ಬೆಂಗಳೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki development corporation) ನಡೆದ ಬಹುಕೋಟಿ ಅವ್ಯವಹಾರ (Valmiki Corporation Scam) ಪ್ರಕರಣದ ಒಂದೊಂದೇ ರಹಸ್ಯ ವಿವರಗಳು ಇದೀಗ ಬಯಲಾಗುತ್ತಿವೆ. ವಿಸ್ತಾರ ನ್ಯೂಸ್‌ಗೆ (Vistara news) ಲಭ್ಯವಾಗಿರುವ ಆಡಿಯೋ (Audio) ಹಾಗೂ ವಿಡಿಯೋಗಳು (video) ಈ ಬಗ್ಗೆ ಕತೆ ಹೇಳುತ್ತಿದ್ದು, ಆರೋಪಿಗಳು ನಡೆಸಿರುವ ಕರ್ಮಕಾಂಡವನ್ನು ತೆರೆದಿಟ್ಟಿವೆ.
ಹಗರಣಕ್ಕೆ ಸಂಬಂಧಿಸಿ ಆತ್ಮಹತ್ಯೆ ಮಾಡಿಕೊಂಡ ಅಧೀಕ್ಷಕ ಚಂದ್ರಶೇಖರ್ ಸಾವಿಗೆ ಎರಡು ದಿನ ಮುಂಚೆ ನಿಗಮದ ಎಂಡಿ ಪದ್ಮನಾಭ್ ಹಾಗೂ ಲೆಕ್ಕ ಪರಿಶೋಧಕ ಪರಶುರಾಮ್ ರಹಸ್ಯವಾಗಿ ಮೀಟಿಂಗ್ ನಡೆಸಿದ್ದು ದಾಖಲಾಗಿದೆ. ಮೇ.24ರಂದು ಒಂದು ಹೋಟೆಲ್‌ನಲ್ಲಿ ಇವರ ಸೀಕ್ರೆಟ್ ಮೀಟಿಂಗ್ ನಡೆದಿತ್ತು. ಹಗರಣದ ಬಗ್ಗೆ ಎಂಡಿ ಪದ್ಮನಾಭ್, ಪರಶುರಾಮ್ ಜೊತೆ ಬಿಸಿಬಿಸಿ ಚರ್ಚೆ ಮಾಡಿದ್ದ.
ಇಲ್ಲಿದೆ ಆಡಿಯೋ:
ಎಂಡಿ ತನ್ನನ್ನು ಸಿಕ್ಕಿ ಹಾಕಿಸಬಹುದು ಎಂಬ ಅನುಮಾನದಲ್ಲಿ ಪರಶುರಾಮ್ ಮೀಟಿಂಗ್‌ನ ವಿಡಿಯೋ ಹಾಗೂ ಆಡಿಯೋ ಮಾಡಿಕೊಂಡಿದ್ದ. ಸದ್ಯ ಪ್ರಕರಣದಲ್ಲಿ ಪದ್ಮನಾಭ್ A7 ಹಾಗೂ ಪರಶುರಾಮ್ A8 ಆರೋಪಿಗಳಾಗಿದ್ದಾರೆ. ಹಗರಣವನ್ನು ಮುಚ್ಚಿಹಾಕುವ ವಿಚಾರದಲ್ಲಿ ಪರಶುರಾಮ್ ಹಿಂದೇಟು ಹಾಕಿದ್ದ. ಆದ್ರೆ ಸೈಲೆಂಟ್ ಆಗಿರುವಂತೆ MD ಪದ್ಮನಾಭ್ ಬಾಯಿ ಮುಚ್ಚಿಸಿದ್ದ.
ಹಗರಣದ ಬಗ್ಗೆ ಅಧ್ಯಕ್ಷರಿಗೆ ಹೇಳೋದು ಒಳ್ಳೆಯದು ಎಂದು ಆಡಿಯೋದಲ್ಲಿ ಪರಶುರಾಮ್ ಹೇಳುತ್ತಿರುವುದು ಸ್ಪಷ್ಟವಾಗಿದೆ. ʼಹೇಳಿದ್ರೆ ದೊಡ್ಡ ರಾದ್ಧಾಂತ ಆಗುತ್ತೆ. ಸ್ವಲ್ಪ ದಿನ ಹೇಳೋದು ಬೇಡʼ ಎಂದು ಪದ್ಮನಾಭ್ ಹೇಳಿದ್ದ. ನಂತರ ಚಂದ್ರಶೇಖರ್‌ನನ್ನು ಇದರಲ್ಲಿ ಸಿಕ್ಕಿಸಿ ಹಾಕುವುದು ಹೇಗೆ ಎಂಬ ಬಗ್ಗೆ, ಆತನ ಇನ್‌ವಾಲ್ವ್‌ಮೆಂಟ್ ಬಗ್ಗೆ ಮಾತು ನಡೆದಿತ್ತು. ಮೀಟಿಂಗ್ ನಡೆದ ಎರಡೇ ದಿನಗಳಲ್ಲಿ ಚಂದ್ರಶೇಖರ್ ಸೂಸೈಡ್ ಮಾಡಿಕೊಂಡಿದ್ದರು.
