ದಾವಣಗೆರೆ: ಬಿಜೆಪಿ ಮಾಜಿ ಸಚಿವ ಬಿ.ಸಿ. ಪಾಟೀಲ್ ಅವರ ಅಳಿಯ ಪ್ರತಾಪ್ ಕುಮಾರ್ ಕೆ.ಜಿ. (41) ವಿಷ ಸೇವಿಸಿ ಆತ್ಯಹತ್ಯೆ ಮಾಡಿಕೊಂಡಿದ್ದಾರೆ. ಜಿಲ್ಲೆಯ ಹೊನ್ನಾಳಿ ಅರಣ್ಯ ಪ್ರದೇಶದಲ್ಲಿ ಸೋಮವಾರ ರಸ್ತೆ ಬದಿ ಕಾರು ನಿಲ್ಲಿಸಿ ವಿಷ ಸೇವನೆ ಮಾಡಿದ್ದ ಅವರನ್ನು ಸ್ಥಳೀಯ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಬಳಿಕ ಹೆಚ್ಚಿನ ಚಿಕಿತ್ಸೆಗೆ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ರವಾನಿಸಲಾಗಿತ್ತು. ಆದರೆ, ಚಿಕಿತ್ಸೆ ಫಲಿಸದೆ ಪ್ರತಾಪ್ ಕುಮಾರ್ (Pratap Kumar K.G) ಮೃತಪಟ್ಟಿದ್ದಾರೆ.
ಮಾಜಿ ಸಚಿವ ಬಿ.ಸಿ. ಪಾಟೀಲ್‌ರ ಮೊದಲ ಪುತ್ರಿ ಸೌಮ್ಯಾ ಅವರ ಪತಿ ಪ್ರತಾಪ್ ಕುಮಾರ್ ಆತ್ಮಹತ್ಯೆ ಮಾಡಿಕೊಂಡಿದ್ದು, ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ಅವರು ಹಲವು ವರ್ಷಗಳಿಂದ ಮಾನಸಿಕ ಖಿನ್ನತೆಯಿಂದ ಬಳಲುತ್ತಿದ್ದರು ಎನ್ನಲಾಗಿದೆ. ಹೊನ್ನಾಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಯ ಶವಗಾರದಲ್ಲಿ ಮೃತದೇಹವಿದ್ದು, ಅಲ್ಲಿಗೆ ಕುಟುಂಬಸ್ಥರು, ಸಂಬಂಧಿಕರು ತೆರಳುತ್ತಿದ್ದಾರೆ.
ಮೆಗ್ಗಾನ್ ಅಸ್ಪತ್ರೆಗೆ ಆಗಮಿಸಿರುವ ಮಾಜಿ ಸಚಿವ ಬಿ.ಸಿ.ಪಾಟೀಲ್ ಅವರು ಪೊಲೀಸರಿಂದ ಮಾಹಿತಿ ಪಡೆದು, ಕಾರಿನಲ್ಲಿ ಕುಳಿತು ದುಃಖಿಸುತ್ತಿರುವುದು ಕಂಡುಬಂದಿದೆ.
ಶಿವಮೊಗ್ಗದಲ್ಲಿ ಬಿ.ಸಿ.ಪಾಟೀಲ್ ಮಾತನಾಡಿ, ಪ್ರತಾಪ್ ಕಾಣೆಯಾದ ವಿಚಾರ ತಿಳಿದು ದಾವಣಗೆರೆ, ಶಿವಮೊಗ್ಗ ಪೊಲೀಸ್ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದೆ. ನಂತರ ಹೊನ್ನಾಳಿ-ಮಲೆಬೆನ್ನೂರು ರೋಡ್‌ನಲ್ಲಿ ವಿಷ ಸೇವಿಸಿದ್ದಾರೆ ಎಂದು ತಿಳಿಯಿತು. ಮೊದಲು ದಾವಣಗೆರೆಗೆ ಶಿಫ್ಟ್ ಮಾಡಲು ಹೇಳಿದ್ದೆವು, ನಂತರ ಶಿವಮೊಗ್ಗ ಹತ್ತಿರ ಅಂತ ಇಲ್ಲಿನ ಆಸ್ಪತ್ರೆಗೆ ಸೇರಿಸಲಾಗಿದೆ. ಶಿಕಾರಿಪುರ ಹತ್ತಿರ ಬಂದಾಗ ಜೀವ ಹೋಗಿದೆ ಎಂದು ತಿಳಿಸಿದರು.
