ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದ (Valmiki development corporation) ಅಧೀಕ್ಷಕ ಚಂದ್ರಶೇಖರ್ ಆತ್ಮಹತ್ಯೆ (Officer self Harming) ಪ್ರಕರಣದ (Valmiki corporation Scam) ತನಿಖೆಯನ್ನು ಸಿಐಡಿಗೆ (CID) ಒಪ್ಪಿಸಿರುವರಾಜ್ಯ ಸರ್ಕಾರ, ಇದೀಗ ಪ್ರತಿಪಕ್ಷದ ಒತ್ತಡದಿಂದ ಸಿಬಿಐ (CBI) ತನಿಖೆಗೆ ಹೋಗಬಹುದಾದ ಸನ್ನಿವೇಶ ಎದುರಿಸಲು ಎಸ್ಐಟಿ (SIT) ರಚನೆಗೆ ಮುಂದಾಗಿದೆ ಎಂದು ತಿಳಿದುಬಂದಿದೆ.
185 ಕೋಟಿ ರೂ.ಗಳ ಅಕ್ರಮ ಹಣ ವರ್ಗಾವಣೆಯ (Illegal Money transfer) ಗಂಭೀರ ಸ್ವರೂಪದ ಪ್ರಕರಣ ಇದಾಗಿರುವುದರಿಂದ ಈಗಾಗಲೇ ಸಿಐಡಿ ತನಿಖೆಗೆ ಸರ್ಕಾರ ನೀಡಿದೆ. ಆದರೆ ಪ್ರತಿಪಕ್ಷಗಳು ಸಿಬಿಐ ತನಿಖೆಗೆ ನೀಡಲು ಒತ್ತಾಯಿಸುತ್ತಿವೆ. ಇಂದು ಸಿಎಂ ಸಿದ್ದರಾಮಯ್ಯ (CM Siddaramaiah) ಅವರು ಗೃಹ ಸಚಿವ ಪರಮೇಶ್ವರ್ (G Parameshwara) ಜೊತೆ ಅಧಿಕಾರಿಗಳ ಸಭೆ ಕರೆದಿದ್ದು, ಈ ಸಭೆಯಲ್ಲಿ ಎಸ್‌ಐಟಿ ರಚನೆ ಬಗ್ಗೆ ತೀರ್ಮಾನ ಆಗುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ ಇಂದಿನ ಸಿಎಂ ಮತ್ತು ಹೋಂ ಮಿನಿಸ್ಟರ್ ಸಭೆ ಭಾರೀ ಮಹತ್ವ ಪಡೆದುಕೊಂಡಿದೆ.
ಈ ಪ್ರಕರಣದ ತನಿಖೆಯನ್ನು ಸಿಬಿಐಗೆ ಕೊಡುವಂತೆ ಬ್ಯಾಂಕ್ ಆಫ್ ಬರೋಡಾ ಅಧಿಕಾರಿಗಳು ಕೇಂದ್ರ ಗೃಹ ಇಲಾಖೆಗೆ ಪತ್ರ ಬರೆದಿದ್ದಾರೆ. ಹತ್ತು ಕೋಟಿ ರೂಪಾಯಿಗಳಿಗಿಂತಲೂ ಹೆಚ್ಚು ಬ್ಯಾಂಕ್ ಹಣದಲ್ಲಿ ಅವ್ಯವಹಾರ ಆಗಿದ್ದರೆ ಇದರಲ್ಲಿ ಸಿಬಿಐ ಎಂಟ್ರಿ ಆಗಬಹುದು. ಇದನ್ನು ಸಿಬಿಐ ಹಾಗೂ ಕೇಂದ್ರ ಸರ್ಕಾರ ಗಂಭೀರವಾಗಿ ತೆಗೆದುಕೊಳ್ಳುವ ಮೊದಲೇ ಎಸ್ಐಟಿ ರಚನೆ ಮಾಡಿ ತನಿಖೆ ಇನ್ನಷ್ಟು ಚುರುಕುಗೊಳಿಸಲು ಸರ್ಕಾರ ತೀರ್ಮಾನ ಮಾಡುವ ಸಾಧ್ಯತೆ ಇದೆ. ಜೊತೆಗೆ, ಪ್ರಕರಣದಲ್ಲಿ ಕೇಳಿ ಬಂದಿರುವ ಹೆಸರಾದ ಅಧಿಕಾರಿ ನಾಗರಾಜ್, ಸಚಿವ ನಾಗೇಂದ್ರ ಜೊತೆ ಆಪ್ತರಾಗಿರುವುದರಿಂದಲೂ, ತನಿಖೆಯನ್ನು ಸಿಬಿಐಗೆ ಒಪ್ಪಿಸಲು ರಾಜ್ಯ ಸರ್ಕಾರಕ್ಕೆ ಇಷ್ಟವಿಲ್ಲದಾಗಿದೆ.
