ಮಂಗಳೂರು: ವಿದ್ಯಾರ್ಥಿಗಳು ಕುಡಿದು ಕುಣಿದ ಕುಪ್ಪಳಿಸಲು ಬಾರ್ ನೈಟ್ (Students Night) ಕಾರ್ಯಕ್ರಮ ಆಯೋಜಿಸಿದ್ದ ಬಾರ್ ಮಾಲೀಕರ ಕಾರ್ಯಕ್ರಮವನ್ನು ಪೊಲೀಸರು (Mangalore police) ಬಂದ್ ಮಾಡಿಸಿದ್ದಾರೆ. ಇದರ ವಿರುದ್ಧ ಭಾರಿ ಆಕ್ರೋಶ ವ್ಯಕ್ತವಾಗಿತ್ತು.
ʼಸ್ಟೂಡೆಂಟ್ಸ್ ವೆಡ್‌ನೆಸ್‌ಡೇ ನೈಟ್ʼ ಎಂಬ ಕಾರ್ಯಕ್ರಮವನ್ನು ಆಯೋಜಿಸಿ ವಿದ್ಯಾರ್ಥಿಗಳಿಗೆ ಮುಕ್ತ ಆಹ್ವಾನವನ್ನು ನಗರದ ದೇರೆಬೈಲ್ ಕೊಂಚಾಡಿಯಲ್ಲಿರುವ ಲಿಕ್ಕರ್ ಲಾಂಜ್ ಎಂಬ ಬಾರ್ ನೀಡಿತ್ತು. ಈ ಬಾರ್ ವಿರುದ್ಧ ಆಕ್ರೋಶ ವ್ಯಕ್ತವಾಗಿದ್ದು, ಇದೀಗ ಕಾರ್ಯಕ್ರಮವನ್ನು ಪೊಲೀಸರು ಬಂದ್ ಮಾಡಿಸಿದ್ದಾರೆ. ಅಬಕಾರಿ ಇಲಾಖೆ ಲಿಕ್ಕರ್ ಲಾಂಜ್ ವಿರುದ್ಧ ಎಫ್ಐಆರ್ ದಾಖಲಿಸಿದೆ.
ಸಂಜೆ 7 ಗಂಟೆಯಿಂದ ಮಧ್ಯರಾತ್ರಿ ವರೆಗೆ ಮದ್ಯ ಸಹಿತ ಪಾರ್ಟಿ ಕಾರ್ಯಕ್ರಮವನ್ನು ಆಯೋಜಿಸಲು ಸಮಯ ನಿಗದಿಪಡಿಸಲಾಗಿತ್ತು. ಕಾರ್ಯಕ್ರಮದಲ್ಲಿ ಆಹಾರ, ಮದ್ಯ, ಮ್ಯೂಸಿಕ್, ಮನೋರಂಜನಾ ಕಾರ್ಯಕ್ರಮಗಳಿರುವುದಾಗಿ ಪ್ರಚಾರ ಮಾಡಲಾಗಿತ್ತು. ಇಷ್ಟು ಮಾತ್ರವಲ್ಲದೆ ವಿದ್ಯಾರ್ಥಿಗಳು ಸ್ಕೂಲ್ ಐಡಿ (ಗುರುತು ಕಾರ್ಡ್) ತೋರಿಸಿದರೆ ಬಿಲ್‌ನಲ್ಲಿ ಶೇ.15ರಷ್ಟು ಕಡಿತದ ಆಫರ್ ನೀಡಲಾಗಿತ್ತು. ಈ ಇವೆಂಟ್‌ಗೆ ವಿದ್ಯಾರ್ಥಿನಿಯರು ಬಂದರೆ ಅವರಿಗೆ ಫ್ರೀ ಶೂಟರ್ಸ್ ಸ್ಪೆಷಲ್ ಆಫರ್ ನೀಡುವ ಭರವಸೆಯನ್ನು ನೀಡಲಾಗಿತ್ತು.
