Site icon Vistara News

Road Accident: ಮದುವೆ ದಿಬ್ಬಣದ ಟ್ರ್ಯಾಕ್ಟರ್‌ ಪಲ್ಟಿಯಾಗಿ 13 ಸಾವು, ರಾಷ್ಟ್ರಪತಿ ಸಂತಾಪ

road accident tractor

ಹೊಸದಿಲ್ಲಿ: ಭಾನುವಾರ ರಾತ್ರಿ ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯ ಪಿಪ್ಲೋಡಿಯಲ್ಲಿ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ (Tractor Accident) ನಾಲ್ವರು ಮಕ್ಕಳು ಸೇರಿದಂತೆ ಕನಿಷ್ಠ 13 ಪ್ರಯಾಣಿಕರು (Road Accident) ಸಾವನ್ನಪ್ಪಿದ್ದಾರೆ. 15 ಮಂದಿ ಗಾಯಗೊಂಡಿದ್ದಾರೆ. ಮೃತರು, ರಾಜಸ್ಥಾನದ ಮೋತಿಪುರ ಗ್ರಾಮದಿಂದ ರಾಜ್‌ಗಢ್‌ನ ಕುಲಂಪುರಕ್ಕೆ ಪ್ರಯಾಣಿಸುತ್ತಿದ್ದ (wedding procession) ಮದುವೆ ದಿಬ್ಬಣದಲ್ಲಿದ್ದರು.

ರಾಜ್‌ಗಢ್ ಜಿಲ್ಲಾ ಕೇಂದ್ರದಿಂದ ಸುಮಾರು 30 ಕಿ.ಮೀ ದೂರದಲ್ಲಿ ಸಂಭವಿಸಿದ ಅಪಘಾತ ಸ್ಥಳಕ್ಕೆ ಜಿಲ್ಲಾಧಿಕಾರಿ ಮತ್ತು ಪೊಲೀಸ್ ವರಿಷ್ಠಾಧಿಕಾರಿ ಸೇರಿದಂತೆ ಹಿರಿಯ ಅಧಿಕಾರಿಗಳು ಧಾವಿಸಿದ್ದಾರೆ. ಗಾಯಗೊಂಡವರಲ್ಲಿ 13 ಮಂದಿಯನ್ನು ಜಿಲ್ಲಾಸ್ಪತ್ರೆಗೆ ದಾಖಲಿಸಲಾಗಿದ್ದು, ತಲೆ ಮತ್ತು ಎದೆಗೆ ತೀವ್ರವಾಗಿ ಗಾಯಗೊಂಡ ಇಬ್ಬರನ್ನು ಭೋಪಾಲ್‌ನ ಹಮಿಡಿಯಾ ಆಸ್ಪತ್ರೆಗೆ ಹೆಚ್ಚಿನ ಚಿಕಿತ್ಸೆಗಾಗಿ ಕಳುಹಿಸಲಾಗಿದೆ ಎಂದು ರಾಜ್‌ಗಢ ಜಿಲ್ಲಾಧಿಕಾರಿ ಹರ್ಷ್ ದೀಕ್ಷಿತ್ ತಿಳಿಸಿದ್ದಾರೆ. “ತೀವ್ರವಾಗಿ ಗಾಯಗೊಂಡಿರುವ ಇಬ್ಬರು ಅಪಾಯದಿಂದ ಪಾರಾಗಿದ್ದಾರೆ” ಎಂದು ಅವರು ತಿಳಿಸಿದರು.

ಮದುವೆ ದಿಬ್ಬಣದ ಟ್ರಾಕ್ಟರ್‌ನಲ್ಲಿ 40ರಿಂದ 50 ಜನರು ಹತ್ತಿದ್ದು, ಪಿಪ್ಲೋಡಿ ಗ್ರಾಮದ ಬಳಿ ಟ್ರ್ಯಾಕ್ಟರ್ ಟ್ರಾಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ. “40ರಿಂದ 50 ಜನರೊಂದಿಗೆ ಮದುವೆ ಮೆರವಣಿಗೆ ರಾಜಸ್ಥಾನದ ಜಲಾವರ್ ಜಿಲ್ಲೆಯ ಮೋತಿಪುರದಿಂದ ರಾಜ್‌ಗಢದ ಕುಮಾಲ್‌ಪುರಕ್ಕೆ ಟ್ರ್ಯಾಕ್ಟರ್-ಟ್ರಾಲಿಯಲ್ಲಿ ಬರುತ್ತಿತ್ತು. ಪಿಪ್ಲೋಡಿ ಗ್ರಾಮದ ಬಳಿ ಟ್ರ್ಯಾಕ್ಟರ್ ಟ್ರಾಲಿ ನಿಯಂತ್ರಣ ತಪ್ಪಿ ಪಲ್ಟಿಯಾಗಿದೆ” ಎಂದು ದೀಕ್ಷಿತ್ ತಿಳಿಸಿದ್ದಾರೆ.

