೆಯಲ್ಲಿ ಕೆಂಪೇಗೌಡ ವಿಮಾನ ನಿಲ್ದಾಣದಲ್ಲಿ ಹೆಚ್ಚಿನ ಬಂದೋಬಸ್ತ್ ಮಾಡಲಾಗಿತ್ತು.
ರಾಮೇಶ್ವರ ಕೆಫೆ ಬಾಂಬ್ ಸ್ಫೋಟ ಆರೋಪಿಗಳನ್ನು ರಾತ್ರಿ ಮಡಿವಾಳದ ಎಫ್ಎಸ್ಎಲ್ ಸೆಂಟರ್ ಬಳಿಯ ಇಂಟರಾಗೇಷನ್ ಸೆಲ್‌ನಲ್ಲಿರಿಸಿ ವಿಚಾರಣೆ ನಡೆಸಲಾಗಿದೆ. ಇಂದು ಬೆಳಗ್ಗೆ ನ್ಯಾಯಾಧೀಶರ ಮುಂದೆ ಎನ್‌ಐಎ ಅಧಿಕಾರಿಗಳು ಹಾಜರು ಪಡಿಸಲಿದ್ದಾರೆ. ಬೆಳಗ್ಗೆ 10.30ಕ್ಕೆ ಕೋರಮಂಗಲದ ನ್ಯಾಯಾಧೀಶರ ನಿವಾಸಕ್ಕೆ ಹಾಜರು ಮಾಡಲಾಗುತ್ತದೆ. ಪಶ್ಚಿಮ ಬಂಗಾಳದಿಂದ ಇವರನ್ನು ಕರೆತರಲು ಟ್ರಾನ್ಸಿಟ್ ವಾರೆಂಟ್ ಪಡೆಯಲಾಗಿತ್ತು. ಹೆಚ್ಚಿನ ವಿಚಾರಣೆಗಾಗಿ ಎನ್ಐಎ ಇನ್ನೆರಡು ವಾರ ಕಸ್ಟಡಿಗೆ ಕೋರುವ ಸಾಧ್ಯತೆ ಇದೆ.
ಶಂಕಿತ ಉಗ್ರ ಮುಜಾಮೀಲ್ ಷರೀಫ್ ಎಂಬಾತನಿಂದ ಈ ಇಬ್ಬರು ಶಂಕಿತರ ಸುಳಿವು ದೊರೆತಿತ್ತು. ಅಬ್ದುಲ್ ಮತೀನ್ ತಾಹಾ ಹಾಗೂ ಮುಸಾವೀರ್ ಹುಸೇನ್ ಬಗ್ಗೆ ಈತ ಬಾಯ್ಬಿಟ್ಟಿದ್ದು, ಇಬ್ಬರ ಟ್ರಾವೆಲ್ ಹಿಸ್ಟರಿ ಸುಳಿವು ನೀಡಿದ್ದ. ಆರೋಪಿಗಳು ಕೋಲ್ಕತ್ತಾ ಕಡೆಗೆ ಹೊರಟಿದ್ದ ಬಗ್ಗೆ ಮಾಹಿತಿ ನೀಡಿದ್ದ. ಬಾಂಬ್ ಸ್ಫೋಟ ಸಂಬಂಧ ಮುಜಾಮೀಲ್ ಷರೀಫ್‌ನನ್ನು ಎನ್‌ಐಎ ಎರಡು ಬಾರಿ ಕಸ್ಟಡಿಗೆ ತೆಗೆದುಕೊಂಡು ವಿಚಾರಣೆ ನಡೆಸಿತ್ತು. ಎರಡನೇ ಬಾರಿ ವಿಚಾರಣೆ ವೇಳೆ ಅಬ್ದುಲ್ ಮತೀನ್ ಹಾಗೂ ಮುಸಾವೀರ್ ಹುಸೇನ್ ಬಗ್ಗೆ ಸುಳಿವು ನೀಡಿದ್ದ.
