Site icon Vistara News

Valmiki Corporation Scam: ಮಾಜಿ ಸಚಿವ ನಾಗೇಂದ್ರ 5 ದಿನಗಳ ಕಾಲ ಇಡಿ ಕಸ್ಟಡಿಗೆ

b nagendra valmiki corporation scam

ಬೆಂಗಳೂರು: ಮಾಜಿ ಸಚಿವ ಬಿ. ನಾಗೇಂದ್ರ (Ex minister B Nagendra) ಅವರನ್ನು ಐದು ದಿನಗಳ ಕಾಲ ಇಡಿ ಕಸ್ಟಡಿಗೆ ಒಪ್ಪಿಸಿ ನ್ಯಾಯಾಧೀಶರು ಆದೇಶ ನೀಡಿದ್ದಾರೆ. ಯಲಹಂಕದಲ್ಲಿ ನ್ಯಾಯಾಧೀಶರ ಮನೆಯಲ್ಲಿ ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು (ED Officers) ಇಂದು ಮುಂಜಾನೆ ಹಾಜರು ಪಡಿಸಿದ್ದರು. ವಾಲ್ಮೀಕಿ ನಿಗಮ ಹಗರಣಕ್ಕೆ (Valmiki Corporation Scam) ಸಂಬಂಧಿಸಿ ಮೊನ್ನೆಯಿಂದ ನಾಗೇಂದ್ರ ಇಡಿ ದಾಳಿಗೆ (ED Raid) ಒಳಗಾಗಿದ್ದಾರೆ.

ನಾಗೇಂದ್ರರನ್ನು ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರ ಮುಂದೆ ಹಾಜರುಪಡಿಸಲಾಯಿತು. 5 ದಿನಗಳ ಕಾಲ ಕಸ್ಟಡಿಗೆ ನೀಡಿದ ನ್ಯಾಯಾಧೀಶರು, 18ನೇ ತಾರೀಖಿನಂದು ಬೆಳಿಗ್ಗೆ 11ಕ್ಕೆ ಮತ್ತೆ ಹಾಜರುಪಡಿಸುವಂತೆ ಸೂಚನೆ ನೀಡಿ ಆದೇಶಿಸಿದರು. ನ್ಯಾಯಾಧೀಶರ ಮುಂದೆ ತಮ್ಮ ಅನಾರೋಗ್ಯ ಸಮಸ್ಯೆಯನ್ನು ನಾಗೇಂದ್ರ ತಿಳಿಸಿದರು. ಬಿಪಿ, ಜೊತೆಗೆ ಸುಸ್ತು ಎಂದರು. ಪ್ರತಿ ದಿನ ಮೂರು ಗಂಟೆ ವಿಚಾರಣೆ ನಡೆಸಬಹುದು, ವಿಚಾರಣೆ ಬಳಿಕ 30 ನಿಮಿಷಗಳ ಕಾಲ ರೆಸ್ಟ್ ನೀಡಬೇಕು ಹಾಗೂ ಪ್ರತಿ ದಿನ ವೈದ್ಯಕೀಯ ತಪಾಸಣೆ ಮಾಡುವಂತೆ ನ್ಯಾಯಧೀಶರು ಸೂಚಿಸಿದರು.

ಜಡ್ಜ್ ಮುಂದೆ ನಾಗೇಂದ್ರ ಹೇಳಿಕೆ ನೀಡಿದ್ದು, ಪ್ರಕರಣಕ್ಕೂ ನನಗೂ ಯಾವುದೇ ಸಂಬಂಧ ಇಲ್ಲ ಎಂದಿದ್ದಾರೆ. ʼಇದು ಬೋರ್ಡ್ ಮಿಟೀಂಗ್ ಮೂಲಕ ಆಗಿರುವ ಹಣ ವರ್ಗಾವಣೆ. ನಾನು ಇಲಾಖೆ ಸಚಿವಾನಾಗಿದ್ದೆ ಅಷ್ಟೇ. ಅಕ್ರಮ ಹಣ ವರ್ಗಾವಣೆ ಬಗ್ಗೆ ನನಗೆ ಗೊತ್ತಿಲ್ಲ. ನನಗೆ ಆರೋಗ್ಯ ಸಮಸ್ಯೆ ಇದೆ. ನನಗೆ ಮೆಡಿಕಲ್ ನೆರವು ಅವಶ್ಯಕತೆ ಇದೆʼ ಎಂದು ನಾಗೇಂದ್ರ ಮನವಿ ಮಾಡಿದರು. ಅಹವಾಲು ಹಿನ್ನೆಲೆಯಲ್ಲಿ, 24 ಗಂಟೆಗೊಮ್ಮೆ ಆರೋಗ್ಯ ತಪಾಸಣೆಗೆ ಕರೆದೊಯ್ಯುವಂತೆ ಇಡಿಗೆ ಸೂಚನೆ ನೀಡಲಾಯಿತು.