ರಿಪೋರ್ಟ್ ಬರೋತನಕ ಸಚಿವ ನಾಗೇಂದ್ರ ಸೇಫ್?
ಪ್ರಕರಣದಲ್ಲಿ ಸಚಿವ ನಾಗೇಂದ್ರ ಕೈವಾಡವಿದೆ, ಹೀಗಾಗಿ ಅವರು ರಾಜೀನಾಮೆ ನೀಡಬೇಕು ಎಂದು ಬಿಜೆಪಿ ಪಟ್ಟು ಹಿಡಿದಿದೆ. ಈ ಹಿನ್ನೆಲೆಯಲ್ಲಿ ದೆಹಲಿಯಿಂದ ಬೆಂಗಳೂರಿಗೆ ಆಗಮಿಸುತ್ತಿದ್ದ ಹಾಗೇ ಸಿಎಂ ತುರ್ತಾಗಿ ಸಭೆ ನಡೆಸಿದ್ದು, ಡಿಜಿ ಅಲೋಕ್ ಮೋಹನ್‌ರಿಂದ CID ಪ್ರಾಥಮಿಕ ಮಾಹಿತಿ ಪಡೆದುಕೊಂಡಿದ್ದಾರೆ. ಕಾವೇರಿ ನಿವಾಸದಲ್ಲಿ ಒಂದು ಗಂಟೆಗಳ ಕಾಲ ಡಿಸಿಎಂ ಜೊತೆಯೂ ಚರ್ಚೆ ನಡೆಸಿದರು.
ಅಕ್ರಮ ಹಣ ವರ್ಗಾವಣೆ ಸಂಬಂಧ ಈಗಾಗಲೇ ನಿಗಮದ ಎಂಡಿ ಸೇರಿದಂತೆ ಪ್ರಕರಣದಲ್ಲಿ ಹೆಸರು ಕೇಳಿಬಂದ ಅಧಿಕಾರಿಗಳನ್ನು ಸಸ್ಪೆಂಡ್ ಮಾಡಲಾಗಿದೆ. ಪ್ರಕರಣದ ತನಿಖೆಯನ್ನು CIDಗೆ ವಹಿಸಲಾಗಿದೆ. CID ರಿಪೋರ್ಟ್ ಬರೋದಿಕ್ಕಿಂತ ಮುಂಚೆ ಯಾವುದೇ ಕಾರಣಕ್ಕೂ ಸಚಿವರ ಮೇಲೆ ಕ್ರಮ ಸಲ್ಲದು ಎಂಬ ಅಭಿಪ್ರಾಯ ವ್ಯಕ್ತವಾಗಿದೆ. CID ರಿಪೋರ್ಟ್ ಬಂದ ಮೇಲೆ ಮುಂದಿನ ಕ್ರಮ ಕೈಗೊಳ್ಳೋಣ ಎನ್ನುವ ನಿರ್ಧಾರಕ್ಕೆ ಸಿಎಂ, ಡಿಸಿಎಂ ಬಂದಿದ್ದಾರೆ ಎನ್ನಲಾಗಿದೆ.
