Site icon Vistara News

Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಯೂನಿಯನ್‌ ಬ್ಯಾಂಕ್‌ನ 6 ಅಧಿಕಾರಿಗಳು ನಾಪತ್ತೆ!

Valmiki Corporation Scam

ಬೆಂಗಳೂರು: ಮಹರ್ಷಿ ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಹಗರಣ (Valmiki Corporation Scam) ಸಂಬಂಧಿಸಿ ಎಸ್‌ಐಟಿಯಿಂದ (SIT) ತನಿಖೆಗೆ ಒಳಗಾಗಬೇಕಿರುವ ಯೂನಿಯನ್‌ ಬ್ಯಾಂಕ್‌ನ (Union Bank) ಆರು ಮಂದಿ ಅಧಿಕಾರಿಗಳು ಎಲ್ಲೂ ಕಾಣಿಸಿಕೊಳ್ಳದೆ ನಾಪತ್ತೆಯಾಗಿದ್ದಾರೆ!

ಮಾಜಿ ಸಚಿವ ಬಿ ನಾಗೇಂದ್ರ (B Nagendra) ಹಾಗೂ ಶಾಸಕ, ನಿಗಮದ ಅಧ್ಯಕ್ಷ ಬಸವನಗೌಡ ದದ್ದಲ್‌ಗೆ (Basanagouda Daddal) ಇಡಿ ಉರುಳು ಸುತ್ತಿಕೊಂಡಿರುವ ಹೊತ್ತಿನಲ್ಲೇ, ಇನ್ನೊಂದೆಡೆ ಬ್ಯಾಂಕ್ ಆಡಳಿತ ಮಂಡಳಿ ಸದಸ್ಯರಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಬ್ಯಾಂಕ್ ಅಧಿಕಾರಿಗಳಿಗಾಗಿ ಎಸ್ಐಟಿ, ಇಡಿ, ಸಿಬಿಐ ಹೀಗೆ ಮೂರೂ ತನಿಖಾ ತಂಡಗಳು ಶೋಧ ನಡೆಸುತ್ತಿದ್ದು, ಇವರ್ಯಾರೂ ಇನ್ನು ಪತ್ತೆಯಾಗಿಲ್ಲ.

ಈಗಾಗಲೇ ಹಗರಣದಲ್ಲಿ ಬ್ಯಾಂಕಿನ ಆರು ಮಂದಿ ಮೇಲೆ ಕೇಸ್ ದಾಖಲಾಗಿತ್ತು. ಕೇಸ್ ಆಗುತ್ತಿದ್ದಂತೆ ಆರೂ ಮಂದಿ ತಲೆಮರೆಸಿಕೊಂಡಿದ್ದಾರೆ. ಈ ಬಗ್ಗೆ ಕೋರ್ಟ್‌ಗೆ ಎಸ್ಐಟಿಯಿಂದ ರಿಮ್ಯಾಂಡ್ ಅರ್ಜಿ ಮೂಲಕ ಮಾಹಿತಿ ನೀಡಲಾಗಿದೆ. ಇವರ ಮನೆಗಳ ವಿಳಾಸ ಹುಡುಕಿಕೊಂಡು ತನಿಖಾ ತಂಡ ಹೋಗಿದೆ. ಆದರೆ ಬ್ಯಾಂಕ್ ಅಧಿಕಾರಿಗಳು ಮನೆ ಬೀಗ ಹಾಕಿಕೊಂಡು ಕುಟುಂಬ ಸಮೇತ ಎಸ್ಕೇಪ್ ಆಗಿದ್ದಾರೆ.

ಇದೀಗ ಆರು ಮಂದಿ ಬ್ಯಾಂಕ್ ಅಧಿಕಾರಿಗಳ ಡಿಜಿಟಲ್‌ ಚಲನವಲನಗಳನ್ನು ಮೂರು ತನಿಖಾ ತಂಡಗಳು ಟ್ರ್ಯಾಕ್‌ ಮಾಡುತ್ತಿವೆ. ಹಗರಣದಲ್ಲಿ ಬ್ಯಾಂಕ್ ಅಧಿಕಾರಿಗಳ ಪಾತ್ರ ಮಹತ್ವದ್ದಾಗಿದ್ದು, ಇದರಿಂದಾಗಿ ಎಸ್ಐಟಿ, ಇಡಿ, ಸಿಬಿಐ ಇವರ ಬೆನ್ನು ಬಿದ್ದಿವೆ.

ವಾಲ್ಮೀಕಿ ನಿಗಮದ ಅಕೌಂಟ್‌ನಿಂದ ಬೇರೆ ಬೇರೆ ಅಕೌಂಟ್‌ಗಳಿಗೆ ಹಣ ವರ್ಗಾವಣೆ ಮಾಡಿದ ಹಗರಣದಲ್ಲಿ ಯಾರಿಂದ ಮೌಖಿಕ ಆದೇಶವಿತ್ತು, ಯಾರು ಡೀಲ್‌ ನಡೆಸಿದರು, ಯಾರಿಗೆ ಎಷ್ಟು ಕಮಿಷನ್‌ ನೀಡಲಾಗಿದೆ ಇತ್ಯಾದಿ ಮಾಹಿತಿ ಪಡೆಯಲು ಇವರನ್ನು ಬಂಧಿಸಿ ವಿಚಾರಣೆ ಮಾಡಬೇಕಿದೆ. ಕೇಸ್‌ನಲ್ಲಿ ಇವರುಗಳ ಅವಶ್ಯಕತೆ ತುಂಬಾ ಇದೆ.

