ಗಡಿಯಾಚೆಗಿನ ಉಗ್ರಗಾಮಿ ಕೃತ್ಯಗಳು ಸೇರಿದಂತೆ ಭಯೋತ್ಪಾದಕರ ಚಟುವಟಿಕೆಗಳಿಗೆ ಹಣಕಾಸು ನೆರವು ಒದಗಿಸುವುದನ್ನು ನಿಲ್ಲಿಸಬೇಕು ಎಂದು ಭಾರತವು ಶಾಂಘೈ ಸಹಕಾರ ಸಂಘಟನೆಯ ವಿದೇಶಾಂಗ ಸಚಿವರ ಸಮಾವೇಶದಲ್ಲಿ ‘ಭಯೋತ್ಪಾದನೆ ಪೋಷಕ’ ದೇಶಗಳಿಗೆ ಆಗ್ರಹಿಸಿದೆ. ವಿಶೇಷ ಎಂದರೆ ಪಾಕ್ ವಿದೇಶಾಂಗ ಸಚಿವ ಬಿಲಾವಲ್ ಭುಟ್ಟೊ ಈ ಸಭೆಯಲ್ಲಿ ಭಾಗವಹಿಸಿದ್ದರು. ಈ ಸಂದೇಶ ಮುಖ್ಯವಾಗಿ ಅವರಿಗೇ ಆಗಿದೆ. ವಿಶೇಷವೆಂದರೆ 12 ವರ್ಷಗಳ ಬಳಿಕ ಪಾಕ್ ವಿದೇಶಾಂಗ ಸಚಿವರೊಬ್ಬರು ಭಾರತಕ್ಕೆ ಭೇಟಿ ನೀಡಿದ್ದಾರೆ. ಆದರೆ ಘನತೆಯಿಂದ ನಿಂತು ಮಾತನಾಡುವ ಸ್ಥಿತಿಯಲ್ಲಿ ಅವರೀಗ ಇಲ್ಲ. ಇದಕ್ಕೆ ಎರಡು ಕಾರಣಗಳು- ಒಂದು, ಅವರ ದೇಶಕ್ಕೆ ಬಂದಿರುವ ಇತರರ ಮುಂದೆ ಕೈಚಾಚುವ ಪರಿಸ್ಥಿತಿ. ಇನ್ನೊಂದು, ಕಾಶ್ಮೀರ ಮತ್ತು ಪಂಜಾಬ್‌ನಲ್ಲಿ ಅದು ಮುಂದುವರಿಸಿರುವ ಭಯೋತ್ಪಾದನೆ.
ಭಾರತದ ವಿದೇಶಾಂಗ ಸಚಿವ ಜೈಶಂಕರ್ ಅವರು ಬಿಲಾವಲ್ ಭುಟ್ಟೊ ಅವರ ಕೈ ಕುಲುಕಲು ನಿರಾಕರಿಸುವ ಮೂಲಕವೂ ಪಾಕಿಸ್ತಾನಕ್ಕೆ ಕಠಿಣ ಸಂದೇಶ ರವಾನಿಸಿದ್ದಾರೆ. ಹಸ್ತಲಾಘವದ ರೂಢಿ ಆರಂಭವಾದುದು ತನ್ನ ಬಳಿ ಆಯುಧವಿಲ್ಲ, ತನ್ನನ್ನು ನಂಬಬಹುದು ಎಂದು ಒಬ್ಬ ಮನುಷ್ಯ ಇನ್ನೊಬ್ಬನಿಗೆ ಖಚಿತಪಡಿಸುವುದಕ್ಕಾಗಿ. ಆದರೆ ಪಾಕ್ ಬಳಿ ಕಪಟದ ಆಯುಧವಿದೆ ಎಂಬುದು ನಮಗೆ ತಿಳಿದಿದೆ. “ಇಡೀ ಜಗತ್ತು ಕೋವಿಡ್ ವಿರುದ್ಧ ಹೋರಾಡುತ್ತಿದ್ದ ಸಂದರ್ಭದಲ್ಲೂ ಕೆಲವು ದೇಶಗಳು ಭಯೋತ್ಪಾದನೆಗೆ ಪ್ರಚೋದನೆ ನೀಡುವುದನ್ನು ಮುಂದುವರಿಸಿದ್ದವು” ಎಂದು ಜೈಶಂಕರ್ ಇದೇ ಸಂದರ್ಭದಲ್ಲಿ ಕಟುವಾಗಿ ಹೇಳಿದ್ದಾರೆ.
