ಬೆಂಗಳೂರು: ಅಯೋಧ್ಯೆ ರಾಮಮಂದಿರಕ್ಕಾಗಿ (Ayodhya Ram Mandir) ರಾಮಲಲ್ಲಾ (Ram Lalla) ವಿಗ್ರಹವನ್ನು ರಚಿಸಿದ ಶಿಲ್ಪಿ ಅರುಣ್ ಯೋಗಿರಾಜ್ (Arun Yogiraj) ಅವರು ʼಬಾಲಕ ರಾಮʼ ದೇವರ (Balak ram) ಚಿಕಣಿ ರೂಪವನ್ನು ಕೂಡ ರಚಿಸಿದ್ದಾರೆ. ಈ ವಿಷಯವನ್ನು ಅವರು ಎಕ್ಸ್ ಜಾಲತಾಣದಲ್ಲಿ ಹಂಚಿಕೊಂಡಿದ್ದಾರೆ.
ಮೈಸೂರು ಮೂಲದ ಕಲಾವಿದ ಅರುಣ್ ಯೋಗಿರಾಜ್ (Arun Yogiraj) ತಾವು ಅಯೋಧ್ಯೆಯಲ್ಲಿ ಬಿಡುವಿನ ವೇಳೆಯಲ್ಲಿ ʻಚಿಕ್ಕ ರಾಮಲಲ್ಲಾ ಮೂರ್ತಿ’ಯನ್ನು ಕೆತ್ತಿರುವುದಾಗಿ ಹಂಚಿಕೊಂಡಿದ್ದಾರೆ. “ರಾಮ ಲಲ್ಲಾನ ಮುಖ್ಯ ಮೂರ್ತಿಯನ್ನು ಆಯ್ಕೆ ಮಾಡಿದ ನಂತರ ನಾನು ಅಯೋಧ್ಯೆಯಲ್ಲಿ ನನ್ನ ಬಿಡುವಿನ ವೇಳೆಯಲ್ಲಿ ಮತ್ತೊಂದು ಸಣ್ಣ ರಾಮ್ ಲಲ್ಲಾ ಮೂರ್ತಿಯನ್ನು ಕಲ್ಲಿನಲ್ಲಿ ಕೆತ್ತಿದ್ದೇನೆ” ಎಂದು ಯೋಗಿರಾಜ್ ಎಕ್ಸ್‌ನಲ್ಲಿ ಪ್ರಕಟಿಸಿದ್ದು, ಕೈಯಲ್ಲಿ ಅವರು ಈ ವಿಗ್ರಹವನ್ನು ಹಿಡಿದಿರುವ ಪೋಸ್ಟ್ ವೈರಲ್ ಆಗಿದೆ.
ಈ ಸಣ್ಣ ವಿಗ್ರಹವು ಮೂಲ ವಿಗ್ರಹದ ಕಪ್ಪು ಕಲ್ಲಿಗಿಂತ ಭಿನ್ನವಾದ, ತುಸು ಬಿಳುಪಾದ ಕಲ್ಲಿನಲ್ಲಿ ಕೆತ್ತಲ್ಪಟ್ಟಿದೆ. ಆದರೆ ʼಬಾಲಕ ರಾಮ’ನ ಶಿಲ್ಪದ ಪಡಿಯಚ್ಚಿನಂತಿದೆ. ಮೂಲ ಮೂರ್ತಿಯ ಎಲ್ಲ ಲಕ್ಷಣಗಳು ಇದರಲ್ಲೂ ಇವೆ. ಆದರೆ ಇದನ್ನು ಒಂದು ಕೈಯಲ್ಲಿ ಹಿಡಿದುಕೊಳ್ಳಬಹುದು.
