Site icon Vistara News

Valmiki Corporation Scam: ನಾಗೇಂದ್ರ ಕಸ್ಟಡಿ ಅಂತ್ಯ, ಇಂದು ಕೋರ್ಟ್‌ಗೆ ಹಾಜರು; ಪತ್ನಿಯೂ ಇಡಿ ವಶದಲ್ಲಿ

b nagendra valmiki corporation scam

ಬೆಂಗಳೂರು: ವಾಲ್ಮಿಕಿ ಅಭಿವೃದ್ಧಿ ನಿಗಮ ಬಹುಕೋಟಿ ಹಗರಣ (Valmiki Corporation Scam) ಪ್ರಕರಣದಲ್ಲಿ ಜಾರಿ ನಿರ್ದೇಶನಾಲಯದಿಂದ (Enforcement Directorate) ಧಿತರಾಗಿರುವ ಮಾಜಿ ಸಚಿವ ಬಿ. ನಾಗೇಂದ್ರ (Ex minister B Nagendra) ಕಸ್ಟಡಿ ಇಂದು ಅಂತ್ಯವಾಗುತ್ತಿದ್ದು, ಅವರನ್ನು ಮತ್ತೆ ಕೋರ್ಟ್ ಮುಂದೆ ಇಡಿ ಹಾಜರ್ (ED Raid) ಪಡಿಸಲಿದೆ. ತನಿಖೆ ಇನ್ನಷ್ಟು ನಡೆಯಬೇಕಿರುವುದರಿಂದ ಮತ್ತೆ ಕಸ್ಟಡಿಗೆ ಕೇಳಲಿದೆ.

ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯದ ಮುಂದೆ ಇಂದು ಮಧ್ಯಾಹ್ನ 2 ಗಂಟೆಗೆ ನಾಗೇಂದ್ರ ಅವರನ್ನು ಇಡಿ ಹಾಜರು ಪಡಿಸಲಿದೆ. ಮತ್ತೆ ಮೂರರಿಂದ ನಾಲ್ಕು ದಿನಗಳ ಕಾಲ ಕಸ್ಟಡಿಗೆ‌ ಕೇಳುವ ಸಾಧ್ಯತೆ ಇದೆ. ನಾಗೇಂದ್ರರವರ ಇಬ್ಬರು ಪಿಎಗಳು, ನಾಗೇಂದ್ರರ ಪತ್ನಿ ಎಲ್ಲರ ಹೇಳಿಕೆಯನ್ನು ಪಡೆದಿರುವ ಇಡಿ, ಇನ್ನಷ್ಟು ವಿಚಾರಗಳನ್ನು ಹೊರತೆಗೆಯುವ ಅಗತ್ಯದಲ್ಲಿ ಮತ್ತೆ ಕಸ್ಟಡಿಗೆ ಕೇಳುವ ಸಾಧ್ಯತೆ ಹೆಚ್ಚಿದೆ. ಅಕೌಂಟ್ಸ್ ವ್ಯವಹಾರ, ಹಣ ಎಲ್ಲೆಲ್ಲಿ ವ್ಯವಹಾರವಾಗಿದೆ, ಇನ್ನೂ ಯಾರು ಯಾರು ಇದ್ದಾರೆ ಹೀಗೆ ಅನೇಕ ಮಾಹಿತಿಗಳು ಇಡಿಗೆ ಬೇಕಾಗಿವೆ.

ನಿನ್ನೆ ನಾಗೇಂದ್ರ ಅವರ ಪತ್ನಿ ಮಂಜುಳಾ ಅವರನ್ನು ವಶಕ್ಕೆ ತೆಗೆದುಕೊಂಡು ಇಡಿ ವಿಚಾರಣೆ ಮಾಡಿತ್ತು. ಅಧಿಕಾರಿಗಳು 7ರಿಂದ 8 ಗಂಟೆಗಳ ಕಾಲ ಸುದೀರ್ಘ ವಿಚಾರಣೆ ಮಾಡಿದ್ದರು. ಸಾಕಷ್ಟು ವಿಚಾರಗಳನ್ನು ಹೊರ ತೆಗೆದಿದ್ದಾರೆ. ಪತಿ ಪತ್ನಿಯನ್ನು ಮುಖಾಮುಖಿ ಕೂರಿಸಿ ಪ್ರಶ್ನೆ ಮಾಡಲಾಗಿದೆ. ಮಂಜುಳಾ ಅವರ ಹೆಸರಲ್ಲಿ ಹಣದ ವಹಿವಾಟು ನಡೆದಿರುವ ಹಿನ್ನೆಲೆಯಲ್ಲಿ ಅವರನ್ನು ವಶಕ್ಕೆ ಪಡೆಯಲಾಗಿದೆ. ಅವ್ಯವಹಾರ ನಡೆದ ಸಮಯದಲ್ಲಿ ಮಂಜುಳಾ ಅವರ ಬ್ಯಾಂಕ್ ಖಾತೆಗಳಿಗೂ ಹಣ ಬಂದಿರುವ ಹಿನ್ನಲೆಯಲ್ಲಿ ಇಡಿ ಅಧಿಕಾರಿಗಳು ಇದರ ಮೂಲವನ್ನು ಪ್ರಶ್ನಿಸಲಿದ್ದಾರೆ.

