ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ (Valmiki Corporation Scam) ಆಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ನಿಗಮದ ಅಧ್ಯಕ್ಷ, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಮಗನಿಗೂ ಸಂಕಷ್ಟ ಸಾಧ್ಯತೆ ಕಂಡುಬಂದಿದೆ. ದದ್ದಲ್ ಮಗನಿಗೂ ಇ.ಡಿ ನೋಟಿಸ್ (ED Notice) ನೀಡಲಿದೆ ಎಂದು ಗೊತ್ತಾಗಿದೆ.
4 ಎಕರೆ 30 ಗುಂಟೆ ಜಮೀನು ಖರೀದಿಯ ವಿವರಣೆ ಕೇಳಿ ನೋಟಿಸ್ ನೀಡಲಾಗುತ್ತಿದ್ದು, ಮಗ ತ್ರಿಶೂಲ್ ನಾಯಕ್ ಹೆಸರಲ್ಲಿ ದದ್ದಲ್ ಖರೀದಿಸಿರುವ ಜಮೀನು ಇದಾಗಿದೆ. ಅಧಿಕಾರಿ ಚಂದ್ರಶೇಖರ ಆತ್ಮಹತ್ಯೆಗೂ ಮುನ್ನವೇ ಜಮೀನು ಖರೀದಿ ಮಾಡಲಾಗಿತ್ತು. ಎಕರೆಗೆ 36 ಲಕ್ಷ ರೂ ಹಾಗೆ ಕೊಟ್ಟು ತ್ರಿಶೂಲ್ ಹೆಸರಲ್ಲಿ ಜಮೀನು ಖರೀದಿ ಮಾಡಲಾಗಿದೆ.
ಸಿರವಾರ ಹೋಬಳಿ ಗಣದಿನ್ನಿ ಗ್ರಾಮದಲ್ಲಿ ಸರ್ವೇ ನಂ 33/1 ನಂಬರಿನ, ಬಸನಗೌಡ ತಂ ಸಿದ್ದನಗೌಡ ಎಂಬುವರಿಂದ ಜಮೀನು ಖರೀದಿ ಮಾಡಲಾಗಿದ್ದು, 22-05-2024 ರಲ್ಲಿ ತ್ರಿಶೂಲ್ ನಾಯಕ್ ಹೆಸರಲ್ಲಿ ರಿಜಿಸ್ಟರ್ ಮಾಡಲಾಗಿದೆ. ಸದ್ಯ ದದ್ದಲ್ ಪುತ್ರ ತ್ರಿಶೂಲ್ ದೆಹಲಿಯಲ್ಲಿ ವೈದ್ಯರಾಗಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ.
ಹಗರಣದಲ್ಲಿ ಸಿಎಂ ಪಾತ್ರದ ತನಿಖೆಗೆ ಜೋಶಿ ಒತ್ತಾಯ
ಬೆಂಗಳೂರು: ರಾಜ್ಯದಲ್ಲಿ ನಡೆದ ಎರಡು ಪ್ರಮುಖ ಹಗರಣಗಳಲ್ಲಿ ಸಿಎಂ ಸಿದ್ದರಾಮಯ್ಯ ಪಾತ್ರದ ಬಗ್ಗೆ ತನಿಖೆ ಆಗಲೇಬೇಕು ಎಂದು ಕೇಂದ್ರ ಆಹಾರ ಮತ್ತು ಗ್ರಾಹಕ ವ್ಯವಹಾರಗಳ ಸಚಿವ ಪ್ರಲ್ಹಾದ್ ಜೋಶಿ (Pralhad Joshi) ಆಗ್ರಹಿಸಿದ್ದಾರೆ.
ಬೆಂಗಳೂರಿನಲ್ಲಿ ಇಂದು ಮಾಧ್ಯಮದವರೊಂದಿಗೆ ಮಾತನಾಡಿ, ವಾಲ್ಮೀಕಿ ಅಭಿವೃದ್ಧಿ ನಿಗಮ ಮತ್ತು ಮುಡಾ ಹಗರಣದಲ್ಲಿ ಸಿಎಂ ಸಿದ್ದರಾಮಯ್ಯ ಅವರ ನೇರ ಪಾತ್ರ ಇದ್ದೇ ಇದೆ ಎಂದು ಗಂಭೀರ ಆರೋಪ ಮಾಡಿದರು. ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಹಣಕಾಸು ಖಾತೆ ಹೊಂದಿರುವ ಸಿಎಂ ಸಿದ್ದರಾಮಯ್ಯ ಅವರ ಗಮನಕ್ಕೆ ಬಾರದೆ 187 ಕೋಟಿ ರೂಪಾಯಿ ದೊಡ್ಡ ಮೊತ್ತ ವರ್ಗಾವಣೆ ಆಗಲು ಸಾಧ್ಯವೇ ಇಲ್ಲ ಎಂದು ಜೋಶಿ ದೂರಿದರು.
ಸಿಎಂಗೂ ನೀಡಲಿ ನೋಟಿಸ್
ವಾಲ್ಮೀಕಿ ಅಭಿವೃದ್ದಿ ನಿಗಮದ ಭ್ರಷ್ಟಾಚಾರ ಹಗರಣದಲ್ಲಿ ಸಿಎಂ ಅವರಿಗೂ ಎಸ್‌ಐಟಿ ನೋಟಿಸ್ ನೀಡಬೇಕು ಮತ್ತು ಅವರ ಪಾತ್ರದ ಬಗ್ಗೆಯೂ ತನಿಖೆ ನಡೆಸಬೇಕು ಎಂದು ಪ್ರಲ್ಹಾದ್ ಜೋಶಿ ಒತ್ತಾಯಿಸಿದರು.
ಸಿಎಂ ನೇರ ಹೊಣೆ
ಇನ್ನು, ಮುಡಾ ಹಗರಣದಲ್ಲಿ ಸಹ ಮುಖ್ಯಮಂತ್ರಿ ಸಿದ್ದರಾಮಯ್ಯ ಪಾತ್ರವಿದೆ. ಅವರ ಹಸ್ತಕ್ಷೇಪ, ಭಾಗಿ ಇಲ್ಲದೇ ಇರಲು ಸಾಧ್ಯವಿಲ್ಲ. ಹಾಗಾಗಿ ಇದರಲ್ಲಿ ಸಿಎಂ ವಿರುದ್ಧ ನೇರ ತನಿಖೆ ಆಗಬೇಕು ಎಂದು ಆಗ್ರಹಿಸಿದರು.
ಇದನ್ನೂ ಓದಿ: Education News: ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಕರ್ನಾಟಕದ 148 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಎಬಿಬಿ ಇಂಡಿಯಾ ನೆರವು