After the selection of the main Murti of Ram lalla, I carved another small Ram lalla murti (Stone) in my free time at Ayodhya. pic.twitter.com/KBO0rgXVPq
— Arun Yogiraj (@yogiraj_arun) March 23, 2024
ಕಳೆದ ತಿಂಗಳು ಅಯೋಧ್ಯೆಯ ದೇವಾಲಯದ ಗರ್ಭಗುಡಿಯೊಳಗೆ ಎಂಟು ಅಡಿ ಎತ್ತರದ ಚಿನ್ನ ಲೇಪಿತ ಅಮೃತಶಿಲೆಯ ಸಿಂಹಾಸನದ ಮೇಲೆ ಇರಿಸಲಾಗಿರುವ ಬಾಲಕ ರಾಮ ವಿಗ್ರಹದ ಕಣ್ಣುಗಳನ್ನು ಕೆತ್ತಲು ಬಳಸಿದ ವಿಶೇಷ ಉಪಕರಣಗಳ ಚಿತ್ರವನ್ನು ಅರುಣ್ ಯೋಗಿರಾಜ್ ಹಂಚಿಕೊಂಡಿದ್ದರು. “ನಾನು ಅಯೋಧ್ಯೆಯ ರಾಮ ಲಲ್ಲಾನ ದಿವ್ಯ ಕಣ್ಣುಗಳನ್ನು (ನೇತ್ರೋನ್ಮೀಲನ) ಕೆತ್ತಿದ ಚಿನ್ನದ ಉಳಿ ಹಾಗೂ ಬೆಳ್ಳಿಯ ಸುತ್ತಿಗೆ” ಎಂದು ಅವುಗಳ ಚಿತ್ರವನ್ನು ಹಂಚಿಕೊಳ್ಳುವಾಗ ಯೋಗಿರಾಜ್ ಬರೆದಿದ್ದರು,
ಅರುಣ್ ಯೋಗಿರಾಜ್ ಮೈಸೂರಿನವರು ಹಾಗೂ ತಮ್ಮ ಕುಟುಂಬದಲ್ಲಿ ಐದನೇ ತಲೆಮಾರಿನ ಶಿಲ್ಪಿ. ಮೈಸೂರು ವಿಶ್ವವಿದ್ಯಾನಿಲಯದಿಂದ ಎಂಬಿಎ ಪದವಿ ಪಡೆದಿದ್ದು, ಖಾಸಗಿ ಕಂಪನಿಯೊಂದರ ಮಾನವ ಸಂಪನ್ಮೂಲ ವಿಭಾಗದಲ್ಲಿ ಆರು ತಿಂಗಳ ಕಾಲ ಕೆಲಸ ಮಾಡಿ ಬಳಿಕ ಶಿಲ್ಪರಚನೆಗೆ ಮರಳಿದ್ದರು.
ಯೋಗಿರಾಜ್ ಅವರು ಈ ಹಿಂದೆ ಕೇದಾರನಾಥದಲ್ಲಿ ಪ್ರತಿಷ್ಠಾಪಿಸಲಾಗಿರುವ 12 ಅಡಿ ಎತ್ತರದ ಆದಿ ಶಂಕರಾಚಾರ್ಯರ ವಿಗ್ರಹ, ದೆಹಲಿಯ ಇಂಡಿಯಾ ಗೇಟ್ ಬಳಿ ಸ್ಥಾಪಿಸಲಾದ ಸುಭಾಷ್ ಚಂದ್ರ ಬೋಸ್ ಅವರ ಪ್ರತಿಮೆಯನ್ನು ಕೆತ್ತಿದ್ದರು. ಮೈಸೂರು ಜಿಲ್ಲೆಯ ಚುಂಚನಕಟ್ಟೆಯಲ್ಲಿ 21 ಅಡಿ ಎತ್ತರದ ಹನುಮಾನ್ ಪ್ರತಿಮೆ, 15 ಅಡಿ ಎತ್ತರದ ಡಾ.ಬಿ. ಆರ್ ಅಂಬೇಡ್ಕರ್ ಪ್ರತಿಮೆ, ಮೈಸೂರಿನಲ್ಲಿ ಸ್ವಾಮಿ ರಾಮಕೃಷ್ಣ ಪರಮಹಂಸರ ಬಿಳಿ ಅಮೃತಶಿಲಾ ಪ್ರತಿಮೆ, ಆರು ಅಡಿ ಎತ್ತರದ ಏಕಶಿಲಾ ನಂದಿ, ಆರು ಅಡಿ ಎತ್ತರದ ಬನಶಂಕರಿ ದೇವಿ ಹಾಗೂ ಮೈಸೂರು ರಾಜ ಜಯಚಾಮರಾಜೇಂದ್ರ ಒಡೆಯರ್ ಅವರ 4.5 ಅಡಿ ಎತ್ತರದ ಬಿಳಿ ಅಮೃತ ಶಿಲಾ ಪ್ರತಿಮೆ ಅವರು ಕೆತ್ತಿದ ವಿಗ್ರಹಗಳಲ್ಲಿ ಕೆಲವು.
ಮೈಸೂರು ವಿಶ್ವವಿದ್ಯಾನಿಲಯದ ಭೂ ವಿಜ್ಞಾನ ವಿಭಾಗದ ಯುಜಿಸಿ- ಎಮೆರಿಟಸ್ ಪ್ರಾಧ್ಯಾಪಕರ ಪ್ರಕಾರ, ಈಗ ಅಯೋಧ್ಯೆಯ ರಾಮಮಂದಿರದ ಗರ್ಭಗುಡಿಯನ್ನು ಅಲಂಕರಿಸಿರುವ, ಯೋಗಿರಾಜ್ ಕೆತ್ತಿರುವ ರಾಮಲಲ್ಲಾ ವಿಗ್ರಹದ ಮೂಲ ಶಿಲೆ ಮುನ್ನೂರು ಕೋಟಿ ವರ್ಷಗಳ ಹಿಂದಿನದಾಗಿದೆ.
ಇದನ್ನೂ ಓದಿ: Arun Yogiraj : ರಾಮ್ ಲಲ್ಲಾನ ಎಂದೂ ನೋಡದ ಚಿತ್ರ ತೋರಿಸಿದ ಶಿಲ್ಪಿ ಅರುಣ್ ಯೋಗಿರಾಜ್; ಎಷ್ಟು ಮುದ್ದಾಗಿದೆ ನೋಡಿ…