ಇನ್ನೊಂದು ಆಡಿಯೋ:
ಚಂದ್ರಶೇಖರ ಆತ್ಮಹತ್ಯೆ ನಂತರ ಬೃಹತ್ ಹಗರಣ ಹೊರಬಂದಿತ್ತು. ನಿಗಮದಿಂದ ಖಾಸಗಿಯಾಗಿ ಹಣ ವರ್ಗಾವಣೆ ಮಾಡಲು ಪ್ರತ್ಯೇಕ ಅಕೌಂಟ್ ಅನ್ನು ಆರೋಪಿಗಳ ಗ್ಯಾಂಗ್ ಓಪನ್ ಮಾಡಿಸಿತ್ತು. ಆತ್ಮಹತ್ಯೆಗೆ ಶರಣಾದ ಅಧೀಕ್ಷಕ ಚಂದ್ರಶೇಖರ್ ಹೆಸರಲ್ಲಿ ಬ್ಯಾಂಕ್ ಅಕೌಂಟ್ ಅನ್ನು ನೆಕ್ಕುಂಟಿ ನಾಗರಾಜ್ ಓಪನ್ ಮಾಡಿಸಿದ್ದ. ಆದರೆ, ಕೊನೆಯ ಕ್ಷಣದಲ್ಲಿ ಚಂದ್ರಶೇಖರ್ ಹಿಂದೇಟು ಹಾಕಿದ್ದ.
ಆಗ ಪರಶುರಾಮ್ ಹಾಗು ಪದ್ಮನಾಬ್ ಸೇರಿಕೊಂಡು, ಪ್ರಕರಣದ ಇನ್ನೊಬ್ಬ ಆರೋಪಿಯಾಗಿರುವ ಸಾಯಿತೇಜನನ್ನು ಶಿವಕುಮಾರ್ ಎಂದು ಅಕೌಂಟ್ ಸೃಷ್ಟಿಸಿದ್ದರು. ನಿಗಮದ ಅಧಿಕಾರಿಯೇ ಎಂದು ಬಿಂಬಿಸಿ ಬ್ಯಾಂಕ್ ಅಕೌಂಟ್ ತೆರೆಸಿದ್ದರು. ಬಳಿಕ ನಿಗಮದಿಂದ ಹಣ ವರ್ಗಾವಣೆ ಮಾಡಿಸಿಕೊಂಡಿದ್ದರು. ಇವೆಲ್ಲವೂ ಇದೀಗ ಬಯಲಾಗುತ್ತಿದೆ.
ಸಿಐಡಿ ಮುಂದೆ ವಿಚಾರಣೆಗೆ ಹಾಜರಾದ ಮಾಜಿ ಸಚಿವ ನಾಗೇಂದ್ರ
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ 183 ಕೋಟಿ ರೂ. ಹಗರಣಕ್ಕೆ ಸಂಬಂಧಿಸಿ ರಾಜೀನಾಮೆ ನೀಡಿರುವ ಮಾಜಿ ಸಚಿವ ನಾಗೇಂದ್ರ (Ex minister Nagendra), ಇಂದು ಸಿಐಡಿ (CID) ಕಚೇರಿಗೆ ಆಗಮಿಸಿದರು. ಅವರಿಗೆ ತನಿಖೆಗೆ ಆಗಮಿಸಲು ನೋಟೀಸ್ ನೀಡಲಾಗಿತ್ತು.
ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ನಡೆದ ಬಹುಕೋಟಿ ಹಗರಣ ಪ್ರಕರಣದಲ್ಲಿ ವಿಚಾರಣೆಗೆ ಹಾಜರಾಗಲು ಮಾಜಿ ಸಚಿವ ನಾಗೇಂದ್ರ ಎಸ್ಐಟಿ ಕಚೇರಿಗೆ ಆಗಮಿಸಿದರು. ಇಂದು ವಿಚಾರಣೆಗೆ ಹಾಜರಾಗುವಂತೆ ಅವರಿಗೆ ನೋಟಿಸ್ ನೀಡಲಾಗಿತ್ತು. ಇದೇ ಸಂದರ್ಭದಲ್ಲಿ ಶಾಸಕ, ನಿಗಮದ ಅಧ್ಯಕ್ಷರೂ ಆಗಿರುವ ಬಸವನಗೌಡ ದದ್ದಲ್ ಅವರಿಗೂ ನೋಟೀಸ್ ನೀಡಲಾಗಿದೆ. ಮಧ್ಯಾಹ್ನ 3 ಗಂಟೆಗೆ ಬಸವರಾಜ್ ದದ್ದಲ್ ವಿಚಾರಣೆಗೆ ಹಾಜರಾಗಲು ಸೂಚನೆ ನೀಡಲಾಗಿದೆ.
ಈಗಾಗಲೇ ಪ್ರಕರಣ ಸಂಬಂಧ ತನಿಖೆ ನಡೆಸಿ ಎಸ್‌ಐಟಿ ಸಾಕಷ್ಟು ಸಾಕ್ಷ್ಯ ಸಂಗ್ರಹಿಸಿದೆ. ಇಬ್ಬರ ವಿಚಾರಣೆ ನಂತರ ಕೇಸ್ ಮತ್ತಷ್ಟು ಟರ್ನ್ ಪಡೆದುಕೊಳ್ಳುವ ಸಾಧ್ಯತೆ ಇದೆ ಎನ್ನಲಾಗಿದೆ. ನಾಗೇಂದ್ರ ಜೊತೆಗೆ ಸಿಐಡಿ ಕಚೇರಿಗೆ ಪ್ರಕರಣದ ಇನ್ನೊಬ್ಬ ಆರೋಪಿ ಪರಶುರಾಮ್ ವಕೀಲ ಸುಧನ್ವ ಕೂಡ ಆಗಮಿಸಿದ್ದರು.
ಇದನ್ನೂ ಓದಿ: Valmiki Corporation Scam: ವಾಲ್ಮೀಕಿ ನಿಗಮ ಹಗರಣದಲ್ಲಿ ಮುಂದುವರಿದ ಮಾಜಿ ಸಚಿವರ ಪಿಎಸ್ ವಿಚಾರಣೆ; ನಾಗೇಂದ್ರಗೆ ಢವಢವ!