ಮೈಸೂರು: ಬಿಜೆಪಿಯ ಹಿರಿಯ ನಾಯಕ, ಚಾಮರಾಜನಗರ ಸಂಸದ ಶ್ರೀನಿವಾಸ ಪ್ರಸಾದ್ (V Srinivas Prasad) ಅವರು ಮಣ್ಣಲ್ಲಿ ಮಣ್ಣಾಗಿದ್ದಾರೆ. ನಗರದ ಅಶೋಕಪುರಂ ಬಳಿಯಿರುವ ಡಾ.ಬಿ.ಆರ್.ಅಂಬೇಡ್ಕರ್ ಟ್ರಸ್ಟ್ ಆವರಣದಲ್ಲಿ ಸಕಲ ಸರ್ಕಾರಿ ಗೌರವಗಳೊಂದಿಗೆ, ಬೌದ್ಧ ಧರ್ಮ ಸಂಪ್ರದಾಯದಂತೆ ಮಂಗಳವಾರ ಅಂತ್ಯಕ್ರಿಯೆ ನೆರವೇರಿತು. ಬಾರದ ಲೋಕಕ್ಕೆ ಪ್ರಯಾಣ ಬೆಳೆಸಿದ ಸ್ವಾಭಿಮಾನಿ ಚಕ್ರವರ್ತಿಯ ನೆನೆದು ಕುಟುಂಬಸ್ಥರು ಸೇರಿ ಸಾವಿರಾರು ಅಭಿಮಾನಿಗಳು ಕಣ್ಣೀರಿಟ್ಟರು.
ಅಂತ್ಯ ಸಂಸ್ಕಾರಕ್ಕೂ ಮುನ್ನ ಶ್ರೀನಿವಾಸ ಪ್ರಸಾದ್ ಅವರಿಗೆ ಜಿಲ್ಲಾಧಿಕಾರಿ ಡಾ.ಕೆ.ವಿ.ರಾಜೇಂದ್ರ, ಪೊಲೀಸ್ ಕಮಿಷನರ್ ರಮೇಶ್ ಬಾನೋತ್ ಅವರಿಂದ ಸರ್ಕಾರಿ ಗೌರವ ಸಲ್ಲಿಕೆ ಮಾಡಲಾಯಿತು. ಇದೇ ವೇಳೆ ರಾಷ್ಟ್ರಗೀತೆ ನುಡಿಸಿ, ಗಾಳಿಯಲ್ಲಿ ಗುಂಡು ಹಾರಿಸಿ ಪೊಲೀಸರುಗೌರವ ಸಲ್ಲಿಸಿದರು. ಶ್ರೀನಿವಾಸ್ ಪ್ರಸಾದ್ ಪತ್ನಿಗೆ ಜಿಲ್ಲಾಧಿಕಾರಿಗಳು ರಾಷ್ಟ್ರ ಧ್ವಜ ಹಸ್ತಾಂತರ ಮಾಡಿದರು. ನಂತರ ಬೆಂಗಳೂರಿನ ಮಹಾಬೋದಿಯ ಶ್ರೀ ಆನಂದ ಬಂತೇಜಿ, ಮೈಸೂರಿನ ವಿಶ್ವಮೈತ್ರಿ ಬುದ್ಧ ವಿಹಾರದ ಶ್ರೀ ಕಲ್ಯಾಣಸಿರಿ ಬಂತೇಜಿ ನೇತೃತ್ವದಲ್ಲಿ ಅಂತಿಮ ವಿಧಿವಿಧಾನ ನಡೆಯಿತು. ಸುಮಾರು 15ಕ್ಕೂ ಹೆಚ್ಚು ಬೌದ್ಧ ಬಿಕ್ಕುಗಳಿಂದ ಪ್ರಾರ್ಥನೆ ಸಲ್ಲಿಸಲಾಯಿತು.
