ಮೈಸೂರು: ಕೇಂದ್ರ ಸಚಿವರೇ (Union minister) ವಿಶ್ರಾಂತಿಗಾಗಿ ಬಂದರೂ ಬಾಗಿಲು ಬೀಗ ತೆಗೆಯದೆ ಅಧಿಕಾರಿಗಳು ಅವಮಾನ (insult) ಮಾಡಿ ಕಳಿಸಿದ ಘಟನೆ ನಂಜನಗೂಡಿನಲ್ಲಿ (Nanjanagudu) ನಡೆದಿದೆ. ಕೇಂದ್ರ ಸಚಿವ, ಜೆಡಿಎಸ್ ಮುಖಂಡ ಎಚ್‌ಡಿ ಕುಮಾರಸ್ವಾಮಿ (HD Kumaraswamy) ಅವರು ಇಂದು ನಂಜನಗೂಡು ಪ್ರವಾಸದಲ್ಲಿದ್ದು, ಕೆಲ ನಿಮಿಷಗಳ ವಿಶ್ರಾಂತಿಗಾಗಿ ನಂಜನಗೂಡು ಪ್ರವಾಸಿ ಮಂದಿರಕ್ಕೆ (Tourist Guesthouse) ತೆರಳಿದ್ದರು.
ಕೇಂದ್ರ ಸಚಿವರ ಭೇಟಿ ವಿಚಾರವನ್ನು ಪ್ರವಾಸಿ ಮಂದಿರದ ಅಧಿಕಾರಿಗಳಿಗೆ ಸಾಕಷ್ಟು ಮೊದಲೇ ತಿಳಿಸಲಾಗಿತ್ತು. ಈ ಬಗ್ಗೆ ಪ್ರವಾಸ ಪಟ್ಟಿಯನ್ನೂ ಸಚಿವಾಲಯದ ಅಧಿಕಾರಿಗಳು ಬಿಡುಗಡೆ ಮಾಡಿದ್ದರು. ಆದರೆ ಎಚ್‌ಡಿಕೆ ತೆರಳುವ ಹೊತ್ತಿಗೆ ಪ್ರವಾಸಿ ಮಂದಿರದ ಬಾಗಿಲಿಗೆ ಬೀಗ ಹಾಕಲಾಗಿತ್ತು. ಯಾರೂ ಅಧಿಕಾರಿಗಳು ಸ್ಥಳದಲ್ಲಿರಲಿಲ್ಲ.
10 ನಿಮಿಷಕ್ಕೂ ಅಧಿಕ ಸಮಯ ಕಾದರೂ ಯಾವುದೇ ಸಿಬ್ಬಂದಿ ಬಾಗಿಲು ತೆಗೆಯಲು ಬರಲಿಲ್ಲ. ಈ ಸಂದರ್ಭದಲ್ಲಿ ಎಚ್‌ಡಿಕೆ ಕಾರಿನಲ್ಲೇ ಕುಳಿತಿದ್ದರು. ಜೊತೆಗೆ ಮಾಜಿ ಸಚಿವ ಸಾ.ರಾ.ಮಹೇಶ್ ಅವರೂ ಇದ್ದರು. ಕಾದು ಸುಸ್ತಾದ ಎಚ್‌ಡಿ ಕುಮಾರಸ್ವಾಮಿ ಬಳಿಕ ಅಲ್ಲಿಂದ ತೆರಳಿದರು.
ಈ ಬಗ್ಗೆ ಸಾ.ರಾ ಮಹೇಶ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಕೇಂದ್ರ ಸಚಿವರು ಬಂದರೂ ಬಾಗಿಲು ತೆರೆಯದೆ ಇರುವುದರ ಹಿಂದೆ ರಾಜ್ಯ ಸರಕಾರದ ಚಿತಾವಣೆ ಇದೆ. ಅವಮಾನ ಮಾಡುವ ಉದ್ದೇಶಕ್ಕಾಗಿಯೇ ಹೀಗೆ ಮಾಡಲಾಗಿದೆ ಎಂದು ಜೆಡಿಎಸ್ ಮುಖಂಡರು ಆರೋಪಿಸಿದ್ದಾರೆ.
