ಬೆಂಗಳೂರು: ಎಸ್‌ಸಿ- ಎಸ್‌ಟಿ ಸಮುದಾಯಗಳ ಒಳಮೀಸಲು (Supreme Court SC ST Quota) ಪ್ರಸ್ತಾಪವನ್ನು ಕೇಂದ್ರ ಸರ್ಕಾರದ ಹೆಗಲಿಗೆ ವರ್ಗಾಯಿಸಿ ಪಾರಾಗಲು ಮುಂದಾಗಿದ್ದ ರಾಜ್ಯ ಸರ್ಕಾರಕ್ಕೆ ಇದೀಗ ಸುಪ್ರೀಂ ಕೋರ್ಟ್ ತೀರ್ಪು ಶಾಕ್ ನೀಡಿದೆ. ಒಳಮೀಸಲು (SC ST Reservation Sub-Classification) ನೀಡುವ ಅಧಿಕಾರ ರಾಜ್ಯ ಸರ್ಕಾರಗಳಿಗೆ ಇದೆ ಎಂದು ಸುಪ್ರೀಂ ಕೋರ್ಟ್ (Supreme Court) ನೀಡಿರುವ ತೀರ್ಪಿನಿಂದಾಗಿ, ಚೆಂಡು ಮತ್ತೆ ರಾಜ್ಯ ಸರ್ಕಾರದ ಅಂಗಳದಲ್ಲಿ ಬಂದು ಬಿದ್ದಿದೆ.
ಪರಿಶಿಷ್ಟ ಜಾತಿ-ಪಂಗಡಗಳ ಮೀಸಲಾತಿಯಡಿ, ರಾಜ್ಯ ಸರ್ಕಾರಗಳಿಗೆ ಒಳಮೀಸಲು ನೀಡುವ ಅಧಿಕಾರವಿದೆಯಾ ಎಂಬ ಸೂಕ್ಷ್ಮ ಸಂಗತಿಯ ವಿಚಾರಣೆಯನ್ನು ಸರ್ವೋಚ್ಚ ನ್ಯಾಯಾಲಯದ 7 ಸದಸ್ಯರ ಪೀಠ ಕಳೆದ ವರ್ಷ ಆರಂಭಿಸಿತ್ತು.. ಕರ್ನಾಟಕವೂ ಸೇರಿದಂತೆ ಇಡೀ ದೇಶದ ಮೇಲೆ ಪರಿಣಾಮ ಬೀರುವ ಅರ್ಜಿ ವಿಚಾರಣೆಯನ್ನು, ಸರ್ವೋಚ್ಚ ನ್ಯಾಯಮೂರ್ತಿ ಡಿ.ವೈ.ಚಂದ್ರಚೂಡ್ ಅವರಿದ್ದ ಪೀಠ ಕೈಗೆತ್ತಿಕೊಂಡಿತ್ತು. ಇದೀಗ ರಾಜ್ಯ ಸರ್ಕಾರಗಳಿಗೆ ಈ ಹೊಣೆ ಹೊರಿಸಿ ಕೋರ್ಟ್ ತೀರ್ಪಿತ್ತಿದೆ.
2020ರಲ್ಲಿ ಪಂಚಸದಸ್ಯರ ಪೀಠ, ಪ್ರಕರಣವನ್ನು ಸಪ್ತಸದಸ್ಯರ ಬೃಹತ್ ಪೀಠಕ್ಕೆ ವರ್ಗಾಯಿಸಲು ಶಿಫಾರಸು ಮಾಡಿತ್ತು. ಪಂಜಾಬ್ ಸರ್ಕಾರ, ತನ್ನ ಪರಿಶಿಷ್ಟ ಜಾತಿ-ಪಂಗಡಗಳ 2006ರ ಕಾಯ್ದೆಯಡಿ, ವಾಲ್ಮೀಕಿಗಳು ಮತ್ತು ಮಝಾಬಿ ಸಿಖ್ಖರಿಗೆ ಶೇ.50 ಒಳಮೀಸಲು ನೀಡಿತ್ತು. ಈ ಹಿನ್ನೆಲೆಯಲ್ಲಿ ವಿಚಾರಣೆ ಶುರುವಾಗಿತ್ತು. ಇದರ ವಿರುದ್ಧ ಹಲವರು ಪಂಜಾಬ್ ಉಚ್ಚ ನ್ಯಾಯಾಲಯಕ್ಕೆ ಅರ್ಜಿ ಸಲ್ಲಿಸಿದ್ದರು. ಉಚ್ಚ ನ್ಯಾಯಾಲಯ ಈ ಮೀಸಲಾತಿಯನ್ನು ರದ್ದುಗೊಳಿಸಿತ್ತು. ಇದು ಅಸಾಂವಿಧಾನಿಕ, ಸಂವಿಧಾನದ 14ನೇ ವಿಧಿಯನ್ನು (ಸಮಾನತೆಯ ಹಕ್ಕು) ಉಲ್ಲಂಘಿಸುತ್ತದೆ. ಮಾತ್ರವಲ್ಲ 2004ರಲ್ಲಿ ಇ.ವಿ.ಚಿನ್ನಯ್ಯ ಮತ್ತು ಆಂಧ್ರ ಸರ್ಕಾರದ ನಡುವಿನ ಪ್ರಕರಣದಲ್ಲಿ, ಸರ್ವೋಚ್ಚ ನ್ಯಾಯಾಲಯ ನೀಡಿದ ತೀರ್ಪಿಗೆ ವಿರುದ್ಧವಾಗಿದೆ ಎಂದು ಹೇಳಿತ್ತು.