ʼನಾಗೇಂದ್ರರನ್ನು ಹೆಚ್ಚಿನ ವಿಚಾರಣೆ ಮಾಡಬೇಕು. ಬಹುಕೋಟಿ ಹಗರಣ ಆಗಿದೆ. ಹಣ ವರ್ಗಾವಣೆ ಮಾಹಿತಿ ಕಲೆ ಹಾಕಬೇಕಿದೆ. ಫಲಾನುಭವಿಗಳನ್ನು ಪತ್ತೆ ಹಚ್ಚಬೇಕಿದೆ. ಅವ್ಯವಹಾರ ಯಾವ ರೀತಿ ಆಗಿದೆ ಅನ್ನುವ ವಿಚಾರಣೆ ನಡೆಸಬೇಕಿದೆ. ಇಲಾಖೆಗೆ ಸಚಿವರಾಗಿದ್ದರಿಂದ ಹೆಚ್ಚಿನ ವಿಚಾರಣೆ ಅಗತ್ಯ ಇದೆ. ಹೀಗಾಗಿ 14 ದಿನ ಕಸ್ಟಡಿಗೆ ಕೊಡಬೇಕು ಎಂದು ಪಬ್ಲಿಕ್‌ ಪ್ರಾಸಿಕ್ಯೂಟರ್‌ ಕೇಳಿದ್ದರು.

ನಿನ್ನೆ ಬೆಳಗ್ಗೆ 8 ಗಂಟೆ ಸುಮಾರಿಗೆ ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಅದಕ್ಕೂ ಮುನ್ನ ಸತತ 40 ಗಂಟೆಗಳ ಕಾಲ ನಾಗೇಂದ್ರ ಅವರ ಮನೆ ಹಾಗೂ ಕಚೇರಿಯನ್ನು ತಪಾಸಣೆ ನಡೆಸಲಾಗಿತ್ತು.

ನಾಗೇಂದ್ರಗೆ ನಿನ್ನೆ ತಡರಾತ್ರಿ ಮೆಡಿಕಲ್ ಚೆಕಪ್ ಮಾಡಿಸಲಾಗಿದೆ. ಬೌರಿಂಗ್ ಆಸ್ಪತ್ರೆಯಲ್ಲಿ ಮೆಡಿಕಲ್ ಚೆಕಪ್ ಮುಗಿಸಿ ನಿನ್ನೆ ರಾತ್ರಿ ಇಡಿ ಕಚೇರಿಗೆ ಕರೆತರಲಾಗಿತ್ತು. ಸಾಮಾನ್ಯ ಮೆಡಿಕಲ್ ಚೆಕಪ್‌ ನಡೆಸಿರುವ ಬೌರಿಂಗ್ ಆಸ್ಪತ್ರೆಯ‌ ವೈದ್ಯರು, ಆರೋಗ್ಯ ಸ್ಥಿರವಾಗಿದೆ ಎಂದು‌ ರಿಪೋರ್ಟ್ ನೀಡಿದ್ದಾರೆ.

ಇಂದು ಬೆಳಗ್ಗೆ ನಾಗೇಂದ್ರರನ್ನು ಕರೆತರುವಂತೆ ನ್ಯಾಯಾಧೀಶರು ಸೂಚಿಸಿದ್ದರು. ಹೀಗಾಗಿ ನಿನ್ನೆ ರಾತ್ರಿಯೂ ಇಡಿ ಕಚೇರಿಯಲ್ಲೇ ಅವರನ್ನು ಅಧಿಕಾರಿಗಳು ಇರಿಸಿಕೊಂಡಿದ್ದರು. ಇಡಿ ಕಚೇರಿಯಲ್ಲೇ ಮಲಗಲು ಬೆಡ್‌ಶೀಟ್, ದಿಂಬು ತರಿಸಿಕೊಂಡಿದ್ದರು. ಲೋಕಲ್ ಪೊಲೀಸ್ ಸ್ಟೇಷನ್‌ಗೂ ಕರೆದೊಯ್ಯದೆ ವಿಚಾರಣಾ ಗೌಪ್ಯತೆ ಕಾಪಾಡಿಕೊಂಡಿದ್ದರು.

ದದ್ದಲ್‌ ಮಗನಿಗೂ ಇಡಿ ನೋಟೀಸ್?

ರಾಯಚೂರು: ವಾಲ್ಮೀಕಿ ಅಭಿವೃದ್ಧಿ ನಿಗಮದಲ್ಲಿ ಆಕ್ರಮ ಹಣ ವರ್ಗಾವಣೆ ಪ್ರಕರಣಕ್ಕೆ ಸಂಬಂಧಿಸಿ ನಿಗಮದ ಅಧ್ಯಕ್ಷ, ರಾಯಚೂರು ಗ್ರಾಮೀಣ ಕ್ಷೇತ್ರದ ಶಾಸಕ ಬಸನಗೌಡ ದದ್ದಲ್ ಮಗನಿಗೂ ಸಂಕಷ್ಟ ಸಾಧ್ಯತೆ ಕಂಡುಬಂದಿದೆ. ದದ್ದಲ್ ಮಗನಿಗೂ ಇ.ಡಿ ನೋಟಿಸ್ ನೀಡಲಿದೆ ಎಂದು ಗೊತ್ತಾಗಿದೆ.

4 ಎಕರೆ 30 ಗುಂಟೆ ಜಮೀನು ಖರೀದಿಯ ವಿವರಣೆ ಕೇಳಿ ನೋಟಿಸ್ ನೀಡಲಾಗುತ್ತಿದ್ದು, ಮಗ ತ್ರಿಶೂಲ್ ನಾಯಕ್ ಹೆಸರಲ್ಲಿ ದದ್ದಲ್ ಖರೀದಿಸಿರುವ ಜಮೀನು ಇದಾಗಿದೆ. ಅಧಿಕಾರಿ ಚಂದ್ರಶೇಖರ ಆತ್ಮಹತ್ಯೆಗೂ ಮುನ್ನವೇ ಜಮೀನು ಖರೀದಿ ಮಾಡಲಾಗಿತ್ತು. ಎಕರೆಗೆ 36 ಲಕ್ಷ ರೂ ಹಾಗೆ ಕೊಟ್ಟು ತ್ರಿಶೂಲ್ ಹೆಸರಲ್ಲಿ ಜಮೀನು ಖರೀದಿ ಮಾಡಲಾಗಿದೆ.

ಸಿರವಾರ ಹೋಬಳಿ ಗಣದಿನ್ನಿ ಗ್ರಾಮದಲ್ಲಿ ಸರ್ವೇ ನಂ 33/1 ನಂಬರಿನ, ಬಸನಗೌಡ ತಂ ಸಿದ್ದನಗೌಡ ಎಂಬುವರಿಂದ ಜಮೀನು ಖರೀದಿ ಮಾಡಲಾಗಿದ್ದು, 22-05-2024 ರಲ್ಲಿ ತ್ರಿಶೂಲ್ ನಾಯಕ್ ಹೆಸರಲ್ಲಿ ರಿಜಿಸ್ಟರ್ ಮಾಡಲಾಗಿದೆ. ಸದ್ಯ ದದ್ದಲ್ ಪುತ್ರ ತ್ರಿಶೂಲ್ ದೆಹಲಿಯಲ್ಲಿ ವೈದ್ಯರಾಗಿ ಪ್ರಾಕ್ಟೀಸ್ ಮಾಡುತ್ತಿದ್ದಾರೆ.

ಇದನ್ನೂ ಓದಿ: Education News: ಶೈಕ್ಷಣಿಕ ಕಾರ್ಯಕ್ರಮಗಳ ಮೂಲಕ ಕರ್ನಾಟಕದ 148 ಸರ್ಕಾರಿ ಶಾಲೆಗಳ ವಿದ್ಯಾರ್ಥಿಗಳಿಗೆ ಎಬಿಬಿ ಇಂಡಿಯಾ ನೆರವು

Exit mobile version