ʼಸಮಯ ಬಂದಾಗ ಮಿಲಿಟರಿಯನ್ನೂ ತರುತ್ತೇವೆʼ ಎಂದ ಎಚ್‌ಡಿಕೆ
ಹಾಸನ: ʼʼನಾನು ಅಂಕೋಲಾಕ್ಕೆ ಭೇಟಿ ನೀಡಿದ ವಿಚಾರ ಮುಂದಿಟ್ಟುಕೊಂಡು ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್ (DK Shivakumar) ಅವರು, ಕುಮಾರಸ್ವಾಮಿ ಇಲ್ಲಿ ಏಕೆ ಬರ್ತಾರೆ, ಮಿಲಿಟರಿ ಕರೆದುಕೊಂಡು ಬಂದಿದ್ದಾರಾ? ಎಂದು ಪ್ರಶ್ನಿಸಿದ್ದಾರೆ. ಅವರು ಏಕೆ ಆ ರೀತಿ ಹೇಳಿಕೆ ಕೊಟ್ಟರು ಅಂತ ಯೋಚನೆ ಮಾಡಿದೆ. ಈ ರಾಜ್ಯದಲ್ಲಿ ನಡೆಯುತ್ತಿರುವ ದರೋಡೆಯನ್ನು ನಿಲ್ಲಿಸಲು ಮಿಲಿಟರಿ ಕರೆದುಕೊಂಡು ಬನ್ನಿ ಎಂದಿದ್ದಾರೆ. ಅದಕ್ಕೊಂದು ಕಾಲ ಬರುತ್ತೆ, ಆಗ ಕರೆದುಕೊಂಡು ಬರೋಣʼʼ ಎಂದು ಕೇಂದ್ರ ಸಚಿವ ಎಚ್.ಡಿ.ಕುಮಾರಸ್ವಾಮಿ (HD Kumaraswamy) ತಿರುಗೇಟು ನೀಡಿದರು.
ಮಳೆಯಿಂದ ಹಾನಿಗೊಳಗಾದ ಪ್ರದೇಶಗಳ ವೀಕ್ಷಣೆಗೆ ಹಾಸಕ್ಕೆ ಆಗಮಿಸಿದ ಅವರು ಕಾಂಗ್ರೆಸ್ ಮತ್ತು ಡಿ.ಕೆ.ಶಿವಕುಮಾರ್ ವಿರುದ್ಧ ವಾಗ್ದಾಳಿ ನಡೆಸಿದರು. ಶನಿವಾರ ಅಂಕೋಲಾಕ್ಕೆ ಎಚ್.ಡಿ ಕುಮಾರಸ್ವಾಮಿ ಭೇಟಿ ವಿಚಾರಕ್ಕೆ ಪ್ರತಿಕ್ರಿಯಿಸಿದ್ದ ಡಿಕೆಶಿ, ʼʼಮಿಲಿಟರಿ ಕರೆದುಕೊಂಡು ಇಳಿದಿದ್ದರೆ ಎಚ್‌ಡಿಕೆ ಫೀಲ್ಡಿಗೆ ಬಂದಿದ್ದಾರೆ ಅಂತ ಹೇಳಬಹುದು. ಸುಮ್ಮನೇ ವಿಸಿಟ್ ಮಾಡಿ ಬಂದರೆ ಏನಾದ್ರೂ ಆಗುತ್ತಾ? ಒಂದೇ ಗಂಟೆಯಲ್ಲಿ ನಮ್ಮ ಕ್ಯಾಬಿನೆಟ್ ಸಚಿವರನ್ನು ಅಲ್ಲಿಗೆ ಓಡಿಸಿದ್ದೇವೆ. ಮಂಕಾಳ್ ವೈದ್ಯ, ಕೃಷ್ಣಬೈರೇಗೌಡ ಅಲ್ಲಿಗೆ ಹೋಗಿದ್ದರು. ಏನೇನು ಮಾಡಬೇಕೊ ಅದನ್ನು ಮಾಡಿದ್ದಾರೆ, ಅಧಿಕಾರಿಗಳಿಗೆ ಸೂಚನೆ ಕೊಟ್ಟಿದ್ದಾರೆ. ನಮ್ಮ ಸರ್ಕಾರ ಏನು ಮಾಡಬೇಕೋ ಅದನ್ನು ಮಾಡುತ್ತದೆ. ಈಗ ರಾಜಕಾರಣ ಬೇಡ, ಜನರನ್ನು ಉಳಿಸಿಕೊಳ್ಳುವ ಕೆಲಸ ಮಾಡೋಣʼʼ ಎಂದು ತಿಳಿಸಿದ್ದರು.