ಇದನ್ನು ಪ್ರಶ್ನಿಸಿ ಪಂಜಾಬ್ ಸರ್ಕಾರ, 2011ರಂದು ಸರ್ವೋಚ್ಚ ನ್ಯಾಯಾಲಯದ ಮೆಟ್ಟಿಲೇರಿತ್ತು. ಈ ಪ್ರಕರಣದ ವಿಚಾರಣೆ ನಡೆಸಿದ ಐವರು ಸದಸ್ಯರ ಸರ್ವೋಚ್ಚ ಪೀಠ, 7 ಸದಸ್ಯರ ವಿಸ್ತೃತ ಪೀಠಕ್ಕೆ ಅರ್ಜಿಯನ್ನು ವರ್ಗಾಯಿಸಿತ್ತು. ಕೋರ್ಟ್, ಪಂಜಾಬ್ ಸರಕಾರದ ಪರ ತೀರ್ಪು ನೀಡಿದೆ. ಅಂದರೆ, ಉಪವರ್ಗೀಕರಣ ನೀಡುವ ಅಧಿಕಾರ ರಾಜ್ಯ ಸರಕಾರಗಳಿಗೆ ಇದೆ ಎಂದರ್ಥವಾಗುತ್ತದೆ. ಇದೂ ಕರ್ನಾಟಕಕ್ಕೂ ಅನ್ವಯವಾಗುತ್ತದೆ. ಹಾಗೆಯೇ ಕೇಂದ್ರ ಸರಕಾರಕ್ಕೂ ಅನ್ವಯವಾಗಲಿದೆ.
ಕೇಂದ್ರಕ್ಕೆ ಶಿಫಾರಸು ಮಾಡಿದ ರಾಜ್ಯ ಸರಕಾರ
ಪರಿಶಿಷ್ಟ ಜಾತಿಯ ಪಟ್ಟಿಯಲ್ಲಿರುವ ವಿವಿಧ ಸಮುದಾಯಗಳಿಗೆ ಒಳ ಮೀಸಲಾತಿಯನ್ನು ಕಲ್ಪಿಸಲು ಸಂವಿಧಾನಕ್ಕೆ ತಿದ್ದುಪಡಿ ತರುವಂತೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ರಾಜ್ಯ ಸರ್ಕಾರ ಮುಂದಾಗಿತ್ತು. ಪರಿಶಿಷ್ಟ ಜಾತಿಯಲ್ಲಿ ಒಳ ಮೀಸಲಾತಿ ಕಲ್ಪಿಸಲು ರಚಿಸಲಾಗಿದ್ದ ನಿವೃತ್ತ ನ್ಯಾಯಮೂರ್ತಿ ಎ.ಜೆ. ಸದಾಶಿವ ಆಯೋಗದ ವರದಿಯನ್ನು ಜಾರಿಗೊಳಿಸಬೇಕೆಂದು ಪರಿಶಿಷ್ಟ ಎಡಗೈ ಸಮುದಾಯದ ಸಚಿವರು, ಮುಖಂಡರು ಪಟ್ಟು ಹಿಡಿದಿದ್ದರು.
ವಿಧಾನಸಭೆ ಚುನಾವಣೆ ವೇಳೆ ಕಾಂಗ್ರೆಸ್ ಅಧಿಕಾರಕ್ಕೆ ಬಂದರೆ, ಒಳ ಮೀಸಲಾತಿ ಜಾರಿ ಮಾಡಲಾಗುವುದು ಎಂದು ಪಕ್ಷದ ನಾಯಕರು ಭರವಸೆ ನೀಡಿದ್ದರು. ಕಾಂಗ್ರೆಸ್ ಪಕ್ಷ ಅಧಿಕಾರಕ್ಕೆ ಬಂದಿರುವ ಹಿನ್ನೆಲೆಯಲ್ಲಿ, ಒಳಮೀಸಲು ಬಗ್ಗೆ ಒತ್ತಡ ಹೆಚ್ಚಾಗಿತ್ತು. ʼಒಳ ಮೀಸಲಾತಿ ಕಲ್ಪಿಸಲು ರಾಜ್ಯ ಸರ್ಕಾರಗಳಿಗೆ ಯಾವುದೇ ಅಧಿಕಾರ ಇಲ್ಲ. ಕೇಂದ್ರ ಸರ್ಕಾರವು ಸಂವಿಧಾನದ 341ನೇ ವಿಧಿಗೆ ಹೊಸತಾಗಿ ಖಂಡ (3) ಸೇರಿಸಿದರೆ ಮಾತ್ರ ಪರಿಶಿಷ್ಟ ಜಾತಿಗಳಲ್ಲಿ ಒಳ ಮೀಸಲಾತಿ ಕಲ್ಪಿಸಲು ಅವಕಾಶವಿದೆ. ಒಳ ಮೀಸಲಾತಿ ಕೇಂದ್ರದ ಅಧಿಕಾರ ವ್ಯಾಪ್ತಿಯಲ್ಲಿದೆʼ ಎಂದು ರಾಜ್ಯ ಸರ್ಕಾರ ಈ ಹಿಂದೆ ಪ್ರತಿಪಾದಿಸಿತ್ತು. ಇದೀಗ ಆ ವಾದ ಬಿದ್ದುಹೋಗಲಿದೆ.