ಕೊಂಚಾಡಿಯ ಬಾರ್‌ನಲ್ಲಿ ಆಯೋಜಿಸಿದ ಈ ಕಾರ್ಯಕ್ರಮದ ಬಗ್ಗೆ ಸಾಮಾಜಿಕ ಜಾಲತಾಣದಲ್ಲಿ ಸುದ್ದಿ ಹರಿದಾಡುತ್ತಿದ್ದಂತೆ ಸಾರ್ವಜನಿಕರಿಂದ ಹಾಗೂ ಸಾಮಾಜಿಕ ಜಾಲತಾಣದಲ್ಲಿ ಭಾರಿ ಆಕ್ರೋಶ ವ್ಯಕ್ತವಾಗಿದೆ. ಇದನ್ನು ಗಂಭೀರವಾಗಿ ಪರಿಗಣಿಸಿದ ಕಾವೂರು ಪೊಲೀಸರು ಕಾರ್ಯಕ್ರಮವನ್ನೇ ರದ್ದುಮಾಡಿಸಿದ್ದಾರೆ.
ವಿದ್ಯಾರ್ಥಿಗಳಿಗೆ ಕಾರ್ಯಕ್ರಮಕ್ಕೆ ಆಹ್ವಾನ ನೀಡಿದ ಬಾರ್‌ನ ಮಾಲೀಕರಿಗೆ ಕಾವೂರು ಪೊಲೀಸರು ವಿಚಾರಣೆಗೆ ಹಾಜರಾಗುವಂತೆ ನೋಟೀಸ್ ನೀಡಿದ್ದಾರೆ. ಮಾತ್ರವಲ್ಲದೆ ಜಿಲ್ಲಾ ನ್ಯಾಯಾಲಯದ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್(ಎಪಿಪಿ)ಗೆ ಪತ್ರ ಬರೆದು ಈ ಘಟನೆಗೆ ಯಾವ ಸೆಕ್ಷನ್‌ನಡಿ ಪ್ರಕರಣ ದಾಖಲಿಸಬಹುದೆಂದು ಪೊಲೀಸ್ ಮೂಲಗಳು ಸಲಹೆ ಕೇಳಿದ್ದಾರೆಂದು ತಿಳಿದು ಬಂದಿದೆ. ವಿದ್ಯಾರ್ಥಿಗಳನ್ನು ಬಾರ್‌ಗೆ ಆಹ್ವಾನಿಸಿ ಸಾಮಾಜಿಕ ಜಾಲತಾಣದಲ್ಲಿ ಜಾಹೀರಾತು ಹಾಕಿದ್ದಕ್ಕಾಗಿ ಅಬಕಾರಿ ಇಲಾಖೆ ಈಗಾಗಲೇ 7 ಸಾವಿರ ರೂ. ದಂಡ ವಿಧಿಸಿದೆ. ಅಲ್ಲದೆ ಬಾರ್ ವಿರುದ್ಧ ಎಫ್ಐಆರ್ ದಾಖಲಿಸಿದೆ.
ನಾವು ಈ ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿದ್ದೇವೆ. ಜಿಲ್ಲಾ ನ್ಯಾಯಾಲಯದ ಅಸಿಸ್ಟೆಂಟ್ ಪಬ್ಲಿಕ್ ಪ್ರಾಸಿಕ್ಯೂಟರ್‌ಗೆ ಪತ್ರ ಬರೆದಿದ್ದು, ಈ ಘಟನೆಗೆ ಯಾವ ಸೆಕ್ಷನ್‌ನಡಿ ಪ್ರಕರಣ ದಾಖಲಿಸಬಹುದೆಂದು ಮಾಹಿತಿ ಕೇಳಿದ್ದೇವೆ. ಅವರ ಉತ್ತರ ಬಂದ ಕೂಡಲೇ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಾಗುವುದು ಎಂದು ಪೊಲೀಸ್ ಕಮಿಷನರ್ ಅನುಪಮ್ ಅಗರ್‌ವಾಲ್ ತಿಳಿಸಿದ್ದಾರೆ.
ಇದನ್ನೂ ಓದಿ: Atal Setu: ಅಟಲ್ ಸೇತು ಮೇಲೆ ಕಾರಿನಲ್ಲಿ ಬಂದು, ನದಿಗೆ ಹಾರಿ ಆತ್ಮಹತ್ಯೆ ಮಾಡಿಕೊಂಡ ಟೆಕ್ಕಿ; ಏನಾಗಿತ್ತು?