ಚಾಲಕ ಪಾನಮತ್ತನಾಗಿದ್ದ ಮತ್ತು ಟ್ರಾಲಿ ಓವರ್‌ಲೋಡ್ ಆಗಿತ್ತು ಎಂದು ಗಾಯಗೊಂಡ ವ್ಯಕ್ತಿಯೊಬ್ಬರು ತಿಳಿಸಿದ್ದಾರೆ. ಟ್ರ್ಯಾಕ್ಟರ್-ಟ್ರಾಲಿ ಪಲ್ಟಿಯಾದ ನಂತರ, ಜನರು ಅದರ ಅಡಿಯಲ್ಲಿ ಸಿಲುಕಿಕೊಂಡರು. ತಡರಾತ್ರಿಯವರೆಗೂ ಜೆಸಿಬಿ ಯಂತ್ರಗಳ ಸಹಾಯದಿಂದ ಹೊರತೆಗೆಯಲಾಯಿತು.

ರಾಷ್ಟ್ರಪತಿ ಮುರ್ಮು, ಸಿಎಂ ಸಂತಾಪ

ರಾಷ್ಟ್ರಪತಿ ದ್ರೌಪದಿ ಮುರ್ಮು (President Draupadi Murmu) ಅವರು ಮೃತರ ಕುಟುಂಬಗಳಿಗೆ ತಮ್ಮ ಆಳವಾದ ಸಂತಾಪವನ್ನು ವ್ಯಕ್ತಪಡಿಸಿದ್ದಾರೆ ಮತ್ತು ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲು ಪ್ರಾರ್ಥಿಸಿದ್ದಾರೆ. “ಮಧ್ಯಪ್ರದೇಶದ ರಾಜ್‌ಗಢ ಜಿಲ್ಲೆಯಲ್ಲಿ ಸಂಭವಿಸಿದ ರಸ್ತೆ ಅಪಘಾತದ ಹಾಗೂ ಸಾವಿನ ಸುದ್ದಿ ತುಂಬಾ ದುಃಖಕರವಾಗಿದೆ. ತಮ್ಮ ಪ್ರೀತಿಪಾತ್ರರನ್ನು ಕಳೆದುಕೊಂಡ ಕುಟುಂಬಗಳಿಗೆ ಆಳವಾದ ಸಂತಾಪವನ್ನು ವ್ಯಕ್ತಪಡಿಸುತ್ತೇನೆ. ಗಾಯಾಳುಗಳು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ರಾಷ್ಟ್ರಪತಿ ಮುರ್ಮು ಹೇಳಿದ್ದಾರೆ.

ಮಧ್ಯಪ್ರದೇಶದ ಮುಖ್ಯಮಂತ್ರಿ ಮೋಹನ್ ಯಾದವ್ (MP CM Mohan Yadav) ಅವರು ಸಂತಾಪ ವ್ಯಕ್ತಪಡಿಸಿದ್ದಾರೆ. “ರಾಜ್‌ಗಢ್ ಜಿಲ್ಲೆಯ ಪಿಪ್ಲೋಡಿ ರಸ್ತೆಯಲ್ಲಿ ಟ್ರ್ಯಾಕ್ಟರ್ ಟ್ರಾಲಿ ಪಲ್ಟಿಯಾಗಿ ರಾಜಸ್ಥಾನದ ಝಲಾವರ್ ಜಿಲ್ಲೆಯ 13 ಜನರ ಅಕಾಲಿಕ ಮರಣದ ಸುದ್ದಿ ಅತ್ಯಂತ ದುಃಖಕರವಾಗಿದೆ. ಸ್ಥಳದಲ್ಲಿ ಜನಪ್ರತಿನಿಧಿ ನಾರಾಯಣ ಸಿಂಗ್ ಪನ್ವಾರ್‌, ರಾಜಗಢ ಜಿಲ್ಲಾಧಿಕಾರಿ ಮತ್ತು ಎಸ್ಪಿ ಉಪಸ್ಥಿತರಿದ್ದರು. ನಾವು ರಾಜಸ್ಥಾನ ಸರ್ಕಾರದೊಂದಿಗೆ ಸಂಪರ್ಕದಲ್ಲಿದ್ದೇವೆ. ರಾಜ್‌ಗಡ್‌ನ ಜಿಲ್ಲಾ ಆಸ್ಪತ್ರೆಯಲ್ಲಿ ಗಾಯಾಳುಗಳ ಚಿಕಿತ್ಸೆ ನಡೆಯುತ್ತಿದೆ. ಗಂಭೀರವಾಗಿ ಗಾಯಗೊಂಡ ರೋಗಿಗಳನ್ನು ಭೋಪಾಲ್‌ಗೆ ಕಳಿಸಲಾಗಿದೆ. ಮೃತರ ಕುಟುಂಬಗಳಿಗೆ ನನ್ನ ಆಳವಾದ ಸಂತಾಪವಿದೆ. ಗಾಯಗೊಂಡವರು ಶೀಘ್ರವಾಗಿ ಚೇತರಿಸಿಕೊಳ್ಳಲಿ ಎಂದು ಪ್ರಾರ್ಥಿಸುತ್ತೇನೆ” ಎಂದು ಸಿಎಂ ಯಾದವ್ ಎಕ್ಸ್ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.

ಇದನ್ನೂ ಓದಿ: Accident Case : ಕರೆಂಟ್‌ ಶಾಕ್‌ಗೆ ಕಂಬದಲ್ಲೇ ಕಾರ್ಮಿಕನ ನರಳಾಟ; ಭೀಕರ ಅಪಘಾತಕ್ಕೆ ಇಬ್ಬರು ಬಲಿ

Exit mobile version