“ಭಯೋತ್ಪಾದನೆಯಿಂದ ನಮ್ಮ ದೇಶವೇ ಅತ್ಯಂತ ಹೆಚ್ಚು ಸಂತ್ರಸ್ತವಾಗಿದೆ” ಎಂದಿರುವ ಬಿಲಾವಲ್ ಭುಟ್ಟೋ ಅವರು ತಮ್ಮ ಧ್ವನಿಯಲ್ಲಿ ಪ್ರಾಮಾಣಿಕತೆಯನ್ನು ನಟಿಸಲು ತುಂಬಾ ಪ್ರಯತ್ನಿಸಿದ್ದಾರೆ. ಆದರೆ ಇಸ್ಲಾಮಿಕ್ ಉಗ್ರಗಾಮಿಗಳ ತವರೂರೇ ತಮ್ಮ ದೇಶ ಎಂಬುದನ್ನು ಮರೆತಿದ್ದಾರೆ. ಪಾಕ್‌ನ ಅಸಲಿ ಉದ್ದೇಶವನ್ನೂ ಅವರು ಹೊರಗೆಡಹಿದ್ದಾರೆ. ಕಾಶ್ಮೀರದಲ್ಲಿ ಆರ್ಟಿಕಲ್ 370 ರದ್ದುಗೊಳಿಸಿದ ಕ್ರಮವನ್ನು ಹಿಂದೆಗೆದುಕೊಂಡರೆ ಮಾತ್ರ ಭಾರತದ ಜತೆ ಮಾತುಕತೆ ಸಾಧ್ಯ ಎಂದಿದ್ದಾರೆ. ಕಾಶ್ಮೀರ ಸಂಪೂರ್ಣವಾಗಿ ಭಾರತದ ಆಂತರಿಕ ವಿಚಾರ ಎಂದು ಸಾರಿ ಸಾರಿ ಹೇಳಿದ ಬಳಿಕವೂ ಮತ್ತದೇ ರಾಗ ಎಂದರೆ ಮಾತುಕತೆ ಹೇಗೆ ಸಾಧ್ಯವಾಗುತ್ತದೆ?
ಪಾಕ್ ವಿದೇಶಾಂಗ ಸಚಿವರು ಭಾರತಕ್ಕೆ ಭೇಟಿ ನೀಡಿದ ಸಂದರ್ಭದಲ್ಲೇ ಜಮ್ಮು ಕಾಶ್ಮೀರದಲ್ಲಿ ಉಗ್ರರು ತಮ್ಮ ವಿಧ್ವಂಸಕ ಕೃತ್ಯ ತೀವ್ರಗೊಳಿಸುತ್ತಿದ್ದಾರೆ. ಶುಕ್ರವಾರ ಉಗ್ರರ ಹೊಂಚು ದಾಳಿಗೆ ಐವರು ಯೋಧರು ಬಲಿಯಾಗಿದ್ದಾರೆ. ಮೂರು ದಿನಗಳ ಹಿಂದಷ್ಟೇ ಇಂಥ ಇನ್ನೊಂದು ದಾಳಿ ನಡೆದಿತ್ತು. ಭದ್ರತಾ ಪಡೆಗಳ ಗುಂಡಿಗೆ ಉಗ್ರರು ಬಲಿಯಾಗುವುದು ಸಾಮಾನ್ಯ ಸಂಗತಿಯಾಗಿದೆ. ಪಾಕ್‌ನಿಂದ ಒಳನುಸುಳದೇ ಇವರೆಲ್ಲಾ ಆಕಾಶದಿಂದ ಉದುರುತ್ತಾರೆಯೇ? ಅತ್ತ ಪಂಜಾಬ್‌ನಲ್ಲೂ ಚಿಗುರುತ್ತಿರುವ ಖಲಿಸ್ತಾನ್ ಚಳವಳಿಗೆ ಶಸ್ತ್ರಾಸ್ತ್ರ ಪೂರೈಕೆ ಮಾಡಲು, ಡ್ರೋನ್‌ಗಳ ಮೂಲಕ ಮಾದಕ ದ್ರವ್ಯ ಪೂರೈಸಲು ಈ ದೇಶ ತುದಿಗಾಲಿನಲ್ಲಿ ನಿಂತಿದೆ. ಇಂಥ ದೇಶದ ಜತೆಗೆ ಕೈ ಕುಲುಕಲು ಮನಸ್ಸಾದರೂ ಹೇಗೆ ಬಂದೀತು?
ಪಾಕ್ ದಿವಾಳಿಯಾಗಿದೆ. ಅಲ್ಲಿಯ ಜನ ಒಂದು ಹೊತ್ತಿನ ಊಟಕ್ಕೂ ಪರದಾಡುತ್ತಿದ್ದಾರೆ. ಅಂತಾರಾಷ್ಟ್ರೀಯ ಹಣಕಾಸು ನಿಧಿಯು ಪಾಕ್ ಅನ್ನು ಬೂದು ಪಟ್ಟಿಯಲ್ಲಿ ಇರಿಸಿದೆ. ಇಷ್ಟಾಗಿಯೂ ಆ ದೇಶ ಭಯೋತ್ಪಾದನೆಗೆ ಪೋಷಣೆ ಮುಂದುವರಿಸಿದೆ. ಅಲ್ಲಿ ಮುತ್ಸದ್ಧಿಗಳೂ ವಿವೇಕಿಗಳೂ ಗೈರುಹಾಜರಾದಂತಿದೆ. ಭಾರತದ ಜತೆಗೆ ಆಪ್ತತೆ ಬೆಳೆಸಲು ಮುಂದಾಗುವ ರಾಜಕಾರಣಿಗಳಿಗೆ ಅಲ್ಲಿ ಘೋರ ಭವಿಷ್ಯ ಕಟ್ಟಿಟ್ಟ ಬುತ್ತಿ. ಇಂಥ ಸನ್ನಿವೇಶದಲ್ಲಿ ಮುಕ್ತ ರಾಜತಾಂತ್ರಿಕ ಮಾತುಕತೆ ಬೆಳೆಸಲು ಎಂಟೆದೆ ಬೇಕು. ಭಾರತ ಸದಾ ಸಿದ್ಧವಿದೆ. ಆದರೆ ಪಾಕ್ ಕಪಟ ಬಿಡಲು ಸಿದ್ಧವಿಲ್ಲ.
ಇದನ್ನೂ ಓದಿ: SCO Meeting: ಪಾಕಿಸ್ತಾನ ಸಚಿವನಿಗೆ ಕೈ ಕುಲುಕದ ಭಾರತದ ವಿದೇಶಾಂಗ ಇಲಾಖೆ ಸಚಿವ; ಭಯೋತ್ಪಾದನೆ ವಿರುದ್ಧ ಕಟು ಮಾತು
ಪಾಕ್ ಪ್ರೇರಿತ ಭಯೋತ್ಪಾದನೆ ವಿರುದ್ಧ ಎಲ್ಲ ದೇಶಗಳು ಒಂದಾಗಿ ನಿಂತು ಮತ್ತಷ್ಟು ಒತ್ತಡ ಹಾಕುವ ಅಗತ್ಯ ಇದೆ. ಛಿದ್ರಛಿದ್ರವಾಗಿರುವ ಸಿರಿಯಾ, ಅಫಘಾನಿಸ್ತಾನಗಳನ್ನು ನೋಡಿಯಾದರೂ ಎಲ್ಲರೂ ಪಾಠ ಕಲಿಯುವ ಅಗತ್ಯವಿದೆ. ಚೀನಾದಂಥ ದೇಶಗಳು ತೆರೆಮರೆಯಲ್ಲಿ ಪಾಕ್ ಅನ್ನು ಭಾರತದ ಮೇಲೆ ಛೂ ಬಿಡಲು ಬಳಸುತ್ತಿರುವುದನ್ನೂ ಅಂತಾರಾಷ್ಟ್ರೀಯ ಸಮುದಾಯ ಖಂಡಿಸಬೇಕಿದೆ.