ಜುಲೈ 13ರಂದು ನಾಗೇಂದ್ರ ಅವರನ್ನು ಇಡಿ ಅಧಿಕಾರಿಗಳು ವಶಕ್ಕೆ ಪಡೆದಿದ್ದರು. ಬಳಿಕ ಯಲಹಂಕದಲ್ಲಿರುವ ಜನಪ್ರತಿನಿಧಿಗಳ ನ್ಯಾಯಾಲಯದ ನ್ಯಾಯಾಧೀಶರ ಮನೆಗೆ ಹಾಜರುಪಡಿಸಲಾಗಿತ್ತು. ಈ ವೇಳೆ ನ್ಯಾಯಾಧೀಶರಾದ ಸಂತೋಷ್ ಗಜಾನನ ಭಟ್ ಅವರು 5 ದಿನಗಳ ಕಾಲ ಕಸ್ಟಡಿಗೆ ನೀಡಿದ್ದರು. 18ನೇ ತಾರೀಖಿನಂದು ಬೆಳಿಗ್ಗೆ 11ಕ್ಕೆ ಮತ್ತೆ ಹಾಜರುಪಡಿಸುವಂತೆ ಸೂಚನೆ ನೀಡಿದ್ದರು.

ಅವರ ಮನೆ ಸೇರಿ 23 ಕಡೆಗಳಲ್ಲಿ ಇಡಿ ಏಕಕಾಲಕ್ಕೆ ದಾಳಿ ಮಾಡಿತ್ತು. 6 ದಿನಗಳ ಕಾಲದ ಇಡಿ ವಿಚಾರಣೆ ವಿಚಾರಣೆಯಲ್ಲಿ ನಾಗೇಂದ್ರ ಸಮರ್ಪಕವಾಗಿ ಉತ್ತರ ನೀಡಿಲ್ಲ. ವಾಲ್ಮೀಕಿ ನಿಗಮದ ಅಧ್ಯಕ್ಷರಾಗಿರುವ ರಾಯಚೂರು ಗ್ರಾಮೀಣ ಶಾಸಕ ಬಸವನಗೌಡ ದದ್ದಲ್‌ ಕೂಡ ಪ್ರಕರಣದಲ್ಲಿ ವಿಚಾರಣೆಗಾಗಿ ಇಡಿಗೆ ಬೇಕಾಗಿದ್ದಾರೆ. ಈಗಾಗಲೇ ಬಂದಿತ ಆರೋಪಿಗಳನ್ನು ಪ್ರಶ್ನಿಸಿದಾಗ ದದ್ದಲ್‌ ಪಿಎಯ ಕೈವಾಡ ಕೂಡ ಇದರಲ್ಲಿ ಕಂಡುಬಂದಿದೆ.

ಆದರೆ ಮನೆಗೆ ಇಡಿ ದಾಳಿಯ ಬಳಿಕ ಇಡಿ ಬಂಧನ ತಪ್ಪಿಸಿಕೊಳ್ಳಲು ದದ್ದಲ್‌ ಎಸ್‌ಐಟಿ ಮುಂದೆ ಹಾಜರಾಗ ಇಡೀ ದಿನ ಕೂತಿದ್ದರು. ನಂತರ ಅಲ್ಲಿಂದ ಹೊರಬಿದ್ದು ಮೂರು ದಿವಸ ಕಣ್ಮರೆಯಾಗಿದ್ದ ದದ್ದಲ್‌, ನಾಲ್ಕನೇ ದಿವಸ ವಿಧಾನಮಂಡಲ ಅಧಿವೇಶನ ಶುರುವಾದಾಗ ವಿಧಾನಸಭೆಯಲ್ಲಿ ಕಾಣಿಸಿಕೊಂಡಿದ್ದರು. ವಿಚಾರಣೆಗೆ ಬರುವಂತೆ ದದ್ದಲ್‌ ಅವರಿಗೆ ಇಡಿ ನೋಟೀಸ್‌ ನೀಡಿದೆ ಎನ್ನಲಾಗಿದೆ. ಆದರೆ ನನಗೆ ಯಾವುದೇ ನೋಟೀಸ್‌ ಬಂದಿಲ್ಲ ಎಂದಿದ್ದಾರೆ ದದ್ದಲ್.‌ ವಿಧಾನಮಂಡಲ ಅಧಿವೇಶನ ನಡೆಯುತ್ತಿರುವಾಗ ಸ್ಪೀಕರ್‌ ಅನುಮತಿ ಇಲ್ಲದೆ ಶಾಸಕರನ್ನು ಇಡಿ ಬಂಧಿಸುವಂತಿಲ್ಲ.

ಇದನ್ನೂ ಓದಿ: Valmiki Corporation Scam: ವಾಲ್ಮೀಕಿ ನಿಗಮ ಹಗರಣ; ಮಾಜಿ ಸಚಿವ ನಾಗೇಂದ್ರ ಪತ್ನಿಯನ್ನು ವಶಕ್ಕೆ ಪಡೆದ ಇಡಿ

Exit mobile version