| ಚೈತನ್ಯ ಹೆಗಡೆ
ಭಾರತವು ಈ ಬಾರಿ ಪುಷ್ಕಳವಾದ ಆ್ಯಪಲ್ ಬೆಳೆ ತೆಗೆದಿದೆ. ಕಾಶ್ಮೀರದಲ್ಲೋ, ಹಿಮಾಚಲದಲ್ಲೋ ಬೆಳೆಯುವ ಸೇಬಿನ ಬಗ್ಗೆ ಮಾತನಾಡುತ್ತಿಲ್ಲ. ಬದಲಿಗೆ ಭಾರತದಲ್ಲಿ ತಯಾರಿಕೆ ಆಗುತ್ತಿರುವ ಆ್ಯಪಲ್ ಫೋನುಗಳ ಬಗೆಗಿನ ವಿದ್ಯಮಾನ ಇದು.
ಈ ವಿದ್ಯಮಾನವು ಎರಡು ಅಂಶಗಳನ್ನು ವಿಜೃಂಭಿಸುತ್ತಿದೆ. ಮೊದಲನೆಯದು, ಚೀನಾದ ಹೊರತಾಗಿಯೂ ಏಷ್ಯದಲ್ಲಿ ತನ್ನ ಪೂರೈಕೆ ಜಾಲ ಇರಬೇಕು ಎಂದು ಭಾರತದಲ್ಲಿ ತನ್ನ ಬೇರುಗಳನ್ನು ಗಟ್ಟಿಗೊಳಿಸಿದ್ದ ಆ್ಯಪಲ್ ಕಂಪನಿಯ ನಿರ್ಧಾರ ಸರಿ ಇದೆ ಎಂಬುದನ್ನು ಈ ವಿದ್ಯಮಾನ ಸಾರುವ ಮೂಲಕ, ಚೀನಾದಿಂದ ತಮ್ಮ ಉತ್ಪಾದಕ ಘಟಕಗಳನ್ನು ಹಂತ-ಹಂತವಾಗಿ ಬೇರೆಡೆಗೆ ಸ್ಥಳಾಂತರಿಸಲು ಬಯಸುತ್ತಿರುವ ಪಾಶ್ಚಾತ್ಯ ಕಂಪನಿಗಳಿಗೆ, ಭಾರತವೇ ಅದಕ್ಕೆ ಪ್ರಶಸ್ತ ಸ್ಥಳ ಎಂಬುದನ್ನು ಹೇಳುತ್ತಿದೆ. ಎರಡನೆಯದಾಗಿ, 2014ರಿಂದೀಚೆಗೆ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಭಾರತ ದಾಖಲಿಸುತ್ತಿರುವ ಅತಿದೊಡ್ಡ ಯಶೋಗಾಥೆಗೆ ಈ ವಿದ್ಯಮಾನವು ಮತ್ತಷ್ಟು ಮೆರಗು ತುಂಬಿದೆ.
2023-24ರ ಆರ್ಥಿಕ ವರ್ಷದಲ್ಲಿ ಬರೋಬ್ಬರಿ 15 ಬಿಲಿಯನ್ ಡಾಲರುಗಳ ಮೊತ್ತದ ಮೊಬೈಲ್ ಫೋನ್ ರಫ್ತು ವಹಿವಾಟು ನಡೆಸಿದೆ ಭಾರತ. ಇದರಲ್ಲಿ ಭಾರತಲ್ಲಿಯೇ ಉತ್ಪಾದಿಸುತ್ತಿರುವ ಆ್ಯಪಲ್ ಐಫೋನ್ ಬ್ರ್ಯಾಂಡಿನ ಕೊಡುಗೆಯೂ ದೊಡ್ಡದಿದೆ. ಈ ಪೈಕಿ 10 ಬಿಲಿಯನ್ ಡಾಲರುಗಳ ವಹಿವಾಟು ಆ್ಯಪಲ್‌ನಿಂದಲೇ ಬಂದಿದೆ.