ನಿಗಮದ ಬ್ಯಾಂಕ್ ಅಕೌಂಟ್‌ನಿಂದ ಹಣ ವರ್ಗಾವಣೆ ಮಾಡಲು ಸೂಚಿಸಿದ್ದು ಯಾರು? ಮೌಖಿಕ ಆದೇಶ‌ ಕೊಟ್ಟವರು ಯಾರು? ನಿಗಮದ ಎಂಡಿ ಅಥವಾ ಅಧಿಕಾರಿಗಳೇ ಹಣ ವರ್ಗಾವಣೆಗೆ ಹೇಳಿದ್ರಾ? ಕೋಟಿ ಕೋಟಿ ಆರ್‌ಟಿಜಿಎಸ್ ವರ್ಗಾವಣೆ ಇಂಥ ಖಾತೆಗೇ ಮಾಡಬೇಕು ಎನ್ನುವ ಅಧಿಕೃತ ಮಾಹಿತಿ ಕೊಟ್ಟಿದ್ದು ಯಾರು? ಬ್ಯಾಂಕ್ ಸಿಬ್ಬಂದಿ, ಅಧಿಕಾರಿಗಳ ಶಾಮೀಲಿನ ಬಗ್ಗೆ ತನಿಖೆ ಕೈಗೊಂಡಿರುವ ಮೂರು ತನಿಖಾ ಸಂಸ್ಥೆಗಳು ಪ್ರಶ್ನೆಗಳ ಪಟ್ಟಿ ಹಿಡಿದುಕೊಂಡು ಪರಾರಿಯಾದವರಿಗಾಗಿ ಹುಡುಕುತ್ತಿವೆ.

ದದ್ದಲ್‌ ಮಗನಿಗೂ ಇಡಿ ನೋಟೀಸ್?

ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ನಿಗಮದ ಅಧ್ಯಕ್ಷ, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಮಗನಿಗೂ ಸಂಕಷ್ಟ ಸಾಧ್ಯತೆ ಕಂಡುಬಂದಿದೆ. ದದ್ದಲ್ ಮಗನಿಗೂ ಇ.ಡಿ ನೋಟಿಸ್ ನೀಡಲಿದೆ ಎಂದು ಗೊತ್ತಾಗಿದೆ.

4 ಎಕರೆ 30 ಗುಂಟೆ ಜಮೀನು ಖರೀದಿಯ ವಿವರಣೆ ಕೇಳಿ ನೋಟಿಸ್ ನೀಡಲಾಗುತ್ತಿದ್ದು, ಮಗ ತ್ರಿಶೂಲ್ ನಾಯಕ್ ಹೆಸರಲ್ಲಿ ದದ್ದಲ್ ಖರೀದಿಸಿರುವ ಜಮೀನು ಇದಾಗಿದೆ. ಅಧಿಕಾರಿ ಚಂದ್ರಶೇಖರ ಆತ್ಮಹತ್ಯೆಗೂ ಮುನ್ನವೇ ಜಮೀನು ಖರೀದಿ ಮಾಡಲಾಗಿತ್ತು. ಎಕರೆಗೆ 36 ಲಕ್ಷ ರೂ ಹಾಗೆ ಕೊಟ್ಟು ತ್ರಿಶೂಲ್ ಹೆಸರಲ್ಲಿ ಜಮೀನು ಖರೀದಿ ಮಾಡಲಾಗಿದೆ.

ಸಿರವಾರ ಹೋಬಳಿ ಗಣದಿನ್ನಿ ಗ್ರಾಮದಲ್ಲಿ ಸರ್ವೇ ನಂ 33/1 ನಂಬರಿನ, ಬಸನಗೌಡ ತಂ ಸಿದ್ದನಗೌಡ ಎಂಬುವರಿಂದ ಜಮೀನು ಖರೀದಿ ಮಾಡಲಾಗಿದ್ದು, 22-05-2024 ರಲ್ಲಿ ತ್ರಿಶೂಲ್ ನಾಯಕ್ ಹೆಸರಲ್ಲಿ ರಿಜಿಸ್ಟರ್ ಮಾಡಲಾಗಿದೆ. ಸದ್ಯ ದದ್ದಲ್ ಪುತ್ರ ತ್ರಿಶೂಲ್ ದೆಹಲಿಯಲ್ಲಿ ವೈದ್ಯರಾಗಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ.

ಇದನ್ನೂ ಓದಿ: ED Raid: ಇಡಿ ಇಕ್ಕಳಕ್ಕೆ ಬೆದರಿ ಕುಟುಂಬ ಸಮೇತ ಕಣ್ಮರೆಯಾದ ಶಾಸಕ ಬಸವನಗೌಡ ದದ್ದಲ್‌!

Exit mobile version