ಬಂತೇಜಿಗಳಿಂದ ಬುದ್ಧವಂದನ, ದಮ್ಮವಂದನ, ಸಂಘ ವಂದನ, ಎಲ್ಲಾ ಜನರಿಗೆ ತ್ರಿಸರಣ, ಪಂಚಶೀಲ ಬೋಧನೆ, ಬಂತೇಜಿಗಳಿಂದ ರತನ ಸೂತ್ರ ಪಠಣ, ಎಲ್ಲ ಜನರಿಂದ ಧ್ಯಾನ ಪಠಣ, ತಿರೋಕುಡ್ಡ ಸೂತ್ರ ಪಠಣ, ಬೌದ್ಧ ಬಂತೇಜಿಗಳಿಗೆ ವಸ್ತ್ರದಾನ, ಹಣ್ಣುಗಳ ಅರ್ಪಣೆ, ನೀರು ಸುರಿಸಿ ಪುಣ್ಯಾನುಮೋದನೆ, ಕುಟುಂಬಸ್ಥರು ಗೌರವ ಸಲ್ಲಿಸಿದ ಬಳಿಕ ದೇಹ ಗುಂಡಿಗಿಳಿಸಿ ಮಂತ್ರ ಪಠಣ ಸೇರಿ ಹಲವು ವಿಧಿ ವಿಧಾನ ನಡೆಯಿತು.
ಇದಕ್ಕೂ ಮೊದಲು ಸೋಮವಾರ ಇಡೀ ರಾತ್ರಿ ಅಶೋಕಪುರಂ ಸರ್ಕಾರಿ ಪ್ರೌಢಶಾಲೆ ಆವರಣದಲ್ಲಿ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿತ್ತು. ಮಂಗಳ ಮಧ್ಯಾಹ್ನ ಅಶೋಕಪುರಂನ ಪ್ರಮುಖ ರಸ್ತೆಗಳಲ್ಲಿ ಸಾವಿರಾರು ಬೆಂಬಲಿಗರು, ಕಾರ್ಯಕರ್ತರ ಸಮ್ಮುಖದಲ್ಲಿ ಮೆರವಣಿಗೆ ನಡೆಸಲಾಯಿತು. ಬಳಿಕ ಅಶೋಕಪುರಂ ಬಳಿಯಿರುವ ಡಾ.ಬಿ.ಆರ್.ಅಂಬೇಡ್ಕರ್ ಟ್ರಸ್ಟ್ ಆವರಣದಲ್ಲಿ ಅಂತ್ಯ ಸಂಸ್ಕಾರ ನಡೆಸಲಾಯಿತು.
ಇದನ್ನೂ ಓದಿ | M P Rudramba: ಮಾಜಿ ಡಿಸಿಎಂ ದಿವಂಗತ ಎಂ.ಪಿ. ಪ್ರಕಾಶ್ ಧರ್ಮ ಪತ್ನಿ ರುದ್ರಾಂಬಾ ನಿಧನ
ಅಂತ್ಯಕ್ರಿಯೆಯಲ್ಲಿ ಜಿಲ್ಲಾ ಉಸ್ತುವಾರಿ ಸಚಿವ ಡಾ.ಎಚ್.ಸಿ.ಮಹದೇವಪ್ಪ, ಸಂಸದ ಪ್ರತಾಪ್ ಸಿಂಹ, ಶಾಸಕರಾದ ಟಿ.ಎಸ್.ಶ್ರೀವತ್ಸ, ಎ.ಆರ್.ಕೃಷ್ಣಮೂರ್ತಿ, ಮಾಜಿ ಸಚಿವ ಎನ್.ಮಹೇಶ್, ಮಾಜಿ ಶಾಸಕ ಎಲ್.ನಾಗೇಂದ್ರ, ಚಾಮರಾಜನಗರ ಕಾಂಗ್ರೆಸ್ ಅಭ್ಯರ್ಥಿ ಸುನೀಲ್ ಬೋಸ್, ಎಚ್.ವಿ.ರಾಜೀವ್ ಸೇರಿದಂತೆ ಸಾವಿರಾರು
ಜನರು ಭಾಗಿಯಾಗಿದ್ದರು.