ಮುಜಾಮೀಲ್ ಮಾಹಿತಿ ಮೇರೆಗೆ ಎನ್ಐಎ ಹಾಗೂ ಪೊಲೀಸರು ಮಿಂಚಿನ ಕಾರ್ಯಾಚರಣೆ ನಡೆಸಿದ್ದು, ಪಶ್ಚಿಮ ಬಂಗಾಳದ ದಿಘಾ ಎಂಬಲ್ಲಿದ್ದ ಶಂಕಿತರನ್ನು ಹೆಡೆಮುರಿ ಕಟ್ಟಿದ್ದರು. ಕರ್ನಾಟಕ, ಆಂಧ್ರ, ತೆಲಂಗಾಣ, ಪಶ್ಚಿಮ ಬಂಗಾಳ ಪೊಲೀಸರು ಕಾರ್ಯಾಚರಣೆಯಲ್ಲಿ ಕೈಜೋಡಿಸಿದ್ದರು.
ರಾಮೇಶ್ವರಂ ಕೆಫೆ ಬಾಂಬ್ ಸ್ಫೋಟ ಪ್ರಕರಣಕ್ಕೆ ಸಂಬಂಧಿಸಿದಂತೆ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದ ಮಾಝ್ ಮುನೀರ್‌ನನ್ನು ಎನ್‌ಐಎ ಅಧಿಕಾರಿಗಳು 7 ದಿನಗಳ ಕಾಲ ವಶಕ್ಕೆ ಪಡೆದು ವಿಚಾರಣೆ ನಡೆಸಿದ್ದರು. ಜೈಲಿನಲ್ಲಿ ರೇಡ್ ಮಾಡಿದ ಬಳಿಕ ಮಾಝ್ ಬ್ಯಾರಕ್‌ನಲ್ಲಿ ಕೆಲವೊಂದು ಪತ್ರಗಳು ಸಿಕ್ಕಿದ್ದವು. ಅವುಗಳು ಪ್ರಕರಣಕ್ಕೆ ಮಹತ್ವದ ತಿರುವು ನೀಡಿದ ಹಿನ್ನೆಲೆಯಲ್ಲಿ ಕೆಫೆ ಸ್ಫೋಟ ಪ್ರಕರಣದಲ್ಲಿ ಮಾಝ್ ಮುನೀರ್ ಸೂತ್ರಧಾರನಾಗಿದ್ದು ಆತನನ್ನೇ ಮೊದಲ ಆರೋಪಿಯನ್ನಾಗಿ ಮಾಡಲಾಗಿದೆ.
ಶಾರಿಕ್ ಜತೆ ಮಂಗಳೂರು ಗೋಡೆ ಬರಹ ಪ್ರಕರಣದ ಆರೋಪಿಯಾಗಿರುವ ಮಾಜ್ ಮುನೀರ್ ಸಹ ಹಿಟ್ ಲಿಸ್ಟ್‌ನಲ್ಲಿದ್ದಾನೆ. ಎರಡು ಮತ್ತು ಮೂರನೇ ಆರೋಪಿಗಳನ್ನಾಗಿ ಮತೀನ್ ಮತ್ತು ಮುಸಾವೀರ್ ಹೆಸರನ್ನು ಉಲ್ಲೇಖಿಸಲಾಗಿದೆ. ಮುಜಾಮಿಲ್ ಷರೀಫ್‌ನನ್ನು ಮತ್ತೆ ಬಂಧಿಸಲಾಗಿದ್ದು, ನಾಲ್ಕನೇ ಆರೋಪಿಯನ್ನಾಗಿ ಮಾಡಿ ನ್ಯಾಯಾಂಗ ಬಂಧನಕ್ಕೆ ಕಳುಹಿಸಲಾಗಿದೆ.
ಇದನ್ನೂ ಓದಿ: ವಿಸ್ತಾರ ಸಂಪಾದಕೀಯ: ರಾಮೇಶ್ವರಂ ಕೆಫೆ ಬಾಂಬರ್‌ಗಳನ್ನು ಸೆರೆ ಹಿಡಿದ ಎನ್‌ಐಎ ಸಾಹಸ ಶ್ಲಾಘನೀಯ