ಮಾಧುಸ್ವಾಮಿ ಸಮಿತಿ
ಹಿಂದೆ ಬಸವರಾಜ ಬೊಮ್ಮಾಯಿ ನೇತೃತ್ವದ ಬಿಜೆಪಿ ಸರ್ಕಾರವು ಒಳ ಮೀಸಲಾತಿ ಕುರಿತು ಪರಿಶೀಲಿಸಿ ಶಿಫಾರಸು ಮಾಡಲು ಅಂದಿನ ಕಾನೂನು ಸಚಿವ ಜೆ.ಸಿ ಮಾಧುಸ್ವಾಮಿ ಅಧ್ಯಕ್ಷತೆಯಲ್ಲಿ ಸಂಪುಟ ಉಪ ಸಮಿತಿ ರಚಿಸಿತ್ತು. ಒಳ ಮೀಸಲಾತಿ ಕಲ್ಪಿಸುವ ಪ್ರಕ್ರಿಯೆಯು ಪರಿಶೀಲನೆಯಲ್ಲಿರುವಾಗಲೇ 2022ರಲ್ಲಿ ‘ಕರ್ನಾಟಕ ಅನುಸೂಚಿತ ಜಾತಿಗಳು ಮತ್ತು ಅನುಸೂಚಿತ ಪಂಗಡಗಳು (ಶೈಕ್ಷಣಿಕ ಸಂಸ್ಥೆಗಳಲ್ಲಿನ ಸ್ಥಾನಗಳಲ್ಲಿ ಮತ್ತು ರಾಜ್ಯಾಧೀನ ಸೇವೆಗಳಲ್ಲಿನ ನೇಮಕಾತಿ ಅಥವಾ ಹುದ್ದೆಗಳಲ್ಲಿ ಮೀಸಲಾತಿ) ಕಾಯ್ದೆ ರೂಪಿಸಿದ ಸರ್ಕಾರ, ಪರಿಶಿಷ್ಟ ಜಾತಿಯ ಮೀಸಲಾತಿಯನ್ನು ಶೇ. 15ರಿಂದ ಶೇ. 17ಕ್ಕೆ ಹೆಚ್ಚಿಸಿತು.
ಸಂಪುಟ ಉಪ ಸಮಿತಿ 2011ರ ಜನಗಣತಿಯಂತೆ ಒಟ್ಟು 101 ಪರಿಶಿಷ್ಟ ಜಾತಿಗಳ ಜಾತಿವಾರು ಜನಸಂಖ್ಯೆಯನ್ನು ಪರಿಗಣಿಸಿ ನಾಲ್ಕು ಗುಂಪುಗಳಾಗಿ ವರ್ಗೀಕರಿಸಿ, ಒಳ ಮೀಸಲಾತಿ ಅನುಷ್ಠಾನ ಮಾಡುವಂತೆ ಸಚಿವ ಸಂಪುಟ ಸಭೆಗೆ ಶಿಫಾರಸು ಮಾಡಿತ್ತು. ಗುಂಪುಗಳ ವರ್ಗೀಕರಣ, ಶೇಕಡವಾರು ಮೀಸಲಾತಿ ನಿಗದಿಪಡಿಸಿ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಲು ಸಂಪುಟ ಸಭೆ ನಿರ್ಣಯಿಸಿತ್ತು. 2023ರ ಮಾರ್ಚ್ 28 ಮತ್ತು 31ರಂದು ಈ ಪ್ರಸ್ತಾವ ಕೇಂದ್ರಕ್ಕೆ ಸಲ್ಲಿಸಲಾಗಿತ್ತು.
ಇದನ್ನೂ ಓದಿ: Supreme Court SC ST Quota: ಪರಿಶಿಷ್ಟ ಜಾತಿ- ಪಂಗಡ ಒಳಮೀಸಲಾತಿ ಕಾನೂನುಬದ್ಧ: ಸುಪ್ರೀಂ ಕೋರ್ಟ್ ಮಹತ್ವದ ತೀರ್ಪು