ಮಕ್ಕಳ ವಿಚಾರದಲ್ಲಿ ಅವರಿಗೆ ಕೊರಗಿತ್ತು, ಡಿ ಅಡಿಕ್ಷನ್ ಸೆಂಟರ್‌ನಲ್ಲಿ ಎರಡು ತಿಂಗಳು ಇದ್ದರು. ಅಲ್ಲಿ ಸರಿ ಹೋಗಿದ್ದರು. ರಾಜಕೀಯ ಸೇರಿ ನಮ್ಮ ವ್ಯವಹಾರಗಳನ್ನೆಲ್ಲ ಅವರೇ ನೋಡಿಕೊಳ್ಳುತ್ತಿದ್ದರು. ಮದುವೆ ಆಗಿ 16 ವರ್ಷ ಆಗಿತ್ತು, ಬೆಳಗ್ಗೆ ಜೊತೆಯಲ್ಲಿ ತಿಂಡಿ ಮಾಡಿದ್ದೆವು. ಈಗ ಇಂತಹ ಘಟನೆ ನಡೆದಿದೆ. ನಾಳೆ ಕತ್ತಲಗೆರೆ ಗ್ರಾಮದಲ್ಲಿ ಅಂತ್ಯಸಂಸ್ಕಾರ ನಡೆಯಲಿದೆ ಎಂದು ಹೇಳಿದರು.
ನವೋದಯ ಶಾಲೆಯಲ್ಲಿ 8ನೇ ತರಗತಿ ವಿದ್ಯಾರ್ಥಿ ನೇಣಿಗೆ ಶರಣು
ಚಿತ್ರದುರ್ಗ: ನವೋದಯ ಶಾಲೆಯಲ್ಲಿ ನೇಣು ಬಿಗಿದುಕೊಂಡು ವಿದ್ಯಾರ್ಥಿ ಆತ್ಮಹತ್ಯೆ (Self Harming) ಮಾಡಿಕೊಂಡಿರುವ ಘಟನೆ ಹಿರಿಯೂರು ತಾಲೂಕಿನ ಉಡುವಳ್ಳಿಯಲ್ಲಿ ನಡೆದಿದೆ. 8ನೇ ತರಗತಿ ವಿದ್ಯಾರ್ಥಿ ಪ್ರೇಮ್ ಸಾಗರ್ (13) ನೇಣಿಗೆ ಶರಣಾದ ವಿದ್ಯಾರ್ಥಿ.
ಹೊಳಲ್ಕೆರೆ ತಾಲೂಕಿನ ಕೆಂಗುಂಟೆ ಗ್ರಾಮದ ನಿವಾಸಿಯಾದ ಪ್ರೇಮ ಸಾಗರ್ 8ನೇ ತರಗತಿ ಓದುತ್ತಿದ್ದ. ಆದರೆ, ಕೊಠಡಿಯಲ್ಲಿ ಸೋಮವಾರ ನೇಣಿಗೆ ಶರಣಾಗಿದ್ದಾನೆ. ಸೀನಿಯರ್ ವಿದ್ಯಾರ್ಥಿಗಳು ರೇಗಿಸುತ್ತಿದ್ದರು ಎಂಬ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದಾನೆ ಎಂಬ ಶಂಕೆ ವ್ಯಕ್ತವಾಗಿದೆ. ಪ್ರೇಮ ಸಾಗರ್ ಮೃತದೇಹವನ್ನು ತಾಲೂಕು ಆಸ್ಪತ್ರೆಗೆ ರವಾನೆ ಮಾಡಲಾಗಿದೆ.
ಇದನ್ನೂ ಓದಿ | Chennai Police commissioner : ಬಿಎಸ್‌ಪಿ ರಾಜ್ಯಾಧ್ಯಕ್ಷನ ಹತ್ಯೆ ಎಫೆಕ್ಟ್; ಚೆನ್ನೈ ಪೊಲೀಸ್ ಕಮಿಷನರ್ ಎತ್ತಂಗಡಿ
ಸ್ಥಳಕ್ಕೆ ಹಿರಿಯೂರು ಗ್ರಾಮಾಂತರ ಠಾಣೆ ಪೊಲೀಸರು ಭೇಟಿ ನೀಡಿ ಪರಿಶೀಲಿಸಿದ್ದು, ಹಿರಿಯೂರು ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.