2014ರಲ್ಲಿ ಕೇವಲ ಎರಡು ಮೊಬೈಲ್ ಫೋನ್ ಉತ್ಪಾದನಾ ಘಟಕಗಳು ಭಾರತದಲ್ಲಿದ್ದವು. ಈಗವು 200 ದಾಟಿವೆ. ಜಗತ್ತಿನ ಎರಡನೇ ದೊಡ್ಡ ಮೊಬೈಲ್ ಫೋನ್ ಉತ್ಪಾದಕ ರಾಷ್ಟ್ರವಾಗಿ ಭಾರತ ಗುರುತಿಸಿಕೊಂಡಿದೆ. ಇಂಡಿಯಾ ಸೆಲ್ಯುಲಾರ್ ಆ್ಯಂಡ್ ಎಲೆಕ್ಟ್ರಾನಿಕ್ಸ್ ಅಸೋಸಿಯೇಶನ್ (ಐಸಿಇಎ) ವರದಿಯ ಪ್ರಕಾರ ಭಾರತದ ಮೊಬೈಲ್ ಫೋನ್ ಉತ್ಪಾದನಾ ಸಾಮರ್ಥ್ಯ ಈ ಹತ್ತು ವರ್ಷಗಳಲ್ಲಿ 21 ಪಟ್ಟು ಹೆಚ್ಚಾಗಿದೆ. 2014-15ರಲ್ಲಿ 18,900 ಕೋಟಿ ರುಪಾಯಿಗಳ ಮೌಲ್ಯದ ಮೊಬೈಲ್ ಫೋನ್ ಗಳನ್ನು ಭಾರತ ಉತ್ಪಾದಿಸಿತ್ತು. 2023-24ರ ವಿತ್ತೀಯ ವರ್ಷದಲ್ಲಿ ಈ ಸಂಖ್ಯೆ ಎಲ್ಲಿಗೆ ಹೋಗಿ ಮುಟ್ಟಿದೆ ಗೊತ್ತೇ? ಬರೋಬ್ಬರಿ 4,10,000 ಕೋಟಿ ರೂ!
ಇವತ್ತಿಗೆ ಭಾರತದಲ್ಲಿ ಬಳಕೆಯಾಗುತ್ತಿರುವ ಮೊಬೈಲ್ ಫೋನುಗಳ ಪೈಕಿ ಶೇ. 97ರಷ್ಟು ಭಾರತದಲ್ಲೇ ತಯಾರಾದಂಥವುಗಳು. ಇವತ್ತು ಮೊಬೈಲ್ ಫೋನ್ ರಫ್ತು 15 ಬಿಲಿಯನ್ ಡಾಲರುಗಳ ಮೌಲ್ಯದ್ದಾಗಿ ಬೆಳೆಸಿರುವ ಭಾರತ 2014-15ರ ವೇಳೆಗೆ ರಫ್ತು ಮಾಡಿದ್ದ ಮೊಬೈಲ್ ಫೋನ್ ಮೌಲ್ಯ 1,556 ಕೋಟಿ ರೂ. ಮಾತ್ರ.
ನಿಮ್ಮ ಕೈಯಲ್ಲಿ ಹಿಡಿದಿರುವ ಮೊಬೈಲ್ ಫೋನ್ ವಿದೇಶಿ ಕಂಪನಿಯದ್ದೇ ಆಗಿರಬಹುದು. ಆ್ಯಪಲ್, ಸ್ಯಾಮ್ಸಂಗ್, ಒಪ್ಪೊ, ವಿವೊ, ಶಾಮಿ ಹೀಗೆ ಫೋನ್ ಯಾವುದೇ ಆಗಿದ್ದರೂ ಉತ್ಪಾದನೆ ಭಾರತದಲ್ಲೇ ಆಗಿರುತ್ತದೆ. ಈ ಹಂತದಲ್ಲಿ ಒಂದು ಪ್ರಶ್ನೆ ಹಲವರು ಕೇಳುವುದಿದೆ. ಇವೆಲ್ಲ ಏನೇ ಇದ್ದರೂ ಭಾರತದ್ದೇ ಒಂದು ಮೊಬೈಲ್ ಫೋನ್ ಉತ್ಪಾದನೆಯ ಬ್ರ್ಯಾಂಡ್ ಇಲ್ಲವಲ್ಲ ಎಂದು. ಅದು ಸೆಲ್ ಫೋನ್ ಉತ್ಪಾದನೆ ಇದ್ದಿರಬಹುದು, ಕಾರು ಇಲ್ಲವೇ ಮತ್ಯಾವುದೇ ತಂತ್ರಜ್ಞಾನ ಒಳಗೊಂಡ ಉತ್ಪಾದನೆಯೇ ಇದ್ದಿರಬಹುದು…ದೇಶವೊಂದು ಹಂತ-ಹಂತಗಳಲ್ಲಿ ಒಂದು ವಲಯವನ್ನು ತನ್ನದಾಗಿಸಿಕೊಳ್ಳುತ್ತದೆ. ಉದಾಹರಣೆಗೆ, ಮೊಬೈಲ್ ಉತ್ಪಾದನೆಯನ್ನೇ ತೆಗೆದುಕೊಂಡರೆ, ಆ ಕೌಶಲವನ್ನು ಅದಾಗಲೇ ಸಿದ್ಧಿಸಿಕೊಂಡಿರುವ ಕಂಪನಿಗಳು ಭಾರತದಲ್ಲೇ ಉತ್ಪಾದನೆ ಮಾಡುವಂತೆ ಮಾಡುವುದು ಮೊದಲ ಹೆಜ್ಜೆ. ಆ ಕಂಪನಿಗಳು ಇಲ್ಲಿ ಬಂದು ಉದ್ಯೋಗ ಸೃಷ್ಟಿಸುತ್ತವೆ. ಆ ಕೌಶಲಗಳನ್ನು ತಮ್ಮದಾಗಿಸಿಕೊಂಡ ಭಾರತೀಯ ಕೆಲಸಗಾರರ ಪ್ರತಿಭಾಪುಂಜವೊಂದು ಸಿದ್ಧಗೊಳ್ಳುತ್ತದೆ. ಮೊಬೈಲ್ ಫೋನ್ ಸಿದ್ಧಪಡಿಸಲು ಬೇಕಾಗುವ ಯಂತ್ರಗಳು ಭಾರತಕ್ಕೆ ಬರುತ್ತವೆ. ಅದಕ್ಕೆ ಬೇಕಾದ ಕಚ್ಚಾವಸ್ತುಗಳ ಪೂರೈಕೆ ಜಾಲವೊಂದು ಜಗತ್ತಿನ ನಾನಾ ಕಡೆಗಳಿಂದ ಭಾರತಕ್ಕೆ ಮುಖಮಾಡುತ್ತದೆ. ಹೀಗೆಲ್ಲ ಆದ ನಂತರದಲ್ಲಿ ಭಾರತೀಯ ಕಂಪನಿಗಳೇ ತಯಾರಿಕೆಗಳಲ್ಲಿ ಮುಂದೆ ಬರುವುದಕ್ಕೆ ಅನುಕೂಲಕರ ವಾತಾವರಣ ಹುಟ್ಟುತ್ತದೆ. ಚೀನಾದಂಥ ದೇಶಗಳು ಅಲ್ಲಿನ ಏಕೀಕೃತ ರಾಜಕೀಯ ವ್ಯವಸ್ಥೆ ರೂಪಿಸಿಕೊಂಡು ಈ ಪ್ರಕ್ರಿಯೆಯನ್ನು ವೇಗಗೊಳಿಸಿದ ಹಾಗೆ ನಮ್ಮ ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿ ತ್ವರಿತಗೊಳಿಸಲಾಗುವುದಿಲ್ಲ.
ಅದೇನೇ ಇರಲಿ. ಮೊಬೈಲ್ ಫೋನ್ ತಯಾರಿಕಾ ವಲಯವು ಭಾರತದಲ್ಲಿ ಬೃಹತ್ ಆಗಿ ಅಭಿವೃದ್ಧಿ ಹೊಂದಿದ ಪರಿಣಾಮವಾಗಿ ಅದು ಕನಿಷ್ಠ 10 ಲಕ್ಷ ಉದ್ಯೋಗಗಳನ್ನು ಸೃಷ್ಟಿಸಿತು. ಆ್ಯಪಲ್ ಕಂಪನಿಯೊಂದೇ ಸುಮಾರು 1 ಲಕ್ಷ ಉದ್ಯೋಗಗಳನ್ನು ಭಾರತದಲ್ಲಿ ತನ್ನ ಉತ್ಪಾದನಾ ಚಟುವಟಿಕೆಯಿಂದ ಸೃಜಿಸಿತು.
ಇದನ್ನೂ ಓದಿ: Indian Navy Power: ಸೊಮಾಲಿಯಾದ ಕಡಲ್ಗಳ್ಳರನ್ನು ಬಗ್ಗುಬಡಿದು ಜಗತ್ತಿಗೆ ಸಂದೇಶ ನೀಡಿದೆ ಭಾರತದ ಕ್ಷಾತ್ರ!