ಸಚಿವ ನಾಗೇಂದ್ರ ರಾಜೀನಾಮೆ ಪಡೆಯುವ ವಿಚಾರಕ್ಕೆ ಸಂಬಂಧಿಸಿ ಇಂದು ಮತ್ತೊಂದು ಸುತ್ತಿನ ಸಭೆಯನ್ನು ಸಿಎಂ ಹಾಗೂ ಡಿಸಿಎಂ ನಡೆಸಲಿದ್ದಾರೆ. ಕಾವೇರಿ ನಿವಾಸದಲ್ಲಿ 11 ಗಂಟೆ ನಂತರ ಸಿಎಂ- ಡಿಸಿಎಂ ಚರ್ಚೆ ನಡೆಸುವ ಸಾಧ್ಯತೆ ಇದೆ. ನಾಗೇಂದ್ರ ಪ್ರಕರಣ ಸಿಬಿಐಗೆ ವರ್ಗಾವಣೆಯಾದರೆ ನಾಗೇಂದ್ರ ತಲೆದಂಡ ಎಂಬ ಚರ್ಚೆ ಶುರುವಾಗಿದೆ. ರಾಜ್ಯ ಸರ್ಕಾರ CID ತನಿಖೆ ನಂತರ ಕ್ರಮ ಕೈಗೊಳ್ಳೋಣ ಎಂಬ ನಿರ್ಧಾರಕ್ಕೆ ಬಂದಿತ್ತು. ಆದ್ರೆ RBI ರೂಲ್ಸ್ ಪ್ರಕಾರ, 10 ಕೋಟಿಗೂ ಹೆಚ್ಚು ಹಣ ಅಕ್ರಮವಾಗಿ ವರ್ಗಾವಣೆಯಾದ ಹಿನ್ನೆಲೆಯಲ್ಲಿ, ಈ ಪ್ರಕರಣವನ್ನು ಸಿಬಿಐ ಕೂಡ ಕೈಗೆತ್ತಿಕೊಳ್ಳುವ ಸಾಧ್ಯತೆ ಇದೆ. ಈ ಹಿನ್ನೆಲೆಯಲ್ಲಿ, ಮುಂದಿನ ನಡೆಯ ಬಗ್ಗೆ ಇಂದು ಮತ್ತೊಂದು ಸುತ್ತಿನ ಸಭೆ ನಡೆಸಿ ತೀರ್ಮಾನ ಕೈಗೊಳ್ಳುವ ಸಾಧ್ಯತೆ ಇದೆ.
ಏನಿದು ಪ್ರಕರಣ?
ವಾಲ್ಮೀಕಿ ನಿಗಮದಲ್ಲಿ ಅವ್ಯವಹಾರ ನಡೆದಿದೆ ಎಂದು ಆರೋಪಿಸಿ ನಿಗಮದ ಅಧೀಕ್ಷಕ ಚಂದ್ರಶೇಖರ್ ಅವರು ಮೇ 26ರಂದು ಶಿವಮೊಗ್ಗದಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರು. ನಿಗಮದ 187 ಕೋಟಿ ರೂ.ಗಳನ್ನು ವಿವಿಧ ಖಾತೆಗಳಿಗೆ ವರ್ಗಾಯಿಸಲಾಗಿದೆ, ಇದರಲ್ಲಿ 88 ಕೋಟಿ ಹಣ ದುರುಪಯೋಗವಾಗಿದೆ ಎಂದು ಅವರು ಡೆತ್‌ನೋಟ್‌ನಲ್ಲಿ ಬರೆದಿದ್ದರು. ಹೀಗಾಗಿ ಎಂಡಿ ಮತ್ತು ಲೆಕ್ಕಾಧಿಕಾರಿಯನ್ನು ಅಮಾನತು ಮಾಡಲಾಗಿದೆ.
