Site icon Vistara News

Samrat Choudhary: ಅಯೋಧ್ಯೆಯಲ್ಲಿ ತಲೆ ಬೋಳಿಸಿಕೊಂಡು ರಾಮನಿಗೆ ಪೇಟ ಅರ್ಪಿಸಿದ ಬಿಹಾರ ಡಿಸಿಎಂ! ಇದಕ್ಕಿದೆ ವಿಶೇಷ ಕಾರಣ!

Samrat Choudhary

ಈ ಹಿಂದೆ ಜೆಡಿಯು ಮುಖ್ಯಸ್ಥರಾದ ಬಿಹಾರದ ಮುಖ್ಯಮಂತ್ರಿ ನಿತೀಶ್ ಕುಮಾರ್ ಅವರು ಮಹಾಘಟಬಂಧನ್ ಮೈತ್ರಿಕೂಟವನ್ನು ತೊರೆದು ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಪೇಟವನ್ನು ಧರಿಸುವುದಾಗಿ ಪ್ರತಿಜ್ಞೆ ಮಾಡಿದ್ದ ಬಿಹಾರ ಉಪ ಮುಖ್ಯಮಂತ್ರಿ ಮತ್ತು ಬಿಜೆಪಿ ಮುಖಂಡ ಸಾಮ್ರಾಟ್ ಚೌಧರಿ (Samrat Choudhary) ಅವರು ಇದೀಗ ತಮ್ಮ ಪ್ರತಿಜ್ಞೆಯನ್ನು ನೆನಪಿಸಿಕೊಂಡಿದ್ದು ಅದನ್ನು ಪೂರೈಸಿದ್ದಾರೆ.

ಇದೀಗ ಇಂಡಿ-ಮೈತ್ರಿಕೂಟಕ್ಕೆ ರಾಜೀನಾಮೆ ನೀಡಿದ ನಂತರ ನಿತೀಶ್ ಕುಮಾರ್ ಅವರು ಎನ್‍ಡಿಎಗೆ ಮರಳಿದ್ದಾರೆ. ಹಾಗಾಗಿ ಸಾಮ್ರಾಟ್ ಚೌಧರಿ ಅವರು ಈಗ ಅಯೋಧ್ಯೆಯಲ್ಲಿ ಭಗವಾನ್ ರಾಮನಿಗೆ ತಮ್ಮ ಮುಡಿಯನ್ನು ಅರ್ಪಿಸಿ ತಮ್ಮ ಪೇಟವನ್ನು ರಾಮನ ಪಾದಗಳಿಗೆ ಅರ್ಪಿಸುವ ಮೂಲಕ ತಮ್ಮ ಪ್ರತಿಜ್ಞೆಯನ್ನು ಪೂರೈಸಿದ್ದಾರೆ.

ಈ ಕುರಿತು ಮಾತನಾಡಿದ ಸಾಮ್ರಾಟ್ ಚೌಧರಿ “ನಿತೀಶ್ ಕುಮಾರ್ ಅವರು ಇಂಡಿ- ಮೈತ್ರಿಕೂಟದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿ ಎನ್‍ಡಿಎಗೆ ಮರಳಿದ ದಿನ, ನಾನು ನನ್ನ ಪೇಟವನ್ನು ಭಗವಾನ್ ರಾಮನಿಗೆ ಅರ್ಪಿಸುತ್ತೇನೆ ಎಂದು ಘೋಷಿಸಿದೆ. ನಿತೀಶ್ ಕುಮಾರ್ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡುವವರೆಗೂ ಪೇಟ ಧರಿಸುವುದಾಗಿ ಪ್ರತಿಜ್ಞೆ ಮಾಡಿದ್ದೆ ಎಂಬುದು ನಿಜ. ಆದರೆ ಈಗ ಅವರು ಇಂಡಿ-ಮೈತ್ರಿಕೂಟದ ಮುಖ್ಯಮಂತ್ರಿ ಸ್ಥಾನಕ್ಕೆ ರಾಜೀನಾಮೆ ನೀಡಿದ ನಂತರ ರಾಷ್ಟ್ರೀಯ ಪ್ರಜಾಸತ್ತಾತ್ಮಕ ಒಕ್ಕೂಟಕ್ಕೆ (ಎನ್‍ಡಿಎ) ಮರಳಿದ್ದಾರೆ, ಹಾಗಾಗಿ ನನ್ನ ಪೇಟವನ್ನು ಭಗವಾನ್ ರಾಮನ ಪಾದಗಳಿಗೆ ಅರ್ಪಿಸುವ ಸಮಯ ಬಂದಿದೆ” ಎಂದು ಹೇಳಿದ್ದಾರೆ.

ಈ ವರ್ಷದ ಆರಂಭದಲ್ಲಿ ನಿತೀಶ್ ಕುಮಾರ್ ಎನ್‍ಡಿಎಗೆ ಮರಳಿದ್ದು ಕಳೆದ ದಶಕದಲ್ಲಿ ಮೈತ್ರಿಗಳಲ್ಲಿ ಐದನೇ ಬದಲಾವಣೆಯನ್ನು ಸೂಚಿಸುತ್ತದೆ, ಇದರ ಪರಿಣಾಮವಾಗಿ ಮಹಾಘಟಬಂಧನ್ ಸರ್ಕಾರದ ಪತನವಾಯಿತು ಮತ್ತು ಬಿಹಾರದಲ್ಲಿ ಹೊಸ ಎನ್‍ಡಿಎ ನೇತೃತ್ವದ ಸರ್ಕಾರ ರಚನೆಯಾಯಿತು. ಬಿಜೆಪಿ ನಾಯಕರಾದ ಸಾಮ್ರಾಟ್ ಚೌಧರಿ ಮತ್ತು ವಿಜಯ್ ಸಿನ್ಹಾ ಉಪಮುಖ್ಯಮಂತ್ರಿಗಳಾಗಿ ಪ್ರಮಾಣ ವಚನ ಸ್ವೀಕರಿಸಿದರು.

ಇದನ್ನೂ ಓದಿ: ಮಕ್ಕಳನ್ನು ಬೆಲ್ಟ್‌ನಿಂದ ಕ್ರೂರವಾಗಿ ಥಳಿಸಿದ ತಾಯಿ; ವಿಡಿಯೊ ನೋಡಿ ಜನಾಕ್ರೋಶ

ಈ ನಡುವೆ ತಮ್ಮ ಪ್ರತಿಜ್ಞೆಯನ್ನು ನೆನೆಪಿಸಿಕೊಂಡ ಚೌಧರಿ ಜೂನ್ 2ರಂದು ಅಯೋಧ್ಯೆಗೆ ತೆರಳಿ ತಲೆ ಬೋಳಿಸಿಕೊಂಡ ನಂತರ ಅವರು ಇಂದು ರಾಮ ಮಂದಿರದಲ್ಲಿ ತಮ್ಮ ಪೇಟವನ್ನು ಅರ್ಪಿಸಿದ್ದಾರಂತೆ.

Exit mobile version