2017ರಲ್ಲಿ ಕೇಂದ್ರ ಸರ್ಕಾರವು ಪೇಸ್ಡ್ ಮನುಫ್ಯಾಕ್ಟರಿಂಗ್ ಪ್ರೊಗ್ರಾಂ ಅಡಿಯಲ್ಲಿ ಮೊಬೈಲ್ ಫೋನಿಗೆ ಸಂಬಂಧಿಸಿದ ಹೆಡ್ಸೆಟ್, ಚಾರ್ಜರ್, ಸರ್ಕಿಟ್ ಬೋರ್ಡ್ ಇತ್ಯಾದಿಗಳಿಗೆ ದೇಸಿ ಉತ್ಪಾದನೆಗೆ ಪೂರಕವಾಗುವಂತೆ ಅವಕ್ಕೆ ಬೇಕಾದ ಕಚ್ಚಾವಸ್ತುಗಳ ಸುಂಕಗಳನ್ನು ಪರಿಷ್ಕರಿಸಿತು. ಭಾರತದಲ್ಲೇ ಮೊಬೈಲ್ ಫೋನ್ ತಯಾರಿಕೆ ಘಟಕಗಳನ್ನು ಇಟ್ಟುಕೊಳ್ಳುವುದು ಕಂಪನಿಗಳಿಗೆ ಆಕರ್ಷಕವಾಗುವಂತೆ ಮಾಡಲಾಯಿತು. ಮುಂದಿನ ಹಂತದಲ್ಲಿ, 2021-22ರಲ್ಲಿ ಮೊಬೈಲ್ ಫೋನ್ ಉತ್ಪಾದನೆಯಲ್ಲಿ ಪಿ ಎಲ್ ಐ ಸ್ಕೀಮ್, ಅಂದರೆ ಉತ್ಪಾದನೆ ಆಧರಿತ ಉತ್ತೇಜನ ವ್ಯವಸ್ಥೆಯನ್ನು ಅನುಷ್ಠಾನಗೊಳಿಸಿತು. ಹೆಸರೇ ಹೇಳುವಂತೆ ಉತ್ಪಾದನೆ ಹೆಚ್ಚಿಸಿಕೊಂಡಷ್ಟೂ ಕಂಪನಿಗಳಿಗೆ ಇಲ್ಲಿ ಹಣಕಾಸು ಲಾಭಗಳು ದೊರೆಯುತ್ತವೆ. ಸ್ಯಾಮ್ಸಂಗ್, ವಿಸ್ತ್ರಾನ್, ಫಾಕ್ಸಕಾನ್ ಇತ್ಯಾದಿ ಕಂಪನಿಗಳು ಈ ಪಿ ಎಲ್ ಐ ಯೋಜನೆಯಡಿ ಬಂದಿವೆ. ಐದು ವರ್ಷಗಳ ಅವಧಿಯಲ್ಲಿ, ಮೊಬೈಲ್ ಫೋನುಗಳ ಉತ್ಪಾದನೆ ವಿಭಾಗಲ್ಲಿ ಇದರಿಂದ ಎರಡು ಲಕ್ಷ ನೇರ ಉದ್ಯೋಗಗಳು ಹಾಗೂ 6 ಲಕ್ಷ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗುವ ಅಂದಾಜಿದೆ.
ಇದನ್ನೂ ಓದಿ: Pak Afghan Conflict: ಸಡಿಲವಾಯ್ತು ಆಫ್ಘಾನ್‌ನೊಂದಿಗಿನ ಪಾಕ್ ಸಖ್ಯ, ತಾಲಿಬಾನಿಗಳಿಗೂ ಈಗ ಭಾರತವೇ ಮುಖ್ಯ!
ಈ ವಿತ್ತೀಯ ವರ್ಷದಲ್ಲಿ ಆ್ಯಪಲ್ ಕಂಪನಿಯ ಚೀನಾ ಘಟಕದಿಂದ ಆಗುತ್ತಿರುವ ಸಾಗಣೆಯಲ್ಲಿ ಕುಸಿತ ಕಂಡಿದ್ದರೆ, ಭಾರತದಲ್ಲಿ ಮಾತ್ರ ಏರಿಕೆ ಕಂಡಿರುವುದು ಗಮನಾರ್ಹ. ಭಾರತದಲ್ಲಿ ಯಾವುದೇ ಕಂಪನಿಗೆ ಆಗುವ ಶ್ರೇಯೋವೃದ್ಧಿ ಅದು ಇಲ್ಲಿ ತನ್ನ ಹೂಡಿಕೆಯನ್ನು ಇನ್ನಷ್ಟು ಹೆಚ್ಚಿಸುವುದಕ್ಕೆ, ಆರ್ಥಿಕ ಚಟುವಟಿಕೆಯಲ್ಲಿ ಮತ್ತಷ್ಟು ತೊಡಗಿಕೊಳ್ಳುವುದಕ್ಕೆ ಕಾರಣವಾಗುತ್ತದೆ. ಉದಾಹರಣೆಗೆ, ಆ್ಯಪಲ್ ಅದಾಗಲೇ ತನ್ನ ಫೋನಿನಲ್ಲಿ ಬಳಸುವ ಕೆಮರಾ ವ್ಯವಸ್ಥೆಯನ್ನು ಸಂಪೂರ್ಣವಾಗಿ ಭಾರತದಲ್ಲೇ ರೂಪಿಸುವುದಕ್ಕೆ ಟಾಟಾದ ಟೈಟಾನ್ ಸಮೂಹ ಹಾಗೂ ಮುರುಗಪ್ಪ ಸಮೂಹಗಳೊಂದಿಗೆ ಮಾತುಕತೆಯಲ್ಲಿರುವುದಾಗಿ ವರದಿಯಾಗಿದೆ. ಮೊಬೈಲ್ ಫೋನ್ ವಹಿವಾಟು ಎಂದಷ್ಟೇ ಅಲ್ಲದೇ, ಭಾರತದಲ್ಲಿ ನವೀಕೃತ ಇಂಧನ ಮೂಲಗಳ ವಿಸ್ತರಣೆಗೆ ಸಹಕರಿಸಿ ಇಂಗಾಲ ವಿಸರ್ಜನೆ ತಗ್ಗಿಸಿದ ಶ್ರೇಯಸ್ಸು ಪಡೆಯುವುದಕ್ಕಾಗಿ ಆ್ಯಪಲ್ ಕಂಪನಿಯು ಕ್ಲೀನ್ ಮ್ಯಾಕ್ಸ್ ಎಂಬ ನವೀಕೃತ ಇಂಧನಕ್ಕೆ ಸಂಬಂಧಿಸಿದ ಉದ್ದಿಮೆ ಜತೆ ಕೈಜೋಡಿಸಿದೆ. ಭಾರತದಾದ್ಯಂತ 6 ಕೈಗಾರಿಕಾ ಘಟಕಗಳ ಮೇಲೆ ಸೌರಫಲಕಗಳನ್ನು ಅಳವಡಿಸಿ, 14.4 ಮೆಗಾವ್ಯಾಟ್ ಸೌರ ವಿದ್ಯುತ್ ಉತ್ಪಾದನೆ ಸಾಮರ್ಥ್ಯವನ್ನು ಈ ಪ್ರಯತ್ನ ಹುಟ್ಟು ಹಾಕಿದೆ.
ಮೊಬೈಲ್ ಫೋನುಗಳ ಉತ್ಪಾದನೆ ಮತ್ತು ವಹಿವಾಟುಗಳಲ್ಲಿ ಆಗುತ್ತಿರುವ ಈ ಅಭಿವೃದ್ಧಿ ಭಾರತದ ಒಟ್ಟಾರೆ ಎಲೆಕ್ಟ್ರಾನಿಕ್ ವಲಯಕ್ಕೆ ಹೊಸ ಸಾಮರ್ಥ್ಯ ಕೊಟ್ಟಿದೆ. ಮೊಬೈಲ್ ಫೋನುಗಳ ರಫ್ತಿನಲ್ಲಾಗಿರುವ ಹೆಚ್ಚಳವು ಒಟ್ಟಾರೆ ಭಾರತದ ಎಲೆಕ್ಟ್ರಾನಿಕ್ಸ್ ವಲಯದಲ್ಲೂ ಬಿಂಬಿಸಿದೆ. ಹಿಂದಿನ ವಿತ್ತೀಯ ವರ್ಷದಲ್ಲಿ 23.55 ಬಿಲಿಯನ್ ಡಾಲರುಗಳ ಮೌಲ್ಯದ ಎಲೆಕ್ಟ್ರಾನಿಕ್ಸ್ ರಫ್ತಾಗಿದ್ದರೆ ಈ ಬಾರಿ ಅದು 29.12 ಬಿಲಿಯನ್ ಡಾಲರುಗಳಿಗೆ ಹೆಚ್ಚಳವಾಗಿದೆ.
ಇದನ್ನೂ ಓದಿ: Narendra Modi: ಟ್ವಿಟರ್-ವಾಟ್ಸಾಪ್ ಹಳೇದಾಯ್ತು; ಈ ಬಾರಿ ಮೋದಿ ಚುನಾವಣೆ ಪ್ರಚಾರಕ್ಕೆ ʼಭಾಷಿಣಿʼಯ ಬಲ!
ಮೇಕ್ ಇನ್ ಇಂಡಿಯಾ ಕೆಲಸ ಮಾಡುತ್ತಿದೆಯಾ ಎಂದು ಕೇಳುವವರು ನೋಡಲೇಬೇಕಾದ ಯಶೋಗಾಥೆ ಭಾರತದ ಮೊಬೈಲ್ ಫೋನುಗಳ ಉತ್ಪಾದನೆಯದ್ದು.