ಚಂದ್ರಶೇಖರ್ ಬರೆದಿರುವ ಡೆತ್ ನೋಟ್‌ನಲ್ಲಿ ಎಂಡಿ ಜೆ.ಜೆ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್ ಹಾಗೂ ಯೂನಿಯನ್ ಬ್ಯಾಂಕ್ ಮ್ಯಾನೇಜರ್ ಸುಚಿಸ್ಮಿತಾ ಅವರೇ ನನ್ನ ಸಾವಿಗೆ ಕಾರಣ ಎಂದು ಬರೆದಿಟ್ಟಿದ್ದರು. ಈ ಸಂಬಂಧ ವಿನೋಬನಗರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಎಂಡಿ ಜೆ.ಜೆ ಪದ್ಮನಾಭ ಹಾಗೂ ಲೆಕ್ಕಾಧಿಕಾರಿ ಪರಶುರಾಮ್‌ರನ್ನು ರಾಜ್ಯ ಸರ್ಕಾರ ಅಮಾನತುಗೊಳಿಸಿದೆ. ವಾಲ್ಮೀಕಿ ನಿಗಮಕ್ಕೆ ಪ್ರಭಾರ ವ್ಯವಸ್ಥಾಪಕ ನಿರ್ದೇಶಕರಾಗಿ ಪರಿಶಿಷ್ಟ ಪಂಗಡಗಳ ಕಲ್ಯಾಣ ಇಲಾಖೆಯ ಜಂಟಿ ನಿರ್ದೇಶಕ ಡಾ. ಕೆ. ಆರ್. ರಾಜ್ ಕುಮಾರ್ ಅವರನ್ನು ನೇಮಿಸಿದೆ.
ಪ್ರಕರಣದಲ್ಲಿ ಸರ್ಕಾರದ ಪೂರ್ವ ಅನುಮತಿ ಪಡೆದು ಬ್ಯಾಂಕ್ ಅಧಿಕಾರಿಗಳ ವಿರುದ್ಧ ಎಫ್‌ಐಆರ್ ದಾಖಲಿಸಲಾಗಿದೆ. ಯೂನಿಯನ್ ಬ್ಯಾಂಕ್ ಆಫ್ ಇಂಡಿಯಾದ ಎಂ.ಡಿ & ಸಿಇಒ ಹಾಗೂ ಎಲ್ಲಾ ನಿರ್ದೇಶಕರು ಸೇರಿ 6 ಬ್ಯಾಂಕ್ ಅಧಿಕಾರಿಗಳ ಮೇಲೆ ಎಫ್‌ಐಆರ್ ದಾಖಲಿಸಲಾಗಿದೆ. ಇನ್ನು 88 ಕೋಟಿ ದುರುಪಯೋಗ ಹಣವನ್ನು ಈಗಾಗಲೇ ಮುಖ್ಯ ಖಾತೆಗೆ ಅಧಿಕಾರಿಗಳು ವಾಪಸ್ ಪಡೆಯುತ್ತಿದ್ದಾರೆ. ಶಿವಮೊಗ್ಗ ಮತ್ತು ಬೆಂಗಳೂರಿನ ಸಿಐಡಿ ಅಧಿಕಾರಿಗಳು ಪ್ರಕರಣದ ತನಿಖೆ ಚುರುಕುಗೊಳಿಸಿದ್ದಾರೆ.
ಇದನ್ನೂ ಓದಿ: Valmiki Corporation Scam: ವಾಲ್ಮೀಕಿ ನಿಗಮದ ಹಣ ದುರ್ಬಳಕೆ ಪ್ರಕರಣ; ಎಂಡಿ, ಲೆಕ್ಕಾಧಿಕಾರಿ ಅಮಾನತು