ʼʼಡಿಕೆಶಿ ಪಾಪ ಕನಕಪುರದವರು. ಬ್ರ್ಯಾಂಡ್ ಬೆಂಗಳೂರು ಮಾಡುತ್ತೇನೆ ಎಂದು ಹೇಳುತ್ತಾರೆ. ಇನ್ನು ಕುಮಾರಸ್ವಾಮಿ 39 ಸೀಟ್ ಗೆದ್ದರೂ ಮುಖ್ಯಮಂತ್ರಿ ಮಾಡಿದ್ವಿ, ದೇವೇಗೌಡರು 16 ಸೀಟ್ ಗೆದ್ದರು ಪ್ರಧಾನಮಂತ್ರಿ ಮಾಡಿದ್ವು ಎಂದು ಕಾಂಗ್ರೆಸ್‌ನವರು ಹೇಳುತ್ತಾರೆ. ಅದರ ಜತೆಗೆ ಸರ್ಕಾರವನ್ನು ತೆಗೆದವರು ಯಾರು ಎನ್ನುವುದನ್ನೂ ಹೇಳಬೇಕಲ್ವಾ?ಕಾಂಗ್ರೆಸ್ ಮನೆ ಬಾಗಿಲಿಗೆ ನಾನು, ದೇವೇಗೌಡರು ಬಂದಿದ್ವಾ? ಅದೂ ಅಲ್ಲದೆ ದೇವೇಗೌಡರನ್ನು ಪ್ರಧಾನಮಂತ್ರಿ ಮಾಡಿದ್ದು ಕಮ್ಯೂನಿಸ್ಟ್ ಹಾಗೂ ಇತರರು. ಒಬ್ಬ ಕನ್ನಡಿಗನನ್ನು ತೆಗೆದವರು ಯಾರು? ನಾನು ಏನು ತಪ್ಪು ಮಾಡಿದೆ ಅಂತ ಸರ್ಕಾರ ತೆಗೆದರು?ʼʼ ಎಂದು ಎಚ್‌ಡಿಕೆ ಕಾಂಗ್ರೆಸ್ ಅನ್ನು ತರಾಟೆಗೆ ತೆಗೆದುಕೊಂಡರು.
ʼʼದಲಿತರು ಅಂತ ಕರೆಯಬೇಡಿ ಎಂದು ಚರ್ಚೆ ನಡೆದಿದೆ. ಅಹಿಂದ ಅಂತಾ ಎಷ್ಟು ವರ್ಷದಿಂದ ಹೆಸರು ಇಟ್ಟುಕೊಂಡಿದ್ದೀರಾ? ಅಹಿಂದ ಹೆಸರು ಇಟ್ಟುಕೊಂಡು ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡದವರಿಗೆ ಅವಮಾನ ಮಾಡುತ್ತಿದ್ದೀರ. ಅವರಿಗೆ ಮೀಸಲಿಟ್ಟಿದ್ದ ಹಣ ಉಪಯೋಗಿಸಿಕೊಂಡಿದ್ದೀರಿʼʼ ಎಂದು ರಾಜ್ಯ ಸರ್ಕಾರದ ವಿರುದ್ಧ ಗುಡುಗಿದರು.